ಡಿಜಿಟಲ್ ಕನ್ನಡ ಟೀಮ್
ಭಾರತದ ದೊಡ್ಡ ಸಂಪರ್ಕ ಸೇತುವೆಯಾಗಿರೋ ರೈಲ್ವೆ, ಈಗ ತನ್ನ ವೇಗ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಮಂಗಳವಾರ ಭಾರತದಲ್ಲೇ ಅತಿ ವೇಗದ ರೈಲು ಎಂದು ಖ್ಯಾತಿ ಪಡೆದಿರುವ ಗತಿಮಾನ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ನವದೆಹಲಿಯಲ್ಲಿ ಚಾಲನೆ ಸಿಕ್ಕಿದೆ.
ಈ ಗತಿಮಾನ್ ಎಕ್ಸ್ ಪ್ರೆಸ್ ರೈಲು ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿದ್ದು, ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ. ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಿಂದ ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದವರೆಗೂ ಈ ಗತಿಮಾನ್ ಸಂಚರಿಸಲಿದೆ. ಈ ಪ್ರಯಾಣದ ದೂರ ಸುಮಾರು 188 ಕಿ.ಮೀ ನಷ್ಟಿದೆ. ಶುಕ್ರವಾರ ಹೊರತುಪಡಿಸಿದಂತೆ ವಾರದ ಆರು ದಿನಗಳ ಕಾಲ ಈ ರೈಲು ಸಂಚರಿಸಲಿದೆ. ಈ ರೈಲಿನಲ್ಲಿ ಏಕಮುಖಿ ಹವಾನಿಯಂತ್ರಿತ ಸೀಟ್ ಗೆ ₹750 ಹಾಗೂ ಎಕ್ಸಿಕ್ಯುಟಿವ್ ಸೀಟ್ ಗೆ ₹1500 ಪ್ರಯಾಣ ದರ ನಿಗದಿ ಮಾಡಲಾಗಿದೆ.
ಈ ರೈಲಿನ ಕುರಿತ ಕೆಲ ಪ್ರಮುಖ ಅಂಶಗಳು ಹೀಗಿವೆ.
– 160 ಕಿ.ಮೀ ವೆಗದಲ್ಲಿ ಓಡುವ ಈ ರೈಲು ಭಾರತದ ವೇಗದ ರೈಲು.
– ಶತಾಬ್ದಿಯಲ್ಲಿ ದೆಹಲಿಯಿಂದ ಆಗ್ರಾಗೆ ಸಾಗಲು 2 ತಾಸು ಬೇಕು. ಈ ಗತಿಮಾನ್ 1.45 ಗಂಟೆಯಲ್ಲಿ ತಲುಪುತ್ತದೆ.
– 12 ಅತ್ಯಾಧುನಿಕ ತಂತ್ರಜ್ಞಾನದ ಬೋಗಿಗಳು.
– ಸ್ವಯಂ ಬೆಂಕಿ ಎಚ್ಚರಿಕೆ ಗಂಟೆ, ತುರ್ತು ನಿರ್ಗಮನ ಬಾಗಿಲು, ಪ್ರಯಾಣಿಗರ ಮಾರ್ಗದರ್ಶನ ವ್ಯವಸ್ಥೆ.
– ಪ್ರತಿ ಬೋಗಿಗೆ ₹2.5 ಕೋಟಿ ವೆಚ್ಚ.
– ಪ್ರತಿ ಸೀಟಿನ ಹಿಂದೆ 8 ಇಂಚಿನ ಎಲ್ ಸಿಡಿ ಟಿವಿ. ಇದರಲ್ಲಿ ಸಿನಿಮಾ ಪ್ರದರ್ಶನ.
– ಸ್ಯಾಟಲೈಟ್ ಮೂಲಕ ಈ ಟಿವಿಗಳಲ್ಲಿ ಮನರಂಜನಾ ಕಾರ್ಯಕ್ರಮ ಪ್ರಸಾರ.
– ಈ ರೈಲಿಗೆ 5,400 ಕುದುರೆ ಬಲ. ಅಂದರೆ, 5400 ಕುದುರೆಗಳು ಈ ರೈಲನ್ನು ಎಳೆದಷ್ಟು ವೇಗದಲ್ಲಿ ಸಾಗುತ್ತದೆ.
ಈ ಎಲ್ಲಾ ವಿಶೇಷತೆ ಇರೋ ಗತಿಮಾನ್ ಎಕ್ಸ್ ಪ್ರೆಸ್ ಯಾವ ರೀತಿ ಇದೆ ಎಂಬುದನ್ನು ಈ ಚಿತ್ರಗಳು ವಿವರಿಸುತ್ತವೆ.