‘ಬಂಗಾರದ ಮನುಷ್ಯ’ ರಾಜಕುಮಾರ್ ಕುರಿತ ಕೃತಿಗೆ ಬಂಗಾರದ ಕಮಲ

sridharamurthyಎನ್.ಎಸ್.ಶ್ರೀಧರ ಮೂರ್ತಿ

ಚಲನಚಿತ್ರ ಕ್ಷೇತ್ರಕ್ಕಾಗಿ ನೀಡುವ ರಾಷ್ಟ್ರಪ್ರಶಸ್ತಿಗಳಲ್ಲಿ ನಾಲ್ಕು ವಿಭಾಗಗಳಿರುತ್ತವೆ. ದಾದಾ ಸಾಹೇಬ್ ಫಾಲ್ಕ್ ಪ್ರಶಸ್ತಿ, ಕಥಾ ಚಿತ್ರಗಳಿಗೆ ನೀಡುವ ಪ್ರಶಸ್ತಿ ಇವೆರಡೂ ಎಲ್ಲರಿಗೂ ಗೊತ್ತು ಮತ್ತು ಈ ವಿಭಾಗದಲ್ಲಿ ದೊರಕುವ ಪ್ರಶಸ್ತಿಗಳಿಗೆ ದೊಡ್ಡ ಪ್ರಮಾಣದ ಪ್ರಚಾರವೂ ಸಿಕ್ಕುತ್ತದೆ. ಇನ್ನೆರಡು ಪುಸ್ತಕ ಮತ್ತು ಲೇಖನ ವಿಭಾಗ ಮತ್ತು ಸಾಕ್ಷಚಿತ್ರ ಮತ್ತು ಕಿರುಚಿತ್ರ ವಿಭಾಗ.  ಈ ಕ್ಷೇತ್ರದಲ್ಲಿ ದೊರಕುವ ಪ್ರಶಸ್ತಿಗಳಿಗೆ ಹೆಚ್ಚಿನ ಪ್ರಚಾರ ಸಿಕ್ಕುವುದಿಲ್ಲ.   ಕಡೆಗಣಿತ  ವಿಭಾಗಗಳಲ್ಲಿ ಈ ವರ್ಷ ಕನ್ನಡಿಗರಿಗೆ ಪ್ರಶಸ್ತಿಗಳು ದೊರಕಿವೆ. ಪುಸ್ತಕ ವಿಭಾಗದಲ್ಲಿ ದೊಡ್ಡ ಹುಲ್ಲೂರು ರುಕ್ಕೋಜಿಯವರ ‘ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ’ ಕೃತಿಗೆ ಸ್ವರ್ಣ ಕಮಲದ ಗೌರವ ದೊರಕಿದ್ದ. ಇದು ಡಾ.ಕೆ.ಪುಟ್ಟಸ್ವಾಮಿಯವರ ‘ಸಿನಿಮಾಯಾನ’ದ ನಂತರ ಪುಸ್ತಕ ವಿಭಾಗದಲ್ಲಿ ಕನ್ನಡಕ್ಕೆ ದೊರಕುತ್ತಿರುವ ಎರಡನೇ ಸ್ವರ್ಣಕಮಲ.  ಕಿರುಚಿತ್ರ ವಿಭಾಗದಲ್ಲಿ ‘ಸವಾರಿ’ ಖ್ಯಾತಿಯ ನಿದೇಶಕ ಜಾಕೋಬ್ ವರ್ಗೀಸ್‍ ಅವರ ‘ಡ್ರಿಬ್ಲಿಂಗ್ ವಿತ್ ದೈರ್ ಪ್ಯೂಚರ್’ಗೆ ರಜತ ಕಮಲದ ಗೌರವ ದೊರಕಿದೆ. ಹಾಗೆ ಹೆಮ್ಮೆಯ ಕನ್ನಡ ನಿದೇಶಕ ಗಿರೀಶ್ ಕಾಸರವಳ್ಳಿಯವರನ್ನು ಕುರಿತ ವ್ಯಕ್ತಿಚಿತ್ರ ‘ಲೈಫ್ ಇನ್ ಮೆಟಾಫರ್‍’ಗಾಗಿ ರಜತ ಕಮಲ ಗೌರವ ದೊರಕಿದೆ. ಈ ಪ್ರಶಸ್ತಿಗಳಿಗೆ ಕನ್ನಡ ಪತ್ರಿಕೆಗಳಲ್ಲಿಯೇ ಮಾಹಿತಿ ದೊರಕದಿರುವುದನ್ನು ನೋಡಿದಾಗ ಈ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡುವುದು ಅಗತ್ಯ ಎನ್ನಿಸುತ್ತದೆ.

ಏಪ್ರಿಲ್ ತಿಂಗಳು ಎಂದರೆ ಅದು ಕನ್ನಡಿಗರ ಪಾಲಿಗೆ ರಾಜ್ ಕುಮಾರ್ ತಿಂಗಳೇ! ಅಣ್ಣವ್ರು ಹುಟ್ಟಿದ್ದ ಮತ್ತು ನಮ್ಮನ್ನು ಅಗಲಿದ ದಿನಗಳೆರಡೂ ಈ ತಿಂಗಳಿನಲ್ಲಿಯೇ ಬರುವುದು ಇದಕ್ಕೆ ಕಾರಣ. ರಾಜ್ ಕುಮಾರ್ ಅವರು ಕೇವಲ ಒಬ್ಬ ಸ್ಟಾರ್ ಆಗಿದ್ದರೆ ಇಂತಹ ಮಹತ್ವ ಬರುತ್ತಿರಲಿಲ್ಲ. ಬದಲಾಗಿ ಅವರು ನಮ್ಮ ಸಂಸ್ಕೃತಿಯ ರೂಪಕವಾಗಿದ್ದರು. ಮೌಲ್ಯಗಳ ಪ್ರತಿನಿಧಿಯಾಗಿದ್ದರು. ರಾಜ್ ಕುಮಾರ್ ಅವರ ಕುರಿತು ಒಂದು ಅಂದಾಜಿನಂತೆ ಈವರೆಗೂ 180ಕ್ಕೂ ಹೆಚ್ಚು ಕೃತಿಗಳು ಬಂದಿವೆ. ಆದರೆ ಅವುಗಳಿಗೆ ಹೋಲಿಸಿದರೆ ದೊಡ್ಡ ಹುಲ್ಲೂರು ರುಕ್ಕೋಜಿಯವರ ಕೃತಿಯ ಸ್ವರೂಪವೇ ಬೇರೆ. ಇದು ಗಾತ್ರದ ದೃಷ್ಟಿಯಿಂದ ಮಾತ್ರವಲ್ಲ ಗುಣಮಟ್ಟದ ದೃಷ್ಟಿಯಿಂದಲೂ ಬೃಹತ್ ಕೃತಿಯೇ ಸರಿ. ಇಲ್ಲಿ ಮೂರು ನೆಲೆಯ ವಿಶ್ಲೇಷಣೆ ಇದೆ, ಒಂದು ಹಂತದಲ್ಲಿ ರಾಜ್ ಕುಮಾರ್ ಅವರ ಕುರಿತ ವಿವರಗಳಿವೆ, ಇನ್ನೊಂದು ಹಂತದಲ್ಲಿ ಕನ್ನಡ ಚಿತ್ರರಂಗದ ಪರಂಪರೆಯ ಚಿತ್ರಣವಿದೆ. ಇನ್ನೊಂದು ನೆಲೆಯಲ್ಲಿ ರಾಜ್ ‍ಕುಮಾರ್ ಅವರನ್ನು ಹತ್ತಿರದಿಂದ ಕಂಡ 142 ಮಂದಿಯ ಅನುಭವಗಳ ದಾಖಲಾತಿ ಇದೆ.  ಈ ಮೂರೂ ನೆಲೆಗಳೂ ಪ್ರತ್ಯೇಕವಾಗಿಲ್ಲ ಒಂದಕ್ಕೊಂದು ಬೆಸೆದುಕೊಂಡಂತೆಯೇ ಸಾಗುತ್ತದೆ. ಇಲ್ಲಿ ರಾಜ್ ಕುಮಾರ್ ಅವರ ಕುರಿತ ಭಾವುಕತೆ ಇಲ್ಲ, ಅತಿರಂಜಿತ ಚಿತ್ರಣಗಳಿಲ್ಲ, ಅಂಕಿ-ಅಂಶಗಳ ಕಾರಾಮತ್ತು ಇಲ್ಲ. ರುಕ್ಕೋಜಿಯವರ ಉದ್ದೇಶ ಕೇವಲ ಜೀವನ ಚರಿತ್ರೆಯನ್ನು ಹೇಳುವುದು ಮಾತ್ರ ಅಲ್ಲವೇ ಅಲ್ಲ. ಪ್ರತಿಘಟನೆಯ ಹಿಂದಿನ ಸಾಂಸ್ಕೃತಿಕ ನೆಲೆಯನ್ನು ಹಿಡಿಯುವ ತಾಳ್ಮೆ ಅವರಿಗಿದೆ, ಅನುಭವವನ್ನು ಸಿದ್ದಾಂತದ ಚೌಕಟ್ಟಿನೊಳಗೆ ಇಡುವ ಸೂಕ್ಷ್ಮತೆ ಇದೆ. ಈ ಕಾರಣದಿಂದಲೇ ಇದು ಆತ್ಮ ಚರಿತ್ರೆಯ ಮಿತಿಯನ್ನು ದಾಟಿ ವಿಶ್ವಕೋಶದ ಸ್ವರೂಪವನ್ನು ಪಡೆದುಕೊಂಡಿದೆ.

ದೊಡ್ಡ ಹುಲ್ಲೂರು ರುಕ್ಕೋಜಿಯವರ ಕೃತಿ ರಚನೆಯ ಶ್ರಮ ಕೂಡ ಅಸಾಧಾರಣವಾದದ್ದು. ಈ ಕೃತಿ ರಚನೆಗಾಗಿಯೇ ಅವರು ತಮ್ಮ ಜೀವನದ ಹದಿನೈದು ಅಮೂಲ್ಯ ವರ್ಷಗಳನ್ನು ಕಳೆದಿದ್ದಾರೆ. 97 ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಅದಕ್ಕಾಗಿ ಕಚೇರಿಯನ್ನು ಕೂಡ ತೆರೆದಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಸಂಗ್ರಹಿಸಿ ಅದರಲ್ಲಿ 8,730 ಚಿತ್ರಗಳನ್ನು ಬಳಸಿಕೊಂಡಿದ್ದಾರೆ. 2148 ಪುಟಗಳನ್ನು ಎರಡು ಸಂಪುಟದಲ್ಲಿ ಒಳಗೊಂಡಿರುವ  ಈ ಕೃತಿಯ ಭೌತಿಕ ತೂಕವೇ ಹತ್ತು ಕಿಲೋಗ್ರಾಂ. ಒಂದು ಕೃತಿ ರಚನೆಗಾಗಿಯೇ ತಮ್ಮ ಜೀವನವನ್ನು ಗಂಧದಂತೆ ತೇಯುವುದು ಸಾಮಾನ್ಯವಾದ ಸಾಧನೆಯಲ್ಲ, ಅದಕ್ಕೆ ಸ್ವರ್ಣ ಕಮಲ ಅರ್ಹ ಗೌರವವಾಗಿ ದೊರಕಿದೆ. ಆದರೆ ಈ ಮನ್ನಣೆ ಇಲ್ಲಿಗೇ ನಿಲ್ಲಬಾರದು. ಕನ್ನಡಿಗರ ಕೈಗೆ ಎಣಕುವ ದರದಲ್ಲಿ ಈ ಕೃತಿ ದೊರಕುವಂತಾಗಬೇಕು. ಇದರ ಜೊತೆಗೆ ಇನ್ನೊಂದು ಮುಖ್ಯವಾದ ಸಂಗತಿ ಇದೆ. ಇದು ವೇಗದ ಯುಗ ಸುದೀರ್ಘ ಕೃತಿಗಳನ್ನು ಓದುವ ವ್ಯವಧಾನ, ತಾಳ್ಮೆ ಹೆಚ್ಚಿನವರಿಗಿಲ್ಲ. ಇದಕ್ಕಾಗಿ ತಮ್ಮ ಸಂಶೋಧನೆಯ ಮುಖ್ಯ ಅಂಶಗಳನ್ನು ಬಳಸಿ ಸುಮಾರು ಇನ್ನೂರು ಪುಟಗಳ ಪುಟ್ಟ ಕೃತಿಯನ್ನು ರುಕ್ಕೋಜಿಯವರು ರಚಿಸ ಬೇಕು. ಇದರಿಂದ ಎಲ್ಲಾ ಹಂತದ ಓದುಗರಿಗೂ ಅವರ ಪರಿಶ್ರಮದ ಫಲ ತಲುಪಿದಂತಾಗುತ್ತದೆ.

ಇದೇ ಹಿನ್ನೆಲೆಯಲ್ಲಿ ಕನ್ನಡದಲ್ಲಿನ ಚಲನಚಿತ್ರದ ಕುರಿತ ಬರವಣಿಗೆಗಳ ಕುರಿತೂ ಒಂದು ಮುಖ್ಯವಾದ ಸಂಗತಿಯನ್ನು ಹೇಳಲೇ ಬೇಕು. ಹತ್ತು ವರ್ಷದ ಹಿಂದಿನವರೆಗೂ  ಕನ್ನಡದಲ್ಲಿ ಸಿನಿಮಾ ಕುರಿತ ಪುಸ್ತಕಗಳೇ ಇರಲಿಲ್ಲ.  ಆಗ ಅಂಕಿ-ಅಂಶಗಳು, ವ್ಯಕ್ತಿ ಚಿತ್ರಗಳು ಬರಲಾರಂಭಿಸಿದ್ದು ಸಮಾಧಾನ ತಂದಿತ್ತು.  ಆದರೆ ಇಂದಿಗೂ ಈ ಬರವಣಿಗೆಯ ಕ್ರಮದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಒಳನೋಟಗಳು, ಸಾಂಸ್ಕೃತಿಕ ಚಿತ್ರಣ, ತುಲನಾತ್ಮಕ ಅಧ್ಯಯನ ಇವುಗಳು ನಮ್ಮಲ್ಲಿ ನಡೆದೇ ಇಲ್ಲ ಎನ್ನ ಬಹುದು. ಹಿಂದಿ ಚಿತ್ರರಂಗದ ಕುರಿತು ಹಲವು ಸೊಗಸಾದ ಗ್ರಂಥಗಳು ಬಂದಿವೆ, ಭಾರತೀಯ ಭಾಷೆಗಳಲ್ಲಿ ಕೂಡ ಬಂದಿದೆ. ಎಸ್.ರಾಜೇಶ್ವರ ರಾವ್ ಸಿಂಧು ಭೈರವಿ ರಾಗವನ್ನು ಬಳಸಿದ ಕ್ರಮದ ಬಗೆಗೇ ಅಧ್ಯಯನಗಳು ನಡೆದಿವೆ, ಚಿತ್ರಗೀತೆಗಳಲ್ಲಿನ ಮಾಲ್‍ ಕೌಂಸ್ ರಾಗದ ಬಳಕೆ ಕುರಿತು ಕೃತಿ ಬಂದಿದೆ, ಛಾಯಾಗ್ರಹಣದ ತಂತ್ರಗಾರಿಕೆ ಬಗ್ಗೆ, ಚಿತ್ರಕಥೆಗಳಲ್ಲಿನ ಪ್ರಯೋಗಗಳ ಕುರಿತು, ಸಂಕಲನದಲ್ಲಿನ ಚಲನಶೀಲತೆ ಕುರಿತು ಅಧ್ಯಯನಗಳಾಗಿವೆ. ಇದನ್ನು ಗಮನಿಸಿದರೆ ನಾವು ಎಷ್ಟು ಹಿಂದಿದ್ದೇವೆ ಎನ್ನುವುದರ ಅರಿವಾಗುತ್ತದೆ. ದೊಡ್ಡ ಹುಲ್ಲೂರು ರುಕ್ಕೋಜಿಯವರಿಗೆ ದೊರೆತಿರುವ ಸ್ವರ್ಣ ಕಮಲ ಕೇವಲ ಹೆಮ್ಮೆಯ ಭಾವನೆಗೆ ಸೀಮಿತವಾಗ ಬಾರದು ಇಂತಹ ವ್ಯಾಪಕ ಅಧ್ಯಯನಗಳಿಗೆ ನಾಂದಿ ಹಾಡ ಬೇಕು ಅಂತೆಯೇ ಕನ್ನಡ ಚಿತ್ರಗಳ ಕುರಿತು ಇಂಗ್ಲೀಷ್‍ನಲ್ಲಿ ಕೂಡ ಕೃತಿಗಳು ಬರಬೇಕು ಆಗ ಮಾತ್ರವೇ ನಮ್ಮ ಸಾಧನೆಗಳು ಜಾಗತಿಕ ಮನ್ನಣೆಯನ್ನು ಪಡೆಯುವುದು ಸಾಧ್ಯವಾಗುತ್ತದೆ.

Leave a Reply