ಸುದ್ದಿ ಸಂತೆ: ಭಾರತ್ ಮಾತಾ ಕೀ ಜೈ.., ಅಲುಗಾಡಿದೆ ಅಲಿಘಡ ವಿವಿ ಅಲ್ಪಸಂಖ್ಯಾತ ಪಟ್ಟ, ಪ್ರಶ್ನೆಪತ್ರಿಕೆ ಸೋರಿಕೆ-ಬಂಧನ, ಲಾಲು ರಾಜ್ಯದಲ್ಲಿ ಅಪರಾಧಿಗೂ ಹುದ್ದೆ….

ಮತ್ತೆ ಕಾವೇರಿತು ಭಾರತ ಮಾತಾಕೀ ಜೈ ವಿವಾದ

ಯೋಗ ಗುರು ಬಾಬಾ ರಾಮ್ ದೇವ್ ಸೋಮವಾರ ಭಾರತ ಮಾತಾಕೀ ಜೈ ಹೇಳಿಕೆ ಬಗ್ಗೆ ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದು, ಈ ಚರ್ಚೆ ಮತ್ತೆ ಕಾವು ಪಡೆದಿದೆ. ‘ನಾವು ದೇಶದ ಸಂವಿಧಾನ ಮತ್ತು ಕಾನೂನನ್ನು ಪಾಲಿಸುತ್ತೇವೆ. ಇಲ್ಲವಾದರೆ, ಭಾರತ ಮಾತೆಗೆ ಅಪಮಾನ ಮಾಡಿದವರ ತಲೆ ಕಡಿಯುತ್ತಿದ್ದೆವು. ಅದು ಕೇವಲ ಒಬ್ಬರಲ್ಲ, ಸಾವಿರಾರು, ಲಕ್ಷವಾದರೂ ಸರಿಯೇ’ ಎಂಬ ಹೇಳಿಕೆ ನೀಡಿದ್ದಾರೆ. ಕತ್ತಿನ ಮೇಲೆ ಖಡ್ಗವಿಟ್ಟರೂ ಭಾರತ್ ಮಾತಾ ಕೀ ಜೈ ಎನ್ನುವುದಿಲ್ಲ ಎಂದಿದ್ದ ಒವೈಸಿ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಬಾಬಾ ರಾಮ್ ದೇವ್ ಹೇಳಿದ ಮಾತು. ಇದರ ಬೆನ್ನಲ್ಲೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆ, ಹೊತ್ತಿ ಉರಿಯುತ್ತಿರುವ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ‘ಭಾರತ ಮಾತಾಕಿ ಜೈ ಎಂದು ಹೇಳದಿರುವವರಿಗೆ ಭಾರತದಲ್ಲಿ ನೆಲೆಸುವ ಯಾವುದೇ ಯೋಗ್ಯತೆ ಇಲ್ಲ’ ಎಂದು ಫಡ್ನವಿಸ್ ತಿಳಿಸಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಪರೇಶ್ ರಾವಲ್, ಈ ಇಬ್ಬರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಭಾರತ ಮಾತಾಕಿ ಜೈ ಎಂದು ಹೇಳದಿದ್ದರೆ, ಯಾವುದೇ ತೊಂದರೆ ಇಲ್ಲ. ಅದನ್ನು ಬಿಟ್ಟು ಪಾಕಿಸ್ತಾನ ಜಿಂದಾಬಾದ್, ಕಾಶ್ಮೀರ ಸ್ವಾತಂತ್ರಗೊಳಿಸಿ, ಭಾರತವನ್ನು ತುಂಡು ತುಂಡಾಗಿಸುತ್ತೇವೆ ಎಂಬ ಹೇಳಿಕೆಗಳು ಮಾತ್ರ ಖಂಡನೀಯ. ಸದ್ಯದ ಈ ವಿವಾದ ಅನಗತ್ಯವಾದುದು. ಇದು ಕೇವಲ ಬೊಬ್ಬೆಯಾಗಿದ್ದು, ಎಲ್ಲರು ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ’ ಎಂಬುದು ಪರೇಶ್ ಅಭಿಪ್ರಾಯ.

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ: ಸಚಿವ ಪಿಎ ಸೇರಿ ಮೂವರ ಬಂಧನ

ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ. ಆ ಪೈಕಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರ ಆಪ್ತ ಕಾರ್ಯದರ್ಶಿ ಒಬಳರಾಜು ಸಹ ಬಂಧನವಾಗಿದ್ದಾರೆ. ಉಳಿದ ಇಬ್ಬರ ಪೈಕಿ ರುದ್ರಪ್ಪ ಎಂಬಾತ ಕಚೇರಿ ನಿರ್ವಾಹಕರಾಗಿದ್ದು, ಮಂಜುನಾಥ್ ಭೌತಶಾಸ್ತ್ರ ಶಿಕ್ಷಕರಾಗಿದ್ದಾರೆ. ಈ ಇಬ್ಬರು ಒಬಳರಾಜು ಅವರಿಂದ ಈ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದು, ನಂತರ ಅದನ್ನು ₹10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಸಿಐಡಿ ಅಧಿಕಾರಿ ಸೋನಿಯಾ ನಾರಂಗ್ ‘ಹಣಕ್ಕಾಗಿ ಇವರು ಈ ಕೆಲಸ ಮಾಡಿದ್ದು, ಇವರ ಸಂಬಂಧಿಕ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದರು’ ಎಂದು ಹೇಳಿದ್ದಾರೆ.

ಅಲಿಘಡಕ್ಕೆ ಬೇಕಿಲ್ಲ ಅಲ್ಪಸಂಖ್ಯಾತ ಸ್ಥಾನ- ಕೇಂದ್ರದ ನಿಲುವು

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಕ್ಕೆ ಅಲ್ಪಸಂಖ್ಯಾತ ಮಾನ್ಯತೆ ವಿಚಾರದಲ್ಲಿ ಕೇಂದ್ರ ಸರ್ಕಾರ ದೂರ ಸರಿದಿದೆ. ಈ ಹಿಂದೆ ಎಎಂಯು ಗೆ ನೀಡಿದ್ದ ಅಲ್ಪ ಸಂಖ್ಯಾತ ಮಾನ್ಯತೆಯನ್ನು ಅಲಹಾಬಾದ್ ಹೈಕೋರ್ಟ್ ತಡೆಹಿಡಿದು, 1981 ರಲ್ಲಿ ಎಎಂಯು ಗೆ ಮಾನ್ಯತೆ ನೀಡಲು ತಂದಿದ್ದ ತಿದ್ದುಪಡಿ ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದಿನ ಯುಪಿಎ ಸರ್ಕಾರ ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮನವಿಯನ್ನು ಈಗ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.

ಈ ಮೂಲಕ ಬಿಜೆಪಿ ಮುಸ್ಲಿಮರ ಹಕ್ಕನ್ನು ಕಸಿಯುತ್ತಿದೆ ಎಂಬ ಬೊಬ್ಬೆ ಒಂದೆಡೆ ಎದ್ದಿದ್ದರೆ, ಸೆಕ್ಯುಲರ್ ಸರ್ಕಾರವು ಧಾರ್ಮಿಕ ಆಧಾರದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಹೇಗೆ ಸಾಧ್ಯ ಎಂದು ಬಿಜೆಪಿ ಸರ್ಕಾರ ತಿರುಗೇಟು ನೀಡಿದೆ.

ನಕಲಿ ಎನ್ ಕೌಂಟರ್: 47 ಪೊಲೀಸರಿಗೆ ಜೀವಾವಧಿ ಶಿಕ್ಷೆ

ಸುಮಾರು 25 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಕಲಿ ಎನ್ ಕೌಂಟರ್ ಮೂಲಕ 10 ಮಂದಿ ಸಿಖ್ ಯಾತ್ರಿಕರನ್ನು ಹತ್ಯೆ ಮಾಡಿದ್ದ ಪ್ರಕರಣದ ತೀರ್ಪು ಹೊರಬಂದಿದೆ. ಈ ಪ್ರಕರಣದಲ್ಲಿ ಒಟ್ಟು 47 ಪೊಲೀಸ್ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 1991ರ ಜುಲೈ 12ರಂದು ಪೊಲೀಸರು ಬಸ್ ವೊಂದನ್ನು ತಡೆದು ಅದರಲ್ಲಿದ್ದ 10 ಪ್ರಯಾಣಿಕರನ್ನು ಹಿಡಿದು ವಿವಿಧ ಸ್ಥಳಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದರು. ಮಾರನೇ ದಿನ 10 ಖಲಿಸ್ಥಾನಿ ಉಗ್ರರ ಹತ್ಯೆ ಮಾಡಲಾಗಿತ್ತು. ಬಸ್ ನಲ್ಲಿದ್ದವರು ಅಪರಾಧ ಹಿನ್ನೆಲೆ ಹೊಂದಿದ್ದು ಶಸ್ತ್ರಾಸ್ತ್ರ ಹೊಂದಿದ್ದಾಗಿ ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು.

ಜೈಲು ಸೇರಿದವಗೂ ಹುದ್ದೆ, ಇದು ಲಾಲೂ ಜಂಗಲ್ ರಾಜ್!

ಜೀವಾವಧಿ ಶಿಕ್ಷೆಗೆ ಒಳಗಾದವರಿಗೂ ಆರ್ ಜೆ ಡಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸ್ಥಾನ ಸಿಕ್ಕಿದೆ! ಜೋಡಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರುವ ಆರ್ ಜೆ ಡಿ ಪಕ್ಷದ ಮಾಜಿ ಸಂಸದ ಮಹ್ಮದ್ ಶಹಬುದ್ದೀನ್ ಎಂಬಾತನನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಮೂಲಕ ಮತ್ತೆ ಬಿಹಾರದಲ್ಲಿ ಜಂಗಲ್ ರಾಜ್ಯ ಪ್ರಾರಂಭವಾಗಿದೆಯೇ ಎಂದು ಅನುಮಾನ ಮೂಡುತ್ತಿದೆ. ಅಷ್ಟೇ ಅಲ್ಲದೇ ನೂತನವಾಗಿ ರಚಿಸಿರುವ ಕಾರ್ಯಕಾರಿಣಿಯಲ್ಲಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ರ ಮಕ್ಕಳಾದ ತೇಜಸ್ವಿ, ತೇಜ್ ಪ್ರತಾಪ್ ಮತ್ತು ಮೀಸಾ ಭಾರತಿ ಅವರು ಸೇರಿದ್ದಾರೆ.

ಆರೋಪಿ ಶಹಬುದ್ದೀನ್ ಮೇಲೆ ಅಪಹರಣ, ಕೊಲೆಗೆ ಸಂಬಂಧಿಸಿದ 50 ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದು, 2004ರ ಜೋಡಿ ಕೊಲೆ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ಸಿವಾನ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.

2004ರ ಆಗಸ್ಟ್ 16 ರಂದು ಉದ್ಯಮಿಯೊಬ್ಬರ ಮಕ್ಕಳಾದ ಸತೀಶ್ ರಾಜ್ (25) ಮತ್ತು ಗಿರೀಶ್ ರಾಜ್ (20) ಎಂಬ ಸಹೋದರರನ್ನು ಅಪಹರಿಸಿ ಕೊಲೆ ಮಾಡಿದ್ದ ಈತನನ್ನು ಕಾರ್ಯಕಾರಿಣಿಗೆ ಆಯ್ಕೆ ಮಾಡಿರುವುದಕ್ಕೆ ಕಾರಣ ಕೇಳಿದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೋಲಿಸಿ, ಅಮಿತ್ ಶಾ ರನ್ನು ಯಾಕೆ ಹುದ್ದೆಯಿಂದ ತೆಗೆದಿಲ್ಲ? ನೀವ್ಯಾಕೆ ಅವರನ್ನು ಪ್ರಶ್ನಿಸುತ್ತಿಲ್ಲ? ಈ ವಿಚಾರದಲ್ಲಿ ಬಿಜೆಪಿಯವರು ಮೊದಲ ಹೆಜ್ಜೆ ಇಡಲಿದೆಯೇ? ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ ಲಾಲು ಪ್ರಸಾದ್ ಯಾದವ್ ರ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ.

Leave a Reply