ಎನ್ ಐಟಿ ಕ್ಯಾಂಪಸ್ ಘರ್ಷಣೆಯೊಂದಿಗಿನ ರಾಷ್ಟ್ರವಾದ, ಹೊಡೆತ ತಿಂದ ಪಾಪದ ವಿದ್ಯಾರ್ಥಿಗಳು ತಿರಂಗ ಹಾರಿಸದೇ ಬಿಡಲಿಲ್ಲ!

ಡಿಜಿಟಲ್ ಕನ್ನಡ ಟೀಮ್

ಕಳೆದವಾರ ಟೀಂ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿನ ಸೋಲನ್ನು ಶ್ರೀನಗರದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ ಕಾಶ್ಮೀರ ವಿದ್ಯಾರ್ಥಿಗಳು ಸಂಭ್ರಮಿಸಿದಾಗ ಉದ್ಭವಿಸಿದ ಘರ್ಷಣೆ ಬುಧವಾರವೂ ಮುಂದುವರಿದಿದೆ. ಇಲ್ಲಿ ಮೂಲ ಕಾಶ್ಮೀರ ವಿದ್ಯಾರ್ಥಿಗಳು ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳ ನಡುವಣ ಸಂಘರ್ಷ ಈ ಬಾರಿ ತೀವ್ರವಾಗಿದ್ದು, ಈ ಪ್ರಕರಣವೂ ರಾಷ್ಟ್ರವಾದದ ತಿರುವು ಪಡೆಯುತ್ತಿದೆ.

ಮಾ.31ರಂದು ನಡೆದ ಅಹಿತಕರ ಘಟನೆ ನಂತರ ಪರಿಸ್ಥಿತಿ ತಣ್ಣಗಾಗಿಸಲು ಈ ಕ್ಯಾಂಪಸ್ ಅನ್ನು ಮುಚ್ಚಲಾಗಿತ್ತು. ನಂತರ ಮಂಗಳವಾರ ಮತ್ತೆ ತರಗತಿ ಆರಂಭಿಸಲಾಯಿತು. ಈ ವೇಳೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ದೇಶ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರಾಷ್ಟ್ರಧ್ವಜವನ್ನು ಮುಖ್ಯ ದ್ವಾರದಲ್ಲಿ ಹಾರಿಸಬೇಕು ಎಂಬುದೂ ಸೇರಿದಂತೆ ತಮ್ಮ ಐದು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಆರಂಭಿಸಿತು. ಆ ವೇಳೆ ಪೋಲೀಸರು ಲಾಠಿ ಚಾರ್ಜ್ ಮಾಡಿರೋದು ಆಘಾತ ಮೂಡಿಸಿದೆ. ಕೊನೆಗೂ ಸಿಆರ್ ಪಿಎಫ್ ಮುಂದೆ ನಿಂತು ವಿಶ್ವವಿದ್ಯಾಲಯ ಆವರಣದಲ್ಲೇ ರಾಷ್ಟ್ರಧ್ವಜ ಹಾರಿಸುವುದರೊಂದಿಗೆ ವಿದ್ಯಮಾನ ಒಂದು ಹಂತಕ್ಕೆ ಬಂದು ನಿಂತಿದೆ.

nit2

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಂಗಳವಾರ ರಾತ್ರಿ ಸಿಆರ್ ಪಿಎಫ್ ಪಡೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಮತ್ತೆ ನಿಯಂತ್ರಣಕ್ಕೆ ಬಂದಿದೆ. ಇದೇ ವೇಳೆ ಅಭದ್ರತೆಯ ಭೀತಿ ವ್ಯಕ್ತಪಡಿಸಿದ್ದ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ, ಸಂಪೂರ್ಣ ಭದ್ರತೆ ನೀಡಲಾಗುವುದಾಗಿ ಸರ್ಕಾರ ಭರವಸೆ ನೀಡಿದೆ.

ಈ ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಪರವಾಗಿ ತಂಡವೊಂದು ಎನ್ ಐಟಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಸಂಪೂರ್ಣ ಭದ್ರತೆಗೆ ಭರವಸೆ ನೀಡಿದ್ದಾರೆ. ಈ ಎಲ್ಲಬೆಳವಣಿಗೆಯ ನಡುವೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಒಮರ್ ಅಬ್ದುಲ್ಲಾ ಕೇಂದ್ರ ಸರ್ಕಾರವನ್ನು ಗರಿಯಾಗಿಸಿ ಟೀಕೆ ಮಾಡಿ, ತಮ್ಮ ರಾಜಕೀಯ ಬೆಳೆ ತೆಗೆಯುವ ಪ್ರಯತ್ನವನ್ನು ಮುಂದುವರಿಸಿದ್ದಾರೆ.

‘ಬಿಜೆಪಿ ಕಾಶ್ಮೀರದಲ್ಲಿ ‘ಭಾರತ ಮಾತಾಕಿ ಜೈ’ ಎಂದವರಿಗೆ ಹೊಡೆಯುತ್ತಿದೆ. ಇನ್ನು ದೇಶದ ಇತರೆ ಭಾಗಗಳಲ್ಲಿ ಈ ಘೋಷಣೆ ಕೂಗದವರಿಗೂ ಹೊಡೆಯುತ್ತಿದೆ’ ಎಂದು ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಜತೆ ಸರ್ಕಾರದಲ್ಲೂ ಭಾಗಿಯಾಗಿರುವ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರಾರಂಭದಲ್ಲಿ ಪರಿಸ್ಥಿತಿ ನಿಭಾಯಿಸುವುದಕ್ಕೆ ಸ್ವಲ್ಪ ಎಡವಿದ್ದೇನೋ ನಿಜ. ಆದರೆ ಈ ವಿಷಯದಲ್ಲಿ ಕೇಜ್ರಿವಾಲ್ ಅಂಥವರು ಟ್ವೀಟ್ ಹಂತದಲ್ಲಿ ಮಾತ್ರ ನಿಲ್ಲಬೇಕಷ್ಟೆ. ಏಕೆಂದರೆ ಜಮ್ಮು-ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳು ಎದ್ದುನಿಂತಿರುವುದು ತಿರಂಗ ಹಾರಿಸುವುದಕ್ಕೆ. ಕಮ್ಯುನಿಸ್ಟ್ ಬಾವುಟದ ಪರವಾಗಿ ಅಲ್ಲ. ಹೀಗಾಗಿ ಈ ವಿಷಯದಲ್ಲಿ ಬಿಜೆಪಿ ಹಣಿಯುವುದಕ್ಕೆ ಹೊರಡುವ ನಡೆಗಳೆಲ್ಲ ಪರೋಕ್ಷವಾಗಿ ರಾಷ್ಟ್ರವಾದಕ್ಕೆ ಬೆಂಬಲವೇ ಆಗುತ್ತದೆ. ಹೀಗಾಗಿ ರಾಹುಲ್ ಗಾಂಧಿಯಾಗಲೀ, ಅರವಿಂದ ಕೇಜ್ರಿವಾಲರಾಗಲೀ ಹೈದರಾಬಾದ್ ವಿವಿ ವಿಷಯದಲ್ಲಾದಂತೆ ಅಲ್ಲಿ ಧರಣಿ ಕೂರರು.

nit1

ಈಗೇನಾಗಿದೆ ಎಂದರೆ, ಪ್ರಾರಂಭದಲ್ಲಿ ಪರಿಸ್ಥಿತಿ ಹೇಗಾದರೂ ನಿಯಂತ್ರಿಸುವುದಕ್ಕೆ ಪೋಲೀಸರು ಲಾಠಿಚಾರ್ಜ್ ಮಾಡಿದರೂ ಈಗ ಸಿಆರ್ ಪಿಎಫ್ ಸಹಕಾರದಿಂದ ಗೇಟಿನ ಬಳಿ ರಾಷ್ಟ್ರಧ್ವಜ ಹಾರಾಡುವಂತಾಗಿದೆ. ವಾಸ್ತವದಲ್ಲಿ ವೆಸ್ಟ್ ಇಂಡೀಸ್ ವಿಜಯಕ್ಕೆ ಸಂಭ್ರಮಿಸಿದವರದ್ದು ವಿಂಡೀಸ್ ಆಟದ ಕುರಿತ ಪ್ರಶಂಸೆ ಅಥವಾ ಆ ದೇಶದ ಮೇಲಿನ ಪ್ರೇಮವೇನಲ್ಲ. ಭಾರತವನ್ನು ಹಂಗಿಸುವುದಕ್ಕೆ ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ಕ್ರಿಕೆಟ್ ಪಂದ್ಯ ಬಳಸಿಕೊಳ್ಳಲು ಹೋದರು. ಪಾಪ, ಅವರಿಗೆ ಗೊತ್ತಿಲ್ಲ ಭಾರತ ಬದಲಾಗುತ್ತಿದೆ ಎಂದು. ಈ ಕೃತ್ಯದ ಮೂಲಕ ಅವರೇ ಸಿಆರ್ ಪಿಎಫ್ ಆಗಮನಕ್ಕೆ ಕಾರಣವಾಗಿ ಕೊನೆಯಲ್ಲಿ ತ್ರಿವರ್ಣ ಹಾರುವುದಕ್ಕೆ ಕಾರಣವಾಗಿದ್ದಾರೆ.

Leave a Reply