ಯುಗಾದಿಯಲ್ಲಿ ನಿಂತು ನಾವು ಗುರುತಿಸಬಹುದಾದ ಔದ್ಯಮಿಕ ಬದಲಾವಣೆ, ಬ್ರಾಂಡಿಂಗ್ ನಲ್ಲಿ ಬಾಬಾಗಳ ಬಲವರ್ಧನೆ!

ಡಿಜಿಟಲ್ ಕನ್ನಡ ವಿಶೇಷ

ಬಾಬಾ ರಾಮ್ ದೇವ್ ಮತ್ತು ಪತಂಜಲಿ ಎಂಬ ಹೆಸರುಗಳು ಸದ್ಯ ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಸೃಷ್ಟಿಸಿರುವ ಅಲೆ ವಿದೇಶಿ ಕಂಪನಿಗಳ ನಿದ್ದೆ ಕೆಡಿಸಿರುವುದು ಸುಳ್ಳಲ್ಲ. ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ಇಂಡಿಯಾ (BARC) ಟಿವಿ ಚಾನೆಲ್ ಗಳಿಗೆ ಪ್ರತಿವಾರ ರೇಟಿಂಗ್ ಕೊಡುವುದಲ್ಲದೇ, ಜಾಹೀರಾತಿನಲ್ಲಿ ಮುಂದಿರುವ 10 ಅಗ್ರಶ್ರೇಣಿಯ ಬ್ರಾಂಡ್ ಗಳನ್ನೂ ಕೊಡುತ್ತದೆ. ಇತ್ತೀಚಿನ ಹಲವು ವಾರಗಳಲ್ಲಿ, ಎಲ್ಲ ಬಹುರಾಷ್ಟ್ರೀಯ ಕಂಪನಿಗಳ ಬ್ರಾಂಡ್ ಹಿಂದಿಕ್ಕಿ ಪತಂಜಲಿಯೇ ಅಗ್ರಸ್ಥಾನದಲ್ಲಿದೆ.

barc

ಮಾಹಿತಿ ಸ್ಫೋಟಕ್ಕೆ ತೆರೆದುಕೊಳ್ಳುತ್ತಲೇ ಅದರೊಂದಿಗೆ ಜಾಹೀರಾತುಗಳಿಗೂ ಒಡ್ಡಿಕೊಳ್ಳುತ್ತಿರುವ ಗ್ರಾಹಕ, ನಿಧಾನವಾಗಿ ‘ಸಾಂಪ್ರದಾಯಿಕ’ ಮುದ್ರೆಯ ವಸ್ತುಗಳಿಗೆ ಪುರಸ್ಕರಿಸುತ್ತಿರುವ ಟ್ರೆಂಡ್ ಒಂದು ಕಾಣಿಸಿಕೊಳ್ಳುತ್ತಿದೆ.

ಬಾಬಾ ರಾಮ್ ದೇವ್ ರ ಪತಂಜಲಿ ಮಾರ್ಗದಲ್ಲೇ ಗ್ರಾಹಕ ಉತ್ಪನ್ನಗಳ ಮಾರುಕಟ್ಟೆ ಅಲ್ಲಲ್ಲಿ ಸೃಷ್ಟಿಯಾಗುತ್ತಿದ್ದು, ಜನಪ್ರಿಯತೆ ಗಳಿಸಿರುವ ಬಾಬಾ, ಸ್ವಾಮೀಜಿ, ಗುರೂಜಿಗಳೇ ಬ್ರಾಂಡ್ ಗುರುಗಳಾಗಿಯೂ ಹೊರಹೊಮ್ಮುತ್ತಿರುವುದು ಒಂದು ವಿಶೇಷ.

ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ ರವಿಶಂಕರ್ ಗುರೂಜಿ ಅವರ ಶ್ರೀ ಶ್ರೀ ಆಯುರ್ವೆದ ಎಂಬ ಹೆಸರಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇತ್ತೀಚೆಗೆ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. 2003 ರಲ್ಲೇ ಶ್ರೀ ಶ್ರೀ ಆಯುರ್ವೇದ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದರೂ ಹೆಚ್ಚು ಪರಿಚಿತವಿರಲಿಲ್ಲ. ಆದರೆ ಈಗ ಎಲ್ಲರಿಗೂ ತಲುಪಿಸಲು ವಿಸ್ತರಣೆಯ ಚಿಂತನೆ ನಡೆಸಿದ್ದು, 2017 ರ ವೇಳೆಗೆ 2700 ಮಳಿಗೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.

sri sri1

ಮತ್ತೊಬ್ಬ ಆಧ್ಯಾತ್ಮಿಕ ಗುರು ಗುರ್ ಮಿಠ್ ರಾಮ್ ರಹೀಮ್ ಸಿಂಗ್ ಕೂಡ ಸ್ವದೇಶಿ ಮತ್ತು ಸಾವಯವ ಎಂಬ ಹೆಸರಿನಲ್ಲಿ ಕಳೆದ ಫೆಬ್ರವರಿಯಲ್ಲಿ 150 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇವುಗಳಲ್ಲಿ ಬಹುತೇಕ ದಿನಬಳಕೆಯ ವಸ್ತುಗಳಾಗಿದ್ದು, ಅಕ್ಕಿ, ಉಪ್ಪಿನಕಾಯಿ ಮತ್ತು ನೀರಿನ ಬಾಟಲ್ ಸೇರಿದಂತೆ ಹಲವು ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿವೆ.

ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್ ಸಹ ಸುಗಂಧದ ವಸ್ತುಗಳು, ಟೀಶರ್ಟ್, ಉಪನ್ಯಾಸದ ಧ್ವನಿಮುದ್ರಿಕೆಗಳು ಇವುಗಳನ್ನು ಒಳಗೊಂಡ ವ್ಯಾಪಾರ ಮಾದರಿಯೊಂದನ್ನು ಹೊಂದಿದೆ. ಮಾಲ್ ಗಳಲ್ಲಿ ಇಶಾದ ಕಿರು ಅಂಗಡಿಗಳು ಕಾಣಲು ಸಿಗುತ್ತವೆ.

ಆಯಾ ಪ್ರದೇಶಗಳಲ್ಲಿ ಜನರ ನಡುವೆ ಗುರುತಿಸಿಕೊಂಡಿರುವ ಹಲವು ಸ್ವಾಮೀಜಿಗಳು ಸ್ಥಳೀಯವಾಗಿ ಇಂಥ ಮಾರುಕಟ್ಟೆ ಹಾದಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೊಚಸನ್ವಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ತಾ (ಬಾಪ್ಸ್) ಮತ್ತು ಪುದುಚರಿಯ ಶ್ರೀ ಅರಬಿಂದೋ ಆಶ್ರಮದ ಉದ್ಯಮ ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್ಎಂಸಿಜಿ) ನಲ್ಲಿ ಸ್ಥಾನ ಪಡೆದಿವೆ. ಬಾಪ್ಸ್ ಉತ್ಪನ್ನಗಳು ಭಾರತ ಸೇರಿದಂತೆ ಯುಎಸ್ ಮತ್ತು ಯುಕೆಗಳಲ್ಲಿ ಮಾರಾಟವಾಗುತ್ತಿವೆ.

ಪಾರಂಪರಿಕ ವೈದ್ಯ ಪದ್ದತಿಯಾದ ಆಯುರ್ವೇದ, ಇದರಡಿಯಲ್ಲಿ ತಯಾರಾದ ಉತ್ಪನ್ನಗಳಿಂದಲೇ ಸಾಕಷ್ಟು ಸಂಸ್ಥೆಗಳು ಉದ್ಯಮದಲ್ಲಿ ಪ್ರಯೋಗ ನಡೆಸುತ್ತಿದ್ದು, ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಪ್ರಚಾರ ಮತ್ತು ಮಾರಾಟ ಪ್ರಾರಂಭಿಸುತ್ತಿದ್ದಾರೆ. ಇದು ಸದ್ಯ ಚಿಲ್ಲರೆ ಮಾರುಕಟ್ಟೆಯ ಮೂಲಕ ಜೀವ ಪಡೆದುಕೊಳ್ಳುತ್ತಿದ್ದು, ಪತಾಂಜಲಿಗೆ ಸಿಕ್ಕ ಯಶಸ್ಸಿನಿಂದ ಹಲವು ಸಂಸ್ಥೆಗಳು ಸ್ಫೂರ್ತಿ ಪಡೆದಿವೆ.

ಭಾರತೀಯ ಎಫ್ಎಂಸಿಜಿ ಕಂಪನಿಗಳ 2015 ಆರ್ಥಿಕ ವರ್ಷದಲ್ಲಿ ಡಾಬರ್ ₹ 5431 ಕೋಟಿ, ಮರೀಕಾ ₹ 4681 ಕೋಟಿ, ಗೊದ್ರೇಜ್ ಗ್ರಾಹಕ ಉತ್ಪನ್ನಗಳು ₹ 4429 ಕೋಟಿ, ಜಿ ಎಸ್ ಕೆ ಗ್ರಾಹಕ ಆರೋಗ್ಯ ಉತ್ಪನ್ನಗಳು ₹ 4307 ಕೋಟಿ, ಹಿಮಾಮಿ ₹ 2030 ಕೋಟಿ, ಪತಾಂಜಲಿ ₹ 2 ಸಾವಿರ ಕೋಟಿ, ಜೋತಿ ಲ್ಯಾಬೋರೇಟರೀಸ್ ₹ 1437 ಕೋಟಿ ಆದಾಯ ಗಳಿಸಿವೆ.

ಈ ಪೈಕಿ, ಮಾರುಕಟ್ಟೆ ಪ್ರವೇಶಿಸಿದ ಸೀಮಿತಾವಧಿಯಲ್ಲೇ ಪತಂಜಲಿ ಗಳಿಕೆ ಬಹಳ ಮಹತ್ವದ್ದು.

ಬಹುತೇಕ ಭಾರತದ ಸ್ವಾಮೀಜಿಗಳು ತಮ್ಮ ಉಪನ್ಯಾಸ ಮತ್ತು ಇತರ ಸತ್ಸಂಗ ಚಟುವಟಿಕೆಗಳ ಮೂಲಕ ಗಳಿಸಿಕೊಂಡಿರುವ ‘ಮಾನವ ಕಲ್ಯಾಣ’ದ ಬ್ರಾಂಡ್ ಅನ್ನು ತಮ್ಮ ವಸ್ತುಸೇವೆಗಳಿಗೂ ಹಿಗ್ಗಿಸಿ, ಈಗಾಗಲೇ ಇರುವ ಅಪಾರ ಅನುಯಾಯಿಗಳನ್ನು ಸುಲಭಕ್ಕೆ ಮುಟ್ಟುತ್ತಿದ್ದಾರೆ.

ಉದಾಹರಣೆಗೆ ಗುರ್ ಮಿಠ್ ರಾಮ್ ರಹೀಮ್ ಸಿಂಗ್ ರ ದೇರ ಸಾಚಾ ಸೌಧ ಸಂಸ್ಥೆಗೆ ಸಂಬಂಧಿಸಿದ ದೆಹಲಿ ಮೂಲದ ಎಂಎಸ್ ಜಿ ಕಂಪನಿ ಮುಖಾಂತರ ಸಿಂಗ್ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇವರು ವಿಶ್ವಾದ್ಯಂತ 5 ಕೋಟಿ ಅನುಯಾಯಿಗಳನ್ನು ಹೊಂದಿದ್ದು, ಇವರೇ ಪ್ರಥಮ ಗ್ರಾಹಕರಾಗಿದ್ದಾರೆ.

ಭಾರತೀಯ ಸ್ವಾಮೀಜಿಗಳ ಮಾರುಕಟ್ಟೆ ವಿಜಯದ ಯುಗಾದಿ ಅದಾಗಲೇ ಶುರುವಾಗಿದೆ…

Leave a Reply