ಸಾಮಾನ್ಯ ಹುಡುಗನೊಬ್ಬ ಫುಟ್ಬಾಲ್ ಇತಿಹಾಸದ ಧ್ರುವತಾರೆಯಾದ ಕಥೆ ಹೇಳಲಿದೆ ಈ ‘ಪೀಲೆ ಬರ್ತ್ ಆಫ್ ಎ ಲೆಜೆಂಡ್’!

 

ಡಿಜಿಟಲ್ ಕನ್ನಡ ಟೀಮ್

ಪೀಲೆ.. ಈ ಹೆಸರು ಪ್ರತಿಯೊಬ್ಬ ಕ್ರೀಡಾಸಕ್ತನಿಗೆ ಪರಿಚಿತ. ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಸಾವಿರಾರು ಆಟಗಾರರು, ಕೋಟ್ಯಾಂತರ ಅಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ನಿಲ್ಲೋ ದಂತಕತೆ. ಬ್ರೆಜಿಲ್ ಫುಟ್ಬಾಲ್ ನ ಈ ಮಹಾನ್ ಆಟಗಾರನ ಕುರಿತಾಗಿ ಈಗ ಹಾಲಿವುಡ್ ನಲ್ಲಿ ಚಿತ್ರವೊಂದು ಸಿದ್ಧವಾಗಿದೆ. ಅದೇ ‘ಪೀಲೆ: ಬರ್ತ್ ಆಫ್ ಎ ಲೆಜೆಂಡ್’.

ಅದು 1950ರ ವಿಶ್ವಕಪ್ ಫೈನಲ್ ಪಂದ್ಯ. ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತಿಗೆ ತವರಿನ ತಂಡ ಪ್ರವೇಶಿಸಿದ್ದನ್ನು ಕಂಡು ಇಡೀ ಬ್ರೆಜಿಲ್ ಅಭಿಮಾನಿಗಳು ತಮ್ಮ ತಂಡ ಪ್ರಶಸ್ತಿ ಹಿಡಿಯುವ ಬೆಟ್ಟದಷ್ಟು ಆಸೆಯನ್ನು ಮನಸಿನಲ್ಲಿ ಕಟ್ಟುಕೊಂಡಿದ್ದರು. ಆದರೆ, ಪಂದ್ಯದಲ್ಲಿ ಬ್ರೆಜಿಲ್ 1-2 ಗೋಲುಗಳ ಅಂತರದಲ್ಲಿ ಉರುಗ್ವೆ ವಿರುದ್ಧ ಪರಾಭವಗೊಂಡಿತು. ಸಹಸ್ರಾರು ಬ್ರೆಜಿಲ್ ಅಭಿಮಾನಿಗಳು ನಿರಾಸೆ ಸಾಗರದಲ್ಲಿ ಕೊಚ್ಚಿಹೋದರು.

ಈ ಸಂದರ್ಭದಲ್ಲಿ ಸಾವ್ ಪೋಲೊನ ಬಡ ಕುಟುಂಬದಲ್ಲಿ ಜನಿಸಿದ್ದ ಪೀಲೆಗೆ ಸುಮಾರು 10 ವರ್ಷ ವಯಸ್ಸು. ತನ್ನ ಕುಟುಂಬ ಹಾಗೂ ಅಕ್ಕಪಕ್ಕದವರ ಫುಟ್ಬಾಲ್ ಪ್ರೀತಿ ಈತನ ಮೇಲೂ ಪ್ರಭಾವ ಬೀರಿತು. 1950ರಲ್ಲಿ ಬ್ರೆಜಿಲ್ ಫೈನಲ್ ನಲ್ಲಿ ಸೋತಾಗ ಇಡೀ ದೇಶವೇ ದುಖಃ ಸಾಗರದಲ್ಲಿ ಮುಳುಗಿದ್ದನ್ನು ಕಂಡ ಪೀಲೆ, ನಾನು ದೇಶಕ್ಕಾಗಿ ಫುಟ್ಬಾಲ್ ವಿಶ್ವಕಪ್ ಗೆಲ್ಲಬೇಕು ಎಂದು ನಿರ್ಧರಿಸಿದ. ಅಲ್ಲಿಂದ ಆತ ಫುಟ್ಬಾಲ್ ನಲ್ಲಿ ಒಂದು ಧ್ರವತಾರೆಯಾಗಿ ಬೆಳೆದ ರೀತಿ ಅಮೋಘ.

ಈಗ ಪೀಲೆ ಚಿತ್ರದಲ್ಲಿ ಈ ಸಾಧಕನ ಪಯಣವನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಕಟ್ಟಿಕೋಡುವ ಪ್ರಯತ್ನ ಮಾಡಿದ್ದು, ಚಿತ್ರದ ಟ್ರೇಲರ್ ನೋಡುಗರ ಮನ ಸೆಳೆಯುತ್ತಿದೆ.

 

ಫುಟ್ಬಾಲ್ ಆಡಲು ನಿರ್ಧರಿಸಿದ ಪೀಲಿಗೆ ತನ್ನ ಹಾದಿ ಸುಲಭದ್ದಾಗಿರಲಿಲ್ಲ. ಆಡಲು ಕಾಲಿಗೆ ಶೂ ಇಲ್ಲದೇ ಬರಿಗಾಲಿನಲ್ಲಿ ಅಭ್ಯಾಸ. ಹೀಗೆ ಪ್ರತಿ ಹಂತದಲ್ಲೂ ಪೀಲೆಗೆ ಸವಾಲುಗಳು ಒಂದರ ಮೇಲೆ ಒಂದು ಎರಗಿ ಬಂದವು. ತನ್ನ ಚಾಕಚಕ್ಯ ಆಟದ ಶೈಲಿ ಎದುರಾಳಿಗಳ ಊಹೆಗೂ ನಿಲುಕದ ಚುರುಕುತನದಿಂದ ಪೀಲೆ ಈ ಎಲ್ಲ ಸವಾಲುಗಳಿಗೆ ಗೋಲಿ ಹೊಡೆದ.

ಪೀಲೆ ಪರಿಶ್ರಮ ಎಷ್ಟರ ಮಟ್ಟಿಗಿತ್ತೆಂದರೆ, ತಾನು ಬ್ರೆಜಿಲ್ ದೇಶಕ್ಕಾಗಿ ವಿಶ್ವಕಪ್ ತಂದುಕೊಡುತ್ತೇನೆ ಎಂದು ಮಾತು ನೀಡಿದ 8 ವರ್ಷ ಅಂದರೆ, ಆ ವರ್ಷದ ವಿಶ್ವಕಪ್ ನಂತರದ ಎರಡನೇ ಟೂರ್ನಿಯಲ್ಲಿ ತಂಡ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆ ತಂಡದ ಭಾಗವಾಗಿದ್ದ ಪೀಲೆ, ಟೂರ್ನಿಯಲ್ಲಿ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಕ್ರೀಡಾ ಸಾಧಕರ ಮೇಲಿನ ಸಿನಿಮಾಗಳ ಟ್ರೆಂಡ್ ಹೊಸದಲ್ಲ. ಆದರೆ, ಆ ಸಾಧಕರ ಯಶಸ್ಸಿನ ಹಾದಿ ಇತರರಿಗೆ ಸ್ಫೂರ್ತಿ. ಈ ಚಿತ್ರ ಇದೇ ಏಪ್ರಿಲ್ 23ರಂದು ಅಮೆರಿಕದ ‘ತ್ರಿಬೆಕಾ ಚಿತ್ರೋತ್ಸವ’ದಲ್ಲಿ ಮೊದಲು ಪ್ರದರ್ಶನಗೊಳ್ಳುತ್ತಿದೆ. ನಂತರ ಮೇ 6ರಂದು ಚಿತ್ರರಸಿಕರ ಮುಂದೆ ಬರಲಿದೆ.

Leave a Reply