ಚಿನ್ನಾಭರಣ ವ್ಯಾಪಾರಿಗಳಿಗೆ ಅನ್ಯಾಯವಾಯಿತು ಎನ್ನುತ್ತಿರುವ ರಾಹುಲ್ ಗಾಂಧಿ ಕಪ್ಪುಹಣದ ಪರವೇ?

ಡಿಜಿಟಲ್ ಕನ್ನಡ ಟೀಮ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರದ್ದೊಂದು ಸಿದ್ಧ ಮಾದರಿ. ಕೇಂದ್ರ ಸರ್ಕಾರದ ವಿರುದ್ಧ ಯಾರೇ ಪ್ರತಿಭಟಿಸುತ್ತಿದ್ದರೂ ಅಲ್ಲಿ ಹೋಗಿ ಒಂದು ಭಾಷಣ ಮಾಡಿ ಬರೋದು.

ಇದನ್ನೇ ಅವರು ಕೇಂದ್ರದ ಅಬಕಾರಿ ಸುಂಕ ವಿರುದ್ಧ ಪ್ರತಿಭಟಿಸುತ್ತಿರುವ ಚಿನ್ನಾಭರಣ ವ್ಯಾಪಾರಿಗಳ ವಿಷಯದಲ್ಲೂ ಪಾಲಿಸಿದ್ದಾರೆ.  35 ದಿನಗಳಿಂದಲೂ ಚಿನ್ನಾಭರಣ ವ್ಯಾಪಾರಿಗಳು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಸುತ್ತಿರುವ ಮುಷ್ಕರಕ್ಕೆ ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಆಡಿದ ವೀರಾವೇಶದ ಮಾತುಗಳು ಹೀಗಿದ್ದವು- ‘ಚಿನ್ನ ಮತ್ತು ವಜ್ರದ ಮೇಲೆ ಶೇ 1 ರಷ್ಟು ಅಬಕಾರಿ ಸುಂಕ ವಿಧಿಸಿ ಕೇಂದ್ರ ಸರ್ಕಾರ ಇವರನ್ನು ಕೊಲ್ಲಲು ಯತ್ನಿಸುತ್ತಿದೆ. ಮೇಕ್ ಇನ್ ಇಂಡಿಯಾ ಸಿಂಹ ಲಾಂಛನದ ಹಿಂದೆ ಇರೋರು ಕೇವಲ 5 ರಿಂದ 10 ದೊಡ್ಡ ಉದ್ಯಮಿಗಳು. ಅವರ ಹಿತಾಸಕ್ತಿಗೆ ಸಣ್ಣ ಉದ್ಯಮಿಗಳ ಕತ್ತು ಹಿಸುಕಲಾಗುತ್ತಿದೆ’ ಅಂತ ಬ್ಯಾಟಿಂಗ್ ಮಾಡಿದರು.

ವಿಚಿತ್ರ ಎಂದರೆ 2012ರ ಯುಪಿಎ ಸರ್ಕಾರವಿದ್ದಾಗ ಇದೇ ರೀತಿ ತೆರಿಗೆಯನ್ನು ಚಿನ್ನಾಭರಣ ವ್ಯಾಪಾರಿಗಳ ಮೇಲೆ ಹೇರಿತ್ತು. ಪ್ರತಿಭಟನೆ ಎದುರಾದ್ದರಿಂದ ಹಿಂದಕ್ಕೆ ಪಡೆಯಿತು. ಇಷ್ಟಕ್ಕೂ ಈ ವ್ಯಾಪಾರಿಗಳು ಶೇ. 1ರಷ್ಟು ಅಬಕಾರಿ ಸುಂಕಕ್ಕೆ ಈ ಪರಿ ಶೋಷಣೆಯ ರಾಗ ಹಾಡುತ್ತಿರುವುದೇಕೆ? 2 ಲಕ್ಷ ರುಪಾಯಿಗಿಂತ ಹೆಚ್ಚಿನ ವಹಿವಾಟಿಗೆ ಪಾನ್ ಸಂಖ್ಯೆ ಕಡ್ಡಾಯ ಎಂಬ ನಿಯಮ ಪಾಲಿಸಲು ಇವರಿಗೇನು ತೊಂದರೆ?

ಇವರ ಆರೋಪ ಇರುವುದು ಶೇ 1 ರಷ್ಟು ಅಬಕಾರಿ ಸುಂಕ ವಿಧಿಸಿದರೆ (6 ಕೋಟಿ ಗಿಂತ ಹೆಚ್ಚಿನ ವಹಿವಾಟಿಗೆ) ಅಬಕಾರಿ ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಎಂಬುದು. ಆದರೆ ಚಿನ್ನಾಭರಣದ ಕುಶಲ ಕಾರ್ಮಿಕರು, ಕಲಾಕಾರರು ಇವರ ಕಾರ್ಯಸ್ಥಳಗಳಿಗೆ ಹೋಗದಂತೆ ಅಬಕಾರಿ ಅಧಿಕಾರಿಗಳಿಗೆ ಸರ್ಕಾರ ಆಗಲೇ ಪ್ರತಿಬಂಧ ಹೇರಿದೆ. ವ್ಯಾಪಾರಿಗಳು ನೀಡುವ ವಹಿವಾಟಿನ ಲೆಕ್ಕದ ಆಧಾರದಲ್ಲಷ್ಟೇ ತೆರಿಗೆ ವಸೂಲಿ ಎಂಬ ಸ್ಪಷ್ಟನೆಯೂ ಕೇಂದ್ರದಿಂದ ಹಾಗೂ ಅಬಕಾರಿ ಇಲಾಖೆಯಿಂದಲೂ ಬಂದಿದೆ.

ಇಷ್ಟಾಗಿಯೂ ಅಪಸ್ವರ ಇದೆ ಎಂದರೆ ಇದಕ್ಕೆ ಕಾರಣ ಇವರು ಬಂಗಾರವನ್ನು ವಿವಿಧ ರೂಪದಲ್ಲಿ ಕಪ್ಪು ಹಣವನ್ನಾಗಿ ಮಾರ್ಪಾಡು ಮಾಡುತ್ತಿರುವುದು. ಒಬ್ಬರ ಬಳಿಯೇ ಹೆಚ್ಚು ಹೆಚ್ಚು ಚಿನ್ನವನ್ನು ಸಂಗ್ರಹಿಸಿಟ್ಟುಕೊಂಡಿರುವುದು. ಕೆಲವು ಸಂದರ್ಭಗಳಲ್ಲಿ ಕಲಬೆರಕೆಯ ಬಂಗಾರದ ಆಭರಣಗಳನ್ನು ಮಾರಾಟ ಮಾಡುವುದು. ಇವೆಲ್ಲವೂ ಕಪ್ಪು ಹಣದ ಸಂಗ್ರಹಣೆಗೆ ನೀಡುತ್ತಿರುವ ಕೊಡುಗೆ. ಹಾಗೇ 2 ಲಕ್ಷ ಅಥವಾ ಇದಕಿಂತಲೂ ಹೆಚ್ಚು ನಗದು ವಹಿವಾಟಿಗೆ ಪಾನ್ ಸಂಖ್ಯೆ ಕಡ್ಡಾಯಗೊಳಿಸಿರುವುದು ಇವರ ಕಳ್ಳ ವ್ಯವಹಾರಕ್ಕೆ ಕಡಿವಾಣ ಬಿದ್ದಂತಾಗಲಿದೆ.

ಮಾರ್ಚ್ 2 ರಿಂದ 20 ರ ವರೆಗೆ ನಡೆದ ಪ್ರತಿಭಟನೆಯ ಪರಿಣಾಮ 18 ಸಾವಿರ ಕೋಟಿ ರು ನಷ್ಟದಿಂದ ಬಳಲುತ್ತಿರುವುದಾಗಿ ಚಿನ್ನದ ವ್ಯಾಪಾರಿಗಳು ಹೇಳಿಕೊಂಡಿದ್ದಾರೆ. ಆದರೂ ಪ್ರತಿಭಟನೆಯ ಹಾದಿ ಬದಲಾಗಲಿಲ್ಲ. ಅಬಕಾರಿ ಅಧಿಕಾರಿಗಳಿಂದ ಯಾವುದೇ ಕಿರುಕುಳ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ್ದಲ್ಲದೇ, ಆಭರಣ ತಯಾರಿಕೆ ಫ್ಯಾಕ್ಟರಿಗಳಿಗೆ ಈ ಅಧಿಕಾರಿಗಳು ಭೇಟಿ ನೀಡುವಂತಿಲ್ಲ ಎಂಬ ಪ್ರತಿಬಂಧವನ್ನೂ ವಿಧಿಸಿದೆ. ಆದರೂ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಮಾರ್ಚ್ 21 ರ ನಂತರವೂ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಶೇ. 1ರ ಅಬಕಾರಿ ಸುಂಕ ಸೇರಿಕೊಂಡಾಗ ಇದನ್ನು ನಮೂದಿಸಲು ವ್ಯಾಪಾರಿಗಳು ಸರಿಯಾದ ಲೆಕ್ಕದ ಪಟ್ಟಿ ಇಡಬೇಕಾಗುತ್ತದೆ. ಲೆಕ್ಕ ಪರಿಶೋಧನೆಯಲ್ಲಿ ಕಳ್ಳದಾರಿಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂಬುದೇ ಈ ಪ್ರತಿಭಟನೆಗಳ ಹಿಂದಿರುವ ನಿಜ ದುಮ್ಮಾನವೇ ಹೊರತು, ಮತ್ಯಾವ ಕಾಳಜಿಗಳಿಲ್ಲ.

ತೆರಿಗೆ ವಂಚಿಸಿ ಗಳಿಸಿದ ಹಣವನ್ನು ಬಂಗಾರದ ರೂಪದಲ್ಲಿಟ್ಟುಕೊಳ್ಳುವುದು ಕಳ್ಳಹಣದ ಒಂದು ಮಾದರಿ. ಹಾಗೆಂದೇ ಬಹಳಷ್ಟು ಆಭರಣ ವ್ಯಾಪಾರಿಗಳು ಕಾರ್ಡ್ ಗಳ ಮೂಲಕ ಖರೀದಿಗೆ ಹಣ ಪಾವತಿಸುವುದನ್ನು ಅಷ್ಟಾಗಿ ಪ್ರೋತ್ಸಾಹಿಸುವುದಿಲ್ಲ. ಈ ಬಗೆಯಲ್ಲಿ ಹಣ ಪಾವತಿಸುವುದಕ್ಕೆ ಹೋದಾಗ ಹೆಚ್ಚುವರಿ ಶುಲ್ಕದ ಷರತ್ತು ವಿಧಿಸಿ ಹಿಂತೆಗೆಯುವಂತೆ ಮಾಡುತ್ತವೆ. ಆ ಬಗೆಯ ಪಾವತಿಗಳು ನಿಖರ ದಾಖಲೆಗಳನ್ನು ಬಿಟ್ಟುಹೋಗುತ್ತವೆ ಎಂಬ ಆತಂಕ. ತೆರಿಗೆ ಪ್ರಾಧಿಕಾರದ ವರದಿಯ ಪ್ರಕಾರ ಚಿನ್ನದ ಗಟ್ಟಿ ಮತ್ತು ಆಭರಣಗಳು ಕಪ್ಪು ಹಣದ ಸಂಗ್ರಹದಲ್ಲಿ 2 ನೇ ಸ್ಥಾನಪಡೆದಿದ್ದು, ರಿಯಲ್ ಎಸ್ಟೇಟ್ ಮೊದಲ ಸ್ಥಾನ ಪಡೆದಿದೆ.

ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ ಚಿನ್ನಾಭರಣಗಳ ಮೇಲೆ ಶೇ.1ರ ಅಬಕಾರಿ ಸುಂಕ ಶೋಷಣೆಯ ಸಂಗತಿ ಏನಲ್ಲ. ಇದರೊಂದಿಗೆ 2 ಲಕ್ಷ ವಹಿವಾಟಿಗೆ ಪಾನ್ ಕಾರ್ಡ್ ಕಡ್ಡಾಯವನ್ನು ವಿರೋಧಿಸುವ ಕಾರ್ಯಸೂಚಿಯನ್ನೂ ಜತೆಗಿರಿಸಿಕೊಂಡು ಈ ವ್ಯಾಪಾರಿಗಳೆಲ್ಲ ಪ್ರತಿಭಟನೆಗೆ ಕುಳಿತಿರುವುದೇ ನಿಜ ಉದ್ದೇಶವನ್ನು ಸಾರುತ್ತಿದೆ. ಈ ಮೊದಲಿನ 5 ಲಕ್ಷ ರು. ಮಿತಿಯನ್ನೇ ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ವ್ಯಾಪಾರಕ್ಕೆ ಕಿರಿಕಿರಿ ಎನ್ನುತ್ತಿದ್ದಾರಿವರು. ಅಲ್ಲ, 2 ಲಕ್ಷ ರು ಪಾವತಿಸುವಷ್ಟು ಶಕ್ತನಾಗಿರುವವನು ಪಾನ್ ಕಾರ್ಡ್ ಸಹ ಹೊಂದಿರಲಿ ಅಂತ ಬಯಸುವುದು ಕಿರಿಕಿರಿ ಕೊಟ್ಟಂತಾಗುತ್ತದೆಯೇ? ದೇಶಕ್ಕಾಗಿ ಅಷ್ಟಾದರೂ ಕಿರಿಕಿರಿ ಅನುಭವಿಸಲಿ, ಪರವಾಗಿಲ್ಲ.

ಪ್ರತಿಪಕ್ಷದಲ್ಲಿದ್ದು ಸರ್ಕಾರದ ಉತ್ತರದಾಯಿತ್ವ ಬಯಸುವುದು ರಾಹುಲ್ ಗಾಂಧಿ ವಿಷಯದಲ್ಲಿ ಸರಿಯೇ. ಆದರೆ, ಈ ಉತ್ತರದಾಯಿತ್ವವನ್ನು ಅವರು ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲದೇ ಚಿನ್ನಾಭರಣ ವ್ಯಾಪಾರಿಗಳಿಂದ ಹಿಡಿದು ಎಲ್ಲ ಉದ್ಯಮ, ವಹಿವಾಟುಗಳಲ್ಲೂ ಅಪೇಕ್ಷಿಸಬೇಕಾಗುತ್ತದೆ.

Leave a Reply