ಹೋಟೆಲಲ್ಲಿ ಉಳಿದ ಆಹಾರ ಕಸದ ತೊಟ್ಟಿಗೆ ಎಸೆಯದೆ ಹಸಿದವರ ಹೊಟ್ಟೆಗೆ ಸೇರಿಸೋ ಈ ಪುಣ್ಯಾತಗಿತ್ತಿ ತಣ್ಣಗಿರಲಿ..

ಡಿಜಿಟಲ್ ಕನ್ನಡ ಟೀಮ್

ನಮ್ಮ ಸುತ್ತಮುತ್ತ ಅದೆಷ್ಟೋ ಹೊಟೇಲ್ ಗಳಿವೆ. ನಿತ್ಯ ಈ ಹೊಟೇಲ್ ಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದ ಆಹಾರ ಮಾರಾಟವಾಗದೆ ಕಸದ ತಿಪ್ಪೆ ಸೇರುತ್ತಿವೆ. ನಮ್ಮ ದೇಶದಲ್ಲಿ ಅಸಂಖ್ಯ ಹಸಿದ ಹೊಟ್ಟೆಗಳಿವೆ. ಹೀಗೆ ಉಳಿದ ಆಹಾರ ತಿಪ್ಪೆ ಬದಲು ಅವರ ಹೊಟ್ಟೆ ಸೇರಿದರೆ ಅದೆಂಥ ಪುಣ್ಯದ ಕೆಲಸ ಅಲ್ಲವೇ.

ಇಂಥ ಮಾದರಿ ಕೆಲಸ ಮಾಡುತ್ತಿರೋದು ಕೇರಳದ ಕೊಚ್ಚಿಯಲ್ಲಿರೋ ‘ಪಪ್ಪದವಡಾ’ ಹೊಟೇಲ್. ಈ ಹೊಟೇಲ್ ಒಡತಿ ಮಿನು ಪೌಲಿನ್ ಹೊಟೇಲ್ ನಲ್ಲಿ ಉಳಿದ ಆಹಾರವನ್ನು ಕಸವಾಗಲು ಬಿಡೋದಿಲ್ಲ. ಬದಲಿಗೆ ಹಸಿದವರ ಹೊಟ್ಟೆ ಸೇರಿಸೋ ಪ್ರಯತ್ನ ಮಾಡಿದ್ದಾರೆ.

ಹೌದು, ಹೊಟೇಲ್ ಮುಂದೆ ಒಂದು ಫ್ರಿಡ್ಜ್ ಇಟ್ಟು, ಅದರಲ್ಲಿ ಹೋಟೆಲ್ ನ ಮಿಕ್ಕ ಆಹಾರ ಕೆಡದಂತೆ ರಕ್ಷಿಸಿ ಇಡುತ್ತಾರೆ. ಅದನ್ನು ಬೇಕಿದ್ದವರಿಗೆ ಉಚಿತವಾಗಿ ಕೊಡುತ್ತಾರೆ. ಇಲ್ಲಿನ ವ್ಯವಸ್ಥೆ ಹೇಗಿದೆ ಅಂದ್ರೆ ಈ ಫ್ರಿಡ್ಜ್ ಒಳಗೆ ಇಟ್ಟ ಆಹಾರವನ್ನು ಅಗತ್ಯವಿದ್ದವರು ಯಾವಾಗ ಬೇಕಾದರು ಬಂದು ತೆಗೆದುಕೊಂಡು ಸೇವಿಸಬಹುದು. ನಿತ್ಯ ಇಲ್ಲಿ ಸುಮಾರು 50 ಪ್ಯಾಕೆಟ್ ನಷ್ಟು ಆಹಾರ ಇಡಲಾಗುತ್ತದೆ.

ಹಾದಿಬದಿಯ ಕಸದ ತೊಟ್ಟಿ ಬಳಿ ಎಸೆದಿರುವ ಆಹಾರವನ್ನು ಹಸಿದವರು ಬಾಚಿ ತಿನ್ನುವುದನ್ನು ಕಂಡು ಮಮ್ಮಲ ಮರುಗಿರುವ ಮಿನು ಪೌಲಿನ್ ಈ ಸಮಸ್ಯೆಗೆ ತಮ್ಮ ಕೈಯಲ್ಲಾದ ಸಹಾಯಕ್ಕೆ ಈ ಮಾರ್ಗ ಕಂಡುಕೊಂಡಿದ್ದಾರೆ. ಪೌಲಿನ್ ಅವರ ಈ ಕಾರ್ಯವನ್ನು ಸ್ಥಳೀಯರು ಮನದುಂಬಿ ಪ್ರಶಂಶಿಸಿದ್ದಾರೆ.

hotel 2

ನಮ್ಮ ದೇಶದಲ್ಲಿ ನಿತ್ಯ ಸಾವಿರಾರು ಟನ್ ಆಹಾರ ವ್ಯರ್ಥವಾಗುತ್ತಿದೆ. ಕಲ್ಯಾಣ ಮಂಟಪ, ಹೋಟೆಲ್, ಮನೆಗಳ ಸಮೀಪದ ಕಸದ ತೊಟ್ಟಿಗಳ ಬಳಿ ಚೆಲ್ಲಿರುವ ರಾಶಿರಾಶಿ ಆಹಾರ ಹಸಿದ ಹೊಟ್ಟೆಗಳನ್ನು ಅಣಕಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಿನು ಪೌಲಿನ್ ಕಾಯಕ ನಿಜಕ್ಕೂ ಕೈಲಾಸವೇ ಸರಿ. ಈ ಕೆಲಸ  ದೇಶಾದ್ಯಂತ ಪಸರಿಸಬೇಕು ಎಂಬುದು ಅವರ ಬಯಕೆ. ‘ನಾವು ಏನೂ ಮಾಡದಿದ್ದರೆ, ಸಮಾಜದಲ್ಲಿ ಏನೂ ಆಗುವುದಿಲ್ಲ. ನೀವು ಹಣ ಪೋಲು ಮಾಡಬಹುದು. ಕಾರಣ, ಅದು ನಿಮ್ಮದು. ಆದರೆ, ಆಹಾರವನ್ನು ಹಾಗೇ ಮಾಡಲಾಗದು. ಏಕೆಂದರೆ ಸಮಾಜ ಸಂಪನ್ಮೂಲದ ಒಟ್ಟು ಕೊಡುಗೆಯೇ ಈ ಆಹಾರ.  ಅದನ್ನು ಮಾತ್ರ ಹಾಳು ಮಾಡಬೇಡಿ’ ಎಂಬುದು ಮಿನು ಕೋರಿಕೆ.

ಮಿನು ಪೌಲಿನ್ ಅವರಂತೆ ಎಲ್ಲ ಹೊಟೇಲ್ ಮಾಲೀಕರು, ಕಲ್ಯಾಣ ಮಂಟಪಗಳ ಫಲಾನುಭವಿಗಳು   ಚಿಂತಿಸಿದರೆ, ನಮ್ಮ ಸಮಾಜದಲ್ಲೊಂದು ಹೊಸ ಕ್ರಾಂತಿ ಆಗಬಹುದು. ಬರೀ ಬೆಂಗಳೂರನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಯೋಚಿಸೋಣ. ಇಲ್ಲಿ ಹಾದಿಗೊಂದು ಬೀದಿಗಾರು ಹೋಟೆಲ್ ಗಳಿವೆ. ಅದೇ ರೀತಿ ಹಸಿವು ನೀಗಿಸಿಕೊಳ್ಳಲು ಹಾದಿಬೀದಿಯಲ್ಲಿ ಕೈಯೊಡ್ಡುವ ಅಸಂಖ್ಯ ನಿರ್ಗತಿಕರೂ ಇದ್ದಾರೆ. ನಮ್ಮ ನಗರದ ಎಲ್ಲ ಹೊಟೇಲ್ ಗಳಲ್ಲೂ ಇಂತಹ ವ್ಯವಸ್ಥೆ ಜಾರಿಗೆ ಬಂದರೆ ಅದೆಷ್ಟು ಹೊಟ್ಟೆಗಳು ತಣ್ಣಗಾಗುತ್ತವೆ ಅಲ್ಲವೇ?

ಹೌದು, ಈ ಮಾನವೀಯತೆ ಮೆರೆಯಲು ಬದ್ಧ ಮನಸ್ಸುಗಳು ಬೇಕಷ್ಟೇ..!

Leave a Reply