ವೀಸಾ, ಮಾಸ್ಟರ್ ಕಾರ್ಡ್ ಹೆಸರು ಕೇಳದವರು ಯಾರು? ಜಗತ್ತಿನಲ್ಲಿ ನೂರು ಕಾರ್ಡ್ ಇದ್ದಾವೆಂದರೆ ಅದರಲ್ಲಿ 52 ವೀಸಾ, 30 ಮಾಸ್ಟರ್ ಕಾರ್ಡ್ ಎಂದರೆ ಇವುಗಳು ಹೇಗೆ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ತೆಗೆದು ಕೊಂಡಿವೆ ಎನ್ನುವುದರ ಅರಿವು ನಿಮಗಾದೀತು. ಅಮೆರಿಕನ್ ಎಕ್ಸ್ಪ್ರೆಸ್ ಎನ್ನುವ ಇನ್ನೊಂದು ಹೆಸರಿನ ಕಾರ್ಡ್ 9 ಪ್ರತಿಶತ ಮಾರುಕಟ್ಟೆ ಆಕ್ರಮಿಸಿದೆ ಎಂದರೆ ಉಳಿದ ಕಾರ್ಡ್ ಗಳ ಸ್ಥಾನ ಏನಿರಬಹುದು ಎನ್ನುವ ಜಿಜ್ಞಾಸೆ ಸಹಜವಾಗಿ ಮೂಡುತ್ತದೆ.
ವೀಸಾ ಅಂಡ್ ಮಾಸ್ಟರ್ ಕಾರ್ಡ್ ಜಗತ್ತಿನಾದ್ಯಂತ ಎಲ್ಲೆಡೆ ಒಪ್ಪಿಕೊಳ್ಳುವ ಹಣ ಪಾವತಿಸುವ ಒಂದು ಸಾಧನ. ಅಮೆರಿಕನ್ ಡಾಲರ್ ನಾವು ಒಪ್ಪಿಕೊಂಡದಂತೆ ಇಲ್ಲಿಯೂ ಕೆಲಸ ಮಾಡುವುದು ನಂಬಿಕೆ ಎನ್ನುವ ಅತ್ಯಂತ ಬಲಿಷ್ಠ ಶಕ್ತಿ. ಇವೆರೆಡು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಷ್ಟು ಮಾನ್ಯತೆ ಪಡೆದ ಹಣ ಪಾವತಿ ಸಾಧನ ಇನ್ನೊಂದಿಲ್ಲ. ಇಲ್ಲಿಯವರೆಗೂ ಇವು ನಡೆದದ್ದೇ ರಾಜ ಮಾರ್ಗ.
ಏನಿದು ವೀಸಾ, ಮಾಸ್ಟರ್ ಕಾರ್ಡ್? ಇವು ಹೇಗೆ ಕಾರ್ಯ ನಿರ್ವಹಿಸುತ್ತವೆ?
ವೀಸಾ, ಮಾಸ್ಟರ್ ಕಾರ್ಡ್ ಅಥವಾ ಇನ್ನಾವುದೇ ಕಾರ್ಡ್ ಇರಬಹುದು ಇದು ಪ್ಲಾಸ್ಟಿಕ್ ನಿಂದ ಮಾಡಿದ ಒಂದು ಕಾರ್ಡ್. ಗ್ರಾಹಕನ ಹೆಸರು, ಕಾರ್ಡ್ ಸಂಖ್ಯೆ, ಕಾರ್ಡ್ ಇಶ್ಯೂ ಮಾಡಿದ ದಿನಾಂಕ, ಎಕ್ಸ್ ಪೈರಿ ದಿನಾಂಕ ಹೀಗೆ ಹಲವು ವಿಷಯ ಕಾರ್ಡ್ ಮೇಲೆ ಮುದ್ರಿತವಾಗಿರುತ್ತದೆ. ನೆನಪಿರಲಿ, ವೀಸಾ ಅಥವಾ ಮಾಸ್ಟರ್ ಕಾರ್ಡ್ ಇಶ್ಯೂ ಮಾಡುವ ಸಂಸ್ಥೆ ಹಣಕಾಸು ಸಂಸ್ಥೆಯಲ್ಲ. ಇವುಗಳ ಕೆಲಸ ಮಧ್ಯವರ್ತಿಯ ತರಹ, ಯಾವುದೇ ಬ್ಯಾಂಕ್ ಅದು ಎಸ್ ಬಿ ಐ ಇರಬಹುದು, ಕೆನರಾ ಇರಬಹುದು ಅಥವಾ ಇನ್ನ್ಯಾವುದೇ ಬ್ಯಾಂಕ್ ಇರಬಹುದು ಅವರು ವೀಸಾ ಅಥವಾ ಮಾಸ್ಟರ್ ಕಾರ್ಡ್ ವಿತರಣೆ ಮಾಡಬಹುದು. ಅಂದರೆ ವೀಸಾ, ಮಾಸ್ಟರ್ ಕಾರ್ಡ್ ಸಂಸ್ಥೆಗಳು ಸಾಲ ನೀಡುವ ಕೆಲಸ ಮಾಡುವುದಿಲ್ಲ. ಅವೇನಿದ್ದರೂ ಸಂಬಂಧಪಟ್ಟ ಬ್ಯಾಂಕ್ ನ ಕೆಲಸ. ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ ಮಾತ್ರ ಇದಕ್ಕಿಂತ ಭಿನ್ನ. ಇದು ಖರೀದಿದಾರನಿಗೆ ಸಾಲ ನೀಡುವ ಸಂಸ್ಥೆಯಾಗಿಯೂ ಕೆಲಸ ನಿರ್ವಹಿಸುತ್ತದೆ.
ಇವುಗಳ ಕಾರ್ಯ ನಿರ್ವಹಣೆ ಬಹು ಸುಲಭ. ಟೆಕ್ನಾಲಜಿ ಬೆಳೆದಂತೆ ಇವುಗಳ ನಿರ್ವಹಣೆ, ಅದಕ್ಕೆ ತಗಲುವ ಸಮಯ ಎಲ್ಲಾ ಬದಲಾಗಿ ಹೋಗಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ನೋಡೋಣ.
೧) ಗ್ರಾಹಕ ತನ್ನಿಚ್ಚೆಯ ಸರಕು ಕೊಂಡು ಅಂಗಡಿಯಲ್ಲಿ ಹಣದ ಬದಲು ಕಾರ್ಡ್ ನೀಡುತ್ತಾನೆ.
೨) ಮಾರಾಟಗಾರ ನ ಬ್ಯಾಂಕ್ ಮಾಹಿತಿ ಕಲೆಹಾಕುತ್ತದೆ ಹಾಗೂ ಒಪ್ಪಿಗೆಗೆ ಗ್ರಾಹಕನ ಬ್ಯಾಂಕ್ ನ ಅನುಮತಿ ಕೇಳುತ್ತದೆ.
೩) ಗ್ರಾಹಕನ ಬ್ಯಾಂಕ್, ಗ್ರಾಹಕನಿಗೆ ಇರುವ ಲಭ್ಯತೆ ನೋಡುತ್ತದೆ ಹಾಗೂ ಒಪ್ಪಿಗೆ ಸಂದೇಶ ರವಾನಿಸುತ್ತದೆ.
೪)ಸಮ್ಮತಿ /ಅಸಮ್ಮತಿ ಕೋಡ್ ಮಾರಾಟಗಾರನ ಬ್ಯಾಂಕ್ ನಿಂದ ಮಾರಾಟಗಾರನಿಗೆ ವರ್ಗಾವಣೆ ಆಗುತ್ತದೆ.
೫) ವಹಿವಾಟು ಪೂರ್ಣವಾಯಿತು ಎನ್ನುವುದ ಸೂಚಿಸಲು ರಸೀದಿ ಮುದ್ರಣವಾಗುತ್ತದೆ.
೬) ತನ್ನ ಒಪ್ಪಿಗೆ ಸೂಚಿಸಲು ಗ್ರಾಹಕ ರಸೀದಿ ಮೇಲೆ ಸಹಿ ಮಾಡುತ್ತಾನೆ.
ಗಮನಿಸಿ ಇಷ್ಟೆಲ್ಲಾ ಕೇವಲ ಮೂವತ್ತು ಸೆಕೆಂಡ್ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ಮುಗಿದು ಹೋಗುತ್ತದೆ.
ಓಕೆ. ಅರ್ಥ ಆಯ್ತು… ಈ ಸೇವೆ ನೀಡುವುದರಿಂದ ವೀಸಾ ಅಥವಾ ಮಾಸ್ಟರ್ ಕಾರ್ಡ್ ಸಂಸ್ಥೆಗಳಿಗೇನು ಲಾಭ? ಇವು ಹಣ ಹೇಗೆ ಗಳಿಸುತ್ತವೆ?
ಜಗತ್ತಿನಲ್ಲಿ ಇಂದು ಪುಕ್ಕಟೆ ಎನ್ನುವುದು ಒಂದು ಭ್ರಮೆ ಅಷ್ಟೇ. ವೀಸಾ, ಮಾಸ್ಟರ್ ಕಾರ್ಡ್ ಸಂಸ್ಥೆಗಳು ಸೇವೆಯನ್ನು ಪುಕ್ಕಟೆ ನೀಡುವುದಿಲ್ಲ. ಗ್ರಾಹಕನಿಗೆ ತಕ್ಷಣ ಕೈಯಿಂದ ದುಡ್ಡು ಹೋಗದ ಕಾರಣ ಆತನಿಗೆ ಅದು ತಿಳಿಯುವುದು ಇಲ್ಲ. ಈ ಸಂಸ್ಥೆಗಳು ಮಾರಾಟಗಾರನಿಂದ ವಹಿವಾಟಿನ ಮೇಲೆ 1 ರಿಂದ 3 ಪ್ರತಿಶತ ಹಣ ಪಡೆಯುತ್ತವೆ.
ವರ್ಷಕೊಮ್ಮೆ ಗ್ರಾಹಕನಿಂದ ಕಾರ್ಡ್ ಬಳಕೆ ಫೀಸ್, ಕಾರ್ಡ್ ವಿತರಣೆ ಫೀಸ್ ಹೆಸರಲ್ಲಿ ಹಣ ಪಡೆಯುತ್ತವೆ. ಅಕಸ್ಮಾತ್ ಮೂವತ್ತು ದಿನಗಳಲ್ಲಿ ನಿಗದಿತ ಮೊತ್ತ ಪಾವತಿಸದೇ ಹೋದರೆ ಅದಕ್ಕೆ ಬಡ್ಡಿ ಹಾಕುತ್ತವೆ.
ಕ್ರೆಡಿಟ್ ಕಾರ್ಡ್ ನೆಟ್ ವರ್ಕಿಂಗ್ ಫೀಸ್ ಹೆಸರಲ್ಲಿ ಈ ಸಂಸ್ಥೆಗಳು ಪಡೆಯುವ ಹಣ ಪೈಸದಲ್ಲಿ. ಗ್ರಾಹಕನಿಗೆ, ಮಾರಾಟಗಾರನಿಗೆ ಇಬ್ಬರಿಗೂ ಹಾಗೂ ನೆಟ್ ವರ್ಕ್ ಒದಗಿಸಿದ ಸಂಸ್ಥೆಗೂ ನೋವು ಉಂಟಾಗದ ಫೀಸ್ ಇದು. ಆದರೆ ಜಗತ್ತಿನಾದ್ಯಂತ ನಡೆಯುವ ವಹಿವಾಟಿನ ಲೆಕ್ಕಕ್ಕೆ ತೆಗೆದು ಕೊಂಡರೆ ಇದು ಅತ್ಯಂತ ದೊಡ್ಡ ಮೊತ್ತವಾಗುತ್ತದೆ. ಗಮನಿಸಿ, 2013ರಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ವೀಸಾ ಸಂಸ್ಥೆ ಕೇವಲ ಈ ಒಂದು ಫೀಸ್ ಮೂಲಕ ಗಳಿಸಿತು ಎಂದರೆ… ಈ ಸಂಸ್ಥೆಗಳು ಗಳಿಸುವ ಆದಾಯದ ಅಂದಾಜು ಆಗಬಹುದು. ಈ ಲಾಭದ ಮೊತ್ತ 2013 ರಿಂದ ಇಲ್ಲಿವರೆಗೆ ಪ್ರತಿವರ್ಷ 10 ರಿಂದ 13 ಪ್ರತಿಶತ ಹೆಚ್ಚುತ್ತಲೇ ಇದೆ. ಎನ್ನುವುದು ಇನ್ನೊಂದು ಗಮನಿಸಬೇಕಾದ ಅಂಶ.
ಹೀಗೆ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಇಡಿ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯ ಅಭಾದಿತವಾಗಿ ಸ್ಥಾಪಿಸಿ ವರ್ಷದಿಂದ ವರ್ಷಕ್ಕೆ ಹೆಚ್ಚು ಲಾಭ ಗಳಿಸುತ್ತಲೇ ಇದ್ದವು. ಗಳಿಸುತ್ತಿವೆ ಕೂಡ. ಆದರೆ ಭಾರತದಲ್ಲಿ ಇವುಗಳ ನಾಗಾಲೋಟಕ್ಕೆ ಕಡಿವಾಣ ಹಾಕಿರುವುದು ರುಪೈ ಎನ್ನುವ ಸ್ವದೇಶೀ ಕಾರ್ಡ್.
ಏನಿದು ರುಪೈ (rupay )?
ವೀಸಾ ಅಥವಾ ಮಾಸ್ಟರ್ ಕಾರ್ಡ್ ನಂತೆ ಇದು ಒಂದು ಹಣ ಪಾವತಿ ಮಾಡಲು ಉಪಯೋಗಿಸ ಬಹುದಾದ ಒಂದು ಕಾರ್ಡ್ ಅಥವಾ ವ್ಯವಸ್ಥೆ. ರು ಪೈ ಜನಕ UPA ಸರಕಾರ. ಆದರೆ ಅದರ ಪೋಷಕ, ನಿರ್ವಾಹಕ ಮಾತ್ರ ಮೋದಿ ಸರಕಾರ. ಜನ ಧನ ಎನ್ನುವ ಯೋಜನೆ ಅಡಿಯಲ್ಲಿ ಎಲ್ಲಾ ಖಾತೆದಾರರಿರಿಗೆ ಈ ಕಾರ್ಡ್ ಗಳನ್ನು ವಿತರಿಸಲಾಗಿದೆ. ಭಾರತದಲ್ಲಿ ಒಟ್ಟು 60 ಕೋಟಿ ಡೆಬಿಟ್ ಕಾರ್ಡ್ ಇವೆ. ಅದರಲ್ಲಿ 22 ಕೋಟಿ ರುಪೈ ಕಾರ್ಡ್! ಅಂದರೆ ಮಾರುಕಟ್ಟೆಯ 36 ಪ್ರತಿಶತ ಕಾರ್ಡ್ ರುಪೈ! ಇದು ಕಡಿಮೆ ಸಾಧನೆಯಲ್ಲ. ಏಕೆಂದರೆ 22 ಕೋಟಿ ರುಪೈ ಕಾರ್ಡ್ ನಲ್ಲಿ 40 ಭಾಗ ಅದನ್ನು ಉಪಯೋಗಿಸುವುದಿಲ್ಲ. ಹೆಸರಿಗೆ ಮಾತ್ರ ಅವು ವಿತರಣೆ ಆಗಿವೆ ಆದರೆ ಗ್ರಾಹಕ ಅವನ್ನು ಬಳಸುತ್ತಿಲ್ಲ. ವಹಿವಾಟಿ ನಲ್ಲಿ ರುಪೈ ಕಾರ್ಡ್ ನ ಪಾಲು ಎಷ್ಟು ಎನ್ನುವ ನಿಖರ ಉತ್ತರಕ್ಕಾಗಿ ನಾವು ವಹಿವಾಟನ್ನು ಗಮನಿಸಬೇಕಾಗುತ್ತದೆ. ಕಾರ್ಡ್ ಗಳ ಬಳಸಿ 100 ರುಪಾಯಿ ವಹಿವಾಟು ಆದರೆ, 20 ರುಪಾಯಿ ರುಪೈ ಕಾರ್ಡ್ ನ ಪಾಲು. ಗಮನಿಸಿ, ಜಗತ್ತಿನಾದ್ಯಂತ ದಶಕಗಳಿಂದ ಏಕಸ್ವಾಮ್ಯ ಗಳಿಸಿದ್ದ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಹೆಡೆಮುರಿ ಕಟ್ಟಿ ರುಪೈ ವಹಿವಾಟಿನ 20 ಭಾಗ ಅವರಿಂದ ಕಸಿದಿದೆ ಅದೂ ಕೇವಲ ಎರಡು ವರ್ಷಗಳಲ್ಲಿ!
ರುಪೈ ಭಾರತದಲ್ಲಿ ಮಾತ್ರ ಸ್ವೀಕರಿಸಲ್ಪಡುವ ಕಾರ್ಡ್. ವೀಸಾ, ಮಾಸ್ಟರ್ ಕಾರ್ಡ್ ನಂತೆ ಇದಕ್ಕೆ ವಿಶ್ವದಾದ್ಯಂತ ಮಾನ್ಯತೆ ಸಿಕ್ಕಿಲ್ಲ. ಅದಕ್ಕೆ ವಿಶ್ವಮಾನ್ಯತೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಈ ರೀತಿಯ ಕೆಲಸಗಳು ಹಾಗೂ ರುಪೈ ದೇಶಿಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವುದು ಕಂಡು ಮಾಸ್ಟರ್ ಕಾರ್ಡ್ ಮುಖ್ಯ ಕಾರ್ಯ ನಿರ್ವಾಹಕ ಅಜಯ್ ಬಂಗಾ ‘ಮೋದಿ ಸರಕಾರ ರುಪೈ ಕಾರ್ಡ್ ಗೆ ಹೆಚ್ಚುವರಿ ಸಹಾಯ ಮಾಡುವದನ್ನು ನಿಲ್ಲಿಸಬೇಕು, ಇಲ್ಲಿ ನೇರ ವ್ಯಾಪಾರ ಹಣಾಹಣಿ ಇಲ್ಲವೇ ಇಲ್ಲ..ಜನಧನ್ ಯೋಜನೆಗೆ ರುಪೈ ಜೋಡಿಸಿ ಮುಕ್ತ ಹೋರಾಟ ಕಸಿದಿದ್ದಾರೆ’ ಎಂದು ದೂರಿದ್ದಾರೆ . ಮುಂದುವರಿದು ‘ಆಲ್ ಐ ವಾಂಟ್ ಇಸ್ ಅ ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ‘ರುಪೈ ಗಿಂತ ಹೆಚ್ಚಿನ ಸವಲತ್ತು, ಸೇವೆ… ಎಲ್ಲಕ್ಕಿಂತ ಮುಖ್ಯ ಭದ್ರತೆ ನಾವು ಒದಗಿಸುತ್ತೇವೆ ನಮಗೆ ಅವಕಾಶ ಕೊಡಿ’ ಎನ್ನುವ ಮಟ್ಟಕ್ಕೆ ಮಾಸ್ಟರ್ ಕಾರ್ಡ್ ಭಾರತದಲ್ಲಿಚೌಕಾಶಿಗೆ ಇಳಿದಿದೆ. ಅದರ ಪೂರ್ಣ ಶ್ರೇಯ ರುಪೈ ಕಾರ್ಡ್ ನ ಹಿಂದಿನ ಶ್ರಮಿಕರಿಗೆ ತಲುಪುತ್ತದೆ. ರುಪೈ ಗೆ ಒಂದು ಸರಿಯಾದ ದಿಕ್ಕು ತೋರಿದ ಶ್ರೇಯ ಮೋದಿ ಸರಕಾರಕ್ಕೆ ತಲುಪುತ್ತದೆ.
ಅಂತೂ ಇಂತೂ ಎಗ್ಗಿಲ್ಲದೆ ನುಗ್ಗುತಿದ್ದ ಅಶ್ವಮೇಧ ಕುದುರೆಯ ಕಟ್ಟುವ ಕೆಲಸ ಭಾರತದಲ್ಲಿ ಆಗಿದೆ. ಮುಂದಿನದು ಯುದ್ಧ.. ಅದರಲ್ಲಿ ನಾವು ಗೆಲ್ಲಬೇಕಷ್ಟೆ. ಆ ನಿಟ್ಟಿನಲ್ಲಿ ತಯಾರಿ ಸರಿಯಾಗಿದೆ, ಫಲಿತಾಂಶಕ್ಕೆ ಕಾಯಬೇಕಿದೆ.
(ಲೆಕ್ಕ ಪರಿಶೋಧಕರಾಗಿ ಹಲವು ದೇಶಗಳನ್ನು ಸುತ್ತಿರುವ, ಹಣಕಾಸು ಜಗತ್ತನ್ನು ಹತ್ತಿರದಿಂದ ನೋಡಿರುವ ಅನುಭವ ಲೇಖಕರದ್ದು. 15 ವರ್ಷಗಳ ಕಾಲ ಸ್ಪೇನ್ ನಿವಾಸಿಯಾಗಿದ್ದವರು ಈಗ ಬೆಂಗಳೂರಿನಲ್ಲಿ ಪೆಟ್ರಾಬೈಟ್ಸ್ ಎಂಬ ತೈಲಕ್ಕೆ ಸಂಬಂಧಿಸಿದ ಡಾಟಾ ಅನಾಲಿಸಿಸ್ ನವೋದ್ದಿಮೆಯ, ವಹಿವಾಟು ವೃದ್ಧಿಯ (ಬಿಸಿನೆಸ್ ಡಿವಲಪ್ಮೆಂಟ್) ಹೊಣೆ ನಿರ್ವಹಿಸುತ್ತಿದ್ದಾರೆ.)
well written, easy to understand… Superbbbb