ಎನ್ ಐ ಎ ಅಧಿಕಾರಿ ತಂಜಿಲ್ ಅಹ್ಮದ್ ಹತ್ಯೆ, ರಸ್ತೆ ಮಧ್ಯೆಯೇ ನಿಂತು ಮುಗಿಸುವಷ್ಟು ಬಿರುಸಾಗಿದೆಯೇ ಉಗ್ರಜಾಲ?

ಡಿಜಿಟಲ್ ಕನ್ನಡ ಟೀಮ್

ರಾಷ್ಟ್ರೀಯ ತನಿಖಾ ದಳದ (ಎನ್ ಐ ಎ) ತಂಜಿಲ್ ಅಹ್ಮದ್ ಅವರನ್ನು ಶನಿವಾರ ಅವರ ಹೆಂಡತಿ ಮಕ್ಕಳ ಎದುರೇ ಗುಂಡಿಟ್ಟು ಸಾಯಿಸಿದ ಘಟನೆ ಬಿಜ್ನೋರ್ ನಲ್ಲಿ ನಡೆದಿದೆ.

ಎನ್ ಐ ಎನಂಥ ಮೇಲ್ಮಟ್ಟದ ತನಿಖಾ ಏಜೆನ್ಸಿಯಲ್ಲಿರುವ ಇವರ ಹತ್ಯೆ ದೇಶವನ್ನು ಕಲಕಲೇಬೇಕು. ಯಾವುದೇ ಕಾರ್ಯಾಚರಣೆ ಮೇಲೆ ಹೋಗಿದ್ದಾಗ ಈ ಹತ್ಯೆ ಆಗಿಲ್ಲದಿದ್ದರೂ ಇವರೂ ಹುತಾತ್ಮರೇ.

ತಂಜಿಲ್ ಅಹ್ಮದ್ ಗಡಿ ಭದ್ರತಾ ಪಡೆಯಲ್ಲಿ ಇದ್ದವರು. ಡೆಪ್ಯುಟೇಷನ್ ಮೇಲೆ ಎನ್ ಐ ಎಗೆ ಹೋಗಿದ್ದರು. ಏಪ್ರಿಲ್ 3ರ ಮಧ್ಯರಾತ್ರಿ ಖಾಸಗಿ ಸಮಾರಂಭವೊಂದನ್ನು ಮುಗಿಸಿಕೊಂಡು ಕುಟುಂಬದೊಂದಿಗೆ ಹಿಂತಿರುಗುತ್ತಿರುವಾಗ ಮುಖಗವಸು ತೊಟ್ಟಿದ್ದ ಇಬ್ಬರು ಪಾತಕರು ಇವರ ಕಾರು ಅಡ್ಡಗಟ್ಟಿ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಸುಮಾರು 12 ಗುಂಡುಗಳು ತಂಜಿಲ್ ದೇಹ ಹೊಕ್ಕಿದ್ದರಿಂದ ಅವರು ಉಳಿಯುವ ಸಾಧ್ಯತೆಯೇ ಇರಲಿಲ್ಲ. ಅವರ ಮಡದಿ ಫರ್ಜಾನಾ ಸಹ ಗುಂಡೇಟಿನಿಂದ ಗಾಯಗೊಂಡು ನೊಯ್ಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯವಾಗದೇ ಉಳಿದಿರುವವರೆಂದರೆ ತಂಜಿಲ್ ಅವರ ಇಬ್ಬರು ಮಕ್ಕಳು. ದಾಳಿ ಶುರುವಾಗುತ್ತಲೇ ಅವರಿಬ್ಬರನ್ನೂ ಸೀಟಿನಡಿ ತೂರಿಕೊಳ್ಳುವಂತೆ ತಂಜಿಲ್ ಎಚ್ಚರಿಸಿದ್ದಾಗಿ ಎನ್ ಐ ಎ ಅಧಿಕಾರಿಗಳು ಹೇಳಿದ್ದಾರೆ. ಇದೇ ಮಕ್ಕಳ ಹೇಳಿಕೆ ಆಧಾರದಲ್ಲಿ, ಮೋಟಾರ್ ಸೈಕಲ್ ನಲ್ಲಿ ಇಬ್ಬರು ಹಂತಕರು ಬಂದಿದ್ದರು ಹಾಗೂ ಅವರು ಗುರುತು ಪತ್ತೆಯಾಗದಂತೆ ಮುಖಗವಸು ಹಾಕಿದ್ದರು ಎಂಬ ಅಂಶಗಳು ನಿಚ್ಚಳವಾಗಿವೆ.

ಇದೊಂದು ತುಂಬ ನಿಯೋಜಿತ ದಾಳಿ ಎಂದೇ ರಾಷ್ಟ್ರೀಯ ತನಿಖಾದಳ ವ್ಯಾಖ್ಯಾನಿಸುತ್ತಿದೆ. ತಂಜಿಲ್ ಅವರು ಇತ್ತೀಚಿನ ಪಠಾಣ್ ಕೋಟ್ ದಾಳಿಯ ತನಿಖೆಯಲ್ಲಿದ್ದರು ಎಂಬ ಮಾತುಗಳು ಹರಿದಾಡುತ್ತಿವೆಯಾದರೂ ಆ ಬಗ್ಗೆ ಎನ್ ಐ ಎ ದೃಢೀಕರಣವನ್ನೇನೂ ಕೊಟ್ಟಿಲ್ಲ. ಆದರೆ ಈ ಹಿಂದೆ ತಂಜಿಲ್ 2014ರ ಸೆಪ್ಟೆಂಬರ್ ನಲ್ಲಿ ನಡೆದ ಬಾಂಬ್ ಸ್ಫೋಟವೊಂದರ ತನಿಖೆಯ ಭಾಗವಾಗಿದ್ದಂತೂ ಹೌದು. ಬಿಜ್ನೋರ್ ನ ಮೊಹಲ್ಲಾಜತನ್ ನಲ್ಲಿ ನಡೆದ ಸ್ಫೋಟದ ನಂತರ ಆ ಮನೆಯಲ್ಲಿದ್ದ ಏಳು ಮಂದಿ ಪರಾರಿ ಆಗಿದ್ದರು. ಅವರಲ್ಲೊಬ್ಬ ಗಾಯಗೊಂಡವ. ಅರ್ಥಾತ್, ಆ ಮನೆಯಲ್ಲಿ ಸ್ಫೋಟಕಗಳನ್ನು ತಯಾರಿಸುತ್ತಿರುವಾಗಲೇ ಈ ಘಟನೆ ನಡೆದಿತ್ತು. ಹೀಗೆ ತಪ್ಪಿಸಿಕೊಂಡವರು ನಿಷೇಧಿತ ಸಿಮಿ ಸಂಘಟನೆಯವರಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂತು. ಕೊನೆಗೆ ತೆಲಂಗಾಣ ಎನ್ ಕೌಂಟರ್ ನಲ್ಲಿ ಇಬ್ಬರು ಸತ್ತರು. ಉಳಿದವರಲ್ಲಿ ನಾಲ್ವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿದೆ.

ಇಂಥ ಪೊಲೀಸ್ ಅಧಿಕಾರಿಯ ಹತ್ಯೆಗೆ ಉಗ್ರರ ಜಾಲವೇ ಕಾರಣವಾಗಿರಬಹುದೇ ಎಂಬ ಪ್ರಶ್ನೆಗೆ ಉತ್ತರವಿನ್ನೂ ಸಿಗಬೇಕು. ಹತ್ಯೆ ಮಾಡಿದವರ ಬಂಧನವಾಗಬೇಕು. ಆಗಷ್ಟೇ ಪೋಲೀಸ್ ಬಲದ ನೈತಿಕ ಸ್ಥೈರ್ಯ ಮುಕ್ಕಾಗದಿರಲು ಸಾಧ್ಯ.

ಸದ್ಯಕ್ಕೆ… ತಂಜಿಲ್ ಮಡದಿ ಫರ್ಜಾನಾ ಚೇತರಿಸಿಕೊಳ್ಳಲಿ, ಅವರ 16 ವರ್ಷದ ಮಗಳು ಜಿಮ್ನಿಷ್ ಹಾಗೂ 14ರ ಹರೆಯದ ಶಹಬಾದ್ ಇಬ್ಬರಿಗೂ ಈ ದುಃಖ ಭರಿಸುವ ಶಕ್ತಿ ಸಿಗಲಿ ಅಂತ ನಾವು ಪ್ರಾರ್ಥಿಸಬೇಕಷ್ಟೆ.

Leave a Reply