ಸಿದ್ದರಾಮಯ್ಯನವರ ಕೈ ಯಾವಾಗ್ಲೂ ರೇವಣ್ಣೋರ ಹೆಗಲ ಮೇಲಿರ್ತಿತ್ತು, ಅದೀಗ ತಲೆ ಮೇಲೆ ಹೋಗಿದ್ಯಾಕೆ..?

ಡಿಜಿಟಲ್ ಕನ್ನಡ ವಿಶೇಷ

ದೇವೇಗೌಡರ ಕುಟುಂಬದ ಜತೆ ಸಿದ್ದರಾಮಯ್ಯನವರಿಗೆ ಏನೇ ವೈಮನಸ್ಯ ಇರಬಹುದು, ಆದರೆ ಎಚ್.ಡಿ. ರೇವಣ್ಣನವರ ಬಗ್ಗೆ ಮೊದಲಿಂದಲೂ ಒಂಥರಾ ಪ್ರೀತಿ ಇತ್ತು. ಗೌಡರ ಕುಟುಂಬ ಸದಸ್ಯರ ವಿರುದ್ಧ ಎಷ್ಟೇ ಹಲ್ಲು ಮಸೆದರೂ, ಅವರ ಕೈ ಮಾತ್ರ ಯಾವಾಗಲೂ ರೇವಣ್ಣನವರ ಹೆಗಲ ಮೇಲಿರುತ್ತಿತ್ತು. ಅವರು ಜಿಡಿಎಸ್ ನಲ್ಲಿ ಇದ್ದಾಗಲಾಯ್ತು, ಸಿಎಂ ಮಾಡಲಿಲ್ಲ ಅಂತ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಮೇಲಾಯ್ತು, ಅಲ್ಲಿ ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ ಆದಮೇಲಾಯ್ತು, ಈ ಅವರ್ಣನೀಯ ಸ್ನೇಹ ಮಾತ್ರ ಆಬಾಧಿತವಾಗಿ ಮುಂದುವರಿದಿತ್ತು. ಅಂಥಾ ಸಂಬಂಧಕ್ಕೆ ಇದೀಗ ಬೆಂಕಿ ಬಿದ್ದಿದೆ.

ನಿಜ, ಎಲ್ಲರೂ ಆಶ್ಚರ್ಯಪಡುತ್ತಿದ್ದರು, ಗೌಡರ ಫ್ಯಾಮಿಲಿ ಮೆಂಬರ್ಸ್ ದಾರಿನೇ ಒಂದಾದರೆ ರೇವಣ್ಣ ಅವರದು ಮತ್ತೊಂದು ಅಂತ. ಈ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದ್ದವು. ಕ್ಷೇತ್ರದ ಕೆಲಸ ಇರಲಿ, ಬೇರಾವುದೇ ಕೆಲಸ ಇರಲಿ, ಒಬ್ಬ ಮಂತ್ರಿ, ಆಡಳಿತ ಪಕ್ಷದ ಶಾಸಕನ ಕೈಯಲ್ಲಿ ಮಾಡಿಸಲು ಆಗದ್ದನ್ನು ರೇವಣ್ಣ ಸಲೀಸಾಗಿ ಮಾಡಿಸಿಕೊಂಡು ಬರುತ್ತಿದ್ದರು. ಅವರ ಫೈಲ್ ಯಾವುದೂ ಪೆಂಡಿಂಗ್ ಇರ್ತಿರಲಿಲ್ಲ. ಸಿಎಂ ಮತ್ತು ರೇವಣ್ಣನವರ ಆತ್ಮೀಯತೆ ಕಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಮಂದಿ ಕೂಡ ಕರುಬುತಿದ್ದರು.

ಇವತ್ತೇನಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಕಾಂಗ್ರೆಸ್ ಜತೆ ಜೆಡಿಎಸ್ ಕೈಜೋಡಿಸಿದ್ದರೆ ಅದಕ್ಕೆ ಕಾರಣ ಇದೇ ರೇವಣ್ಣ. ಏಕೆಂದರೆ ನೂರು ಸ್ಥಾನ ಪಡೆದ ಬಿಜೆಪಿ ಜತೆ ಹೋಗೋಣ, ಕಾಂಗ್ರೆಸ್ ಸಹವಾಸ ಬೇಡ ಎಂಬುದು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ನಿಲುವಾಗಿತ್ತು. ಈ ಬಗ್ಗೆ ಅವರು ಬಿಜೆಪಿ ಮುಖಂಡ ಆರ್. ಅಶೋಕ್ ಜತೆ ಎರಡು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದರು. ಇನ್ನೇನು ಬಿಜೆಪಿ-ಜೆಡಿಎಸ್ ಮೈತ್ರಿ ಆಗಿಯೇ ಹೋಯಿತು ಎನ್ನುವಷ್ಟರಲ್ಲಿ ಅದಕ್ಕೆ ಹೊಗೆ ಹಾಕಿದ್ದು ಇದೇ ರೇವಣ್ಣ. ಕಾಂಗ್ರೆಸ್-ಜೆಡಿಎಸ್ ಪಾಲಿಕೆ ಆಳ್ವಿಕೆ ಹಂಚಿಕೊಳ್ಳಲು ಕಾರಣ ಆಗಿದ್ದು ಇದೇ ರೇವಣ್ಣ ಮತ್ತು ಸಿದ್ದರಾಮಯ್ಯ ಅವರ ಸ್ನೇಹ. ಅವತ್ತು ಗೌಡರು ಮತ್ತು ಕುಮಾರಸ್ವಾಮಿ ಹತ್ತಿರ ರೇವಣ್ಣ ಹಿಡಿದಿದ್ದ ಹಠ.

ಅಂತಾ ರೇವಣ್ಣ ಇದೀಗ ಸಿದ್ದರಾಮಯ್ಯ ಬಳಿ ಹಠಕ್ಕೆ ಬಿದ್ದಿದ್ದಾರೆ. ತಮ್ಮ ಪತ್ನಿ ಭವಾನಿ ಅವರು ಗೆದ್ದು ಬಂದಿರುವ ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೀಸಲು ಬದಲಾವಣೆ ಸಂಬಂಧ. ಈ ಹಠಕ್ಕೆ ರೇವಣ್ಣ ಅವರು ಇಟ್ಟಿರುವ ಪಣ ಹಿಂದೆ ಅವರೇ ಹಠ ಹಿಡಿದು ಏರ್ಪಡಿಸಿದ್ದ ಬಿಬಿಎಂಪಿ ಮೈತ್ರಿ!

ಹಾಸನ ಜಿಲ್ಲೆಯಲ್ಲಿ ಸಚಿವ ಎ.ಮಂಜು ಮತ್ತು ದೇವೇಗೌಡರ ಕುಟುಂಬದ ನಡುವೆ ಹಾವು-ಮುಂಗುಸಿಯಂತ ಖಡಾಖಡಿ ರಾಜಕೀಯ. ಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದ ಮಂಜು ಇದೀಗ ಮಂತ್ರಿ, ಜತೆಗೆ ಜಿಲ್ಲೆಯ ಉಸ್ತುವಾರಿಯೂ ಅವರ ಹೆಗಲಿಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲೂ ಜೆಡಿಎಸ್ ನ ಪಟೇಲ್ ಶಿವರಾಂ ಸೋಲು ಮಂಜು ಪಾರಮ್ಯ ಮುಂದುವರಿಸಿತ್ತು. ಇಂಥ ಸ್ಥಿತಿಯಲ್ಲಿ ಗೆದ್ದು ಬಂದಿರುವ ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವುದಾಗಲಿ, ರಾಜ್ಯ ಸಚಿವ ಸ್ಥಾನಮಾನದೊಂದಿಗೆ ತಮ್ಮಂತೆಯೇ ಗೂಟದ ಕಾರಲ್ಲಿ ಒಡಾಡುವುದನ್ನಾಗಲಿ ಸಹಿಸಿಕೊಳ್ಳಲು ಅವರಿಗಾಗಲಿಲ್ಲ. ಹೀಗಾಗಿ ಮೊದಲಿಗೆ ಜೆಡಿಎಸ್ ಸದಸ್ಯರನ್ನು ಖರೀದಿಸಿ ತಮ್ಮ ಮಗ ಮಂಥರ್ ಗೌಡ ಅವರನ್ನು ಅಧ್ಯಕ್ಷರನ್ನಾಗಿಸಲು ಪ್ರಯತ್ನ ಮಾಡಿದರು. ಅದು ಫಲಿಸದೇ ಹೋದಾಗ ಹತಾಶೆಗೆ ಬಿದ್ದು, ಅಧ್ಯಕ್ಷ ಸ್ಥಾನದ ಮೀಸಲು ನಿಗದಿಯಲ್ಲಿ ಆಟ ಆಡಿದ್ದಾರೆ.

ವಾಸ್ತವವಾಗಿ ಹಳೆಯ ವಿಶ್ವಾಸಕ್ಕೆ ಕಟ್ಟುಬಿದ್ದು, ಬಿಬಿಎಂಪಿ ಮೈತ್ರಿ ಋಣಸಂದಾಯಕ್ಕಾಗಿ ರೇವಣ್ಣ ಅವರ ಪತ್ನಿಗೆ ಅನುವಾಗುವಂತೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ನಿಗದಿ ಸಿದ್ದರಾಮಯ್ಯ ಇರಾದೆಯಾಗಿತ್ತು. ಹಾಗೆಂದು ರೇವಣ್ಣ ಅವರಿಗೆ ಭರವಸೆಯನ್ನೂ ಕೊಟ್ಟಿದ್ದರು. ಮಂಜು ಮಗ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗುತ್ತದೆ. ತಮಗಿರುವ ಸದಸ್ಯ ಬಲದಿಂದ ಪತ್ನಿಯನ್ನು ಅಧ್ಯಕ್ಷೆಯನ್ನಾಗಿ ಮಾಡಬಹುದು ಎಂಬುದು ರೇವಣ್ಣನವರ ಲೆಕ್ಕಾಚಾರವಾಗಿತ್ತು. ಆದರೆ ಅಷ್ಟೆಲ್ಲ ಕಷ್ಟಪಟ್ಟು ಹಾಸನದಲ್ಲಿ ಕಾಂಗ್ರೆಸ್ ಕೋಟೆ ಕಟ್ಟುತ್ತಿರುವ ತಮಗೆ ಇದರಿಂದ ‘ವ್ರತಭಂಗ’ ಆಗುತ್ತದೆ, ತಮ್ಮ ಮಾತು ಕೇಳದೆ ಭವಾನಿ ಅವರಿಗೆ ಅನುಕೂಲ ಮಾಡಿಕೊಟ್ಟರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಮಂಜು ಹಾಕಿದ ಬೆದರಿಕೆಗೆ ಮಣಿದ ಸಿದ್ದರಾಮಯ್ಯ ರೇವಣ್ಣ ಅವರಿಗೆ ‘ಕೈ’ ಎತ್ತಿದ್ದಾರೆ. ತತ್ಪರಿಣಾಮ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ.

ಹಾಗೇ ನೋಡಿದರೆ ವಾಚ್ ಹಗರಣ, ಭ್ರಷ್ಚಾಚಾರ ನಿಗ್ರಹ ದಳ (ಎಸಿಬಿ) ರಚನೆ ಮತ್ತಿತರ ಸಂಕಷ್ಟ ಸಮಯದಲ್ಲಿ ರೇವಣ್ಣ ಸರಕಾರದ ಬಗ್ಗೆ ಮೃದು ಧೋರಣೆ ಅನುಸರಿಸಿದ್ದರು. ಸಿದ್ದರಾಮಯ್ಯ ಬಗೆಗಿನ ಪ್ರೀತಿ ಹಾಗೂ ಕೆಲಸ-ಕಾರ್ಯಗಳಿಗೆ ಒದಗಿಬರುತ್ತಾರೆ ಎಂಬ ನಂಬಿಕೆ ಅವರನ್ನು ಈ ರೀತಿ ಕಟ್ಟಿಹಾಕಿತ್ತು. ಇದೀಗ ನಂಬಿಕೆ ಸುಳ್ಳಾಗಿದೆ. ಬಿಬಿಎಂಪಿ ಯಲ್ಲಿ ಮೈತ್ರಿ ಕಡಿದುಕೊಳ್ಳುವುದಷ್ಟೇ ಅಲ್ಲದೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲೂ ಸಂಭವನೀಯ ಮೈತ್ರಿಯಿಂದ ಹಿಂದೆ ಸರಿಯುವ ಬೆದರಿಕೆಯನ್ನು ರೇವಣ್ಣ ಹಾಕಿದ್ದಾರೆ. ಇದೀಗ ಪ್ರಕಟ ಆಗಿರುವ ಕರಡು ಮೀಸಲು ಪಟ್ಟಿ ಅಂತಿಮ ಆಗುವಷ್ಟರಲ್ಲಿ ಏನಾದರೂ ಕರಾಮತ್ತು ಆಗುತ್ತದೆಯೋ ಅಥವಾ ಬಿಬಿಎಂಪಿ ಮೈತ್ರಿ ಖತಂ ಆಗುತ್ತದೆಯೋ ನೋಡಬೇಕು.

Leave a Reply