ಅಹಂಕಾರದ ಚಾಲನೆ ಆರೋಪಿ ಹುಡುಗನ ಹುಟ್ಟಾ ಜಾಯಮಾನ, ಎಂದು ಬಂದೀತು ಇಂಥವರ ಕೊಬ್ಬು ಕರಗುವ ದಿನ?

ಮರ್ಸಿಡೆಸ್ ಗುದ್ದೋಡುವಿಗೆ ಬಲಿಯಾದ ಸಿದ್ಧಾರ್ಥರ ಸಹೋದರಿಯ ದುಃಖದ ಕ್ಷಣ

ಡಿಜಿಟಲ್ ಕನ್ನಡ ಟೀಮ್

ದೆಹಲಿ ಗುದ್ದೋಡು ಪ್ರಕರಣದಲ್ಲಿ ಮೃತರಾದ ಸಿದ್ಧಾರ್ಥ ಮಿತ್ತಲ್ ಕುಟುಂಬಕ್ಕೆ, ಅದರಲ್ಲೂ ಸಿದ್ಧಾರ್ಥರ ಸಹೋದರಿ ಶಿಲ್ಪಾ ಮಿತ್ತಲ್ ಅವರಿಗೊಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ದುರ್ಭರ ದುಃಖದ ನಡುವೆಯೂ ಮಾಧ್ಯಮಗಳ ಮೂಲಕ ತಮ್ಮ ನಿಖರ ಪ್ರಶ್ನೆಗಳಿಂದ ನ್ಯಾಯಕ್ಕಾಗಿ ಒತ್ತಾಯಿಸಿ, ದೇಶದ ಗಮನ ಸೆಳೆದರು ಅವರು. ಪರಿಣಾಮವಾಗಿ, ಪ್ರಾರಂಭದಲ್ಲಿ ಪ್ರಕರಣದ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದಿದ್ದ ಪೋಲೀಸರು ಕ್ರಮ ಕೈಗೊಳ್ಳಲೇಬೇಕಾದ ಒತ್ತಡಕ್ಕೆ ಸಿಲುಕಿದರು. ಸಿದ್ದಾರ್ಥರ ತಂದೆ- ಸಹೋದರಿ ಪ್ರಯತ್ನದಿಂದಲೇ ಮರ್ಸಿಡೆಸ್ ಯಾವ ರೀತಿ ಅತಿ ನಿರ್ಲಕ್ಷ್ಯ ಮತ್ತು ವೇಗದಿಂದ ಪ್ರಾಣಹಾನಿ ಮಾಡಿತು ಎಂಬ ಸಿಸಿಟಿವಿ ದೃಶ್ಯಾವಳಿ ದೇಶದೆದರು ಜಾಹೀರಾಯಿತು.

ಇಷ್ಟೆಲ್ಲ ಆದ ನಂತರ ಪ್ರಭಾವಿ ಉದ್ಯಮಿಯ ಮಗನ ವಿಚಾರಣೆ ನಡೆಸಲೇಬೇಕಾದ ಸ್ಥಿತಿಗೆ ಸಿಲುಕಿದರು ಪೋಲೀಸರು. ಆ ಪ್ರಕಾರ ಇದೀಗ ಅಪ್ರಾಪ್ತ ವಯಸ್ಕ ಆರೋಪಿಯ ಬಗ್ಗೆ ಮತ್ತಷ್ಟು ಆಘಾತಕಾರಿಯ ವಿಚಾರಗಳನ್ನು ಪೋಲೀಸರು ಹೊರಹಾಕಿದ್ದಾರೆ. ಈತ ಈ ಹಿಂದೆ ಹಲವು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಆರೋಪಿ ಚಲಾಯಿಸುತ್ತಿದ್ದ DL2FCM3000 ಸಂಖ್ಯೆಯ ಐಶಾರಾಮಿ ಬೆಂಜ್ ಕಾರು ಕಳೆದ ಎಂಟು ತಿಂಗಳಲ್ಲಿ 5 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಮಾಹಿತಿ ಬಹಿರಂಗಗೊಂಡಿದೆ. ಸಂಚಾರಿ ಚಿಹ್ನೆ, ಆಕ್ರಮಣಕಾರಿ ಚಾಲನೆ, ಅತಿ ವೇಗದ ಚಾಲನೆ, ನಿಷಿದ್ಧ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇಷ್ಟೇ ಅಲ್ಲದೇ ನಿಯಮ ಉಲ್ಲಂಘನೆಗೆ ವಿಧಿಸಿರುವ 1 ಸಾವಿರ ರು ದಂಡವನ್ನು ಇದುವರೆಗೆ ಪಾವತಿ ಮಾಡದೆ ಇರುವುದು ಕೂಡ ಕಾನೂನು ಪಾಲನೆಯಲ್ಲಿ ವಹಿಸಿರುವ ನಿರ್ಲಕ್ಷ್ಯ ಸ್ಪಷ್ಟವಾಗುತ್ತದೆ.

ಸದ್ಯಕ್ಕೆ ಸಮಾಧಾನದ ಸಂಗತಿ ಎಂದರೆ ಮಗನ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ ಆರೋಪದಡಿಯಲ್ಲಿ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿರುವುದು. ಈ ಹಿಂದೆಯೇ ಸಂಚಾರ ನಿಯಮ ಉಲ್ಲಂಘನೆಯ ಹಲವು ಪ್ರಕರಣಗಳಾಗಿದ್ದರೂ ಮತ್ತೆ ಅಪ್ರಾಪ್ತ ವಯಸ್ಕ ಮಗನಿಗೆ ವಾಹನ ನೀಡಿರುವುದು ಅಪರಾಧ ಮನಸ್ಥಿತಿಗೆ ನೀಡಿದ ಪ್ರಚೋದನೆ ಎಂದೇ ಪೋಲೀಸರು ವ್ಯಾಖ್ಯಾನಿಸಿದ್ದಾರೆ. ಅಲ್ಲದೇ ಆರೋಪಿ ಹುಡುಗನ ವಿರುದ್ಧ ಉದ್ದೇಶರಹಿತ ಹತ್ಯೆಯ ಮೊಕದ್ದಮೆ ದಾಖಲಿಸಲಾಗಿದೆ.

ಈ ಅಪ್ರಾಪ್ತ ವಯಸ್ಕ ಆರೋಪಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಇತ್ತೀಚೆಗಷ್ಟೇ ಮುಗಿಸಿದ್ದು, ತನ್ನ ಆರು ಮಂದಿ ಸಹಪಾರಿಗಳೊಂದಿಗೆ ರಾತ್ರಿ ಪಾರ್ಟಿಗೆ ಬಂದಿದ್ದ. ಊಟ ಮುಗಿಸಿ, ಉತ್ತರ ದೆಹಲಿಯ ಸಿವಿಲ್ ಲೈನ್ ವಸತಿ ಪ್ರದೇಶದಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ರಸ್ತೆ ದಾಟುತ್ತಿದ್ದ ಮುಗ್ದ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದಾನೆ. ಈ ಹಿಂದೆ ಇದೇ ಕಾರು, ಇದೇ ಪ್ರದೇಶದಲ್ಲಿ ಅಪಾಯಕಾರಿ ಚಾಲನೆಗೆ ನೋಟಿಸ್ ಕೂಡ ಪಡೆದಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರ ಜೊತೆಗೆ ಮತ್ತೊಂದು ಪ್ರಕರಣದಲ್ಲಿ ಕಾರೊಂದಕ್ಕೆ ಗುದ್ದಿ ಅಪಘಾತ ಮಾಡಿದ್ದ ಇತನ ವಿರುದ್ಧ ದೂರು ಸಹ ದಾಖಲಾಗಿತ್ತು. ಇವುಗಳೊಂದಿಗೆ ಎರಡು ಬಾರಿ ಅತಿವೇಗದ ಚಾಲನೆಗೆ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದರು.

ದೆಹಲಿ ಗುದ್ದೊಡು ಪ್ರಕರಣದಲ್ಲಿ ಮೃತಪಟ್ಟ 32 ವರ್ಷದ ಸಿದ್ಧಾರ್ಥ ಶರ್ಮಾ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಅಪ್ರಾಪ್ತ ಕಾನೂನಿನ 304 ಮತ್ತು 304ಎ ಅಡಿಯಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿದೆ. ಬಂಧಿಸಿದ್ದ ಆರೋಪಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಿದೆ. ಇದರ ನಡುವೆ ದೆಹಲಿ ಪೊಲೀಸರು ಆರೋಪಿಯ ತಂದೆ, ಕಾರಿನ ಮಾಲಿಕನನ್ನು ಬಂಧಿಸಿದ್ದಾರೆ. ಜೊತೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಮೃತ ಸಿದ್ಧಾರ್ಥ ಶರ್ಮಾ ಸಹೋದರಿ, ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾ ಅವರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ-   ಅಪ್ರಾಪ್ತ ವಯಸ್ಕರಿಗೆ ಅತಿವೈಭೋಗದ ಕಾರು ಕೊಟ್ಟು, ಸಾಮಾನ್ಯರ ಪ್ರಾಣವನ್ನು ಪಗಡೆಯಾಡುವ ಪಾಲಕರಿಗೆ ಬೇಡವೇ ಘೋರ ಶಿಕ್ಷೆ?

Leave a Reply