ಅಮಿತಾಭ್, ಐಶ್ವರ್ಯ, ಜಾಕಿ ಜಾನ್…. ಪನಾಮಾ ಪೇಪರ್ಸ್ ಲೀಕ್- ಇದು ಹೊಸ ಸಿನಿಮಾವಲ್ಲ, ಆರೋಪ

ಡಿಜಿಟಲ್ ಕನ್ನಡ ಟೀಮ್

ಅಮಿತಾಭ್ ಬಚ್ಚನ್… ಐಶ್ವರ್ಯ ರೈ. ಈ ಹೆಸರುಗಳು ಯಾವುದೇ ಚಲನಚಿತ್ರದೊಂದಿಗೆ ಸುದ್ದಿ ಮಾಡುತ್ತಿಲ್ಲ. ಆದರೆ ಈಗ ಅವು ಆರೋಪವೊಂದರ ಜತೆ ತಳುಕು ಹಾಕಿಕೊಂಡಿವೆ. ಆ ಪ್ರಕಾರ ಅಮಿತಾಭ್, ಐಶ್ವರ್ಯ ರೈ, ಡಿ ಎಲ್ ಎಫ್ ಮುಖ್ಯಸ್ಥ ಕೆ. ಪಿ. ಸಿಂಗ್, ಉದ್ಯಮಿ ವಿನೋದ್ ಅದಾನಿ ಸೇರಿದಂತೆ ಹಲವು ಭಾರತೀಯರು ವಿದೇಶಗಳಲ್ಲಿ ಅಕ್ರಮವಾಗಿ ಕಂಪನಿ ಪ್ರಾರಂಭಿಸಿದ ಆರೋಪ ಹೊಗೆಯಾಡಿದೆ.

ಇದು ಪನಾಮಾ ಪೇಪರ್ಸ್ ಲೀಕ್.

ಪನಮಾ ಮೂಲದ ಮೊಸಾಕ್ ಫೊನ್ಸಿಕಾ ಸಂಸ್ಥೆ ವಿದೇಶಿ ಕಂಪನಿಗಳ ಸ್ಥಾಪನೆಗೆ ಪರವಾನಿಗೆ ನೀಡೋ ಕಾನೂನು ಸಂಸ್ಥೆಯಾಗಿದೆ. ಇಲ್ಲಿ ಎಷ್ಟು ಕಂಪನಿಗಳನ್ನು ಬೇಕಾದರು ನೊಂದಣಿ ಮಾಡಿಕೊಂಡು ಅದನ್ನು ಬೇರೆಯವರಿಗೆ ಮಾರಾಟ ಮಾಡುವುದಕ್ಕೆ ವೇದಿಕೆ ಕಲ್ಪಿಸಿಕೊಡುತ್ತದೆ. ಈಗ ಅದರ ಕೆಲವು ದಾಖಲೆಗಳು ಸೋರಿಕೆಯಾಗಿವೆ. ವಿಶ್ವದ ನಾನಾ ಭಾಗಗಳ ಪ್ರಮುಖ ಪತ್ರಿಕೆಗಳಿಗೆ ಇವು ಸಿಕ್ಕಿವೆ. ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ಐಸಿಐಜೆ) ಇವನ್ನು ಬಹಿರಂಗಪಡಿಸಿದ್ದು, ಭಾರತದಲ್ಲಿ ‘ಇಂಡಿಯನ್ ಎಕ್ಸ್ ಪ್ರೆಸ್’ ಈ ಹೆಸರುಗಳನ್ನು ಪ್ರಕಟಿಸಿದೆ. ಇದನ್ನು ಕೊಟ್ಟವರ್ಯಾರು, ಹೇಗೆ ಸೋರಿಕೆ ಆಯಿತು ಎಂಬುದಕ್ಕೆಲ್ಲ ಉತ್ತರವಿಲ್ಲ. ಆದರೆ, ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಪ್ರತಿಷ್ಠಿತರು, ರಾಜಕೀಯ ವ್ಯಕ್ತಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಮುಂತಾದವರೆಲ್ಲ ಕಾನೂನಿಗೆ ವಿರುದ್ಧವಾಗಿ ಸಾಗರದಾಚೆ ಕಂಪನಿಗಳನ್ನು ಸ್ಥಾಪಿಸಿರುವುದರ ಸಂಬಂಧ ಪುರಾವೆಗಳನ್ನು ಹೊಂದಿದೆ ಈ ಸೋರಿಕೆ.

ಕೆಲವು ವರ್ಷಗಳಿಂದ ಅಂದರೆ 2010ರಲ್ಲಿ ವಿಕಿಲಿಕ್ಸ್, ನಂತರ 2013 ಐಸಿಐಜೆ ದಾಖಲೆಗಳು, 2015ರಲ್ಲಿ 1100ಕ್ಕೂ ಹೆಚ್ಚು ಭಾರತೀಯರ ಸ್ವಿಸ್ ಖಾತೆ ಬಹಿರಂಗ ಖ್ಯಾತನಾಮರ ಬಣ್ಣ ಬಯಲು ಮಾಡಿದ್ದನ್ನು ನಾವು ನೋಡಿದ್ದೇವೆ. ಆದರೆ ಈಗ ಪನಮಾ ಪೇಪರ್ಸ್ ಸೋರಿಕೆ, ವಿಶ್ವ ಮಟ್ಟದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಇಲ್ಲಿ ಮೊಸಾಕ್ ಫೊನ್ಸಿಕಾ ಅನಾಮಿಕರ ಹೆಸರಿನಲ್ಲಿ ಕಂಪನಿ ಆರಂಭಿಸಲು ಅವಕಾಶ ನೀಡಿ, ಮೂಲ ಮಾಲೀಕರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ಹಾಗಾಗಿ ಕಾನೂನು ಬಾಹಿರವಾಗಿ ಕಂಪನಿ ಸ್ಥಾಪಿಸುವ ಪ್ರಭಾವಿ ವ್ಯಕ್ತಿಗಳ ಹೆಸರು ಹೊರ ಪ್ರಪಂಚಕ್ಕೆ ಕಾಣುವುದಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ರಿಂದ ಹಿಡಿದು ಅರ್ಜೆಂಟೀನಾ ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ,  ನಟ ಜಾಕಿ ಚಾನ್ ಹೆಸರು ಕೇಳಿ ಬಂದಿವೆ. ಈ ಪಟ್ಟಿಯಲ್ಲಿ 500 ಭಾರತೀಯರು ಇದ್ದಾರೆ. ಆ ಪೈಕಿ ಅಮಿತಾಬ್ ಬಚ್ಚನ್, ಅಶ್ವರ್ಯ ರೈ ಬಚ್ಚನ್, ವಿನೋದ್ ಅದಾನಿ, ಅನುರಾಗ್ ಕೇಜ್ರಿವಾಲ್ ಪ್ರಮುಖ ಹೆಸರುಗಳಾಗಿವೆ. ಇನ್ನು ವಿಶ್ವದಾದ್ಯಂತ ಒಟ್ಟು 140 ರಾಜಕೀಯ ವ್ಯಕ್ತಿಗಳ ಮಾಹಿತಿ ಬಹಿರಂಗಗೊಂಡಿದೆ.

ಕಳೆದ 40 ವರ್ಷಗಳಿಂದ 1970ರಿಂದ 2016ರವರೆಗು ಖ್ಯಾತನಾಮರು ತೆರಿಗೆ ವಂಚನೆ ಮಾಡಿ, 35ಕ್ಕೂ ಹೆಚ್ಚು ದೇಶಗಳಲ್ಲಿ 2,14,000 ವಿದೇಶದಲ್ಲಿ ಕಂಪನಿ ಸ್ಥಾಪಿಸಿ ವ್ಯಾಪಾರ ನಡೆಸುತ್ತಿದ್ದ ಪ್ರಭಾವಿ ವ್ಯಕ್ತಿಗಳ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಈ ತನಿಖೆ ವೇಳೆ ಒಟ್ಟು 1.15 ಕೋಟಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಮಾಹಿತಿಗಳ ದತ್ತಾಂಶ 2.6 ಟೆರಾಬೈಟ್ಸ್ ನಷ್ಟಿದ್ದು ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಮಾಹಿತಿ ಸೋರಿಕೆ ಪ್ರಕರಣವಾಗಿದೆ.

ಕಳೆದ ನಾಲ್ಕುವರೆ ದಶಕದಲ್ಲಿ ತೆರಿಗೆ ವಂಚನೆ ಮಾಡಿ ಸಾಗರದಾಚೆ ಕಾನೂನು ಬಾಹಿರವಾಗಿ ಕಂಪನಿ ಸ್ಥಾಪಿಸಿರುವುದು ಹಾಗೂ ಅಲ್ಲಿನ ಕಂಪನಿಗಳ ಜತೆ ಡೀಲ್ ಮಾಡಿಕೊಂಡ ಮಾಹಿತಿ ಈಗ ಲೀಕ್ ಆಗಿದೆ.

ವಿದೇಶದಲ್ಲಿ ಹೂಡಿಕೆ ಅಪರಾಧವೇ? ಹಂಗೇನಿಲ್ಲ. ಆದರೆ 2013ರವರೆಗೂ ಭಾರತದಲ್ಲಿ ಕೆಲವು ನಿಬಂಧನೆಗಳಿದ್ದವು. ಆ ಪ್ರಕಾರ ಇಲ್ಲಿನ ಪ್ರಜೆ ಸಾಗರದಾಚೆ ಅಷ್ಟು ಪ್ರಮಾಣದಲ್ಲಿ ಹಣ ಹೂಡುವುದಕ್ಕೆ ಸಾಧ್ಯವಿರಲಿಲ್ಲ.  ಆದರೆ, ಪನಮಾ ಪೇಪರ್ಸ್ ಮಾಹಿತಿ ಪ್ರಕಾರ ಬಹಳ ಹಿಂದಿನಿಂದಲೂ ಭಾರತೀಯ ವ್ಯಕ್ತಿಗಳು ವಿದೇಶದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 2003ರವರೆಗೂ ಭಾರತೀಯ ರುಪಾಯಿ ಕರೆನ್ಸಿಯನ್ನು ಡಾಲರ್ ಆಗಿ ಪರಿವರ್ತಿಸಿ ವಿದೇಶಕ್ಕೆ ಒಯ್ಯಲು ಆರ್ ಬಿಐ ಅವಕಾಶ ನೀಡಿರಲಿಲ್ಲ. 2004ರ ಫೆಬ್ರವರಿಯಲ್ಲಿ ಆರ್ ಬಿಐ ‘ಲಿಬ್ರಲೈಸ್ ರೆಮಿಟೆನ್ಸ್ ಸ್ಕೀಮ್’ ಮೂಲಕ ಪ್ರತಿ ವರ್ಷಕ್ಕೆ ವ್ಯಕ್ತಿ 25 ಸಾವಿರ ಡಾಲರ್ ಅನ್ನು ವಿದೇಶಕ್ಕೆ ಕೊಂಡೊಯ್ಯಲು ಅವಕಾಶ ನೀಡಲಾಯಿತು. ಈಗ ಈ ಮೊತ್ತ 2.5 ಲಕ್ಷ ಡಾಲರ್ ವರೆಗೂ ಹೆಚ್ಚಿದೆ. ಇದನ್ನು ವೈದ್ಯಕೀಯ ಉದ್ದೇಶ, ದೇಣಿಗೆ, ಆಸ್ತಿ ಹಾಗೂ ಷೇರು ಖರೀದಿ, ಉಡುಗೊರೆ ನೀಡಲು ಬಳಸಬಹುದಿತ್ತು. ಆದರೆ, ಕಂಪನಿ ಆರಂಭಿಸುವ ಬಗ್ಗೆ ಸ್ಪಷ್ಟ ಚಿತ್ರಣ ಇರಲಿಲ್ಲ.

ಈ ಸಂದರ್ಭದಲ್ಲಿ ಬಹುತೇಕರು ಈ ಹಣದಲ್ಲಿ ಕಂಪನಿ ಆರಂಭಿಸಲು ಮುಂದಾದರು. ಈ ವೇಳೆ ಎಚ್ಚೆತ್ತ ಆರ್ ಬಿಐ, ಈ ರೀತಿಯಾಗಿ ವಿದೇಶದಲ್ಲಿ ಕಂಪನಿ ಸ್ಥಾಪಿಸಲು ಅವಕಾಶ ನೀಡುವುದಿಲ್ಲ, ಕೇವಲ ಷೇರ್ ಗಳನ್ನು ಖರೀದಿಸಬಹುದು ಎಂದು 2010ರಲ್ಲಿ ಲಿಖಿತ ಸ್ಪಷ್ಟನೆ ನೀಡಿತು. ಇಲ್ಲಿನ ತಾಂತ್ರಿಕ ವಿಶ್ಲೇಷಣೆ ನೀಡುವಾಗ ಹೊಸದಾಗಿ ಕಂಪನಿ ಆರಂಭಿಸುವಂತಿಲ್ಲ. ಬೇಕಾದರೆ, ಆರಂಭವಾಗಿರೊ ಕಂಪನಿಯನ್ನು ಖರೀದಿಸಬಹುದು ಎಂದು ಹೇಳಲಾಯಿತು.

2013ರಲ್ಲಿ ಆರ್ ಬಿಐ, ಓವರ್ ಸೀಸ್ ಡೈರೆಕ್ಟ್ ಇನ್ವೆಸ್ಟ್ ಕಾನೂನು ಮೂಲಕ ಭಾರತೀಯ ನಿವಾಸಿಗಳು ನೇರವಾಗಿ ವಿದೇಶದಲ್ಲಿ ಕಂಪನಿ ಆರಂಭಿಸಲು ಅವಕಾಶ ಮಾಡಿಕೊಟ್ಟಿತು. ಇವಿಷ್ಟು ಭಾರತೀಯ ಕಾನೂನು ನಿರ್ಮಾಣದ ಒಂದು ಕಾಲಘಟ್ಟಗಳಾಗಿದ್ದವು.

ಆದರೆ, ಇಲ್ಲಿ ಪ್ರಮುಖವಾಗಿ ಕಾಣೊ ಅಂಶ ಎಂದರೆ, 2003ಕ್ಕೂ ಮುನ್ನವೇ ಕೆಲವು ಭಾರತೀಯರು ವಿದೇಶಗಳಲ್ಲಿ ಬಂಡವಾಳ ಹೂಡಿದ್ದರು. ಆ ಮೂಲಕ ಎಫ್ಇಎಂಎ ನಿಯಮ ಉಲ್ಲಂಘನೆಯಾದಂತಾಗಿದೆ. ಇದನ್ನು ಆರ್ ಬಿಐ ತೆರಿಗೆ ವಂಚನೆ ಎಂದೇ ಪರಿಗಣಿಸುತ್ತದೆ.

ಇದೀಗ ಈ ಪನಾಮಾ ಲೀಕ್ಸ್ ಪ್ರಕರಣವನ್ನು ಗಮನಿಸಿ ಸೂಕ್ತ ವಿಚಾರಣೆ ಮಾಡುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಸಾಮಾನ್ಯವಾಗಿ ಅನುಸರಿಸುವ ನಿಯಮವೆಂದರೆ, ಈಗ ಹೆಸರು ಕಾಣಿಸಿಕೊಂಡಿರುವವರೆಲ್ಲ ತಮ್ಮ ಆದಾಯದಲ್ಲಿ ಈ ಕಂಪನಿಗಳ ಹೆಸರು ನಮೂದಿಸಿದ್ದಾರೆಯೇ ಅಂತ ಪರಿಶೀಲಿಸುವುದು. ಅಲ್ಲಿ ಈ ವ್ಯವಹಾರಗಳ ಬಗ್ಗೆ ಉಲ್ಲೇಖವಿಲ್ಲದಿದ್ದರೆ, ಅಂತಾರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಒಪ್ಪಂದಗಳ ಆಧಾರದಲ್ಲಿ, ಈಗ ಯಾವೆಲ್ಲ ದೇಶದಲ್ಲಿ ಆರೋಪಿತರು ಕಂಪನಿ ಹೊಂದಿದ್ದಾರೆ ಎನ್ನಲಾಗುತ್ತಿದೆಯೋ ಅಲ್ಲಿಂದ ಮಾಹಿತಿ ಕೇಳಲಾಗುತ್ತದೆ. ಈಗ ಇಂಥ ಒಪ್ಪಂದಗಳು ಹೆಚ್ಚಿನ ರಾಷ್ಟ್ರಗಳೊಂದಿಗೆ ಇವೆಯಾದ್ದರಿಂದ ಇಲ್ಲಿ ಪ್ರಸ್ತಾಪವಾಗಿರುವ ಹೆಸರುಗಳು ತಪ್ಪು ಮಾಡಿದ್ದೇ ಆದಲ್ಲಿ ಸುಲಭಕ್ಕೆ ನುಣುಚಿಕೊಳ್ಳಲಾಗದು.

Leave a Reply