ಅಂತೂ-ಇಂತೂ ಯಡಿಯೂರಪ್ಪ ಆದ್ರು ಬಿಜೆಪಿ ರಾಜ್ಯಾಧ್ಯಕ್ಷ

 

ಡಿಜಿಟಲ್ ಕನ್ನಡ ಟೀಮ್

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯುಗಾದಿ ಬಂಪರ್ ಕೊಡುಗೆ ಸಿಕ್ಕಿದ್ದು, ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ಘಟಕ ಆದೇಶ ಹೊರಡಿಸಿದೆ.

ಅಧ್ಯಕ್ಷ ಗಾದಿಗೆ ಮಾಜಿ ಸಚಿವ ಸಿ.ಟಿ. ರವಿ, ಸಂಸದ ನಳಿನ್ ಕುಮಾರ್ ಕಟೀಲು, ಮತ್ತೊಂದು ಅವಧಿ ಬಯಸಿ ಪ್ರಹ್ಲಾದ್ ಜೋಷಿ ಮತ್ತಿತರರು ಪೈಪೋಟಿಯಲ್ಲಿದ್ದರು. ಅದರೆ ಯಡಿಯೂರಪ್ಪ ಅವರ ಹೆಸರು ಅಂತಿಮಗೊಂಡಿದೆ. ಅವರ ನೇಮಕ ಕುರಿತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅರುಣ್ ಸಿಂಗ್ ದಿಲ್ಲಿಯಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ.

ಕಳೆದಾರು ತಿಂಗಳಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ಹೆಸರು ಆಗಾಗ್ಗೆ ಕೇಳಿಬರುತ್ತಿತ್ತು. ಆದರೆ ಇನ್ನೇನು ಆದೇಶ ಹೊರಬಿತ್ತು ಅನ್ನುವಷ್ಟರಲ್ಲಿ, ಮುಂದಕ್ಕೆ ಹೋಗುತ್ತಿತ್ತು. ಹಾಗೆ ಮುಂದಕ್ಕೆ ಹೋದಾಗಲೆಲ್ಲ ಅಧ್ಯಕ್ಷ ಸ್ಥಾನದ ಜತೆಗೆ ಹಲವಾರು ಹೆಸರುಗಳು ತೇಲಿ ಬರುತ್ತಿದ್ದವು. ಇದೀಗ ಅಂತಿಮವಾಗಿ ಆದೇಶ ಹೊರಬಿದ್ದಿದ್ದು, ಬೇರೆಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ.

ಅಹಿಂದ ಲೆಕ್ಕಾಚಾರದಲ್ಲೇ ಮುಂದುವರಿದಿರುವ ರಾಜ್ಯ ಸರಕಾರದ ವಿರುದ್ಧ ಆಡಳಿತರೂಢ ಕಾಂಗ್ರೆಸ್ ಪಕ್ಷದೊಳಗೇ ಅಸಮಾಧಾನ ಭುಗಿಲೆದ್ದಿದೆ. ತಮ್ಮನ್ನು ಕಡೆಗಣಿಸಲಾಗಿದೆ ಎಂದು ಮೇಲ್ವರ್ಗದ ನಾಯಕರು ತಿರುಗಿ ಬಿದ್ದಿದ್ದಾರೆ. ಇಂಥ ಸನ್ನಿವೇಶದಲ್ಲಿ ಪ್ರಬಲ ಲಿಂಗಾಯತ ಕೋಮಿನ ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಲ್ಲಿ ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಲಾಭವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಜ್ಯ ಹಾಗೂ ರಾಜ್ಯದಿಂದ ರಾಷ್ಟ್ರ ಪ್ರತಿನಿಧಿಸುತ್ತಿರುವ ಕೆಲ ನಾಯಕರು ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸಂತೋಷ್ ಅವರು ಯಡಿಯೂರಪ್ಪ ನೇಮಕಕ್ಕೆ ಅಡ್ಡಗಾಲಾಗಿದ್ದರು. ಆದರೆ ಈ ರೀತಿಯ ಹೊಯ್ದಾಟ ಕಾಂಗ್ರೆಸ್ ವಿರೋಧಿ ಅಲೆಯನ್ನು ಪಕ್ಷದ ಪರವಾಗಿ ಪರಿವರ್ತಿಸಿಕೊಳ್ಳಲು ತೊಡರುಗಾಲಾಗಲಿದೆ ಎಂದರಿತ ರಾಷ್ಟ್ರೀಯ ನಾಯಕರು ಇದೀಗ ಯಡಿಯೂರಪ್ಪ ಅವರನ್ನೇ ನೇಮಕ ಮಾಡಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ರಾಜಕೀಯ ತಿರುಗಣಿಯಲ್ಲಿ ಮಿಂದೆದ್ದಿರುವ ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಜೆಡಿಎಸ್ ನಿಂದ ತಮಗಾದ ಅಧಿಕಾರ ವಂಚನೆಯನ್ನೇ ಮುಂದೆ ಮಾಡಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿಯೂ ಆಗಿದ್ದರು. ಆದರೆ ಒಂದೂವರೇ ವರ್ಷ ಕಳೆಯುವುದರೊಳಗೆ ಹಲವು ಹಗರಣಗಳ ಸುಳಿಗೆ ಸಿಕ್ಕಿಕೊಂಡ ಅವರು ಮುಖ್ಯಮಂತ್ರಿ ಪದವಿ ಕಳೆದುಕೊಂಡರು. ಅಲ್ಲದೇ ಪಕ್ಷದೊಳಗೆ ತಮ್ಮ ಮಾತು ನಡೆಯುತ್ತಿಲ್ಲ ಎಂದು ಬೇಸತ್ತು ಬಿಜೆಪಿ ತೊರೆದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದರು. ಆದರೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಕೆಜೆಪಿ ಕೂಡ ಬೋರಲು ಬಿತ್ತು. ಯಡಿಯೂರಪ್ಪ ಇಲ್ಲದ ಬಿಜೆಪಿ, ಬಿಜೆಪಿ ಇಲ್ಲದ ಯಡಿಯೂರಪ್ಪ ನಷ್ಟಕ್ಕಷ್ಟೇ ಸಾಕ್ಷಿ ಆಗಬೇಕಾಯಿತು. ಇದು ಅರಿವಾಗುವ ಹೊತ್ತಿಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು.

ನಂತರ ಬಿಜೆಪಿ ಮತ್ತು ಯಡಿಯೂರಪ್ಪ ಪರಸ್ಪರ ಅನಿವಾರ್ಯವಾದ ಕಾರಣ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಜತೆ ಕೆಜೆಪಿ ಲೀನವಾಯಿತು. ಅವತ್ತಿಂದಲೇ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಪಟ್ಟದ ಜಂಜಾಟ ಶುರುವಾಗಿತ್ತು. ಆದರೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಫರ್ಧಿಸಿ ಸಂಸತ್ ಪ್ರವೇಶಿಸಿದ ಯಡಿಯೂರಪ್ಪ ಕೇಂದ್ರ ಸಚಿವರಾಗುತ್ತಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಅವರ ಮೇಲೆ ಕೋರ್ಟಿನಲ್ಲ ಕೇಸುಗಳ ಇದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ರಿಸ್ಕ್ ತೆಗೆದುಕೊಳ್ಳಲು ಹೋಗಲಿಲ್ಲ. ಸಂಸತ್ ಪ್ರವೇಶಿಸಿದ್ದರೂ ಯಡಿಯೂರಪ್ಪ ಅವರ ಮನಸ್ಸು ಮಾತ್ರ ರಾಜ್ಯ ರಾಜಕಾರಣ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದತ್ತಲೇ ನೆಟ್ಟಿತ್ತು.

ಇತ್ತೀಚೆಗೆ ಯಡಿಯೂರಪ್ಪ ವಿರುದ್ಧದ ಕೋರ್ಟ್ ಕೇಸುಗಳು ಒಂದೊಂದಾಗಿ ಬೀಳುತ್ತಾ ಬಂದವು. ಅವರು 15 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಮುಕ್ತರಾಗಿದ್ದು, ಒಂದೆರಡು ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಆದರೆ ವಿಧಾನ ಪರಿಷತ್ ಚುನಾವಣೆ, ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಅಂತ ನೆಪವೊಡ್ಡಿ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಮುಂದಕ್ಕೆ ಹಾಕುತ್ತಾ ಬರಲಾಯಿತು. ಹಾಗೆ ಆಗುವಲ್ಲಿ ಒಂದಷ್ಟು ವಿರೋಧಿಗಳ ಚಿತಾವಣೆಯೂ ಕೆಲಸ ಮಾಡಿತ್ತು. ಆದರೆ ಇತ್ತೀಚೆಗೆ ಯಡಿಯೂರಪ್ಪನವರು ಬೆಂಗಳೂರಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ, ಮೈಸೂರಿನ ಪ್ರತಿಭಟನಾ ಸಭೆಯನ್ನೇ ಬರಿಷ್ಕರಿಸುವಷ್ಟು ಮುನಿಸಿಗೆ ಒಳಗಾಗಿದ್ದರು. ಇದು ರಾಜ್ಯ ನಾಯಕರಿಗಷ್ಟೇ ಅಲ್ಲದೇ ವರಿಷ್ಠರಿಗೂ ಮುಜುಗರ ತಂದಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷಕ್ಕೆ ನಷ್ಟವಾಗಲಿದೆ ಎಂದರಿತ ರಾಷ್ಟ್ರೀಯ ಮುಖಂಡರು ಯಡಿಯೂರಪ್ಪ ಅವರನ್ನು ಕರ್ನಾಟಕ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

Leave a Reply