ಬರಗಾಲದಿಂದ ತತ್ತರಿಸಿರೋ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳ ಅಗತ್ಯ ಇದೆಯೇ..?

ಡಿಜಿಟಲ್ ಕನ್ನಡ ಟೀಮ್

ಕರ್ನಾಟಕದಂತೆ ಮಹಾರಾಷ್ಟ್ರ ಕೂಡ ಬರಗಾಲದಿಂದ ತತ್ತರಿಸುತ್ತಿದೆ. 100 ವರ್ಷಗಳಲ್ಲೇ ಕಾಣದ ಭೀಕರತೆ ಅಲ್ಲಿದೆ. ನೀರಿಲ್ಲದೆ ಭೂಮಿ ಬಿರುಕು ಬಿಟ್ಟಿದ್ದು, ಸುಮಾರು 90 ಲಕ್ಷ ರೈತರು ಕಂಗೆಟ್ಟಿದ್ದಾರೆ. ಇನ್ನು ಲಾತುರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟಿದೆಯೆಂದರೆ ರಾಜಸ್ಥಾನದಿಂದ ನಿತ್ಯ 50 ಸಾವಿರ ಲೀಟರ್ ಸಾಮರ್ಥ್ಯದ 50 ಟ್ಯಾಂಕರ್ ಒಳಗೊಂಡ 2 ರೈಲಿನ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ರೈಲ್ವೇ ಮಂತ್ರಿ ಸುರೇಶ್ ಪ್ರಭು ಪಶ್ಚಿಮ ರೈಲ್ವೆ ವಲಯಕ್ಕೆ ನಿರ್ದೇಶನ ನೀಡಿದ್ದಾರೆ. ಇಂಥ ವಿಷಮ ಸ್ಥಿತಿಯಲ್ಲಿರುವ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ಬೇಕೇ ಎಂಬುದು ಈಗಿನ ಪ್ರಶ್ನೆ.

ಬರಕ್ಕೂ ಐಪಿಎಲ್ ಪಂದ್ಯಕ್ಕೂ ಏನು ಸಂಬಂಧ ಅಂತಿರಾ? ಸಂಬಂಧ ಇದೆ. ಐಪಿಎಲ್ ಪಂದ್ಯಗಳಿಗೆ ಮೈದಾನ ಸಿದ್ಧಪಡಿಸಲು ಕೋಟ್ಯಂತರ ಲೀಟರ್ ನೀರು ಬೇಕಾಗುತ್ತದೆ. ಕುಡಿಯುವ ನೀರಿಗೇ ತತ್ವಾರ ಆಗಿರುವಾಗ ಹೀಗೆ ಬಹು ಪ್ರಮಾಣದ ನೀರನ್ನು ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಹೀಗಾಗಿಯೇ ಮುಂಬೈನ ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ, ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ನಡೆಸಬಾರದು ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಗೆ ಮನವಿ ಮಾಡಿದ್ದಾರೆ.

2013 ರಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಐಪಿಎಲ್ ಟೂರ್ನಿಯ ಪಂದ್ಯಗಳಿಗೆ ಅನುವಾಗುವಂತೆ ಹುಲ್ಲುಹಾಸಿನ ಪಿಚ್ ನಿರ್ವಹಣೆಗೆ ನಿತ್ಯ ಲಕ್ಷಾಂತರ ಲೀಟರ್ ನೀರು ಬೇಕಾಗುತ್ತದೆ. ಹೀಗಾಗಿ ಪಂದ್ಯಗಳನ್ನು ನಡೆಸಬಾರದು ಎಂಬ ಒತ್ತಾಯ ಇದ್ದಾಗ್ಯೂ 2013 ರಲ್ಲಿ ನಡೆಸಲಾಗಿತ್ತು.

ಈ ಬಾರಿಯ ಐಪಿಎಲ್ ನಲ್ಲಿ ‘ರೈಸಿಂಗ್ ಪುಣೆ ಸೂಪರ್ ಗೈಂಟ್ಸ್’ ತಂಡದ ತವರಂಗಣ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನ. ಅದೇ ರೀತಿ ‘ಮುಂಬೈ ಇಂಡಿಯನ್ಸ್’ ತಂಡದ್ದು ವಾಂಖೆಡೆ ಕ್ರೀಡಾಂಗಣ. ಇನ್ನು ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನ ಮೂರು ಪಂದ್ಯ ನಡೆಯಲಿದೆ. ಮಹಾರಾಷ್ಟ್ರದ ಈ ಮೂರು ಅಂಗಣದಲ್ಲಿ 17 ಲೀಗ್ ಹಾಗೂ 3 ಪ್ಲೇಆಫ್ ಪಂದ್ಯಗಳು ಸೇರಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯದ ವೇಳೆಯೂ ಪಿಚ್ ನಲ್ಲಿ ಹಸಿರು ಕಾಯ್ದಿರಿಸಲು ಅಗಾಧ ಪ್ರಮಾಣದ ನೀರು ಖರ್ಚು ಮಾಡಬೇಕಾಗುತ್ತದೆ.

ಕಳೆದ ಬಾರಿ ಅಂದರೆ, 2013 ರಲ್ಲಿ ಬರದ ಮಧ್ಯೆ ಮೈದಾನ ನಿರ್ವಹಣೆಗೆ ವಾರಕ್ಕೆ 3 ಲಕ್ಷ ಲೀಟರ್ ನಂತೆ 8 ವಾರಗಳ ಕಾಲ ನಡೆದ ಟೂರ್ನಿಗೆ 48 ಲಕ್ಷ ಲೀಟರ್ ನೀರು ಬಳಸಲಾಗಿತ್ತು. ಪ್ರಸ್ತುತ ಆವೃತ್ತಿಯಲ್ಲಿ ಮೂರು ಪಿಚ್ ಗಳಿಂದ ಸರಿಸುಮಾರು 80 ಲಕ್ಷದಿಂದ 1 ಕೋಟಿ ಲೀಟರ್ ನೀರು ಕೇವಲ ಪಿಚ್ ನಿರ್ವಹಣೆಗೆ ವ್ಯಯವಾಗಲಿದೆ. ಭೀಕರ ಬರ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ಅಗತ್ಯವಿದೆಯೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಐಪಿಎಲ್ ಪಂದ್ಯಗಳಿಗೆ ವಿರೋಧ ಇಲ್ಲ. ಆದರೆ ಈ ಪಂದ್ಯಗಳನ್ನು ಪರಿಸ್ಥಿತಿ ಉತ್ತಮವಾಗಿರುವ ಬೇರೆ ಸ್ಥಳಗಳಲ್ಲಿ ನಡೆಸಬಹುದಲ್ಲವೇ? ಧರ್ಮಶಾಲಾದಲ್ಲಿರುವ ಹಿಮಾಚಲ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣವಿರಬಹುದು ಅಥವಾ ದೇಶದ ಇನ್ನಾವುದೇ ಭಾಗದ ಕ್ರೀಡಾಂಗಣಗಳಿಗೆ ಈ ಪಂದ್ಯಗಳ ಸ್ಥಳಾಂತರ ಉಚಿತ ಕ್ರಮ. ಇದರಿಂದ ಮಹಾರಾಷ್ಟ್ರದಲ್ಲಿ ನೀರಿನ ಸದ್ಬಳಕೆಗೆ ಅನುವಾಗಲಿದೆ. ಜತೆಗೆ ಬೇರೆ ಸ್ಥಳದ ಜನರು ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಲ್ಲಿನ ಸ್ಥಳೀಯ ಕ್ರಿಕೆಟ್ ಸಂಸ್ಥೆಗಳು ಆರ್ಥಿಕ ಲಾಭ ಪಡೆಯಬಹುದು.

ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಕೂಡ ಮಹಾರಾಷ್ಟ್ರ ಮೂಲದವರೇ. ನೋಡಬೇಕು ಏನು ಮಾಡುತ್ತಾರೋ..

Leave a Reply