ಆ ಮಹಾತಾಯಿ ರಮಾದೇವಿ ಅವರೆಲ್ಲಿ, ರಾಜಭವನವನ್ನು ವಿಶ್ರಾಂತಿಧಾಮ ಮಾಡಿಕೊಂಡಿರುವ ಈ ಮಜಾವಾಲಾ ಎಲ್ಲಿ?

author-thyagarajಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ ವಿ.ಎಸ್. ರಮಾದೇವಿ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡಿ ಕಳುಹಿಸಿದ್ದರು. 1999 ರಿಂದ 2002 ರವರೆಗೆ ಗವರ್ನರ್ ಆಗಿದ್ದ ಆಂಧ್ರ ಪ್ರದೇಶ ಮೂಲದ ಈ ಸಜ್ಜನ ಹೆಣ್ಣುಮಗಳು ಕನ್ನಡ ನಾಡನ್ನೇ ತಮ್ಮೂರಾಗಿ ಮಾಡಿಕೊಂಡರು. ಕನ್ನಡವನ್ನೇ ಉಸಿರಾಡಿದರು. ಇಲ್ಲಿನ ಜನರ ಜತೆ ಬೆರೆತರು. ದಂತಗೋಪುರ ರಾಜಭವನವನ್ನು ಅವರಿಗೆ ತೆರೆದಿಟ್ಟರು. ಕೊನೆಗೆ ಈ ನಾಡಿನಲ್ಲೇ ಕೊನೆಯುಸಿರೆಳೆದರು.

ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೂರು ಗುಜರಾತ್ ಮೂಲದ ವಜೂಭಾಯಿ ರೂಡಭಾಯಿ ವಾಲಾ ಎಂಬ ವ್ಯಕ್ತಿಯನ್ನು ಇಲ್ಲಿನ ರಾಜ್ಯಪಾಲರನ್ನಾಗಿ ಮಾಡಿ ಕಳುಹಿಸಿದ್ದಾರೆ. ಈ ಮನುಷ್ಯ ಇಲ್ಲಿನ ಜನರ ಜತೆ ಬೆರೆಯುವ ಮಾತು ಪಕ್ಕಿಕ್ಕಿರಲಿ, ಜನರ ಪ್ರತಿನಿಧಿಗಳನ್ನೇ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಪಾಪ, ಮೋದಿ ಅವರು, ‘ಜನರ ಬಳಿಗೆ ಸರಕಾರವನ್ನು ಕೊಂಡೊಯ್ಯಿರಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರ ಭಾವನೆಗಳಿಗೆ ಸ್ಪಂದಿಸಿ’ ಅಂತ ಸರಕಾರದ ಪ್ರತಿನಿಧಿಗಳಿಗೆ, ಪಕ್ಷದ ನಾಯಕರಿಗೆ ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಈ ವ್ಯಕ್ತಿ ರಾಜಭವನವನ್ನು ವಿಶ್ರಾಂತಿ ಕೊಠಡಿ ಮಾಡಿಕೊಂಡು, ದೂರು-ದುಮ್ಮಾನ ತರುವ ಜನಪ್ರತಿನಿಧಿಗಳನ್ನೇ ಗೇಟಿನಾಚೆ ನಿಲ್ಲಿಸಿ, ಮೋದಿ ಅವರ ಆಶಯವನ್ನು ಮಣ್ಣುಪಾಲು ಮಾಡಿದ್ದಾರೆ.

ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ರಾಜಭವನದಲ್ಲಿ ‘ಗುಜರಾತ್ ಉತ್ಸವ’ ಮಾಡುವಷ್ಟು ಧಿಮಾಕು, ಧಾಷ್ಟ್ಯ ಇರುವ ಈ ಮನುಷ್ಯ ಸರಕಾರದ ವಿರುದ್ಧ ದೂರು ತಂದ ಮಾಜಿ ಪ್ರಧಾನಿ ದೇವೇಗೌಡರನ್ನು ವಿಶ್ರಾಂತಿ ನೆಪದಲ್ಲಿ ಭೇಟಿ ಮಾಡದೇ ವಾಪಸ್ಸು ಕಳುಹಿಸಿದ್ದಾರಲ್ಲ, ಏನೆನ್ನಬೇಕು ಇವರ ಅಹಂಕಾರಕ್ಕೆ? ಗೌಡರ ಹಿರಿತನ, ಅಲಂಕರಿಸಿದ್ದ ಹುದ್ದೆಗಾದರೂ ಗೌರವ ಕೊಡುವುದು ಸೌಜನ್ಯವಾಗಿತ್ತಲ್ಲವೇ? ಅದೂ ಅಲ್ಲದೇ ಅವರ ಜತೆ ಬಂದಿದ್ದ ಶಾಸಕರನ್ನು ಒಳಗೇ ಬಿಟ್ಟುಕೊಳ್ಳದಿರುವುದು ದುರಂಹಕಾರದ ಪರಮಾವಧಿ ಅಲ್ಲವೇ?

ಹೋಗಲಿ, ಗೌಡರನೇದರೂ ಇವರತ್ರ ಯಾವುದಾದರೂ ಡೀಲಿಂಗ್ ಗೆ ಬಂದಿದ್ರೇ? ಯಾವುದಾದರೂ ವಿಶ್ವವಿದ್ಯಾಲಯ ಕುಲಪತಿ ನೇಮಕ ವ್ಯವಹಾರ ಕುದುರಿಸಲು ಬಂದಿದ್ದರೇ? ಇಲ್ಲ, ವಾಲಾ ಅವರ ಷೇರುಮಾರುಕಟ್ಟೆ ವ್ಯವಹಾರದಲ್ಲಿ ಪಾಲು ಕೇಳಲು ಬಂದಿದ್ದರೇ? ಭ್ರಷ್ಟಾಚಾರ ನಿಯಂತ್ರಣ ದಳ (ಎಸಿಬಿ) ರಚಿಸಿರುವ ಕಾಂಗ್ರೆಸ್ ಸರಕಾರದ ವಿರುದ್ಧ ದೂರು ಕೊಡಲು ಬಂದವರನ್ನು ಭೇಟಿ ಮಾಡುವುದಿಲ್ಲ ಎನ್ನುವುದಾದರೆ, ರಾಜ್ಯಪಾಲರು ಇರೋದಾದರೂ ಏಕೆ? ಅವರ ಕರ್ತವ್ಯವಾದರೂ ಏನು? ಇವರೇನು ಗುಜರಾತ್ ನಲ್ಲಿ ಮಂತ್ರಿಯಾಗಿ, ಸ್ಪೀಕರ್ ಆಗಿ ಮಾಡಿದ ರಾಜಕೀಯ ಆಯಾಸ ಕಳೆಯಲು ಕರ್ನಾಟಕ ರಾಜಭವನವನ್ನು ವಿಹಾರಧಾಮ ಮಾಡಿಕೊಂಡಿದ್ದಾರೆಯೇ? ಅಥವಾ ರಾಜಭವನವನ್ನು ದನದ ಕೊಟ್ಟಿಗೆ ಮಾಡಿ, ಅದರಲ್ಲಿ ತಮ್ಮನ್ನು ತಾವೇ ಕಟ್ಟಿ ಹಾಕಿಕೊಂಡು, ರಾಜ್ಯಪಾಲರ ಹುದ್ದೆಯ ಗೌರವ-ಘನತೆಗಳನ್ನು ತಮಗೆ ಗಾಳಿ ಬೀಸೋ ಫ್ಯಾನ್ ಮಾಡಿಕೊಂಡಿದ್ದಾರೆಯೇ?

ಜನಪ್ರತಿನಿಧಿಗಳ ಜತೆ ವಜೂಭಾಯಿ ಅವರ ದುರ್ವರ್ತನೆ ಇದೇ ಮೊದಲಲ್ಲ. ಹಿಂದೆ ಹಲವಾರು ನಾಯಕರು ಹೀಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ರಾಜಭವನ ದೊಡ್ಡಗೇಟು ನೋಡಿಕೊಂಡು ಹೋಗಿದ್ದಾರೆ. ಈ ವಾಲಾ ಅವರು ಪ್ರತಿನಿಧಿಸುತ್ತಿದ್ದ ಬಿಜೆಪಿ ಮುಖಂಡರಿಗೂ ಅನೇಕ ಬಾರಿ ಈ ಅನುಭವವಾಗಿದೆ. ಎಸಿಬಿ ವಿರುದ್ಧ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ವಿಧಾನಮಂಡಲದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ತಮ್ಮ ಮಾತಿಗೆ ಕಿಮ್ಮತ್ತು ಕೊಡದೇ ಹೋದರೆ ರಾಜ್ಯಪಾಲರಿಗೆ ದೂರು ಕೊಡುವುದು, ಅವರ ಮೂಲಕ ರಾಷ್ಟ್ರಪತಿಗಳಿಗೆ ದೂರು ರವಾನಿಸುವುದು ವಾಡಿಕೆ. ಆದರೆ ಈ ಮನುಷ್ಯ ತಾನು ರಾಜ್ಯಪಾಲ ಅಗಿಯೇ ಇಲ್ಲವೆಂಬಂತೆ ಅದ್ಯಾವುದಕ್ಕೂ ಆಸ್ಪದ ಕೊಡುವುದಿಲ್ಲ ಎಂದರೆ ಈ ನೆಲದ ಆಡಳಿತ ವ್ಯವಸ್ಥೆ ನಡೆಯೋದಾದರೂ ಹೇಗೆ?

ರಾಜ್ಯ ಹೈಕೋರ್ಟ್ ನ್ಯಾಯವಾದಿ ನಟರಾಜ್ ಶರ್ಮಾ ಅವರು ಸಿದ್ದರಾಮಯ್ಯ ಸರಕಾರದ ಅರ್ಕಾವತಿ ಡಿನೋಟಿಫಿಕೇಷನ್ ರೀಡೂ ಹಗರಣ ಸಂಬಂಧ ರಾಜ್ಯಪಾಲರಿಗೆ ದೂರು ಕೊಡಲು ಮೂರು ತಿಂಗಳಿಂದ ಹಲವು ಬಾರಿ ಅಪಾಂಯ್ಟ್ ಮೆಂಟ್ ಕೇಳಿದ್ದಾರೆ. ಉಹುಂ.. ಸಿಕ್ಕಿಲ್ಲ. ಅದೇ ರೀತಿ ಮತ್ತೊಬ್ಬ ಹೈಕೋರ್ಟ್ ವಕೀಲ ಅಮೃತೇಶ್ ಕೂಡ ಸಿದ್ದರಾಮಯ್ಯ ವಾಚ್ ಉಡುಗೊರೆ ವಿವಾದ ಸಂಬಂಧ ದೂರು ಕೊಡಲು ಯತ್ನಿಸಿದರೂ ರಾಜಭವನದ ಗೇಟ್ ತೆರೆಯಲೇ ಇಲ್ಲ. ಕೊನೆಗೆ ಅವರೀಗ ಸಿದ್ದರಾಮಯ್ಯ ಸರಕಾರ ರಚಿಸಿದ ಎಸಿಬಿಗೇ ಕಂಪ್ಲೆಂಟ್ ಕೊಟ್ಟಿದ್ದಾರೆ. ಏನೋ ವಜೂಭಾಯಿ ಅವರು ಪ್ರತಿನಿಧಿಸುತ್ತಿದ್ದ ಬಿಜೆಪಿ ವಿರುದ್ಧ ಯಾರಾದರೂ ದೂರು ಕೊಡಲು ಬಂದರೆ ಇವರು ಅವಾಯ್ಡ್ ಮಾಡುತ್ತಿದ್ದಾರೆ ಅಂತಂದುಕೊಳ್ಳಬಹುದಿತ್ತೇನೋ. ಅದನ್ನು ಕೂಡ ಇವರು ಮಾಡುವಂತಿಲ್ಲ. ಯಾವುದೇ ಪಕ್ಷದವರು ಬಂದು ಯಾವುದೇ ಪಕ್ಷ, ಸರಕಾರದ ವಿರುದ್ಧ ದೂರು ಕೊಟ್ಟರೂ ಸ್ವೀಕರಿಸುವುದು ಅವರ ಹುದ್ದೆಯ ಧರ್ಮ. ಆದರೆ ಪ್ರತಿಪಕ್ಷದವರು ಸರಕಾರದ ವಿರುದ್ಧ ಕೊಡೋ ದೂರು ಸ್ವೀಕರಿಲುವುದಿಲ್ಲ ಎಂದರೆ, ಇವರೇನಾದರೂ ಸರಕಾರದ ಹಂಗಿಗೆ ಬಿದ್ದಿದ್ದಾರೆಯೇ ಅನ್ನುವ ಅನುಮಾನ ಜನಸಾಮಾನ್ಯರಿಗೆ ಬರೋದಿಲ್ಲವೇ? ಅಷ್ಟೆಲ್ಲ ವರ್ಷ ರಾಜಕೀಯ ಮಾಡಿರುವ ಇವರಿಗೆ ಇಷ್ಟೂ ಕನಿಷ್ಟ ಜ್ಞಾನ ಇಲ್ಲವೇ?

ಅದೆಲ್ಲ ಹಾಳಾಗಿ ಹೋಗಲಿ. ರಾಜಭವನದ ಒಳಗಿನ ವ್ಯವಸ್ಥೆ ಹೇಗಿದೆ ಗೊತ್ತೇ..?

ಪ್ರವೇಶದ್ವಾರದ ನಂತರ ಒಳ ಆವರಣದಲ್ಲಿರುವ ಮುಖ್ಯ ಭವನ ತಲುಪುವ ದಾರಿಗುಂಟ ನಾಕಾಬಂಧಿ ಶೈಲಿಯಲ್ಲಿ ಮೂರು ಹಂತದ ಬ್ಯಾರಿಕೇಡ್ ಹಾಕಿದ್ದಾರೆ. ಕಳ್ಳಕಾಕರನ್ನು ಹಿಡಿಯಲು ಪೊಲೀಸಿನವರು ರಾತ್ರಿ ಹೊತ್ತು ದಾರಿಯಲ್ಲಿ ಹಾಕಿರುತ್ತಾರಲ್ಲ ಹಾಗೇ. ಸುಮಾರು ಇನ್ನೂರು ಪೊಲೀಸರು ಮೂರು ಪಾಳಿಯಲ್ಲಿ ಭದ್ರತೆ ಒದಗಿಸುತ್ತಿದ್ದಾರೆ. ಈ ಗವರ್ನರ್ ಗೆ ಯಾವುದೇ ಉಗ್ರಗಾಮಿಯಿಂದಾಗಲಿ, ಅಂಡರ್ ವರ್ಡ್ ಡಾನ್ ಗಳಿಂದಾಗಲಿ ಜೀವಬೆದರಿಕೆ ಇಲ್ಲ. ಮೊದಲೇ ಜನರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಪ್ಪಿತಪ್ಪಿ ಪ್ರವೇಶಾವಕಾಶ ಸಿಕ್ಕಿದರೆ, ಒಳಗೆ ಬರೋ ಜನರಿಗೆ ಭದ್ರತಾ ಪೊಲೀಸರು, ‘ಒಳಗೆ ಸಿಸಿಟಿವಿ ಕ್ಯಾಮರಾ ಇದೆ, ಹುಷಾರಾಗಿರಿ’ ಅಂತ ಎಚ್ಚರಿಕೆ ಕೊಟ್ಟು ಕಳುಹಿಸುತ್ತಾರಂತೆ. ಪರಿಸ್ಥಿತಿ ಹೀಗಿರೋವಾಗ ಅದ್ಯಾರ್ರೀ ಇವರನ್ನು ಅಟ್ಯಾಕ್ ಮಾಡ್ತಾರೆ? ಇಂಥವರನ್ನು ಕಾಯೋಕೆ 200 ಜನ ಪೊಲೀಸರು ಬೇಕೇ? ಕೆಲಸವಿಲ್ಲದೇ ಅವರು ಸೋಮಾರಿಗಳಾಗುವುದಿಲ್ಲವೇ?

ಇಷ್ಟೇ ಅಲ್ಲ, ಜನರ ದುಃಖ, ದುಮ್ಮಾನ ಆಲಿಸೋ ಮನಸ್ಸಿಲ್ಲದಿದ್ದರೂ ಈ ರಾಜ್ಯಪಾಲರ ಶೋಕಿ ನೋಡಿ. ಇವರು ಬರುತ್ತಿದ್ದಂತೆ ಹಿಂದೆ ರಾಜ್ಯಪಾಲರ ಓಡಾಡಕ್ಕೆ ಇದ್ದ ಹೋಂಡಾ ಸಿಆರ್ ವಿ, ಪಜರೋ ಕಾರುಗಳನ್ನು ಬದಲಿಸಿ ಐಷರಾಮಿ ಬೆಂಜ್ ಕಾರುಗಳನ್ನು ತರಿಸಿಕೊಂಡು, ಅದಕ್ಕೆ ಬುಲೆಟ್ ಪ್ರೂಫ್ ಹಾಕಿಸಿಕೊಂಡಿದ್ದಾರಂತೆ. ಜನರ ಜತೆ ಒಡನಾಡದವರಿಗೆ ಇಂಥ ಪ್ರೂಫ್ ಯಾಕೆ ಬೇಕು ಅಲ್ವೇ? ಇವರಿಗೆ ಅಡುಗೆ ಮಾಡೋದರಿಂದ ಹಿಡಿದು ನಿರ್ವಹಣೆವರೆಗೆ ಎಲ್ಲರೂ ಗುಜರಾತ್ ಮೂಲದವರೇ. ಇವರ ವಿಶೇಷ ಕರ್ತವ್ಯಾಧಿಕಾರಿ (ಓಎಸ್ ಡಿ) ತೇಜಸ್ ಭಟ್ಟಿ, ಸಭೆ-ಸಮಾರಂಭಗಳಲ್ಲಿ ಭದ್ರತೆ ಯೂನಿಫಾರಂ ಹಾಕಿಕೊಂಡು ಇವರ ಬೆನ್ನಿಗೆ ನಿಲ್ಲುವ ಎಡಿಸಿ ಕೂಡ ಅಲ್ಲಿಯವರೇ. ಇನ್ನೂ ಒಂದು ವಿಷಯ. ಜನರು, ಜನಪ್ರತಿನಿಧಿಗಳಿಗೆ ಸುಲಭವಾಗಿ ಸಿಗದ ರಾಜಭವನ ಪ್ರವೇಶ ಗುಜರಾತಿಗಳು, ಮಾರ್ವಾಡಿಗಳಿಗೆ ಆರಾಮವಾಗಿ ಸಿಗುತ್ತದಂತೆ. ಹಿಂದೆ ಯಾರೂ ಇಷ್ಟೊಂದು ಪ್ರಮಾಣದಲ್ಲಿ ಊರಿನ ಪ್ರೇಮ ‘ಆಮದು’ ಮಾಡಿಕೊಂಡ ನಿದರ್ಶನ ಇಲ್ಲ.

ಹಿಂದೆ ರಮಾದೇವಿ ಅವರ ಕಾಲದಲ್ಲಿ ರಾಜಭವನ ಕನ್ನಡಿಗರ ಮನೆಯಾಗಿತ್ತು. ತಿಂಗಳೊಪ್ಪತ್ತಿಗೆ ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಸಾಮಾನ್ಯ ಜನರಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತಿತ್ತು. ನಿರ್ದಿಷ್ಟ ದಿನದಂದು ವಿಧಾನಸೌಧದಂತೆ ರಾಜಭವನವನ್ನೂ ನೋಡಬಹುದಿತ್ತು. ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ ಹೆಗ್ಗಳಿಕೆ ಅವರದು. ಜನಸಾಮಾನ್ಯರ ಜತೆಯೂ ತಮಗೆ ಬರುವಷ್ಟು ಕನ್ನಡದಲ್ಲೇ ವ್ಯವಹರಿಸುತ್ತಿದ್ದರು. ನಾಡಿನ ಜನ ಅವರನ್ನು ತಾಯಿಯಂತೆ ಪೂಜನೀಯ ಭಾವದಿಂದ ನೋಡುತ್ತಿದ್ದರು. ಹಂಸರಾಜ್ ಭಾರದ್ವಾಜ್ ಅವಧಿಯಲ್ಲೂ ರಾಜಭವನ ಮುಕ್ತವಾಗಿತ್ತು. ಈಗಿನಂತೆ ಅಡೆತಡೆಗಿರಲಿಲ್ಲ. ಆದರೆ ಈ ವಾಲಾ ಕನ್ನಡ ಮಾತಾಡೋದಿರಲಿ, ಜನಸಾಮಾನ್ಯರನ್ನು ಒಳಕ್ಕೆ ಬಿಡೋದಿರಲಿ, ನವೆಂಬರ್ 1 ರಂದು ರಾಜಭವನದಲ್ಲಿ ಗುಜರಾತ್ ಉತ್ಸವ ಮಾಡಿ, ಕನ್ನಡಿಗರಿಗೆ ಅಪಮಾನ ಮಾಡ್ತಾರೆ ಅಂದ್ರೆ ಎಷ್ಟಿರಬೇಕು ಇವರ ಪೊಗರು? ಇದೀಗ ಜನಪ್ರತಿನಿಧಿಗಳಿಗೂ ಅಪಮಾನ ಮಾಡೋ ಮೂಲಕ ಸಂವಿಧಾನದ ಆಶಯಗಳಿಗೆ ಮಸಿ ಬಳಿಯುತ್ತಿದ್ದಾರೆ. ಇಷ್ಟೆಲ್ಲ ಕನ್ನಡವಿರೋಧಿ ಮನಸ್ಸಿಟ್ಟುಕೊಂಡಿರುವ ವಾಲಾ ಅದ್ಹೇಗೆ ಈ ನಾಡಿನ ಜನರ ತೆರಿಗೆ ಹಣದಲ್ಲಿ ಎಲ್ಲ ವೈಭವಗಳನ್ನು ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ಇವರದು ನಿಜಕ್ಕೂ ನಾಚಿಕೆ ಮೀರಿದ ಮನಸ್ಸು!

Leave a Reply