ಎರಡು ತಿಂಗಳಲ್ಲಿ ಮೂರು ವಿಶ್ವಕಪ್ ಗೆದ್ದ ಕೆರಿಬಿಯನ್ ಕಿಂಗ್ಸ್ ಗಳ ಸಾಧನೆಗೆ ಅವರೇ ಸಾಟಿ!

West Indies's players led by captain Darren Sammy(C)celebrate after victory in the World T20 cricket tournament final match between England and West Indies at The Eden Gardens Cricket Stadium in Kolkata on April 3, 2016. / AFP / Dibyangshu SARKAR (Photo credit should read DIBYANGSHU SARKAR/AFP/Getty Images)

ಸೋಮಶೇಖರ ಪಿ ಭದ್ರಾವತಿ

ಕ್ರಿಕೆಟ್ ಇತಿಹಾಸದಲ್ಲಿ 1970 ಮತ್ತು 80ರ ದಶಕದಲ್ಲಿ ಸಾಮ್ರಾಟನಂತೆ ಮೆರೆದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ 2016 ಸುವರ್ಣ ವರ್ಷ ಎಂದೇ ಪರಿಗಣಿಸಬಹುದು. ಕೇವಲ ಎರಡೇ ತಿಂಗಳ ಅವಧಿಯಲ್ಲಿ ಕೆರಿಬಿಯನ್ ಕ್ರಿಕೆಟಿಗರು 3 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಟೂರ್ನಿಯ ಆರಂಭದಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ಆಟಗಾರರು, ಎಲ್ಲ ಸಮಸ್ಯೆಗಳನ್ನು ಬದಿಗಿಟ್ಟು ತಮ್ಮ ಸಾಮರ್ಥ್ಯದ ಮೇಲೆ ಇಟ್ಟ ನಂಬಿಕೆಗೆ ತಕ್ಕ ಪ್ರತಿಫಲ ಸಿಕ್ಕಿದೆ.

ಭಾನುವಾರ ಕ್ರಿಕೆಟ್ ಕಾಶಿ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲವಿನ ಜೈತ್ರಯಾತ್ರೆ ಕಂಡು ಇಡೀ ಕ್ರಿಕೆಟ್ ಲೋಕವೇ ನಿಬ್ಬೆರಗಾಗಿದೆ. ಮಧ್ಯಾಹ್ನ ನಡೆದ ಮಹಿಳೆಯರ ಫೈನಲ್ ನಲ್ಲಿ ಫೇವರಿಟ್ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು, ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿತು. ಸಂಜೆ ನಡೆದ ಪುರುಷರ ಫೈನಲ್ಸ್ ನಲ್ಲೂ ಆಂಗ್ಲರನ್ನು ಮಣಿಸಿದ ಆ ರೋಚಕ ಕ್ಷಣ ಅದ್ಭುತ. ಅದರಲ್ಲೂ 2012 ರಲ್ಲಿ ಪ್ರಶಸ್ತಿ ಗೆಲವಿನ ರೂವಾರಿಯಾಗಿದ್ದ ಮರ್ಲಾನ್ ಸ್ಯಾಮುಯೆಲ್ಸ್ ಹೋರಾಟ ಇನಿಂಗ್ಸ್ ಕಟ್ಟಿದ ರೀತಿ ಅತ್ಯುತ್ತಮ. ಇನ್ನು ಕಡೇ ಓವರ್ ನಲ್ಲಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ, ರೋಮಾಂಚರಾಗಿ ಗೆಲವು ತಂದುಕೊಟ್ಟ ಬ್ರಾಥ್ ವೇಟ್ ಆಟ ಅವಿಸ್ಮರಣೀಯ.

ಕಳೆದ ಫೆಬ್ರವರಿ ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ನಲ್ಲೂ ವಿಂಡೀಸ್ ಪಡೆ ದಿಗ್ವಿಜಯ ಸಾಧಿಸಿತ್ತು. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ಪ್ರಶಸ್ತಿ ಫೇವರಿಟ್ ತಂಡ ಎನಿಸಿದ್ದ ಭಾರತವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕಿರಿಯರ ಈ ಸಾಧನೆ ಹಿರಿಯರ ತಂಡಕ್ಕೆ ಸ್ಫೂರ್ತಿಯ ಚಿಲುಮೆಯಾಗಿತ್ತು. ಟೂರ್ನಿಯ ಆರಂಭದಿಂದಲೇ ಟಾಸ್ ಹಾಗೂ ಇತರೆ ಸಂದರ್ಭಗಳಲ್ಲಿ ವಿಂಡೀಸ್ ಆಟಗಾರರು ಹೇಳಿತ್ತಿದ್ದುದು ಒಂದೇ ಮಾತು. ಅದು ‘we came here for a mission’ ಎಂದು. ಈಗ ಅದು ಸಂಪೂರ್ಣಗೊಂಡಿದೆ.

ನಿಜ.. ಈ ಜಯ ವಿಂಡೀಸ್ ಆಟಗಾರರ ಪಾಲಿಗೆ ಇದೊಂದು ಯುದ್ಧವೇ ಆಗಿತ್ತು. ಕಾರಣ, ಕಳೆದ ಆರು ತಿಂಗಳ ವಿಂಡೀಸ್ ತಂಡ ಎದುರಿಸಿದ ಬವಣೆ ನೋಡಿದರೆ ಈ ಯಶಸ್ಸು ಒಂದು ಮ್ಯಾಜಿಕ್ ಎನಿಸದಿರದು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಆಟಗಾರರ ಸಂಘದ ನಡುವಣ ರಾಜಕೀಯ ಸಮರದಿಂದ ಬೇಸತ್ತು ಬಂಡಾಯವೆದ್ದಿದ್ದ ಬ್ರಾವೊ, ಪೊಲಾರ್ಡ್ ಹಾಗೂ ಇತರೆ ಆಟಗಾರರಿಗೆ ತಂಡದಿಂದ ಕೊಕ್ ನೀಡಲಾಗಿತ್ತು. ನಂತರ ವೇತನ ತಾರತಮ್ಯದ ವಿವಾದ, ವೆಸ್ಟ್ ಇಂಡೀಸ್ ಕ್ರಿಕೆಟ್ ನಲ್ಲಿ ಯಾವುದೂ ಸರಿ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಕಳೆದ ಜನವರಿಯಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ ಸೋಲಿನಿಂದ ಬಳಲುತ್ತಿದ್ದರೆ, ಬಂಡಾಯ ಆಟಗಾರರಾಗಿದ್ದ ಗೇಲ್, ಬ್ರಾವೊ ‘ಬಿಗ್ ಬ್ಯಾಷ್’ ನಲ್ಲಿ ಆಡುತ್ತಿದ್ದರು. ಈ ವೇಳೆ ತಂಡದ ಕೋಚ್ ಫಿಲ್ ಸಿಮನ್ಸ್ ಮತ್ತು ಕರ್ಟ್ಲಿ ಅಂಬ್ರೊಸ್ ಮಂಡಳಿ ವಿರುದ್ಧ ಸೆಡ್ಡು ಹೊಡೆದು ಬ್ರಾವೊ ಹಾಗೂ ಇತರೆ ಆಟಗಾರರನ್ನು ತಂಡಕ್ಕೆ ಹಿಂಪಡೆಯುವಲ್ಲಿ ಸಫಲರಾಗಿದ್ದರು. ಹೀಗಾಗಿ ಈ ಜಯ ಆಟಗಾರರು ಮತ್ತು ಕೋಚ್ ಪಾಲಿಗೆ ಅವಿಸ್ಮರಣೀಯ. ಪ್ರಶಸ್ತಿ ಸಮಾರಂಭದಲ್ಲಿ ನಾಯಕ ಡಾರೆನ್ ಸಾಮಿ ಅವರ ಕೋಪ, ಭಾವೋದ್ವೇಗದ ಮಾತುಗಳು ತಂಡದ ಇತರೆ ಆಟಗಾರರ ಮನಸ್ಥಿತಿಯ ಪ್ರತಿಬಿಂಬವಾಗಿತ್ತು.

‘ನಾವು ವಿಂಡೀಸ್ ಮಂಡಳಿ ಜತೆ ಸಮಸ್ಯೆ ಹೊಂದಿದ್ದೇವೆ. ಮಾರ್ಕ್ ನಿಕೋಲಸ್ ನಮ್ಮನ್ನು ತಲೆಯಲ್ಲಿ ಬುದ್ಧಿ ಇಲ್ಲದ ಆಟಗಾರರು ಎಂದು ಕರೆದಿದ್ದರು. ನಮಗೆ ಸಿಗಬೇಕಾದ ಸೌಲಭ್ಯ ಸಿಕ್ಕಿರಲಿಲ್ಲ. ಆಟಗಾರರಿಗೆ ಒಂದು ಜರ್ಸಿಗೂ ಗತಿ ಇರಲಿಲ್ಲ. ಇಂಥ ಸನ್ನಿವೇಶದಲ್ಲಿ ನಾವು 15 ಆಟಗಾರರು ಒಟ್ಟಾಗಿ ನಿಂತೆವು. ಕ್ರಿಕೆಟ್ ಪ್ರೀತಿಸೋ ಅಭಿಮಾನಿಗಳ ಮುಂದೆ ಇಂಥದೊಂದು ಪ್ರದರ್ಶನ ನೀಡಿರುವುದರಲ್ಲಿ ನಮ್ಮ ಜನ್ಮ ಸಾರ್ಥಕವಾಯ್ತು ಅನ್ನಿಸುತ್ತಿದೆ’ ಎಂದ ಸಾಮಿ ಮಾತುಗಳು ತಂಡದಲ್ಲಿ ಮಡುಗಟ್ಟಿದ್ದ ನೋವಿನ ಅನಾವರಣ ಮಾಡಿತ್ತು.

ಕೆಲ ದಿನಗಳ ಹಿಂದೆ ಇದೇ ವಿಂಡೀಸ್ ತಂಡದಿಂದ ಭಾರತ ಸೋಲು ಕಂಡದ್ದಕ್ಕೆ ನಿರಾಶರಾಗಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳು ಇದೀಗ ಅದೇ ತಂಡದ ಜಯ ಕಂಡು ಪುಳಕಿತರಾದರು. ಸಂಬಂಧಗಳ ಬೆಸುಗೆಯಲ್ಲಿ ಕ್ರಿಕೆಟ್ ಗೆ ಅದೆಂಥ ಅದ್ಭುತ ಶಕ್ತಿಯಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲವೇನೋ..?

Leave a Reply