ಸುದ್ದಿಸಂತೆ: ಐಐಟಿ ಶುಲ್ಕದಲ್ಲಿ ಖತರ್ನಾಕ್ ಏರಿಕೆ, ಮಲ್ಯಗೆ ಷರತ್ತು, ಐಪಿಎಲ್ ಮೊದಲ ಪಂದ್ಯ ಓಕೆ, ಇಲ್ಲ ಭಾರತ-ಪಾಕ್ ಮಾತುಕತೆ

ಯುಗಾದಿ ಮುನ್ನಾದಿನ ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಹೀಗೊಂದು ಬೇವು- ಮಾವು ಖರೀದಿ ಸಂಭ್ರಮ

ಮಲ್ಯ ಪ್ರಸ್ತಾಪ ತಿರಸ್ಕರಿಸಿದ ಎಸ್ ಬಿ ಐ, ಆಸ್ತಿ ವಿವರ ಸಲ್ಲಿಸುವಂತೆ ಕೋರ್ಟ್ ತಾಕೀತು

ಉದ್ದೇಶ ಪೂರ್ವಕ ಸುಸ್ತಿದಾರ ವಿಜಯ್ ಮಲ್ಯ ಅವರಿಗೆ ಎಪ್ರಿಲ್ 21ರೊಳಗೆ ತನ್ನ ಆಸ್ತಿಯ ಎಲ್ಲಾ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ. ಜೊತೆಗೆ ತನ್ನ ಮಡದಿ ಹಾಗೂ ಮಕ್ಕಳ ಹೆಸರಿನಲ್ಲಿ ಭಾರತ ಮತ್ತು ವಿದೇಶದಲ್ಲಿನ ಆಸ್ತಿಗಳ ಲೆಕ್ಕವನ್ನು ಕೊಡಬೇಕು ಎಂದಿದೆ. ಅಷ್ಟೇ ಅಲ್ಲದೇ ನ್ಯಾಯ ಪೀಠದ ಮುಂದೆ ಹಾಜರಾಗುವ ದಿನವನ್ನು ಅಂದೇ ತಿಳಿಸುವಂತೆಯೂ ತಾಕೀತು ಮಾಡಿದೆ.

ಕೆಲವು ದಿನಗಳ ಹಿಂದೆ ಬ್ಯಾಂಕುಗಳಿಗೆ ಮಲ್ಯ ನೀಡಿದ್ದ, ಸೆಪ್ಟಂಬರ್ ಒಳಗೆ 4 ಸಾವಿರ ಕೋಟಿಯನ್ನು ಪಾವತಿಸುವ ಪ್ರಸ್ತಾಪವನ್ನು ಎಸ್ ಬಿ ಐ  ತಿರಸ್ಕರಿಸಿದ್ದು, ಈ ಪ್ರಸ್ತಾಪಕ್ಕೆ ಯಾವುದೇ ಮೌಲ್ಯ ಇಲ್ಲ ಎಂದಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 26 ಕ್ಕೆ ಮುಂದೂಡಲಾಗಿದೆ.

ಐಐಟಿ ಶುಲ್ಕ ಭಾರಿ ಏರಿಕೆ, ಎಸ್ಸಿ/ಎಸ್ಟಿ, ದಿವ್ಯಾಂಗರು ಮತ್ತು ಕಡು ಬಡವರಿಗೆ ವಿನಾಯ್ತಿ.

ಇನ್ನೂ ಮುಂದೆ ಪ್ರತಿಷ್ಠಿತ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಬೇಕಾದರೆ ಈಗಿನ ಎರಡರಷ್ಟು ಶುಲ್ಕ ಪಾವತಿಸುವುದು ಅನಿವಾರ್ಯವಾಗಿದೆ. ಅಂದರೆ ಈ ಹಿಂದೆ ಪ್ರತಿ ವರ್ಷಕ್ಕೆ 90 ಸಾವಿರ ಇದ್ದ ಶುಲ್ಕ ಇನ್ನೂ ಮುಂದೆ 2 ಲಕ್ಷಕ್ಕೆ ಏರಿಕೆಯಾಗಿರುವ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯ ಗುರುವಾರ ಖಚಿತಪಡಿಸಿದೆ. ಎಸ್ ಸಿ, ಎಸ್ ಟಿ ಮತ್ತು ದಿವ್ಯಾಂಗರು ಹಾಗೂ ಅತ್ಯಂತ ಹಿಂದುಳಿತ ಕುಟುಂಬದ ವಿದ್ಯಾರ್ಥಿಗಳ ಪೈಕಿ ಯಾರ ಕುಟುಂಬದ ವರಮಾನ ವಾರ್ಷಿಕ 1 ಲಕ್ಷಕ್ಕಿಂತ ಕಡಿಮೆಯೋ ಅವರಿಗೆ ಸಂಪೂರ್ಣ ಶುಲ್ಕ ವಿನಾಯತಿ ಹಾಗೂ 5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಈ ವರ್ಗದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 66ರಷ್ಟು ಕಡಿತವಿರುವುದಾಗಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಎಂದಿದೆ.  ಕಳೆದ ತಿಂಗಳು ಐಐಟಿ ಕೌನ್ಸಿಲ್ ನ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಶುಲ್ಕವನ್ನು 3 ಲಕ್ಷಕ್ಕೆ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರನ್ವಯ ಗುರುವಾರ ನಡೆದ ಕೌನ್ಸಿಲ್ ಸಭೆಯಲ್ಲಿ 2 ಲಕ್ಷಕ್ಕೆ ಏರಿಸುವ ಮತ್ತು ಎಸ್ ಸಿ – ಎಸ್ ಟಿ ಮತ್ತು ದಿವ್ಯಾಂಗರಿಗೆ ಹಾಗೂ ಅತ್ಯಂತ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ.

ಐಪಿಎಲ್ ಮೊದಲ ಪಂದ್ಯಕ್ಕೆ ಹಸಿರು ನಿಶಾನೆ

ಮಹಾರಾಷ್ಟ್ರದಲ್ಲಿ ನೀರಿನ ಬಿಕ್ಕಟ್ಟು ವಿವಾದಕ್ಕೆ ಸಂಬಂಧಿಸಿ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಗಳಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ತಡೆಯನ್ನು ಒಂದು ಪಂದ್ಯಕ್ಕೆ ತೆರವುಗೊಳಿಸಿದೆ. ಏಪ್ರಿಲ್ 9 ರಂದು ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ತಂಡಗಳು ಸೆಣಸಲಿದ್ದು, ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ಲೋಕಸತ್ತಾ ಎಂಬ ಎನ್ ಜಿ ಒ ಸಂಸ್ಥೆ ಮತ್ತು ಇತರರು ಕ್ರಿಕೆಟ್ ಪಿಚ್ ಗೆ 60 ಲಕ್ಷ ಲೀಟರ್ ನಷ್ಟು ನೀರು ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಈ ಬಗ್ಗೆ ಏಪ್ರಿಲ್ 12 ರಂದು ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಮುಂದೆ ಮಹಾರಾಷ್ಟ್ರದಲ್ಲಿ ನಡೆಸುವ ಇತರ ಪಂದ್ಯಗಳ ಬಗೆಗಿನ ನಿರ್ಧಾರವನ್ನು ತಿಳಿಸುವಂತೆ ಸೂಚನೆ ನೀಡಿದೆ.

ಭಾರತ ಮತ್ತು ಪಾಕ್ ನಡುವಿನ ಶಾಂತಿ ಮಾತುಕತೆ ರದ್ದು

ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆ ರದ್ದುಗೊಂಡಿದೆ ಎಂದು ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸ್ತಿ ಗುರುವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ. ಕಾಶ್ಮೀರದ ವಿಚಾರದಲ್ಲಿ ಅಪನಂಬಿಕೆ ಉಂಟಾದ ಕಾರಣ ಉಭಯ ರಾಷ್ಟಗಳ ನಡುವೆ ಒಮ್ಮತ ಸಾಧ್ಯವಾಗಿಲ್ಲ ಎಂದಿದ್ದಾರೆ.

Leave a Reply