ಕಷ್ಟ ಹೇಳಿಕೊಂಡು ಬರೋ ಜನರ ಸಮಸ್ಯೆಗಳನ್ನು ಅರಿಯುವ ಸೂಕ್ಷ್ಮತೆ ಪೊಲೀಸರಿಗೆ ಇಲ್ಲದಿದ್ದರೆ ಹೇಗೆ..?

author-geetha“ಪೊಲೀಸ್ ಇಲಾಖೆ ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ಅರ್ಥವೇ ಆಗುತ್ತಿಲ್ಲ..”

“ನಿನಗೆ ಯಾಕೆ ಅರ್ಥವಾಗಬೇಕು? ನಿನ್ನದೇನಾದರೂ ಪ್ರಾಬ್ಲಂ ಇದೆಯೇ?”

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನನ್ನ ಗೆಳೆಯ ಪ್ರಶ್ನಿಸಿದಾಗ ಅಡ್ಡಡ್ಡವಾಗಿ ತಲೆಯಾಡಿಸಿದೆ.

“ನನ್ನದೇನಿಲ್ಲ.. ಪೇಪರ್ ಓದುತ್ತೇನೆ.. ಟಿವಿಯಲ್ಲಿ ಸುದ್ದಿ ನೋಡುತ್ತೇನೆ.. ಕೆಲವು ನಿರ್ಧಾರಗಳನ್ನು ಹೇಗೆ, ಏಕೆ ತೆಗೆದುಕೊಂಡರು ಎಂದು ಗೊತ್ತೇ ಆಗುವುದಿಲ್ಲ..”

ಜೊತೆಗೆ ಇಂದಿನ ‘ವಿಶ್ವವೇ ಒಂದು ಸಣ್ಣ ಹಳ್ಳಿಯಾಗಿದೆ’ ಎಂದು ನಾವೆಲ್ಲ ಉದ್ಗರಿಸುತ್ತಿರುವ ಕಾಲದಲ್ಲಿ ಬೆಂಗಳೂರಿನ ಬಳಿ ಇರುವ ಜರಗನಹಳ್ಳಿಯಲ್ಲಿ (ಕಲ್ಪಿತ) ಕಾಣೆಯಾದ ಎರಡು ವರ್ಷದ ಮಗು ಎರಡು ವರ್ಷದ ನಂತರ ತುಮಕೂರಿನ (ಕಲ್ಪಿತ) ಅನಾಥಾಶ್ರಮದಲ್ಲಿ ಸಿಗುತ್ತದೆ. ಅದೂ ತಂದೆ ತಾಯಿ ಹುಡುಕಿದಕ್ಕೆ..! ಕಾಣೆಯಾದ ಮಗುವಿನ ಫೋಟೋವನ್ನು ಎಲ್ಲಾ ಠಾಣೆಗಳಿಗೂ ಕಳಿಸಬೇಕಲ್ಲವೇ? ಹುಡುಕುತ್ತೇವೆ ಎಂದು ಹೇಳಿ ಸುಮ್ಮನಾಗಿದ್ದಾರೆ.. ಮಗುವಿನ ತಂದೆ ತಾಯಿ ತಮ್ಮ ಕಾಣೆಯಾದ ಮಗುವಿನ ಹುಟ್ಟಿದ ಹಬ್ಬದ ದಿನ ಅನಾಥಾಶ್ರಮದಲ್ಲಿ ಸಿಹಿ ಹಂಚಲು ಹೋದರೆ ಅವರ ಅದೃಷ್ಟಕ್ಕೆ ಅವರ ಮಗು ಅಲ್ಲಿಯೇ ಇತ್ತು. ವಿಚಾರಿಸಿದಾಗ ಆ ಠಾಣೆಯ ವ್ಯಾಪ್ತಿಯಲ್ಲಿ ಮಗು ಸಿಕ್ಕಿತು ಎಂದು ಯಾರೋ ಕರೆತಂದು ಬಿಟ್ಟರಂತೆ. ಆ ಠಾಣೆಯವರು ಏನೂ ವಿಚಾರಿಸದೆ ಆ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿದರಂತೆ. ಮಗು ಆ ಠಾಣೆಯ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದು, ಆ ರಾಣೆಯ ವ್ಯಾಪ್ತಿಯಲ್ಲಿ ಸಿಕ್ಕಿದ್ದು ಎಲ್ಲಾ ದಾಖಲೆಯಲ್ಲಿ ಇದೆ. ಆದರೆ ಒಂದಕ್ಕೊಂದು ಕೊಂಡಿಯಾಗಲೇ ಇಲ್ಲ.. ಈ ಚಹರೆಯ ಮಗು ಕಳೆದು ಹೋಗಿದೆ. ಎಂದು ಎಲ್ಲಾ ಠಾಣೆಗಳಿಗೂ ಫೋಟೋ ಕಳಿಸಬೇಕಲ್ಲವೇ..? ಈ ಮಗು ಸಿಕ್ಕಿದೆ ಎಂದು ಸಿಕ್ಕ ಮಗುವಿನ ಫೋಟೋವನ್ನು ಎಲ್ಲಾ ರಾಣೆಗಳಿಗೆ ಕಳುಹಿಸಬೇಕಲ್ಲವೇ..? ಒಂದು ರಾಜ್ಯದಲ್ಲಿ ಎಷ್ಟು ಠಾಣೆಗಳಿವೆ..? ನಮ್ಮ ದೇಶದಲ್ಲಿ ಎಷ್ಟು ಠಾಣೆಗಳಿವೆ..? ಎಲ್ಲಾದಕ್ಕೂ ಕಳುಹಿಸಲು ಸಾಧ್ಯವೇ..? ಆ ಬಗೆಯ ಜಾಲವಿದೆಯೇ..? ಜಾಲವಿದೆಯೆಂದಾದರೆ ಹೀಗೆ ಆಗಿದ್ದು ಹೇಗೆ? ಯಾಕೆ?

“ಇದ್ಯಾವುದೋ ನಾನು ಕೇಳಿರದ ಕೇಸು ಜೊತೆಗೆ ಊರಿನ ಹೆಸರು ಕಲ್ಪಿತ ಎನ್ನುತ್ತೀರಿ..”

“ನೀವು ಕೇಳಿಲ್ಲದೆ ಇರಬಹುದು ಆದರೆ ಇದು ನಿಜವಾದ ಕೇಸು.. ಜರಗನಹಳ್ಳಿ ಮಾರತಹಳ್ಳಿ ಆಗಬಹುದು.. ತುಮಕೂರು ರಾಮನಗರ ಆಗಬಹುದು. ಇಷ್ಟು ಸಮೀಪ ಎಂದು ಹೇಳಲು ಈ ಊರುಗಳ ಹೆಸರು ತೆಗೆದುಕೊಂಡೆ.. ಬಿಡಿ.. ಮಗು ಸಿಕ್ಕೇ ನಾಲ್ಕು ವರ್ಷವಾಯಿತು.. ಮೊನ್ನೆಯ ಪೇಪರ್ ಓದಿದ್ರಾ?..”

ಬಿಡಲಿಲ್ಲ ನಾನು.. ನನ್ನ ಮುಂದೆ ಕುಳಿತಿರುವ ಸ್ನೇಹಿತ ಸ್ವತಃ ಇಡೀ ವೊಲೀಸ್ ಇಲಾಖೆಯನ್ನು ಬಿಂಬಿಸುತ್ತಾನೇನೋ ಎಂಬಂತೆ ಮತ್ತೊಂದು ಕೇಸು ಎತ್ತಿದೆ.. ಮಗದೊಂದು ಕೇಸು ಉದ್ಗರಿಸಿದೆ.

ಒಂದು ಹಳ್ಳಿ.. ಮುಂದುವರಿದ ಜಾತಿಯ ಹುಡುಗಿ ದಲಿತ ಹುಡುಗನ್ನೊಬ್ಬನೊಡನೆ ಓಡಿ ಹೋಗುತ್ತಾಳೆ. ಅಪ್ಪ ಅಮ್ಮ ದೂರು ದಾಖಲಿಸುತ್ತಾರೆ. ಒಂದು ವಾರದಲ್ಲಿ ಅವರನ್ನು ಹುಡುಕುತ್ತಾರೆ ಪೊಲೀಸ್ಸಿನವರು. ಠಾಣೆಯಲ್ಲಿ ಎಲ್ಲರನ್ನೂ ಸೇರಿಸಿ ಪಂಚಾಯಿತಿ ಮಾಡಿ, ಹುಡುಗಿಯನ್ನು ಅಪ್ಪ ಅಮ್ಮನ ಜೊತೆ ಕಳುಹಿಸುತ್ತಾರೆ. ಎರಡೇ ದಿನದಲ್ಲಿ ಹುಡುಗಿ ಸತ್ತು ಹೋಗುತ್ತಾಳೆ. ಪೊಲೀಸರಿಗೆ ಸುದ್ದಿ ಮುಟ್ಟುವ ಹೊತ್ತಿಗೆ ಅವಳ ದಹನವೂ ಆಗಿ ಹೋಗಿರುತ್ತದೆ.. ಊರಿನಲ್ಲಿ ಹಬ್ಬ, ಹೆಣವನ್ನು ಇಟ್ಟುಕೊಂಡಿರಲು ಆಗುವುದಿಲ್ಲ.. ಮೈಲಿಗೆ ಆಗುತ್ತದೆ. ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಎನ್ನುತ್ತಾರೆ ಅಪ್ಪ ಅಮ್ಮ. ಇದು ಬೇರೆ ಯಾವುದೋ ಕಾಲದಲ್ಲಿ ನಡೆದಿದ್ದಲ್ಲ… 2016 ಮಾರ್ಚಿನಲ್ಲಿ ನಡೆದಿದ್ದು. ಬೇರೆ ಯಾವುದೋ ರಾಜ್ಯ.. ಅಲ್ಲಿ ಮರ್ಯಾದೆ ಹತ್ಯೆ ನಡೆಯುತ್ತದೆ ಎನ್ನಲು ಈ ದುರಂತ ನಡೆದಿದ್ದು ನಮ್ಮ ಕರ್ನಾಟಕದಲ್ಲಿಯೇ..

ಪೊಲೀಸರು ಮೇಲ್ಜಾತಿಯ ಅಪ್ಪ ಅಮ್ಮನ ಜೊತೆ ಶಾಮಿಲಾಗಿದ್ದಾರಾ..? ಮದುವೆ ಮಾಡಿಸುತ್ತಾರೆ ಎಂದಾದರೆ ಎಂದು ..? ಆ ಹುಡುಗಿಗೆ ಹೋಗಲು ಇಷ್ಟವಿದೆಯೇ ? ಅವಳು ಈಗ ಅವಳ ತಂದೆಯ ಮನೆಯಲ್ಲಿ ಇರುವುದು ಸುರಕ್ಷಿತವೇ ? ಹೀಗೇ ಎಷ್ಟೊಂದು ಪ್ರಶ್ನೆಗಳನ್ನು ಹಾಕಿಕೊಂಡು, ವಿಷಯವನ್ನು ಮನನ ಮಾಡಿಕೊಳ್ಳಬೇಕಲ್ಲವೇ ..? ಆ ಹುಡುಗಿಯ ಸಾವಿಗೆ ಹೊಣೆ ಯಾರು..? ಕೊಲೆಯಾಗಿರಲಿ ಅಥವಾ ಆ ಹುಡುಗಿಯ ತಂದೆ ಹೇಳಿಕೆ ಕೊಟ್ಟಂತೆ ಆತ್ಮಹತ್ಯೆಯೇ ಆಗಿರಲಿ ಅನ್ಯಾಯವಾಗಿ ಪೊಲೀಸರ ನಿರ್ಲಕ್ಷ್ಯದಿಂದ ಒಂದು ಹುಡುಗಿ ಸಾವನಪ್ಪಿದಳಲ್ಲವೇ..?

ನನ್ನನ್ನು ಕಾಡಿದ ಇನ್ನೊಂದು ಪ್ರಕರಣ ಇದೆ. ಅದನ್ನು ಹೇಳಿ ಬಿಡುತ್ತೇನೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಎಳೇ ಹಸುಳೆ ಮಾರಾಟವಾದದ್ದು ಬಯಲಾಗಿತ್ತು. ಕೊಂಡುಕೊಂಡವರಿಂದ ಮಗುವನ್ನು ಹಿಂಪಡೆದು ಆ ಮಗುವಿನ ತಾಯಿ ಎಲ್ಲಿರುವಳೆಂದು ಹುಡುಕಿ, ತಮಿಳುನಾಡಿನ ಹಳ್ಳಿಯೊಂದರಲ್ಲಿ ಇದ್ದ ಅವಳನ್ನು ಪತ್ತೆ ಮಾಡಿ ಬೆಂಗಳೂರಿಗೆ ಕರೆತರಲಾಯಿತು. ಅವಳಿಗೆ ಇದು ಬೇಡದ ಐದನೇಯ ಸಂತಾನ. ಇಪ್ಪತೈದು ಸಾವಿರಕ್ಕೆ ಮಾರಿದ್ದಳು. ನೆಮ್ಮದ್ಧಿಯ ನಿಟ್ಟುಸಿರು ಬಿಟ್ಟು, ಮಗುವನ್ನು ನಿವಾರಿಸಿಕೊಂಡು, ದುಡ್ಡು ಏಣಿಸಿಕೊಂಡು ಹೊರಟು ಹೋಗಿದ್ದಳು. ಅವಳ ಅಕ್ಕಪಕ್ಕದ ಮನೆಯಲ್ಲಿ ವಾಸಿಸುವವರಿಗೆ ಮಗು ಸತ್ತು ಹೋಯಿತು ಎಂದು ಹೇಳಿಕೊಂಡಿದ್ದಳು.

ಅವಳನ್ನು ಪತ್ತೆಮಾಡಿ ಕರೆತಂದ ಪೊಲೀಸರು, ಪತ್ರಿಕಾಗೋಷ್ಠಿ ಮಾಡಿ ಹೆತ್ತ ತಾಯಿಗೆ ಮಗುವನ್ನು ಹಿಂತಿರುಗಿಸುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟು ಅವಳಿಗೆ ಮಗುವನ್ನು ಒಪ್ಪಿಸಿದರು. ಎಲ್ಲಾ ಪತ್ರಿಕೆಗಳಲ್ಲಿ ಫೋಟೋ ಪ್ರಕಟಗೊಂಡಿತ್ತು. ಆ ಫೋಟೋ ನನ್ನ ಸ್ಮೃತಿಪಟಲದಲ್ಲಿ ಭದ್ರವಾಗಿ ನಿಂತಿದೆ. ‘ಇಷ್ಟಗಲ ನಗುತ್ತಿರುವ ಪೊಲೀಸಿನವರು, ಅಳು ಮುಖ ಹೊತ್ತ ತಾಯಿ.. ಬೇಡದ ಮಗು ಅವಳ ಕೈಯಿಂದ ಜಾರಿ ಹೋಗುತ್ತಿದೆ’ ಹೀಗಿತ್ತು ಆ ಫೋಟೋ! ನನಗೆ ಆಗ ಕಾಡಿದ್ದು ಇದು.. ಅವಳು ಮಗುವನ್ನು ಮನೆಗೆ ಕರೆದುಕೊಂಡು ಹೋದಳೋ.. ಅಥವಾ ದಾರಿಯಲ್ಲಿ ಎಲ್ಲಾದರು ಬಿಟ್ಟು ಹೊರಟು ಹೋದಳೋ, ಕರೆದುಕೊಂಡು ಹೋಗಿ ತನ್ನ ಮನೆಯ ಅಕ್ಕಪಕ್ಕದವರಿಗೆ, ಆ ಮಗುವಿನ ಅಕ್ಕ ಅಣ್ಣಂದಿರಿಗೆ ಏನು ಹೇಳಿದಳೋ ಏನೋ..

“ನಿಂದೆಲ್ಲಾ ಹೀಗೇ.. ತಪ್ಪು ಕಂಡು ಹಿಡಿಯೋಕ್ಕೆ ಕಾಯುತ್ತಲಿರ್ತೀಯ.. ಪಾಪ ಪೊಲೀಸ್ಸಿನವರು ಏನು ಮಾಡಬೇಕು?”

ಹೆಚ್ಚೇನು ಇಲ್ಲ.. ಜನಸ್ನೇಹಿ  ಆಗಬೇಕು. ಯಾವುದನ್ನು ಹೇಗೆ ನೋಡಬೇಕು ಎಂಬ ವಿವೇಚನೆ ಇರಬೇಕು.. ನಮ್ಮ ಸಂವಹನ ಸಾಧಿಸಿರುವ ಪ್ರಗತಿ ವ್ಯಾಪ್ತಿಯ ಪ್ರಯೋಜನ ಪಡೆದುಕೊಳ್ಳಬೇಕು. ಮೂಲೆ ಮೂಲೆಯನ್ನು ಮುಟ್ಟುವ ಆ ವ್ಯಾಪ್ತಿಯ ಲಾಭ ಪಡೆದು ಕೊಳ್ಳಬೇಕು. ಮೂಲವಾಗಿ ಯಾವುದರ ಬಗ್ಗೆ ಅನುಮಾನ ಪಡಬೇಕು, ಯಾವ ವ್ಯಕ್ತಿಯ ಮಾತು ನಂಬಲಾರ್ಹವಲ್ಲ  ಎಂಬ ಸೂಕ್ಷ್ಮತೆ ಇರಬೇಕು.. ಅದಕ್ಕಾಗಿ ಅವರಿಗೆ ಒಂದು ಪುಟ್ಟ ಟ್ರೈನಿಂಗ್ ಇರಬೇಕು.

ಪೊಲೀಸ್ ಇಲಾಖೆಯಲ್ಲಿ ಜನ ಕಡಿಮೆ ಎಂದರೆ ನಾನು ನಂಬುವುದಿಲ್ಲ. ರಾಜ್ಯದ ರಾಜಭವನದಲ್ಲಿ ಒಬ್ಬ ರಾಜ್ಯಪಾಲರನ್ನು ನೋಡಿಕೊಳ್ಳಲು ಇನ್ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸುವುದಾದರೆ, ಜನ ಕಮ್ಮಿ ಎನ್ನುವುದು ಸಕಾರಣವಾಗುವುದಿಲ್ಲ.

ಜನ ಕಷ್ಟದ ಸಮಯದಲ್ಲಿಯೇ ಪೊಲೀಸರ ಬಳಿ, ವೈದರ ಬಳಿ ಹೋಗುವುದು ಅವರು ಜನಸ್ನೇಹಿ ಅಗಿರಬೇಕಲ್ಲವೇ?

ನನ್ನ ಗೆಳೆಯ ಸುಮ್ಮನಾದ. ನಾನು ಹೇಳಿದ್ದು ಒಪ್ಪಿ ಸುಮ್ಮನಾದನೋ ಅಥವಾ ಮಾತಾಡಿ ಪ್ರಯೋಜನ ಇಲ್ಲ ಎಂದು ಸುಮ್ಮನಾದನೋ ಗೊತ್ತಿಲ್ಲ.

2 COMMENTS

Leave a Reply