ಸುದ್ದಿಸಂತೆ: ಸ್ಟ್ಯಾಂಡ್ ಅಪ್ ಇಂಡಿಯಾ, ಬಿಸಿಸಿಐಗೆ ಸುಪ್ರೀಂ ಛೀಮಾರಿ, ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ, ಗುಜರಾತ್ ಮಾದರಿಯಲ್ಲಿ ಬಿಹಾರವೂ ಡ್ರೈ ಸ್ಟೇಟ್

ಬ್ರಾಂಡ್ ಬಿಲ್ಡಿಂಗ್ ಬಹಳ ಮುಖ್ಯ.. ಸ್ಟ್ಯಾಂಡ್ ಅಪ್ ಇಂಡಿಯಾದ ಬ್ರಾಂಡ್ ಅಷ್ಟೇ ಅಲ್ಲ, ಚಾಯ್ವಾಲಾ ಬ್ರಾಂಡ್ ಸಹ!

ಪ್ರತಿ ಭಾರತೀಯನಿಗೂ ಅಧಿಕಾರ ನೀಡುವುದೇ ಸ್ಟ್ಯಾಂಡ್ ಪ್ ಇಂಡಿಯಾದ ಧ್ಯೇಯ

ಉದ್ಯೋಗ ಹುಡುಕುತ್ತಿದ್ದವರು ಇನ್ನು ಮುಂದೆ ಉದ್ಯೋಗ ಸೃಷ್ಟಿಸುತ್ತಾರೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇವರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಟ್ಯಾಂಡ್ ಅಪ್ ಇಂಡಿಯಾದ ಅಡಿಯಲ್ಲಿ ನೋಯ್ಡಾ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇ ರಿಕ್ಷಾಗಳಿಗೆ ಚಾಲನೆ ನೀಡಿ  ಮಾತನಾಡಿದ ಇವರು, ದಲಿತರ ಮತ್ತು ಆದಿವಾಸಿಗಳ ಜೀವನ ಇನ್ನೂ ಮುಂದೆ ಬದಲಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಬಾಬು ಜಗಜೀವನ್ ರಾಮ್ ಅವರ ದೇಶ ಸೇವೆಯನ್ನು ನೆನೆದು ಗೌರವ ಸಮರ್ಪಿಸಿದರು.

ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದ ಎಲ್ಲಾ ಬ್ಯಾಂಕುಗಳು ಅಗ್ಗದ ಸಾಲ ನೀಡಲಿವೆ. ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಉದ್ಯಮ ಕ್ಷೇತ್ರದಲ್ಲಿ ಬೆಳೆಯಬೇಕು. ಆದ ಕಾರಣ ಸಾಧ್ಯವಾದಷ್ಟು ಈ ಯೋಜನೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಿ. ಸ್ಟ್ಯಾಂಡ್ ಅಪ್ ಇಂಡಿಯಾದ ಮುಖ್ಯ ಉದ್ದೇಶವೇ ಪ್ರತಿ ಭಾರತೀಯನಿಗೂ ಅಧಿಕಾರ ಕೊಟ್ಟು ತನ್ನ ಜೀವನವನ್ನು ತಾನೇ ರೂಡಿಸಿಕೊಳ್ಳುವಂತೆ ಮಾಡುವುದು. ಇದರಿಂದ ಅವರ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದರು.

ಬಿಸಿಸಿಐಗೆ ಸುಪ್ರೀಂ ಛೀಮಾರಿ

ಬಿಸಿಸಿಐ ಸುಧಾರಣೆ ನಿಟ್ಟಿನಲ್ಲಿ ನಿವೃತ್ತ ನ್ಯಾ.ಆರ್ .ಎಂ ಲೋಧಾ ನೇತೃತ್ವದ ಸಮಿತಿ ಶಿಫಾರಸ್ಸಿನ ಕುರಿತು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಛಿಮಾರಿ ಹಾಕಿದೆ. ಕಳೆದ ವಿಚಾರಣೆ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ರಾಜ್ಯ ಸಂಸ್ಥೆಗಳಿಗೆ ನೀಡಿದ್ದ ಆರ್ಥಿಕ ನೆರವಿನ ವಿವರ ಕೇಳಿತ್ತು. ಬಿಸಿಸಿಐ ನೀಡಿದ ವಿವರ ಪರಿಶೀಲಿಸಿದ ಸುಪ್ರೀಂ ಕೋರ್ಟ್ ‘ನೀವು ವರ್ಷಕ್ಕೆ ₹480 ಕೋಟಿಯಂತೆ ಕಳೆದ ಐದು ವರ್ಷಗಳಲ್ಲಿ ವಿವಿಧ ರಾಜ್ಯ ಸಂಸ್ಥೆಗಳ ಅಭಿವೃದ್ಧಿಗೆ ₹2000 ಕೋಟಿ ನೀಡಿದ್ದೀರಿ. ಆದರೆ, ಈ ಹಣ ಯಾವ ಅಭಿವೃದ್ಧಿ ಕಾರ್ಯಕ್ಕೆ ವೆಚ್ಚವಾಗಿದೆ ಎಂದು ಎಲ್ಲೂ ತಿಳಿಸಿಲ್ಲ. ಈ ಹಣ ಸರಿಯಾಗಿ ಉತ್ತಮ ಕಾರ್ಯಕ್ಕೆ ಬಳಸಿಕೊಂಡಿರುವುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. 29 ರಾಜ್ಯ ಸಂಸ್ಥೆಗಳ ಪೈಕಿ 11 ಸಂಸ್ಥೆಗಳಿಗೆ ಒಂದು ಬಿಡಿಗಾಸು ಕೊಟ್ಟಿಲ್ಲ. ಏಕೆ ಈ ರೀತಿ ತಾರತಮ್ಯ? ನೀವು ಕ್ರಿಕೆಟ್ ಗಾಗಿ ಏನು ಮಾಡಿದ್ದೀರಿ? ಆ ರಾಜ್ಯ ಸಂಸ್ಥೆಗಳು ಬಿಕ್ಷೆ ಬೇಡುವಂತಹ ಪರಿಸ್ಥಿತಿಗೆ ಬಂದಿವೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ತರಾಟೆ ತೆಗೆದುಕೊಂಡರು.

ಇದೇ ವೇಳೆ ಒಂದು ರಾಜ್ಯಕ್ಕೆ ಒಂದು ಮತ ಶಿಫಾರಸ್ಸು ವಿರೋಧಿಸಿದಕ್ಕೂ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಈ ಎಲ್ಲ ಅಂಶಗಳ ಕುರಿತು ಬಿಸಿಸಿಐನ ವಾದವನ್ನು ಆಲಿಸಿ, ನಂತರ ಆ ಅಂಶಗಳ ಬಗ್ಗೆ ಲೋಧಾ ಸಮಿತಿಯಿಂದ ಪ್ರತಿಕ್ರಿಯೆ ಪಡೆಯುವುದಾಗಿ ನ್ಯಾಯಾಲಯ ತಿಳಿಸಿದೆ.

ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ

ತಾವು ಸಾಗರದಾಚೆ ಹೊಂದಿರುವುದಾಗಿ ಹೆಸರಿಸಿರುವ ಹಲವು ಕಂಪನಿಗಳ ಜತೆ ತಮಗೇನೂ ಸಂಬಂಧವಿಲ್ಲ ಎಂದು ನಟ ಅಮಿತಾಭ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಸರಿನ ದುರುಪಯೋಗ ಆಗಿದ್ದಿರಬಹುದು. ಸಾಗರದಾಚೆ ತಾವು ಮಾಡಿರುವ ಎಲ್ಲ ಹೂಡಿಕೆಗಳು ಕಾನೂನುಬದ್ಧವೇ ಆಗಿದ್ದು,  ತೆರಿಗೆ ವಂಚನೆ ಮಾಡಿಲ್ಲ ಎಂದಿರುವ ಅಮಿತಾಭ್, ಇಂಡಿಯನ್ ಎಕ್ಸ್ ಪ್ರೆಸ್ ತನಿಖಾ ವರದಿಯಲ್ಲಿ ಸಹ ತಮ್ಮ ಹೂಡಿಕೆ ಅಕ್ರಮ ಎಂದು ಎಲ್ಲಿಯೂ ವ್ಯಾಖ್ಯಾನಿಸಿಲ್ಲ ಎಂದು ಹೇಳಿದ್ದಾರೆ.

ಮದ್ಯ ಮುಕ್ತ ರಾಜ್ಯವಾಯ್ತು ಬಿಹಾರ

ಬಿಹಾರದಲ್ಲಿ ಮದ್ಯಮಾರಾಟಕ್ಕೆ ಬಿತ್ತು ಬ್ರೇಕ್! ಇನ್ನೂ ಮುಂದೆ ಮಾರುವ ಹಾಗೂ ಇಲ್ಲ, ಕುಡಿಯುವ ಹಾಗೂ ಇಲ್ಲ! ಸರ್ಕಾರದ ನಿರ್ಧಾರವನ್ನು ಯಾರಾದರು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಪಡಿಸುವ ಎಚ್ಚರಿಕೆಯನ್ನು ನೀಡಿದ್ದಾರೆ  ಮುಖ್ಯಮಂತ್ರಿ ನಿತೀಶ್ ಕುಮಾರ್.

ಚುನಾವಣಾ ಪೂರ್ವದಲ್ಲಿ ಮದ್ಯಮುಕ್ತ ರಾಜ್ಯವನ್ನಾಗಿ ಘೋಷಿಸುವ ಭರವಸೆ ನೀಡಿದ್ದ ನಿತೀಶ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಇಲ್ಲಿನ ಮಕ್ಕಳು ಮತ್ತು ಮಹಿಳೆಯರಿಂದ ಭೇಷ್ ಎಂದು ಕರೆಸಿಕೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗದ ಯಾವುದೇ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳೂ ಸೇರಿದಂತೆ ರಾಜ್ಯಾದ್ಯಂತ ಮಂಗಳವಾರದಿಂದ ಅಧಿಕೃತವಾಗಿ ಮದ್ಯ ಮಾರಾಟ ಮತ್ತು ಕುಡಿತಕ್ಕೆ ನಿಷೇಧ ಹೇರಿದ್ದಾರೆ.

Leave a Reply