ಅಪ್ರಾಪ್ತ ವಯಸ್ಕರಿಗೆ ಅತಿವೈಭೋಗದ ಕಾರು ಕೊಟ್ಟು, ಸಾಮಾನ್ಯರ ಪ್ರಾಣವನ್ನು ಪಗಡೆಯಾಡುವ ಪಾಲಕರಿಗೆ ಬೇಡವೇ ಘೋರ ಶಿಕ್ಷೆ?

ಡಿಜಿಟಲ್ ಕನ್ನಡ ಟೀಮ್

ಮಂಗಳವಾರ ರಾತ್ರಿ ದೆಹಲಿಯಲ್ಲಿ ಸಿಲ್ವರ್ ಮರ್ಸಿಡೆಸ್ ನಲ್ಲಿ ಯಮವೇಗದಲ್ಲಿ ಬಂದ 17ರ ಹುಡುಗ, ರಸ್ತೆ ದಾಟುತ್ತಿದ್ದ 32ರ ವ್ಯಕ್ತಿಯನ್ನು ಗುದ್ದಿ ಹೋಗುತ್ತಾನೆ. ವೈಭೋಗದ ಮರ್ಸಿಡೆಸ್ ಮಾತ್ರವಲ್ಲ, ರಸ್ತೆಯೂ ತನ್ನ ಅಪ್ಪನದ್ದೇ ಎಂಬಂತೆ ವಾಹನ ಚಲಾಯಿಸಿಕೊಂಡು ಬಂದ ವೇಗ, ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಲೇ ಸೆಕೆಂಡುಗಳಲ್ಲಿ ಹೆಣವಾಗಿ ಹೋದ ಸಿದ್ದಾರ್ಥ ಮಿತ್ತಲ್ ಅಸಹಾಯಕತೆ ಎಲ್ಲವೂ ಈ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿವೆ.

ಉದ್ಯಮಿಯೊಬ್ಬನ ಮಗನಾದ ಆತನನ್ನು ಬಂಧಿಸಲಾಗುತ್ತದೆಯಾದರೂ ಕ್ಷಣಮಾತ್ರದಲ್ಲಿ ಜಾಮೀನು ಸಿಗುತ್ತದೆ. ಹದಿನೆಂಟು ತುಂಬುವುದಕ್ಕೆ ಇನ್ನೂ ಐದು ದಿನಗಳಿದ್ದವಂತೆ. ಹೀಗಾಗಿ ಆತನ ಪ್ರಕರಣವೇನಿದ್ದರೂ ಬಾಲನ್ಯಾಯ ನ್ಯಾಯಾಲಯದ ಸುಪರ್ದಿಗೆ. ಅಬ್ಬಬ್ಬ ಎಂದರೆ ದಂಡ ತುಂಬಬೇಕಾಗಬಹುದಷ್ಟೆ ಅನ್ನೋದು ಸದ್ಯಕ್ಕೆ ಸಿಗುತ್ತಿರುವ ಚಿತ್ರಣ!

ಛೇ.. ದುಡ್ಡಿದ್ದವನೊಬ್ಬನ ನಿರ್ಲಕ್ಷ್ಯ, ಉಡಾಫೆಗಳಿಗೆ ಹೊಸಕಿಹೋಗುವಷ್ಟು ಯಾರದ್ದಾದರೂ ಬದುಕು ನಿಕೃಷ್ಟ ಎನ್ನುವುದಾದರೆ ನಾಗರಿಕತೆಗೆ ಘನತೆ ಉಳಿಯಿತಾದರೂ ಹೇಗೆ? ಇವತ್ತು ದೆಹಲಿಯಲ್ಲಾಗಿದ್ದು ನಾಳೆ ನಮ್ಮ ಯಾರ ಜೀವನದಲ್ಲಾದರೂ ಆಗಬಹುದು. ಪ್ರಾಣ ಕಳೆದುಕೊಂಡ ಸಿದ್ದಾರ್ಥ ಮಿತ್ತಲ್ ಜಾಗದಲ್ಲೋ, ದುಃಖಿಸುತ್ತಿರುವ ಅವರ ಕುಟುಂಬದ ಜಾಗದಲ್ಲೋ ನಿಲ್ಲಬೇಕಾದ ಸ್ಥಿತಿ ಯಾರಿಗಾದರೂ ಬಂದುಬಿಡಬಹುದು.

ಈಗ ಆಗಬೇಕಿರೋದೇನು?

ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಾಲಾಪರಾಧಿ ಕಾನೂನಿನ ವ್ಯಾಖ್ಯೆಯಿಂದಲೇ ಪಾರಾಗಿಬಿಟ್ಟ. ಅತ್ಯಾಚಾರ ಮಾಡಲು ತಿಳಿದವನಾದರೂ ಬಾಲಕ ಎಂಬ ರಿಯಾಯ್ತಿ ನೀಡಬೇಕಾದ ಕ್ರೂರ ವ್ಯಂಗ್ಯವನ್ನು ಸಮಾಜ ನೋಡಬೇಕಾಯಿತು. ಈ ಬೆನ್ನಲ್ಲಿ ನಡೆದ ಆಕ್ರೋಶದ ಪ್ರತಿಭಟನೆಗಳ ಫಲವಾಗಿ ಬಾಲನ್ಯಾಯ ಕಾಯ್ದೆಗೆ ತಿದ್ದುಪಡಿ ಸಾಧ್ಯವಾಯಿತು.

ಇಲ್ಲೂ ಅಂಥದ್ದೇನಾದರೂ ಆಗಲೇಬೇಕಿದೆ. ಕೊನೆಪಕ್ಷ ಆ ವಯಸ್ಸಿನ ಹುಡುಗನಿಗೆ ಮರ್ಸಿಡೆಸ್ ಕೊಟ್ಟ ತಂದೆಗಾದರೂ ಬಿಸಿ ಮುಟ್ಟಬೇಕು.

mercedes1

ಆದರೆ….

ಈ ಬಗ್ಗೆ ತನ್ನ ಸಹೋದರನನ್ನು ಕಳೆದುಕೊಂಡ ಶಿಲ್ಪಾ ಮಿತ್ತಲ್, ಸುದ್ದಿವಾಹಿನಿ ಜತೆಗೆ ಹತಾಶವಾಗಿ ಮಾತಾಡುತ್ತಿರುವುದನ್ನು ಕೇಳಿದಾಗ ಕರುಳು ಚುರ್ರೆನ್ನುತ್ತೆ. ಆಕೆ ಹೇಳ್ತಾರೆ- ‘ನಮಗೀಗಾಗಲೇ ಗೊತ್ತಾಗಿಹೋಗಿದೆ. ಈ ಪ್ರಕರಣವನ್ನು ಕೆಳಹಂತದ ನ್ಯಾಯಾಲಯದಲ್ಲೇ ಹತ್ತು ವರ್ಷ ಹೋರಾಡುವುದಕ್ಕೆ ನಾವು ಸಿದ್ಧರಾಗಬೇಕೆಂದು. ಸಿಸಿಟಿವಿ ದೃಶ್ಯಗಳಲ್ಲಿ ಎಲ್ಲವೂ ಸ್ಪಷ್ಟವಿದೆ. ಆದರೂ ಈ ವ್ಯವಸ್ಥೆ ಹೀಗೇಕೆ? ದೊಡ್ಡವರು ಮಾಡುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ ಎಂದ ಮೇಲೆ ಆ ಹುಡುಗನನ್ನು ಅಪ್ರಾಪ್ತ ವಯಸ್ಕ ಅಂತ ಏಕಾದರೂ ಪರಿಗಣಿಸಬೇಕು? ನನಗೆ ಗೊತ್ತು… ವಿಚಾರಣೆ ಶುರುವಾಗುತ್ತಲೇ ಡ್ರೈವಿಂಗ್ ಮಾಡುತ್ತಿದ್ದದ್ದು ಈ ಹುಡುಗ ಅಲ್ಲವೇ ಅಲ್ಲ ಅಂತ ಪ್ರತಿಪಾದಿಸಿ ಇನ್ಯಾರನ್ನೋ ತಂದು ನಿಲ್ಲಿಸುತ್ತಾರೆ. ಯಾಕಿಲ್ಲಿ ಯಾರಿಗೇನೂ ಆಗೋದಿಲ್ಲ. ಸಹೋದರನನ್ನು ಕಳೆದುಕೊಂಡ ನಾನು ಕ್ಯಾಮರಾಗಳ ಮುಂದೆ ಅಳುತ್ತ- ಕೂಗಿಕೊಂಡಿರುತ್ತೇನೆ. ಈ ಕೃತ್ಯ ಎಸಗಿದವನಿಗೆ, ಆತನ ತಂದೆಗೆ ಏನೂ ಆಗುವುದಿಲ್ಲ…’

ಹೀಗನ್ನುವ ಶಿಲ್ಪಾ ಮಿತ್ತಲರ ನೋವು ನಮ್ಮ ಎದೆ ಹಿಂಡದಿರದೇ?

ಬದುಕು- ಜೀವದ ಮೌಲ್ಯ ತಿಳಿಸಬೇಕಾದ ಹೊತ್ತಿನಲ್ಲಿ ಅಪ್ರಾಪ್ತ ವಯಸ್ಕ ಕರುಳ ಕುಡಿಗಳಿಗೆ ಮರ್ಸಿಡೆಸ್ಸೋ- ಬೆಂಜೋ ಕೊಟ್ಟು ಅವರ ಉನ್ಮಾದಗಳಿಗೆ ತಿದಿ ಒತ್ತುವ ಪಾಲಕರ ಬಗ್ಗೆ ನಮ್ಮ ಸಮಾಜಕ್ಕಾದರೂ ಒಂದು ಅಸಹ್ಯ ಭಾವ ಮೂಡಲಿ. ಇಂಥ ಪಾಲಕರ ಕುತ್ತಿಗೆ ಪಟ್ಟಿ ಹಿಡಿಯುವ ತಾಕತ್ತು ಕಾನೂನಿಗೆ ಇಲ್ಲದಿದ್ದರೆ ಹೇಗೆ? ಜೀವದ ಮೌಲ್ಯ ತಿಳಿದಿರದ ಇಂಥವರ ಕಾರಿನಡಿಗಾಗುವ ಕರ್ಮ ನಮ್ಮಲ್ಲಿ ಯಾರದ್ದಾದರೂ ಆಗಿರಬಹುದು ಎಚ್ಚರ!

ಇದನ್ನೂ ಓದಿ-  ಬುದ್ಧಿಜೀವಿಗಳ ಅಸಹಿಷ್ಣುತೆ ಚರ್ಚೆ ಇದಲ್ಲ, ಆದರೆ ಅಸಹನೀಯ ಮಹಾನಗರಕ್ಕೆ ಮದ್ದು ಕೊಡೋರು ಯಾರಿಲ್ಲ!

Leave a Reply