ಅವತ್ತು ಮಸೀದಿ ಮೈಕುಗಳಿಂದ ಅತ್ಯಾಚಾರದ ಅಟ್ಟಹಾಸಗೈದ ಮನಸ್ಥಿತಿ, ಇಂದು ಕಾಶ್ಮೀರ ಕ್ಯಾಂಪಸ್ಸಿನಲ್ಲಿ ರೇಪ್ ಬೆದರಿಕೆ ಒಡ್ಡುತ್ತಿದೆ!

ಡಿಜಿಟಲ್ ಕನ್ನಡ ಟೀಮ್

‘ಪಂಡಿತರೇ ನಿಮ್ಮ ಹೆಂಗಸರನ್ನು ಬಿಟ್ಟು ಕಣಿವೆ ತೊರೆಯಿರಿ. ನಾವು ಅವರೊಂದಿಗೆ ಪಾಕಿಸ್ತಾನ ಸೇರುತ್ತೇವೆ’- ಇದು 1990ರಲ್ಲಿ ಶ್ರೀನಗರದ ಮಸೀದಿಗಳ ಮೈಕಿನಿಂದ ಬಿತ್ತರವಾಗಿದ್ದ ಘೋಷಣೆ. ನಂತರ ಕಾಶ್ಮೀರಿ ಪಂಡಿತರ ಮೇಲಾದ ಹತ್ಯಾಕಾಂಡ- ಅತ್ಯಾಚಾರ- ಮೂಲೋತ್ಪಾಟನೆ ಕೃತ್ಯಗಳೆಲ್ಲ ನಿರಾಶ್ರಿತ ಪಂಡಿತರ ಬದುಕಿನಲ್ಲಿ ಇವತ್ತೂ ಬಿಂಬಿತವಾಗುತ್ತ, ಇತಿಹಾಸದ ಕ್ರೂರ ಪುಟಕ್ಕೆ ಸಾಕ್ಷಿಯಾಗಿವೆ.

ಇದೀಗ ಶ್ರೀನಗರದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಜಮ್ಮು-ಕಾಶ್ಮೀರೇತರ ವಿದ್ಯಾರ್ಥಿಗಳಿಗೆ ಎದುರಾಗಿರುವ ಬೆದರಿಕೆಯೂ ಪ್ರತ್ಯೇಕತಾವಾದಿಗಳು 90ರ ದಶಕದಲ್ಲಿ ತೋರಿದ ಮನಸ್ಥಿತಿಯದ್ದೇ. ಸಿ ಆರ್ ಪಿ ಎಫ್ ಪ್ರವೇಶಿಸುವುದಕ್ಕೂ ಪೂರ್ವದಲ್ಲಿ ಅಲ್ಲಿನ ಸ್ಥಳೀಯ ವಿದ್ಯಾರ್ಥಿಗಳ ಜತೆ ಸೇರಿಕೊಂಡು ಜಮ್ಮು-ಕಾಶ್ಮೀರದ ಪೋಲೀಸರು ಕಾಶ್ಮೀರೇತರ ವಿದ್ಯಾರ್ಥಿಗಳಿಗೆ ಎಗ್ಗಿಲ್ಲದೇ ಬಡಿದಿದ್ದಾರೆ. ನಂತರ ಸಿ ಆರ್ ಪಿಎಫ್ ಆಗಮನವಾದಾಗ ಈ ವಿದ್ಯಾರ್ಥಿಗಳು ತಮ್ಮೆಲ್ಲ ಆತಂಕ ಬದಿಗೊತ್ತಿ ರಾಷ್ಟ್ರಧ್ವಜ ಹಾರಿಸಿರುವುದು ಅಭಿಮಾನದ ಕ್ಷಣ. ಆ ಬಗ್ಗೆ ಈ ವರದಿ ಓದಬಹುದು.

ಅದೃಷ್ಟವಷಾತ್… ಈ ಸಂಘರ್ಷದಲ್ಲಿ ವಿದ್ಯಾರ್ಥಿನಿಯರು ಸಿಕ್ಕಿಕೊಳ್ಳಲಿಲ್ಲ. ಇಲ್ಲದಿದ್ದರೆ ಪೋಲೀಸರು ನಮ್ಮನ್ನೂ ಅದೇ ರೀತಿ ಬಡಿಯುತ್ತಿದ್ದರು ಎನ್ನುತ್ತಿದ್ದಾರೆ ಅಲ್ಲಿನ ವಿದ್ಯಾರ್ಥಿನಿ.

ಇದೀಗ ಉತ್ತರ ಪ್ರದೇಶದ ತನ್ನೂರಿಗೆ ವಾಪಸಾಗಿರುವ, ಆ ಭಯಾನಕ ಕ್ಷಣಗಳ ನೆನಪಲ್ಲಿ ನಲುಗಿಹೋಗಿರುವ ಆಕೆಯನ್ನು ಮೇಲ್ ಟುಡೆ ಪತ್ರಿಕೆ ಸಂದರ್ಶಿಸಿದೆ. ಆ ಸಂದರ್ಶನದಲ್ಲಿ ವಿದ್ಯಾರ್ಥಿನಿ ಹೇಳಿರುವ ಮಾತುಗಳು ಮಾತ್ರ ಎದೆನಡುಗಿಸುವಂತಿವೆ. ‘ಈ ಕಾಶ್ಮೀರಿ ವಿದ್ಯಾರ್ಥಿಗಳು ನಮ್ಮನ್ನು ಅತ್ಯಾಚಾರ- ಲೈಂಗಿಕ ದೌರ್ಜನ್ಯಕ್ಕೊಳಪಡಿಸುವುದಾಗಿ ಹೆದರಿಸುತ್ತಿದ್ದಾರೆ. ಕಾಶ್ಮೀರಿ ವಿದ್ಯಾರ್ಥಿಯೊಬ್ಬ ನನ್ನ ಬಳಿ ಬಂದು- ಒಬ್ಬಳ ಮೇಲೆ ರೇಪ್ ಆದರೆ ಉಳಿದವರೆಲ್ಲ ಸುಮ್ಮನಾಗುತ್ತೀರಿ (ಏಕ್ ಕೆ ಸಾಥ್ ರೇಪ್ ಹೋಗಾ ಥೋ ಸಬ್ ಥಂಡೆ ಪಡ್ ಜಾವೊಂಗೆ)’ ಎಂದ. ಸಧ್ಯ ಸೋಮವಾರ ಸಂಘರ್ಷ ಶುರುವಾದಾಗ ಹುಡುಗಿಯರು ಇದ್ದಿರಲಿಲ್ಲ. ಇಲ್ಲದಿದ್ದರೆ ಪೋಲೀಸರು ನಮ್ಮನ್ನೂ ಹಾಗೆಯೇ ಬಡಿಯುತ್ತಿದ್ದರು. ಕಾಲೇಜಿನ ಆಡಳಿತ ಮತ್ತು ಪೋಲೀಸರು ನಮ್ಮನ್ನು ಪಶುಗಳಂತೆ ಕಾಣುತ್ತಿರೋದೇಕೆ ಅಂತ ಗೊತ್ತಾಗುತ್ತಿಲ್ಲ’ ಎಂದ ಈ ವಿದ್ಯಾರ್ಥಿನಿ ಹೆದರಿ ಬಿಕ್ಕಿದ್ದಲ್ಲದೇ, ತನ್ನ ಗುರುತನ್ನೂ ಬಹಿರಂಗಗೊಳಿಸದಂತೆ ಕೇಳಿಕೊಂಡಿದ್ದಾಗಿ ಪತ್ರಿಕೆಯ ವರದಿ ಹೇಳುತ್ತಿದೆ.

90ರ ದಶಕದ ಹಿಂಸಾಚಾರದಲ್ಲಿ ದಿನಕ್ಕೆ ನಾಲ್ವರಂತೆ ಕೊಲೆಯಾಗುತ್ತ, ಸರಳಾ ಭಟ್ರಂಥವರು ಭೀಕರ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗುತ್ತಿದ್ದಾಗಿನ ಸಂದರ್ಭದಲ್ಲೂ ವಾದವೊಂದು ತೇಲಿ ಬಂದಿತ್ತು. ಅದೆಂದರೆ- ಇಷ್ಟರ ನಡುವೆಯೂ ಕಾಶ್ಮೀರಿ ಪಂಡಿತರು ತಮ್ಮ ನೆಲ ಬಿಡಬಾರದಾಗಿತ್ತು ಅಂತ. ಇವತ್ತಿನ ಶ್ರೀನಗರ ನಿಟ್ ಸಂಘರ್ಷದಲ್ಲೂ ಇಂಥದೇ ವಾದ ಮುಂದುಮಾಡಲಾಗುತ್ತಿದೆ. ಅಲ್ಲಿನ ಸ್ಥಳೀಯ ವಿದ್ಯಾರ್ಥಿಗಳ ಒಕ್ಕೂಟ ಹೇಳುತ್ತಿದೆ- ‘ಈ ಪ್ರಕರಣವನ್ನು ಜಮ್ಮು-ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳೇ ದೊಡ್ಡದು ಮಾಡ್ತಿದಾರೆ. ಅವರು ಅಧ್ಯಯನ ಬಿಟ್ಟು ಬೇರೆದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು.’

ಎಂಥ ಉಪದೇಶಾಮೃತ! ಇಷ್ಟಕ್ಕೂ ಅಲ್ಲಿ ಓದುತ್ತಿರುವವರು ಪಿ ಎಚ್ ಡಿ ನೆಪದಲ್ಲಿ ತಮ್ಮ ಪ್ರಾಯ ಮರೆಮಾಚಿಕೊಂಡು ದಿನ ತಳ್ಳುತ್ತಿರುವವರಲ್ಲ. ತಾಂತ್ರಿಕ ವಲಯದ ವಿದ್ಯಾರ್ಥಿಗಳು ಸಣ್ಣ ಕಾರಣಕ್ಕೆ ಪ್ರತಿಭಟನೆ ಮಾಡುವುದೂ ಇಲ್ಲ, ಅವರಿಗೆ ರಾಜಕೀಯ ಬೇಕಾಗಿಯೂ ಇಲ್ಲ. ಇಂಥವರನ್ನೇ ತ್ರಿವರ್ಣಕ್ಕಾಗಿ ಎದ್ದು ನಿಲ್ಲಿಸಿದೆ ಎಂದರೆ ಅಲ್ಲಿನವರ ಭಾರತ ವಿರೋಧಿ ಭಾವ ಅದೆಷ್ಟು ಪ್ರಚೋದನಕಾರಿ ಆಗಿದ್ದಿರಬಹುದು?

ಅಂದಹಾಗೆ… ಇಂಥ ಅತ್ಯಾಚಾರ ಬೆದರಿಕೆಗಳು ಮಹಿಳಾವಾದದ ಚೌಕಟ್ಟಿಗೆ ಬರುವುದಿಲ್ಲವೇ? ನನ್ನ ರಾಷ್ಟ್ರಧ್ವಜ ಹಾರಿಸುತ್ತೇನೆಂಬುದು ಆಜಾದಿ- ಅಭಿವ್ಯಕ್ತಿ ಸ್ವಾತಂತ್ರ್ಯಗಳ ವ್ಯಾಖ್ಯೆಯಲ್ಲಿ ಬರುವುದಿಲ್ಲವೇ? ಕಂಡಲ್ಲಿ ಮೂತ್ರ ಮಾಡುವ ಆಜಾದಿ ಕೇಳಿದ್ದ ಕನ್ಹಯ್ಯ ಕುಮಾರನನ್ನು ಹೀರೋ ಮಾಡಿದವರೆಲ್ಲ ಈಗೆಲ್ಲಿ ಹೋಗಿದ್ದಾರೆ?

1 COMMENT

  1. Jammu and Kashmir suppose to be safest area in India because of large military force existance…. but People are afraid to live in that state.

Leave a Reply