ಪನಮಾ ದಾಖಲೆ ಸೋರಿಕೆ: ಯಾರೀ ಅನುರಾಗ್ ಕೇಜ್ರಿವಾಲ್? ನಾವು ಪರಮ ಭ್ರಷ್ಟರೆಂದುಕೊಂಡಿರುವ ಮುಖ್ಯವಾಹಿನಿ ರಾಜಕಾರಣಿಗಳ ಹೆಸರುಗಳೇಕಿಲ್ಲ?

ಪ್ರವೀಣ್ ಕುಮಾರ್

ಪನಾಮಾ ಪೇಪರ್ಸ್ ಸೋರಿಕೆಯಲ್ಲಿ ಪ್ರಸ್ತಾವವಾಗಿರುವ ಭಾರತೀಯ ಹೆಸರುಗಳೆಲ್ಲ ನಿಜಕ್ಕೂ ತಪ್ಪು ಮಾಡಿರುವವರಾ, ದಾಖಲೆಗಳ ಸಾಚಾತನ ಎಷ್ಟು, ತೆರಿಗೆ ವಂಚನೆ ನಿಜಕ್ಕೂ ಆಗಿದೆಯೇ ಎಂಬೆಲ್ಲ ಆಯಾಮಗಳು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈಗ ಹೆಸರು ಕೇಳಿಬಂದಿರುವವರೆಲ್ಲ ವಿದೇಶಗಳಲ್ಲಿ ಹಣ ಹೂಡುವಷ್ಟು ಧನಿಕರಾಗಿದ್ದರು ಎಂಬುದು ಗಮನಿಸಬೇಕಾದ ಅಂಶ. ಸೆಲಿಬ್ರಿಟಿಗಳಿಗೆ, ಉದ್ಯಮಿಗಳಿಗೆ ಆ ಮಟ್ಟದ ಹಣದ ಹರಿವು ತುಸು ಅರ್ಥ ಮಾಡಿಕೊಳ್ಳಬಹುದು.

ಈ ನಿಟ್ಟಿನಲ್ಲಿ ಪನಾಮಾ ಪೇಪರ್ ಸೋರಿಕೆಯಲ್ಲಿ ಗಮನಿಸಬೇಕಾದ ಹೆಸರು ಅನುರಾಗ್ ಕೇಜ್ರಿವಾಲ್.

ಅನುರಾಗ್ ಕೇಜ್ರಿವಾಲ್ ದೆಹಲಿಯ ಲೋಕಸತ್ತಾ ಪಕ್ಷದ ಮಾಜಿ ನಾಯಕ. 2014ರಲ್ಲಿ ನಡೆದ ಸ್ಟಿಂಗ್ ಆಪರೇಷನ್ ನಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ದಾಖಲೆಗಳನ್ನು ಬಳಸಿಕೊಂಡಿದ್ದು ಹಾಗೂ, ಚುನಾವಣೆ ಸಂದರ್ಭದಲ್ಲಿ ಬೇರೆ ರಾಜಕೀಯ ಪಕ್ಷಗಳಿಂದ ಹಣ ಪಡೆದು ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕೆ ಅನುರಾಗ್ ರನ್ನು ಪಕ್ಷದಿಂದ ಹೊರದಬ್ಬಲಾಯಿತು.

ಇವಿಷ್ಟು ಅನುರಾಗ್ ಕೇಜ್ರಿವಾಲ್ ರ ರಾಜಕೀಯ ವಿವಾದವಾಯ್ತು. ಪನಮಾ ಪೇಪರ್ಸ್ ನಲ್ಲಿ ಈತನ ಕುರಿತ ಮಾಹಿತಿಗಳು ಹೀಗಿವೆ ನೋಡಿ:

  • 2007ರಲ್ಲಿ ಅನುರಾಗ್ ಮತ್ತು ಅವರ ಪತ್ನಿ ಉತ್ತರ ಕೇಜ್ರಿವಾಲ್ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಲ್ಲಿ ಮೊದಲ ಕಂಪನಿ ಸ್ಥಾಪನೆ.
  • 2008 ಮತ್ತು 2010ರಲ್ಲಿ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಪನಮಾದಲ್ಲಿ ನೆಡ್ ಸ್ಟರ್ ಮತ್ತು ಪ್ರುರಕ್ ಎಂಬ ಎರಡು ಫೌಂಡೇಷನ್ ಸ್ಥಾಪನೆ.
  • ನೆಡ್ ಸ್ಟರ್ ಫೌಂಡೇಷನ್ ನಿಂದ ನೆಡ್ ಸ್ಟರ್ ಕಮರ್ಷಿಯಲ್ ಲಿಮಿಟೆಡ್ ಕಂಪನಿ ಆರಂಭಿಸಲಾಗಿತ್ತು. ಇನ್ನು ಪ್ರುರಕ್ ಫೌಂಡೇಷನ್ ಮೂಲಕ ಬಿಸಿಕೆ ಓವರ್ ಸೀಸ್ ಲಿಮಿಟೆಡ್ ಕಂಪನಿ ಆರಂಭಿಸಲಾಯಿತು. ಇಲ್ಲಿ ಕಬ್ಬಿಣದ ಅದಿರು ವ್ಯಾಪಾರಕ್ಕಾಗಿ ನಿರ್ಮಿಸಲಾಗಿತ್ತು. ನಂತರ ಇದನ್ನು ಬಿಸ್ಕಿ ಎಕ್ಸ್ಪೋರ್ಟ್ಸ್ ಮತ್ತು ಕ್ರಿಮ್ಸ್ ಇನ್ವೆಸ್ಟ್ ಮೆಂಟ್ಸ್ ಎಂದು ಮರುನಾಮಕರಣ ಮಾಡಲಾಯಿತು.
  • ಮೊಸಾಕ್ ಪೊನ್ಸಿಕಾ ದಾಖಲೆಯ ಪ್ರಕಾರ ಅನುರಾಗ್ ಅವರ ಕಂಪನಿ ಕಾನೂನು ವಿಚಾರಣೆಗೆ ಒಳಪಟ್ಟಿದೆ. 2011ರಲ್ಲಿ ನೆಡ್ ಸ್ಟರ್ ಫೌಂಡೇಷನ್ ಮತ್ತು ನೆಡ್ ಸ್ಟರ್ ಕಮರ್ಷಿಯಲ್, 2012ರಲ್ಲಿ ಬಿಸ್ಕಿ ಪಂಪನಿ ಮತ್ತು 2013ರಲ್ಲಿ ಕ್ರಿಮ್ಸ್ ಹಾಗೂ ಪ್ರುರಕ್ ತನ್ನ ಕಾರ್ಯ ನಿಲ್ಲಿಸಿತ್ತು.

ಈ ವಿವರಗಳನ್ನುಗಮನಿಸಿದಾಗ ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ- ಕಪ್ಪುಹಣ ಅಥವಾ ಇಂಥ ಇನ್ಯಾವುದೇ ಹೂಡಿಕೆ ವಿಷಯದಲ್ಲಿ ಮುಖ್ಯವಾಹಿನಿ ರಾಜಕಾರಣಿಗಳ ಹೆಸರು ಹೆಚ್ಚಿರಬಹುದು ಎಂಬ ನಿರೀಕ್ಷೆ ನಮ್ಮದಾಗಿರುತ್ತದೆ. ಆದರೆ ಈ ಹಿಂದೆ ಸ್ವಿಸ್ ಬ್ಯಾಂಕ್ ನಿಂದ ಬಹಿರಂಗಗೊಂಡ ಪಟ್ಟಿಯಲ್ಲಾಗಲೀ, ಈಗಿನ ಪನಾಮಾ ಪೇಪರ್ ಲೀಕ್ಸ್ ಗಳಲ್ಲಾಗಲೀ ಧನಾಢ್ಯರ ಪಟ್ಟಿಯಲ್ಲಿ ಚಿರಪರಿಚಿತ ರಾಜಕಾರಣಿಗಳ ಹೆಸರುಗಳೇನೂ ಇಲ್ಲ. ಹಾಗೆ ನೋಡಿದರೆ ಪಾಕಿಸ್ತಾನದಲ್ಲಿ ಫಲಾನುಭವಿ ರಾಜಕಾರಣಿಗಳ ಹೆಸರು ದೊಡ್ಡ ಸಂಖ್ಯೆಯಲ್ಲಿದೆ. ಐಸ್ ಲೆಂಡ್ ದೇಶದ ಪ್ರಧಾನಿಯ ಹೆಂಡತಿ ಹೆಸರೇ ದಾಖಲೆಗಳಲ್ಲಿ ಸಿಕ್ಕಿದ್ದರಿಂದ ಆತ ಮಂಗಳವಾರ ರಾಜೀನಾಮೆಯನ್ನೂ ಕೊಟ್ಟಿದ್ದಾಗಿದೆ. ರಷ್ಯಾ- ಚೀನಾಗಳಲ್ಲಂತೂ ಆಡಳಿತ ಪ್ರಮುಖರ ಅಕ್ಕಪಕ್ಕದಲ್ಲಿರುವವರೇ ತೆರಿಗೆ ಸ್ವರ್ಗಗಳಲ್ಲಿ ಹಣ ಹೂಡಿರೋದರ ಸ್ಪಷ್ಟ ಚಿತ್ರಣ ತೆರೆದುಕೊಂಡಿದೆ.

ಹಾಗಾದರೆ ಭಾರತದಲ್ಲಿ ನಾವು ಪರಮಭ್ರಷ್ಟರೆಂದುಕೊಂಡಿರುವ ಮುಖ್ಯವಾಹಿನಿ ರಾಜಕಾರಣಿಗಳ ಹೆಸರು ಪನಾಮಾ ಪಟ್ಟಿಯಲ್ಲಿ ಇಲ್ಲವೇಕೆ?

ಬಹುಶಃ, ಸಾಮಾನ್ಯ ಯೋಚನೆಗೆ ನಿಲುಕುವಂತೆ ಇಷ್ಟು ಅರ್ಥ ಮಾಡಿಕೊಳ್ಳಬಹುದೇನೋ… ಭಾರತದ ಭ್ರಷ್ಟ ಹಣವನ್ನು ತೀರ ಸಾಗರದಾಚೆ ಬಹುವಾಗಿ ಹುಡುಕುತ್ತ ನಾವು ಪೆದ್ದರಾಗುತ್ತಿದ್ದೀವೇನೋ. ದೇವರನ್ನು ಎಲ್ಲ ಕಡೆ ಹುಡುಕಲು ಹೊರಟವರಿಗೆ ಫಿಲಾಸಫಿಕಲ್ ಉತ್ತರ ಬರುತ್ತದಲ್ಲ.. ಇಲ್ಲೇ ನಿನ್ನಲ್ಲೇ ಇದ್ದಾನೆ ಅಂತ… ಬಹುಶಃ ಭಾರತದ ಕಪ್ಪುಹಣದ ಬಹುದೊಡ್ಡ ಪ್ರಮಾಣ ಇದೇ ನೆಲದಲ್ಲೇ ಬೇರೆ ಬೇರೆ ರೂಪಗಳಲ್ಲಿ ಇರಲಿಕ್ಕೆ ಸಾಕು. ರಿಯಲ್ ಎಸ್ಟೇಟ್ ಗಳಲ್ಲಿ, ದೊಡ್ಡ ಮಾಧ್ಯಮಗಳಲ್ಲಿ, ಯಾರೂ ಪ್ರಶ್ನಿಸಲಾಗದ ಪವಿತ್ರ ಜಾಗಗಳಲ್ಲಿ ಹಾಗೂ ನಾವು ತುಂಬ ಬುದ್ಧಿವಂತರೆಂದುಕೊಂಡಿರುವ ಕೆಲವು ದಡ್ಡ ಉದ್ಯಮಿಗಳಲ್ಲಿ ಇವು ನೆಲೆಯಾಗಿರಲಿಕ್ಕೆ ಸಾಕು.

9 ಸಾವಿರ ಕೋಟಿ ರುಪಾಯಿಗಳ ಸಾಲ ಉಳಿಸಿಕೊಂಡಿರುವ ವಿಜಯ್ ಮಲ್ಯ, ಅಲ್ಲೆಲ್ಲೋ ದ್ವೀಪ ಖರೀದಿಸಿ ಇನ್ನೆಲ್ಲೋ ಲಲನೆಯರೊಂದಿಗೆ ಈಜಾಡಿ ಬಹುಭಾಗ ಕಳೆದಿರಬಹುದು. ಆದರೆ ನಷ್ಟವಾಯಿತೆಂಬ ಸೋಗಿನ ಹಗರಣದ ಅಷ್ಟೂ ಹಣ ಮಲ್ಯ ನುಂಗಿರಲು ಸಾಧ್ಯವಾ? ಯಾರೆಲ್ಲರಿಗೆ ಸಲ್ಲಿಕೆಯಾಗಿರಬಹುದು ಎಂಬ ಕೋನದಲ್ಲೂ ಯೋಚಿಸಬಹುದು.

ಸಹರಾದ ಸುಬ್ರತೋ ರಾಯ್ ವಂಚನೆ ಆರೋಪದಲ್ಲಿ ಎರಡು ವರ್ಷಗಳಿಂದ ಜೈಲಲ್ಲಿರೋದೇನೋ ಸರಿ. 1.8 ಲಕ್ಷ ಕೋಟಿ ರುಪಾಯಿಗಳ ಆಸ್ತಿ ಇದ್ದಾಗಿಯೂ ಆತ ವಂಚಿತರಿಗೆ ಅವರ ನಷ್ಟ ತೂಗಿಸಿ, ಆ ಮೂಲಕ ಜೈಲಿಂದ ಬೇಗ ಬಿಡುಗಡೆ ಪಡೆಯುವ ಬಗ್ಗೆ ಉತ್ಸುಕರಾಗಿಲ್ಲ. ಅರ್ಥಾತ್ ಅಷ್ಟು ಆಸ್ತಿ ಹೆಸರಿಗಷ್ಟೇ ಅವರದ್ದಾಗಿದ್ದು, ನಿಜಕ್ಕೂ ಸಹರಾದ್ದಲ್ಲದಿರಬಹುದೆಂಬ ಅನುಮಾನವೂ ಮೂಡುತ್ತದೆ. ಸುಬ್ರತೋ ಸಂಕಷ್ಟಕ್ಕೆ ಸಿಲುಕುವುದಕ್ಕಿಂತ ಮುಂಚೆ ಅವರ ಸುತ್ತ ಸೆಲಿಬ್ರಿಟಿ- ರಾಜಕಾರಣಿಗಳ ದಂಡೇ ತುಂಬಿತ್ತು. ಇತ್ತೀಚೆಗೆ ಸುಪ್ರೀಂಕೋರ್ಟ್, ಸಹರಾದ ಕೆಲ ಆಸ್ತಿ ಮಾರಿ ಅದನ್ನು ಇವರ ಯೋಜನೆಯಲ್ಲಿ ಮೋಸ ಹೊಂದಿದವರಿಗೆ ವಿತರಿಸಬೇಕೆಂದು ಸೆಬಿ ಸಂಸ್ಥೆಗೆ ಆದೇಶಿಸಿದೆ.

ಹೀಗಾಗಿ ಪನಾಮಾದ ದಾಖಲೆ ಪತ್ರಗಳಲ್ಲಿ ಸಿಗದ ಎಷ್ಟೋ ‘ಸ್ಫೋಟಕ’ಗಳು ಈ ನೆಲದಲ್ಲೇ ಇದ್ದಾವು!

Leave a Reply