ಹೆಣ್ಣಿರಲಿ ಗಂಡಿರಲಿ ಗೊಂಬೆ ಒಂದೇ ಥರ ಇರಲಿ, ಆಟಿಕೆ ಕೊಡೋಕು ಲಿಂಗ ಮಾನದಂಡ ಆಗದಿರಲಿ

 

author-shamaಘಟನೆ ಒಂದು : ಸುಮಾರು ಎರಡು ತಿಂಗಳ ಹಿಂದೆ ಪರಿಚಿತರೊಬ್ಬರ ಮಗನ ಹುಟ್ಟುಹಬ್ಬವಿತ್ತು. ಹೋಗ್ತಾ “ಗಿಫ್ಟ್ ಸೆಂಟರ್ ಮುಂದೆ ಕಾರ್ ನಿಲ್ಸು, ಈ ಮಗುವಿಗೂ, ನಾಳೆ ಇರೋ ಇನ್ನೊಂದು ಹುಟ್ಟುಹಬ್ಬಕ್ಕೂ ಸೇರಿ ಖರೀದಿ ಮಾಡಬೇಕು” ಅಂದಳು ಜತೆಗಿದ್ದ ಗೆಳತಿ. ಆಕರ್ಷಕವಾದ ಪುಸ್ತಕಗಳ ಒಂದು ಸೆಟ್ ನನ್ನ ಕಣ್ಣಿಗೆ ಬಿತ್ತು. ಕಾರಣ ಇಷ್ಟೇ. ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ಆ ಸೆಟ್ ಒಂದು ಕೊಂಡರೆ ಇನ್ನೊಂದು ಫ್ರೀ. ಹೇಗಿದ್ದರೂ ಎರಡು ಮಕ್ಕಳಿಗೆ ಬೇಕಿತ್ತು. ಉಪಯುಕ್ತವೂ ಹೌದು ಎನಿಸಿ ಅದನ್ನೇ ಖರೀದಿಸುವಂತೆ ಪುಕ್ಕಟೆ ಸಲಹೆ ಕೊಟ್ಟೆ. ಒಂದು ಕ್ಷಣವೂ ಯೋಚಿಸದೆ ಥಟ್ಟನೇ ಬಂತು ಉತ್ತರ “ಈ ಬುಕ್ಸ್ ಎಲ್ಲ ಹುಡುಗೀರಿಗೆ ಸರಿ ಕಣೇ. ಗಂಡು ಮಕ್ಕಳಿಗೆ ಇದನ್ನ ಕೊಟ್ರೆ ಎಲ್ಲೋ ಮೂಲೆಗೆ ಬಿಸಾಕಿ ಹೋಗ್ತಾರಷ್ಟೆ. ಅವರಿಗೇನಿದ್ರೂ ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್ ಥರದ್ದಿದ್ರೆ ಸರಿ.” ಹೀಗಂತ ಮಕ್ಕಳೇನು ಹೇಳಿರಲಿಲ್ಲ. ಅವಳಷ್ಟಕ್ಕವಳೇ ನಿರ್ಧಾರ ಮಾಡಿಕೊಂಡಿದ್ದಳು. ತಿಳಿಸಿ ಹೇಳುವುದಕ್ಕದು ಸರಿಯಾದ ಸಮಯವಲ್ಲ ಅನ್ನಿಸಿ ಸುಮ್ಮನಾದೆ.

ಘಟನೆ ಎರಡು : ದಸರಾ ಹಬ್ಬದ ಸಮಯ. ಗೀತಕ್ಕ ಫೋನ್ ಮಾಡಿದ್ರು. “ಗೊಂಬೆ ಕೂರ್ಸಿದೀನಿ, ಮಕ್ಕಳನ್ನೂ ಕರ್ಕೊಂಡು ಮನೆಗೆ ಬಾ. ಮಕ್ಕಳಿಗೂ ಇವೆಲ್ಲ ಗೊತ್ತಾಗತ್ತೆ ಜತೆಗೆ ಖುಷಿ ಪಡ್ತಾರೆ”. ನಮ್ಮ ಹಾಗೇ ಇನ್ನೊಂದಷ್ಟು ಅಮ್ಮಂದಿರೂ ಮಕ್ಕಳೂ ಇದ್ದರು. ಹೊರಡುವ ಹೊತ್ತಿನಲ್ಲಿ ಅಮ್ಮಂದಿರ ಸಾಲಿಗೆ ಅರಶಿನ ಕುಂಕುಮ ಕೊಟ್ಟ ನಂತರ ಅಲ್ಲಿದ್ದ ಅಷ್ಟೂ ಮಕ್ಕಳಿಗೆ ಗಂಡು ಹೆಣ್ಣೆಂಬ ಬೇಧವಿಲ್ಲದೆ ಚೆಂದದೊಂದು ಕಾರು ಕೊಟ್ಟಿದ್ದರು. ಇನ್ನೇನು ಗೇಟಿಂದಾಚೆ ಬಂದಿದ್ದೇ ತಡ ಅಮ್ಮ ಒಬ್ಬಳು ಹೇಳಿದ್ದು ಕೇಳಿಸಿತ್ತು. “ಕೊಡೋದು ಕೊಡ್ತಾರೆ ಹೆಣ್ಣು ಮಕ್ಕಳಿಗೂ ಗಂಡು ಮಕ್ಳಿಗೂ ಒಂದೆ ಥರದ್ದು ಯಾಕಾದ್ರೂ ಕೊಡ್ತಾರೋ ? ಅವರವರಿಗೆ ಹೊಂದಾಣಿಕೆಯಾಗೋ ಥರದ ಆಟಿಕೆ ಕೊಟ್ರೆ ಚೆನ್ನಾಗಿರತ್ತೆ”. ಗುರುತು ಪರಿಚಯ ಇಲ್ಲದವರ ಮುಂದೆ ಮಾತಾಡಿ ಅರ್ಥ ಮಾಡಿಸೋದು ಸುಲಭವಲ್ಲ ಅಂದುಕೊಂಡು ನನ್ನ ಪಾಡಿಗೆ ನಾನು ಬಂದೆ.

ಒಂದು ಕಡೆ ಸಮಾನತೆಯ ಕೂಗು ಕಿವಿ ಹರಿಯುವ ಮಟ್ಟಕ್ಕೆ ಕರ್ಕಶವಾಗಿ ಕೇಳುತ್ತಿದೆ. ಇನ್ನೊಂದೆಡೆ ಬಹಳಷ್ಟು ಮನೆಯಂಗಳದಲ್ಲಿ ಸದ್ದೇ ಇಲ್ಲದೆ, ಅಸಲಿಗೆ ಅವರಿಗೆ ಅರಿವು ಕೂಡ ಇಲ್ಲದೇ ತಾರತಮ್ಯಕ್ಕೆ ಅಡಿಪಾಯ ಬೀಳುತ್ತಿದೆ. ಹುಟ್ಟಿದ ದಿನಕ್ಕೆ ತರುವ ಬಟ್ಟೆಯಲ್ಲೇ ಗಂಡುಮಗುವಿಗೆ ನೀಲಿ, ಹೆಣ್ಣು ಮಗುವಾದರೆ  ಗುಲಾಬಿ ಎಂಬ ಬಣ್ಣಗಳ ಮೂಲಕ ಶುರುವಾಗುವ ಈ ‘ಬೇರೆ’ಯಾಗಿ ಗುರುತಿಸುವ ಪ್ರಕ್ರಿಯೆ ಆರಂಭ. ಭಿನ್ನ ಲಿಂಗಿಗಳ ನಡುವೆ ದೇಹ ರಚನೆ ಒಂದು ಬಿಟ್ಟರೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಮಾನಸಿಕ, ದೈಹಿಕ, ಬೌದ್ಧಿಕ, ಭಾವನಾತ್ಮಕ ಹೀಗೆ ಯಾವುದೇ ಬೆಳವಣಿಗೆಯಾದರೂ ಒಂದೇ ತೆರನಾಗಿರುತ್ತದೆ. ಅಲ್ಲದೆ ಬೆಳವಣಿಗೆಯ ಮೈಲಿಗಲ್ಲುಗಳಿಗೂ ಎಳ್ಳಷ್ಟು ವ್ಯತ್ಯಾಸ ಇರುವುದಿಲ್ಲ. ಅಂಥದ್ದರಲ್ಲಿ ನಾವೇ ವ್ಯತ್ಯಾಸಗಳನ್ನ ಹುಟ್ಟು ಹಾಕಿ, ಇಂಥ ಆಟಿಕೆ ಇವರಿಗೆಂಬ ಲೇಬಲ್ ಹಚ್ಚಿ ಅದನ್ನಷ್ಟೇ ಕೊಟ್ಟು ಅವರ ಸರ್ವತೋಮುಖ ಬೆಳವಣಿಗೆ ನಿರೀಕ್ಷಿಸಿದರೆ ಫಲ ದಕ್ಕೀತೇ ಎನ್ನುವುದು ಗಂಭೀರವಾಗಿ ಗಮನಿಸಬೇಕಾದ ಅಂಶ.

ಯಾವ ಬೇಧವೂ ಗೊತ್ತಿಲ್ಲದ ವಿಶ್ವಮಾನವರಿಗೆ ಪುಟ್ಟ ಹೆಜ್ಜೆಗಳನ್ನಿಡುವ ಸಮಯದಿಂದಲೇ ಆಯ್ಕೆ ಗೊತ್ತಿರುತ್ತದೆ. ತಮ್ಮಿಷ್ಟವಾದ ಆಟಿಕೆಗಳನ್ನು ಆಯ್ಕೆ ಮಾಡಿ ಆಡಲೂ ಬಿಡದವರಿದ್ದಾರೆ. “ಹೆಣ್ಣು ಮಕ್ಕಳ ಥರ ಬರೀ ಟೆಡ್ಡಿ ಹಿಡ್ಕೊಂಡು ಆಡ್ತಾನೆ” “ಇವಳಾ ಗಂಡು ಹುಡುಗ್ರ ಥರ ಯಾವಾಗ್ಲೂ ಆ ಸ್ಪೈಡರ್ ಮ್ಯಾನ್ ಸೆಟ್ ಜತೆನೇ ಇರ್ತಾಳೆ” ಅನ್ನುವವರಿಗೂ ಕಡಿಮೆಯಿಲ್ಲ.

ಈ ನಿಟ್ಟಿನಲ್ಲಿ ಸಂಶೋಧನೆಗಳಾಗುತ್ತಲೇ ಇರುವ ದಿನಗಳಲ್ಲಿ ಮೊದಲ ದಿಟ್ಟ ಹೆಜ್ಜೆ ಇಟ್ಟಿದ್ದು ಲಂಡನ್ ನಗರದಲ್ಲಿನ ಗೊಂಬೆಗಳ ಐತಿಹಾಸಿಕ ಬ್ರಾಂಡ್ ಎಂದೇ ಹೆಸರಾದ ಹ್ಯಾಮ್ಲೇಸ್. 2011ರಲ್ಲಿ ತಮ್ಮಲ್ಲಿನ ಆಟಿಕೆಗಳ ಮೇಲಿದ್ದ ‘ಪಿಂಕ್’ & ‘ಬ್ಲೂ’ ಲೇಬಲ್ ತೆಗೆದು ಬಿಸಾಕಿ ಬೇರೆ ಬೇರೆ ‘ಥೀಮ್’ ಸೃಷ್ಟಿ ಮಾಡಿ ಅದಕ್ಕನುಗುಣವಾಗಿ ಆಟಿಕೆಗಳನ್ನು ವಿಂಗಡಿಸಿದರು ಲಿಂಗ ಸಮಾನತೆಗೆ ಮುನ್ನುಡಿ ಬರೆದರು.

ಇದಾಗಿ ವರ್ಷದ ನಂತರ 2012 ರಲ್ಲಿ ಇವರ ಹೆಜ್ಜೆಯನ್ನು ಹಿಂಬಾಲಿಸಿದ ಹ್ಯಾರೋಡ್ಸ್ ಕಂಪನಿ ಸುಮಾರು ಇಪ್ಪತ್ತಾರು ಸಾವಿರ ಚದರಡಿಗಳಲ್ಲಿ “Toy Kingdom” ಎಂಬ ಮಳಿಗೆ ತೆರೆದು ಆಟಿಕೆಗಳನ್ನು ವಿಷಯಗಳ ಆಧಾರದ ಮೇಲೆ ಪ್ರತ್ಯೇಕಿಸಿ ಹೊಸ ರೀತಿಯನ್ನು ಜಾರಿಗೆ ತಂದರು.

ಎಳೆಯ ಮಕ್ಕಳಿಗೆ ಬೇಕಿರುವುದು ಆಟಕ್ಕೊಂದು ವಸ್ತುವೇ ಹೊರತು ಅದರ ಮೇಲಿನ ಲೇಬಲ್ ಅಲ್ಲ. ಬೆಳವಣಿಗೆಗೆ ಪೂರಕವಾಗಿದೆಯೇ, ಅವರ ವಯಸ್ಸಿಗೆ ಹೊಂದಿಕೆಯಾಗುತ್ತದೆಯೇ, ಆಕರ್ಷಕವಾಗಿದೆಯೇ ಇಲ್ಲವೇ ಎನ್ನುವುದು ಮಾತ್ರ ಮಾನದಂಡವಾಗಬೇಕು ಹೊರತು ಇನ್ನಾವುದೂ ಅಲ್ಲ. ಹಾಗಂತ ಮಗನ ಕೈಯಿಂದ ಬ್ಯಾಟ್ ಮ್ಯಾನ್ ಕಿತ್ತುಕೊಂಡು ಮಗಳಿಗೆ ಕೊಡಲಿ, ಮಗಳ ಇಷ್ಟದ ಕಿಚನ್ ಸೆಟ್ ಬಲವಂತವಾಗಿ ಮಗನ ಎದುರು ಇಡಲಿ ಅಂತಲ್ಲ. ಆಯ್ಕೆ ಅವರದಿರಲಿ, ಮತ್ತು ಲಿಂಗ ಯಾವತ್ತೂ ಮಾನದಂಡವಾಗದಿರಲಿ ಅಷ್ಟೇ.

ಸದ್ಯಕ್ಕೆ ಜಗತ್ತಿಗೆ ಬೇಕಿರುವುದು ಹೆಣ್ಣು ದೇಹದ ಗಂಡೂ ಅಲ್ಲ, ಗಂಡು ತೊಗಲಿನೊಳಗೆ ಹೆಣ್ಣೂ ಅಲ್ಲ. ಹಾಗೆ ನೋಡುವುದನ್ನು ಬಿಟ್ಟು ಮಕ್ಕಳನ್ನು ಮಕ್ಕಳಂತೆ ಕಾಣುವುದನ್ನು ರೂಢಿಸಿಕೊಳ್ಳಬೇಕಿದೆ. ಗೊಂಬೆ ಮೂಲಕವಾಗಲೀ, ಆಟದ ಮೂಲಕವಾಗಲೀ ‘ಬೇರೆ’ ಎಂಬ ಭಾವ ಬಿತ್ತುವ ಬದಲಿಗೆ ಎರಡರ ಸಮರಸ ಬದುಕಿನ ‘ಬೇರು’ ಎಂಬುದನ್ನು ಮೊದಲ ದಿನದಿಂದಲೇ ಅರ್ಥ ಮಾಡಿಸುವ ವಾತಾವರಣ ಸೃಷ್ಟಿ ಮಾಡುವತ್ತ ಗಂಭೀರವಾಗಿ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಸಾಗಲಿ ಎಂಬುದೊಂದೇ ಆಶಯ.

Leave a Reply