ಮಕ್ಕಳನ್ನು ಡಾಕ್ಟ್ರು ಮಾಡಲು 50 ಲಕ್ಷ ಕೊಟ್ಟು ಪಿಯು ಪ್ರಶ್ನೆ ಪತ್ರಿಕೆ ಖರೀದಿ ಮಾಡಿದ್ದರಂತೆ ಮಹಾನುಭಾವರು!

ಡಿಜಿಟಲ್ ಕನ್ನಡ ಟೀಮ್

ಕಂಡವರ ಮಕ್ಕಳು ಹಾಳಾಗಿ ಹೋದರೂ ಪರವಾಗಿಲ್ಲ, ತಮ್ಮ ಮಕ್ಕಳು ಮಾತ್ರ ಓಸಿ ಪರೀಕ್ಷೆ ಬರೆದು ಮೆಡಿಕಲ್ ಮಾಡಿ ಡಾಕ್ಟ್ರಾಗಬೇಕು ಅಂತ ಮಂತ್ರಿ ಶರಣ್ ಪ್ರಕಾಶ್ ಪಾಟೀಲ್ ಆಪ್ತ ಸಹಾಯಕ ಓಬಳರಾಜು ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿರುವ ಅವರ ಷಡ್ಡಕ ರುದ್ರಪ್ಪ ಇಬ್ಬರೂ ಸೇರಿ ಒಟ್ಟು 50 ಲಕ್ಷ ರುಪಾಯಿಗೆ ಪಿಯುಸಿ ಪ್ರಶ್ನೆ ಪತ್ರಿಕೆ ಡೀಲ್ ಮಾಡಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ.

ಇವರು ಸಿಕ್ಕಾಕಿಕೊಂಡಿರೋದು ರಸಾಯನಶಾಸ್ತ್ರ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲೇ ಆದರೂ ಎಲ್ಲ ವಿಷಯಗಳ ಪತ್ರಿಕೆಗಳನ್ನೂ ಖರೀದಿ ಮಾಡಿ ತಮ್ಮ ಮಕ್ಕಳಿಗೆ ಒದಗಿಸಿದ್ದಾರೆ. ಗಣಿತ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆಗಳಿಗೆ ತಲಾ ಹತ್ತು ಲಕ್ಷ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಪ್ರಶ್ನೆ ಪತ್ರಿಕೆಗಳಿಗೆ ತಲಾ ಐದು ಲಕ್ಷ ರುಪಾಯಿ ಕೊಟ್ಟು ಖರೀದಿಸಲಾಗಿದೆ. ಆಯಾ ವಿಷಯದ ಪರೀಕ್ಷೆ ಹಿಂದಿನ ದಿನ ಪ್ರಶ್ನೆ ಪತ್ರಿಕೆಗಳು ಆರೋಪಿಗಳ ಕೈಸೇರಿ, ಮಕ್ಕಳಿಗೆ ರವಾನೆ ಆಗುತ್ತಿತ್ತು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.

ಓಬಳರಾಜು ಪುತ್ರ ಹಾಗೂ ರುದ್ರಪ್ಪ ಪುತ್ರಿ ಅಪ್ಪ ತಂದುಕೊಟ್ಟ ಪ್ರಶ್ನೆ ಪತ್ರಿಕೆಗಳನ್ನು ಆಧರಿಸಿ ಪರೀಕ್ಷೆ ಬರೆದಿದ್ದಾರೆ. ತಮ್ಮ ಮಕ್ಕಳನ್ನು ಮೆಡಿಕಲ್ ಓದಿಸಬೇಕು ಎಂಬುದು ಇವರಿಬ್ಬರ ಹೆಬ್ಬಯಕೆ ಆಗಿತ್ತು. ಆದರೆ ಪೇಮೆಂಟ್ ಕೋಟಾದಡಿ ತಲಾ ಸೀಟಿಗೆ ಕೋಟಿ ರುಪಾಯಿಯಾದರೂ ಸುರಿಯಬೇಕು. ಅದರ ಬದಲು 50 ಲಕ್ಷ ರುಪಾಯಿ ಕೊಟ್ಟು ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿ, ಮಕ್ಕಳಿಂದ ಪರೀಕ್ಷೆ ಬರೆಸಿದರೆ ಮೆರಿಟ್ ಆಧಾರದಲ್ಲಿಯೇ ಮೆಡಿಕಲ್ ಸೀಟು ಸಿಗುತ್ತದೆ. ತಲಾ 25 ಲಕ್ಷ ರುಪಾಯಿಯಲ್ಲಿಯೇ ವ್ಯವಹಾರ ಮುಗಿದು ಹೋಗುತ್ತದೆ ಎಂದು ಈ ಮಹಾನುಭಾವರು ಲೆಕ್ಕಾಚಾರ ಹಾಕಿದ್ದರು.

ಓಬಳರಾಜು ಪುತ್ರ ಹಾಗೂ ರುದ್ರಪ್ಪ ಅವರ ಪುತ್ರಿ ಈವರೆಗೂ ಬರೆದಿರುವ ಎಲ್ಲ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪ್ರತ್ಯೇಕ ಮೌಲ್ಯಮಾಪನಕ್ಕೆ ಸಿಐಡಿ ಪೊಲೀಸರು ನಿರ್ಧರಿಸಿದ್ದು, ಈ ಬಗ್ಗೆ ಪದವಿಪೂರ್ವ ಶಿಕ್ಷಣ ಮಂಡಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಇವರು ಕಲಿತ ಕಾಲೇಜುಗಳಲ್ಲಿ ಇವರ ಓದಿನ ಮಟ್ಟ ಹೇಗಿತ್ತು ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಿದೆ.

ಓಬಳರಾಜು ಮತ್ತು ರುದ್ರಪ್ಪನವರ ಮಕ್ಕಳು ತಮಗೆ ದೊರೆತ ಪ್ರಶ್ನ ಪತ್ರಿಕೆಗಳನ್ನು ಸಹಪಾಠಿಗಳ ಜತೆ ಹಂಚಿಕೊಂಡಿದ್ದಾರೆ. ತಮಗಿರುವ ಪ್ರಭಾವ ತೋರಿಸಿಕೊಳ್ಳುವ ಇರಾದೆಯಿಂದ ಅವರು ಈ ಕೆಲಸ ಮಾಡಿದ್ದಾರೆ. ಇವರಿಂದ ಸಹಪಾಠಿಗಳ ಕೈಗೆ ಸಿಕ್ಕ ಪ್ರಶ್ನೆ ಪತ್ರಿಕೆಗಳು ವಾಟ್ಸಪ್, ಮೇಲ್, ಮೆಸೇಜ್ ಮೂಲಕ ಬೇರೆ-ಬೇರೆ ಕಡೆಗೂ ರವಾನೆಯಾಗಿದೆ.

ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸಿದ್ಧತೆ ನಡೆದಿದೆ. ಪ್ರಕರಣದಲ್ಲಿ ಈವರೆಗೂ ಬಂಧಿತರಾಗಿರುವ ಎಲ್ಲ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಮಧ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತನಿಖಾ ತಂಡ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಪೂರ್ಣಪ್ರಜ್ಞ ಪಿಯು ಕಾಲೇಜಿನದೈಹಿಕ ಶಿಕ್ಷಕರಾಗಿರುವ ಮಲ್ಲೇಶ್ವರಂ ನಿವಾಸಿ ಅನಿಲ್ ಹಾಗೂ ಮತ್ತಿಕೆರೆ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಸತೀಶ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಪ್ರಕರಣದ ಕಿಂಗ್ ಪಿನ್ ತುಮಕೂರು ಗುಬ್ಬಿ ತಾಲ್ಲೂಕಿನ ಕಾಗೇರಿಯ ಶಿವಕುಮಾರ್ ಅಲಿಯಾಸ್ ಶಿವಕುಮಾರಸ್ವಾಮಿ ಪತ್ತೆ ಕಾರ್ಯ ಮುಂದುವರಿದಿದೆ.

Leave a Reply