ಜನರ ದಾಹ ಮುಖ್ಯವೋ, ಐಪಿಎಲ್ ಪಿಚ್ ಗಾಗಿ ನೀರು ವ್ಯಯಿಸೋದೋ ಅಂತ ದಬಾಯಿಸ್ತು ಹೈಕೋರ್ಟ್!

ಡಿಜಿಟಲ್ ಕನ್ನಡ ಟೀಮ್

ಬರದಿಂದ ಬಳಲಿರೋ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ‘ಈ ಸಂದರ್ಭದಲ್ಲಿ ಪಿಚ್ ಗಾಗಿ ನೀರು ವ್ಯಯಿಸುವುದು ಒಂದು ಅಪರಾಧ’ ಎಂದು ಅಭಿಪ್ರಾಯಪಟ್ಟಿದೆ.

ಏ.9ರಿಂದ ಮೇ 29ರವರೆಗೆ ನಡೆಯಲಿರೊ ಈ ಟೂರ್ನಿಯಲ್ಲಿ ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ಒಟ್ಟು 20 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಪಂದ್ಯಕ್ಕಾಗಿ ಪಿಚ್ ಸಿದ್ಧಪಡಿಸಲು ಕೋಟ್ಯಂತರ ಲೀಟರ್ ನೀರನ್ನು ವ್ಯಯಿಸುವ ಅಗತ್ಯ ಬೀಳುತ್ತದೆ. ಹಾಗಾಗಿ ಇದರ ವಿರುದ್ಧ ಪತ್ರಕರ್ತರೊಬ್ಬರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಅರ್ಜಿಯಲ್ಲಿ ಟೂರ್ನಿ ಆಯೋಜಕರು ದಂಡವಾಗಿ ಮಹಾರಾಷ್ಟ್ರದಲ್ಲಿ ಬರಕ್ಕೆ ತತ್ತರಿಸಿರುವ ಸ್ಥಳಗಳಿಗೆ ಕುಡಿಯುವ ನೀರು ಪೂರೈಸಲು ತಗಲುವ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರಣೆ ನಡೆಸಿದ ನ್ಯಾಯಾಲಯ, ‘ಜನರಿಗಿಂತ ಕ್ರಿಕೆಟ್ ಪಂದ್ಯಗಳು ಹೆಚ್ಚಿನ ಮಹತ್ವದ್ದೇ? ನೀರು ಕೊರತೆಯನ್ನು ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಪಿಚ್ ಗಾಗಿ ನೀರು ವ್ಯಯಿಸುವುದು ಅಪರಾಧ’ ಎಂದು ಅಭಿಪ್ರಾಯಪಟ್ಟಿದೆ.

ಈ ಬಾರಿ ಮಹಾರಾಷ್ಟ್ರದಲ್ಲಿನ ನೀರಿನ ಅಭಾವ ಹಾಗೂ ಐಪಿಎಲ್ ಪಂದ್ಯಗಳಿಗೆ ಎಷ್ಟು ಪ್ರಮಾಣದ ನೀರಿನ ಅಗತ್ಯವಿದೆ ಎಂಬುದರ ಬಗ್ಗೆ ಇತ್ತೀಚೆಗೆ ಡಿಜಿಟಲ್ ಕನ್ನಡ ಲೇಖನವನ್ನು ಪ್ರಕಟಿಸಿತ್ತು.

Leave a Reply