ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಮಗನಿಗಾಗಿ ಬ್ಯಾಟ್ ಮ್ಯಾನ್ ಆದ ಕಥೆ ಕೇಳಿ…!

 

ಡಿಜಿಟಲ್ ಕನ್ನಡ ಟೀಮ್

ಇಮ್ರಾನ್ ಹಶ್ಮಿ ಅಂದರೆ ಬಹುತೇಕರ ಕಣ್ಮುಂದೆ ಬರೋದು, ಬಾಲಿವುಡ್ ಕಿಸ್ಸರ್ ಬಾಯ್ ನ ಹಾಟ್ ಹಾಟ್ ದೃಶ್ಯಗಳು. ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ನಿಂದಲೇ ಹೆಚ್ಚು ಖ್ಯಾತಿ ಪಡೆದ ಇಮ್ರಾನ್ ಹಶ್ಮಿಗೆ ಈವರೆಗೂ ಮಾಡಿರೊದ್ರಲ್ಲಿ ಫೇವರಿಟ್ ಪಾತ್ರ ಯಾವುದು ಎಂದು ಕೇಳಿದರೆ, ಬರೋ ಉತ್ತರ ‘ಬ್ಯಾಟ್ ಮ್ಯಾನ್’ ಅಂತ.

ನಿಜ.. ಇಮ್ರಾನ್ ಹಶ್ಮಿ ಸಿನಿಮಾದಲ್ಲಿ ಬ್ಯಾಟ್ ಮ್ಯಾನ್ ಪಾತ್ರ ನಿರ್ವಹಿಸಿಲ್ಲ. ಆದರೆ ನಿಜ ಜೀವನದಲ್ಲಿ, ಮೊದಲ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತನ್ನ ನಾಲ್ಕು ವರ್ಷದ ಮಗ ಆಯನ್ ಗೆ ಆತ್ಮಸ್ಥೈರ್ಯ ತುಂಬಲು ಬ್ಯಾಟ್ ಮ್ಯಾನ್ ವೇಷ ಹಾಕಿದ್ದಾರೆ. ಆಯನ್ ಚಿಕಿತ್ಸೆಗೆ ತನ್ನದೇ ಆದ ಶೈಲಿಯಲ್ಲಿ ನೆರವಾಗಲು ಇಮ್ರಾನ್ ಹಶ್ಮಿ ಕಂಡುಕೊಂಡ ಮಾರ್ಗ ಇದು.

ಇಮ್ರಾನ್, ಈ ಪ್ರಸಂಗವನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಪ್ರಸ್ಥಾಪಿಸಿದ್ದಾರೆ. ಬ್ಯಾಟ್ ಮ್ಯಾನ್ ವೇಷ ಹಾಕಿ ಮಗನ ಮುಂದೆ ಬಂದಾಗ ನಡೆದದ್ದು ಏನು ಎಂಬುದರ ತುಣುಕನ್ನು ಹಂಚಿಕೊಂಡಿದ್ದಾರೆ. ಅದು ಹೀಗಿದೆ:

ದಿಗ್ಗನೆ ಎದುರಿಗೆ ಬಂದ ನನ್ನನ್ನು ‘ಯಾರಿದು?’ ಎಂದು ಆಯನ್ ಕೇಳಿದ. ಆಗಿನ್ನು ಆತ ಕೇವಲ ನಾಲ್ಕು ವರ್ಷದ ಚೂಟಿ ಬಾಲಕ. ಆಗ ಇಮ್ರಾನ್ ಒರಟು ಧ್ವನಿಯಲ್ಲಿ ‘ನಾನು ಬ್ಯಾಟ್ ಮ್ಯಾನ್.. ನೀನು ಆಯನ್ ತಾನೇ?’ ಎಂದು ಮರುಪ್ರಶ್ನೆ ಕೇಳಿದರು.

ಅಶ್ಚರ್ಯ ಮತ್ತು ಕೌತುಕಕ್ಕೆ ಬಿದ್ದ ಆಯನ್ ಒಂದು ಕ್ಷಣ ಮೌನಕ್ಕೆ ಜಾರಿದ. ನಂತರ ಅಚ್ಚರಿ ಕಣ್ಣುಗಳಿಂದ ನೋಡುತ್ತಾ ನಿಧಾನವಾಗಿ, ‘ಹೌದು.. ನಾನಾ ಆಯನ್. ನೀನು.. ನಿಜವಾಗಲೂ ಬ್ಯಾಟ್ ಮ್ಯಾನ್ ನಾ?’ ಅಂತ ಕೇಳಿದ.

ತಕ್ಷಣ ನಾನು, ‘ಹೌದು, ನಾನು ಬ್ಯಾಟ್ ಮ್ಯಾನ್. ನೀನು ಹೇಗಿದ್ದಿ ಆಯನ್?’ ಅಂದೆ.

ಅದಕ್ಕವನು, ‘ನಾನು ಓಕೆ ಬ್ಯಾಟ್ ಮ್ಯಾನ್. ಅಪ್ಪ ಹೇಳ್ತಿದ್ರು, ನೀನು ಗೋತಮ್ ನಲ್ಲಿ ಕೇಡಿಗಳ ಜತೆ ಫೈಟ್ ಮಾಡ್ತಿದಿಯಂತೇ?’ ಅಂದಾಗ,

ಯೆಸ್, ‘ನೀನೂ ನನ್ನಂತೆ ಸೂಪರ್ ಹೀರೋ ಆಗಬೇಕಾ ಆಯನ್?’ ಅಂದೆ.

ಆಗ ಉತ್ಸಾಹದ ಚಿಲುಮೆಯಾದ ಆಯನ್, ‘ಹೌದು, ಹೌದು ನಾನು ಸೂಪರ್ ಮ್ಯಾನ್ ಆಗಬೇಕು’ ಅಂತ. ‘ಹಾಗಾದರೆ, ನಾನು ಹೇಳಿದಂತೆ ಕೇಳು. ಇದಕ್ಕೆ ಸ್ವಲ್ಪ ಸಮಯ ಬೇಕು. ನಂತರ ನೀನು ಐರನ್ ಮ್ಯಾನ್ ಗಿಂತ ಶಕ್ತಿಶಾಲಿಯಾಗಿ.., ಆಯನ್ ಮ್ಯಾನ್ ಆಗ್ತಿಯಾ!’ ಅಂದೆ. ಆಗ ಅಯನ್,

‘ಸರಿ.. ನಾನೇನು ಮಾಡಲಿ?’ ಅಂದ.

‘ನನ್ನ ಮಾತನ್ನು ಸರಿಯಾಗಿ ಕೇಳಿಸಿಕೋ’ ಅಂದೆ.

ಹೀಗೆ…ಇಮ್ರಾನ್ ಹಶ್ಮಿ ತನ್ನ ಮಗನಿಗೆ ಮನೋಬಲ ಹೆಚ್ಚಿಸಿದ್ದನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಪೂರ್ಣ ವಿವರಕ್ಕೆ ಇನ್ನಷ್ಟು ಕಾಯಬೇಕಿದೆ.

‘ಆಯನ್ ಕ್ಯಾನ್ಸರ್ ನಿಂದ ಬಳಲಿದ ಕಾಲಘಟ್ಟ ನನ್ನ ಜೀವನದ ಒಂದು ಕರಾಳ ಭಾಗ. ನನ್ನ ಮಗನಿಗಾಗಿ ನಾನು ಚಿಕ್ಕ ರೀತಿಯಲ್ಲಿ ಸೂಪರ್ ಹೀರೋ ಆಗಬೇಕಾಯಿತು. ಈಗ ನಾನು ಕೇವಲ ನನ್ನ ಮಗನ ಜೀವಕ್ಕೆ ಬೆದರಿಕೆ ಒಡ್ಡಿದ್ದ ಎದುರಾಳಿಯ ಜತೆಯಷ್ಟೇ ಹೋರಾಡಲಿಲ್ಲ. ಬದಲಿಗೆ ನನ್ನಲ್ಲಿದ್ದ ನಟನಾ ಕೌಶಲ ಸಾಬೀತುಪಡಿಸಿಕೊಂಡೆ ಎಂದು ಹಶ್ಮಿ ತಮ್ಮ ಕ್ರಿಯೆಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ಮಾನವ ಸಂಬಂಧಗಳು ಎಲ್ಲಿಂದ ಎಲ್ಲಿಗೆ ಬೆಸುಗೆ ಹಾಕುತ್ತವೆ ಅಲ್ಲವೇ..?

Leave a Reply