ಎವರೆಸ್ಟ್ ನೆತ್ತಿಯಲ್ಲಿ ಡೇಂಜರಸ್ ಪ್ರಯೋಗಕ್ಕೆ ಮುಂದಾಗಿರುವ ರಿಚರ್ಡ್ ಪಾರ್ಕ್ಸ್, ಗೆದ್ದರೆ ವರ್ಲ್ಡ್ ರೆಕಾರ್ಡ್ – ಸೋತರೆ ‘ಬಾಡಿ’

author-ananthramuಮೊದಲು ರಿಚರ್ಡ್ ಪಾರ್ಕ್ಸ್ ಯಾರು ಎಂದು ತಿಳಿದ ಮೇಲೆ ಅವನು ಎಂಥ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾನೆ ಎಂಬುದನ್ನು ಓದುವಿರಂತೆ. ಈಗ 39 ವರ್ಷದ ಪ್ರಾಯದ ರಿಚರ್ಡ್ ಪಾರ್ಕ್ಸ್ ಇಂಗ್ಲೆಂಡಿನ ವೇಲ್ಸ್ ಪ್ರಾಂತ್ಯದವನು. ಅವನು ಹೆಸರು ಮಾಡಿರುವುದು ರಗ್ಬಿ ಆಟದಲ್ಲಿ. ಒಂದಲ್ಲ, ಒಂಬತ್ತು ಕ್ಲಬ್‍ಗಳಿಗೆ ಆಡಿದ್ದಾನೆ. ಹದಿಮೂರು ವರ್ಷ ಭರ್ಜರಿಯಾಗಿ ಆಡಿದ, ಟ್ರೋಫಿಗಳನ್ನು ತಲೆಯ ಮೇಲೆ ಹೊತ್ತು ಕುಣಿದಾಡಿದ. 2008ರಲ್ಲಿ ರಗ್ಬಿ ಆಡುವಾಗ ಮೊಣಕಾಲಿನ ಸ್ನಾಯುತಂತು ಹರಿಯಿತು. ಕೇರ್ ಮಾಡಲಿಲ್ಲ, ಆಟ ಮುಂದುವರಿಸಿದ. ಎರಡು ಬಾರಿ ಭುಜಕ್ಕೆ ಪೆಟ್ಟಾಯಿತು. ಆಪರೇಷನ್ ಕೂಡ ಆಯಿತು. ರಗ್ಬಿಗೆ ಗುಡ್‍ಬೈ ಹೇಳಿದ.

ರಗ್ಬಿ ಆಡದಿದ್ದರೇನಂತೆ, ಸಾಧಿಸಲು ಬೇಕಾದಷ್ಟು ಕ್ಷೇತ್ರಗಳಿವೆಯಲ್ಲ! ಅವನೇ ಒಂದು ವಿಚಿತ್ರ ಪ್ರೋಗ್ರಾಂ ಹಾಕಿಕೊಂಡ. ಏಳು ತಿಂಗಳ ಅವಧಿಯಲ್ಲಿ ಏಳು ಖಂಡಗಳ ಅತ್ಯುನ್ನತ ಪರ್ವತ ಶಿಖರ ಮುಟ್ಟುವುದು. ಅಷ್ಟೇ ಅಲ್ಲ, ಮೂರು ಧ್ರುವಗಳ ನೆತ್ತಿ ಮುಟ್ಟುವುದು. ಅರೆರೆ, ಏನಿದು ಉತ್ತರ ಮತ್ತು ದಕ್ಷಿಣ ಧ್ರುವ ಗೊತ್ತು, ಎರಡೇ ಅಲ್ಲವೇ ಧ್ರುವಗಳಿರುವುದು ಎಂದು ನೀವು ಹುಬ್ಬೇರಿಸುತ್ತೀರಿ. ನಿಜ. ಆದರೆ ಎವರೆಸ್ಟ್ ಶಿಖರವನ್ನು ಭೂಮಿಯ ಮೂರನೇ ಧ್ರುವ ಅನ್ನುತ್ತಾರಲ್ಲ. ಇದನ್ನು ಹತ್ತಲು ಧೈರ್ಯವೂ ಬೇಕು, ತಾಕತ್ತೂ ಇರಬೇಕು. ಎರಡಿದ್ದರೆ ಸಾಲದು, ಪರ್ವತಾರೋಹಣ ಮಾಡುವಾಗ ಎದುರಾಗುವ ಹತ್ತು ಹಲವು ಸವಾಲುಗಳನ್ನು ಅತಿ ಬುದ್ಧಿವಂತಿಕೆಯಿಂದ ಎದುರಿಸಬೇಕು. ಪಾರ್ಕ್ಸ್, ಸೆವೆನ್ ಸಮ್ಮಿಟ್ಸ್-ತ್ರಿ ಪೋಲ್ಸ್-ಸೆವೆನ್ ಮಂತ್ಸ್ ಎಂಬ ಬ್ಯಾನರ್ ಹಾಕಿಕೊಂಡ. ಇದರ ಅಬ್ರಿವಿಯೇಷನ್ 737 ಚಾಲೆಂಜ್.  ಇದರ ಹಿಂದೆ ಬಹು ದೊಡ್ಡ ಉದಾತ್ತ ಧ್ಯೇಯವಿದೆ, ತ್ಯಾಗವಿದೆ, ಮಾನವೀಯತೆ ಇದೆ- ‘ಮೇರಿ ಕ್ಯೂರಿ ಕ್ಯಾನ್ಸರ್ ಕೇರ್ ಸಂಸ್ಥೆ’ ಗೆ ಫಂಡ್ ಎತ್ತುವುದು.

ಏಳು ಖಂಡಗಳ ಅತ್ಯುನ್ನತ ಪರ್ವತ ಶಿಖರಗಳ ಹೆಸರನ್ನು ಪಟ್ ಎಂದು ಹೇಳಿ ಎಂದರೆ ಒಂದರಘಳಿಗೆ ಯೋಚಿಸುತ್ತೇವೆ, ಮೌನವಹಿಸುತ್ತೇವೆ- ಆಮೇಲೆ ಕಂಪ್ಯೂಟರ್ ಮೌಸ್ ಒತ್ತುತ್ತೇವೆ. ಇಂದಿನ ಜ್ಞಾನಗಂಗೆ ಹರಿದುಬರುವುದು ಈ ಚಿಲುಮೆಯಿಂದ ತಾನೆ? ಮೊದಲು ಪಾರ್ಕ್ಸ್ ದಕ್ಷಿಣ ಧ್ರುವದ ಗುರಿಯಿಟ್ಟ. 1912ರಲ್ಲಿ ಬ್ರಿಟನ್ನಿನ ರಾಬರ್ಟ್ ಫಾಲ್ಕನ್ ಸ್ಕಾಟ್ `ಟೆರನೊವ’ ಸಾಹಸಯಾನದಲ್ಲಿ ದಕ್ಷಿಣ ಧ್ರುವವನ್ನೇನೋ ಮೆಟ್ಟಿನಿಂತ. ಆದರೆ ಆ ವೇಳೆಗೆ ನ್ಯೂಜಿಲೆಂಡಿನ ಅಮುಂಡ್‍ಸನ್ ಧ್ರುವಮೆಟ್ಟಿ ಮೊದಲಿಗನಾದ. ಸ್ಕಾಟ್ ಮರಳುವಾಗ ಇಡೀ ಟೀಂ ಜೊತೆ ಹಿಮದಲ್ಲಿ ಕೊನೆಯುಸಿರೆಳೆದ. ಅವನು ಅನುಸರಿಸಿದ ಮಾರ್ಗವನ್ನೇ ಪಾರ್ಕ್ಸ್  ಅನುಸರಿಸಿದ, ಯಶಸ್ಸೂ ಸಿಕ್ಕಿತು. ಅಲ್ಲಿ ಇವನಿಗೆ ಜೊತೆಯಾದವರು ಸ್ಟೀವ್ ವಿಲಿಯಮ್ಸ್ ಎನ್ನುವ ಒಲಂಪಿಕ್ ರೋವರ್ ಮತ್ತು ಮೇಡಂ ಕ್ಯೂರಿ ಸಂಸ್ಥೆಯ ಜೆನೆಟ್ ಸುಅರ್ಟ್. ದಕ್ಷಿಣ ಧ್ರುವದಿಂದ 1200 ಕಿಲೋ ಮೀಟರ್ ದೂರದಲ್ಲಿರುವ ವಿನ್ಸನ್ ಪರ್ವತದ ಶೃಂಗವನ್ನು ಮುಟ್ಟಿದ (4892 ಮೀಟರ್). ಮುಂದಿನದು ಆ್ಯಂಡಿಸ್ ಪರ್ವತ ಶ್ರೇಣಿಯ ಅಕಾನ್‍ಕಾನ್ಗುವ ಶಿಖರ (6,961 ಮೀ.). ಅಲ್ಲಿಂದ ಮುಂದೆ ತಾಂಜೇನಿಯದ ಕಿಲಮಂಜಿರೋ ಎನ್ನುವ ಅಗ್ನಿಪರ್ವತದ ಶಿಖರ(5895 ಮೀ.), ಇತ್ತ ಇಂಡೊನೇಷ್ಯದ ಪುನಾಕ್‍ಜಯ (4,884 ಮೀ.). ಹಿಮಾಲಯದ ಎವರೆಸ್ಟ್ (8,848 ಮೀ), ಉತ್ತರ ಅಮೆರಿಕದ ದೆನಾಲಿ ಶಿಖರ (6,190ಮೀ). ರಷ್ಯ ಮತ್ತು ಜಾರ್ಜಿಯ ಬಾರ್ಡರ್‍ನಲ್ಲಿರುವ ಎಲ್‍ಬ್ರನ್ ಶಿಖರ(5,642 ಮೀ.). ಇನ್ನು ಬಿಡಿ, ಉತ್ತರ ಧ್ರುವ ಅಂದರೆ ಅದಿರುವುದು ಅಟ್ಲಾಂಟಿಕ್ ಸಾಗರದ ಮಧ್ಯದಲ್ಲಿ. ಇಲ್ಲಿ ಶಿಖರ ಅನ್ನುವುದಕ್ಕೆ ಅರ್ಥವೇ ಇಲ್ಲ. ಇವೆಲ್ಲವನ್ನೂ ಅವನು ಸಾಧಿಸಿದ್ದು ಡಿಸೆಂಬರ್ 2010ರಿಂದ ತೊಡಗಿ ಜುಲೈ 12, 2012ರ ಒಳಗೆ. ಆರು ತಿಂಗಳು 11 ದಿನ ಏಳು ಗಂಟೆ, 53 ನಿಮಿಷಗಳಲ್ಲಿ. ಅವನಿರುವ ಚಿತ್ರದಲ್ಲಿ ಇದನ್ನೂ ನೀವು ನೋಡಬಹುದು. ಇದೊಂದು ಜಾಗತಿಕ ದಾಖಲೆ. ಯಾರು ಮುರಿಯುವರೋ ಮುಂದೆ ಗೊತ್ತಿಲ್ಲ. ಸೋಲನ್ನೊಪ್ಪದ ಈ ಸರದಾರ ಇನ್ನೂ ಒಂದು ರೆಕಾರ್ಡ್ ಸ್ಥಾಪಿಸಿದ. ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಹೊರಟು (ಸೋಲೋ) ಹಿಮದ ಜಾರುಬಂಡೆಯಲ್ಲಿ ಜಾರುತ್ತ 1,150 ಕಿಲೋ ಮೀಟರ್ ಯಾನ ಮಾಡಿ ಮತ್ತೆ ದಕ್ಷಿಣ ಧ್ರುವ ಮೆಟ್ಟಿನಿಂತ. ಇದು ಬ್ರಿಟಿಷರ ಮಟ್ಟಿಗೆ ಫಾಸ್ಟೆಸ್ಟ್ ಸೋಲೋ ಎನ್ನುವ ಹೆಸರು ಗಳಿಸಿತು.  ಮೇರಿಕ್ಯೂರಿ ಸಂಸ್ಥೆಗೆ 30 ಲಕ್ಷ ಪೌಂಡ್ ಹರಿದುಬಂತು.

ಈ ಭೂಪನ ಸಾಹಸಗಾಥೆ ಕೇಳಿದಿರಲ್ಲ! ಈಗ ಅವನ ‘ಕಾಲ್ ಆಫ್ ದಿ ಮೌಂಟೆನ್’ ನೋಡೋಣ. ನಿಸರ್ಗ ಸಾಹಸಪ್ರಿಯರನ್ನು ಕೆಣಕುತ್ತದೆ, ಚಾಲೆಂಜ್ ಮಾಡುವಂತೆ ಪ್ರೇರೇಪಿಸುತ್ತದೆ. ಹಲವರಿಗೆ ಕಿಕ್ ಕೊಡುವ ಕಾರ್ಯಕ್ರಮ ಇದು. ಮತ್ತೆ ಮತ್ತೆ ಬರುತ್ತಾರೆ ಪ್ರೇಮಿಗಳನ್ನು ಸಂಧಿಸುವಂತೆ. 1953ರ ಮೇ 29ರಲ್ಲಿ ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ, ಡಾರ್ಜಿಲಿಂಗ್‍ನ ನೇಪಾಳಿ ಷರ್ಪ ತೇನ್‍ಸಿಂಗ್ 8,848 ಮೀಟರ್ ಎತ್ತರದ ಎವರೆಸ್ಟ್ ಶಿಖರ ಹತ್ತಿದ ನಂತರ ರೆಕಾರ್ಡ್ ಗಳ ಮೇಲೆ ರೆಕಾರ್ಡ್ ಆಗುತ್ತಿದೆ. ಹಿಮಾಲಯಕ್ಕೆ ಮೂರನೇ ಧ್ರುವ ಎಂಬ ವಿಶೇಷಣ ಬಂದದ್ದು ಈ ಹಿನ್ನೆಲೆಯಲ್ಲಿ. ರೆಕಾರ್ಡ್ ಗಳೋ ವಿಚಿತ್ರವಾಗಿವೆ. ಉತ್ತರದ ಕಡೆಯಿಂದ ಹತ್ತಿದ ಮೊದಲಿಗ, ಶಿಖರ ಮುಟ್ಟಿದ ಮೊದಲ ಮಹಿಳೆ, ಆಕ್ಸಿಜನ್ ಇಲ್ಲದೆ ಹತ್ತಿದ ವೀರ, ಏಕಾಂಗಿಯಾಗಿ ಹತ್ತಿದ ಶೂರ, ಪ್ಯಾರಾಗ್ಲೈಡರ್ ನಿಂದ ಇಳಿದವನು, ಆಕ್ಸಿಜನ್ ಇಲ್ಲದೆ ಮೊದಲು ಹತ್ತಿದ ಮಹಿಳೆ, ಅಂಧನೊಬ್ಬ ಶಿಖರ ಏರಿದ ಕಥೆ, ಶಿಖರ ಮುಟ್ಟಿದ ಅತಿ ಕಿರಿಯ, ಅತಿ ಹಿರಿಯ-ಹೀಗೆ ಹೇಳುತ್ತಲೇ ಹೋಗಬಹುದು. ಈಗಿನ ಒಂದು ಅಂದಾಜಿನಂತೆ ಸುಮಾರು 4,000 ಪರ್ವತಾರೋಹಿಗಳು ಎವರೆಸ್ಟ್ ಶಿಖರವನ್ನು ತಡವಿದ್ದಾರೆ. 250 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾವು ಒಂದು ಪುಟ್ಟ ಲೆಕ್ಕಾಚಾರ ಮಾಡೋಣ.  ಇಷ್ಟೂ ಮಂದಿಯನ್ನು ಒಬ್ಬರ ಹೆಗಲ ಮೇಲೆ ಒಬ್ಬರನ್ನು ನಿಲ್ಲಿಸಿದರೆ ಹೆಚ್ಚು ಕಡಿಮೆ ಏಳು ಕಿಲೋ ಮೀಟರ್ ಎತ್ತರದ ಶಿಖರವೇ ಇವರಾಗುತ್ತಾರೆ.

ಈಗಾಗಲೇ ಎವರೆಸ್ಟ್ ಆರೋಹಣ ಮಾಡಿ (ಮೇ 25, 2011) ಎದೆಯುಬ್ಬಿಸಿಕೊಂಡು ಬಂದಿರುವ ರಿಚರ್ಡ್ ಪಾರ್ಕ್ಸ್ ಗೆ ಮತ್ತೆ ಎವರೆಸ್ಟ್ ಅನ್ನು ಮುತ್ತಿಕ್ಕುವ ಆಸೆ. ಇಂಥ ಬಯಕೆಗಳು ಪರ್ವತಾರೋಹಿಗಳಿಗೆ ಹೊಸತಲ್ಲ ಬಿಡಿ. ಆಪ ಷರ್ಪ ಎನ್ನುವ ಪರ್ವತಾರೋಹಿ ಮೇ 11, 2011ರಲ್ಲಿ ಎವರೆಸ್ಟ್ ಹತ್ತಿದಾಗ ಅದು ಅವನಿಗೆ 21ನೆಯ ಸಲದ ಯಶಸ್ವೀ ಆರೋಹಣ. ಈಗಲೂ ಜಾಗತಿಕ ದಾಖಲೆ ಅವನ ಹೆಸರಲ್ಲೇ ಇದೆ.

737

ರಿಚರ್ಡ್ ಪಾರ್ಕ್ಸ್ ಗೆ ಈ ಬಗೆಯ ದಾಖಲೆ ಮಾಡುವ ಗುರಿಯಿಲ್ಲ. ಈಗಾಗಲೇ ಅವನಿಗೆ ‘ಅತಿರೇಕ ಪರಿಸರ ಅಥ್ಲೀಟ್’ ಎಂಬ ಬಿರುದು ಸಿಕ್ಕಿದೆ. ಈ ಮನುಷ್ಯ ಇಷ್ಟೊಂದು ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಬಂದಿದ್ದಾನೆ ಎಂದು ತಿಳಿದಾಗ, ಬ್ರಿಟಿಷ್ ರಿಸರ್ಚ್ ಎಕ್ಸ್ ಪೆಡಿಷನ್ ಇವನ ಮುಂದೆ ಕಠಿಣ ಸವಾಲನ್ನಿಟ್ಟಿತು. ಅವನು ಸವಾಲು ಸ್ವೀಕರಿಸಿದ್ದಾನೆ, ಈಗ ಇದನ್ನು ಸ್ಪಾನ್ಸರ್ ಮಾಡುತಿರುವ ಸಂಸ್ಥೆ ಇಡೀ ಜಗತ್ತಿಗೇ ಜಾಹೀರು ಮಾಡಿದೆ: ‘2016ರ ಮೇ ತಿಂಗಳಲ್ಲಿ ರಿಚರ್ಡ್ ಪಾರ್ಕ್ಸ್ ಎವರೆಸ್ಟ್ ಶಿಖರ ಹತ್ತಿ, ಅಲ್ಲಿ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಶರೀರದ ರಕ್ತದ ಸ್ಯಾಂಪಲ್ ಸಂಗ್ರಹಿಸುತ್ತಿದ್ದಾನೆ. ಸಿರೆ (ವೆಯಿನ್) ಮತ್ತು ಧಮನಿಯಿಂದ (ಆರ್ಟೆರಿ). ತನ್ನ ಸ್ನಾಯುವಿನ ಬಯಾಪ್ಸಿ ಮಾಡಿಕೊಳ್ಳುತ್ತಾನೆ, ಹೃದಯದ ಬಡಿತದ ಏರಿಳಿತಗಳನ್ನು ದಾಖಲೆ ಮಾಡಿಕೊಳ್ಳುತ್ತಾನೆ. ಏರುವಾಗಲೇ ಆಗಲಿ, ಇಳಿಯುವಾಗಲೇ ಆಗಲಿ ಅವನು ಆಕ್ಸಿಜನ್ ಸಿಲೆಂಡರ್ ಬಳಸುವುದಿಲ್ಲ. ಈ ಅವಧಿಯುದ್ದಕ್ಕೂ ಅತ್ಯಾಧುನಿಕ ಉಪಕರಣಗಳನ್ನು ಬಳಸುತ್ತಾನೆ.’

ಏನು ಇದರಿಂದ ಲಾಭ? ಯಾರಿಗೆ? ಪ್ರಶ್ನೆ ತುಂಬ ಗಂಭೀರವಾದದ್ದು. ಅವನ ಈ ಪ್ರಯೋಗಕ್ಕೆ ಜಾಗತಿಕ ಪ್ರಾಮುಖ್ಯವಿದೆ. ವಿಶೇಷವಾಗಿ ವೈದ್ಯ ಕ್ಷೇತ್ರದಲ್ಲಿ, ನಿಧಾನವಾಗಿ ಪ್ರಜ್ಞೆ ಕ್ಷೀಣಿಸುವ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು, ಮನುಷ್ಯ ಎಷ್ಟು ಬೇಗ ಚೇತರಿಸಿಕೊಳ್ಳುತ್ತಾನೆ ಎಂಬುದನ್ನು ಅಧ್ಯಯನ ಮಾಡಲು ನೆರವಾಗುತ್ತದೆ ಎನ್ನುತ್ತಿದ್ದಾರೆ. ಏಕೆಂದರೆ ಎವರೆಸ್ಟ್ ನೆತ್ತಿಯಲ್ಲಿ ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ. ಉಷ್ಣತೆ -36 ಡಿಗ್ರಿ ಸೆಂ. ತಲಪುವುದುಂಟು. ಶರೀರ ಈ ಎತ್ತರದಲ್ಲಿ ಆಕ್ಸಿಜನ್‍ರಹಿತ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವ ಗುಟ್ಟು ಮೊದಲ ಬಾರಿ ಈಚೆಗೆ ಬರುತ್ತದೆ. ಎವರೆಸ್ಟ್ ಶಿಖರ ಈಗ ಬರೀ ಪರ್ವತಾರೋಹಿಗಳ ಸವಾಲಿನ ಕ್ಷೇತ್ರವಾಗಿ ಉಳಿದಿಲ್ಲ. ವಿಜ್ಞಾನಿಗಳು ಹೇಳುತ್ತಿದ್ದಾರೆ ‘ಇದೊಂದು ಲಿವಿಂಗ್ ಲ್ಯಾಬ್’ ಎಂದು. ಸೌತ್ ವೇಲ್ಸ್ ಯೂನಿವರ್ಸಿಟಿ ಲ್ಯಾಬ್‍ನಲ್ಲಿ ಈಗಾಗಲೇ ಫಿಟ್‍ನೆಸ್‍ಗಾಗಿ ಪ್ರಾಥಮಿಕ ಪರೀಕ್ಷೆಗಳು ನಡೆದಿವೆ. ಈ ಭೂಪ ಗೆದ್ದಿದ್ದಾನೆ. ಅವನೂ ಮತ್ತು ಅವನ ಟೀಂ ಈಗಾಗಲೇ ನೇಪಾಳದ ನಾಮ್‍ಚೆ ಬಜಾರ್ ಗೆ ಬಂದಿದ್ದಾರೆ. ಇದು ಬೇಸ್ ಕ್ಯಾಂಪ್. ಈ ತಿಂಗಳ ಕೊನೆಯ ಹೊತ್ತಿಗೆ ಇಲ್ಲಿ ಹೊಂದಾಣಿಕೆಯ ಕಾರ್ಯಕ್ರಮ ಮುಗಿಯುತ್ತದೆ. 1953ರಲ್ಲಿ ತೇನ್‍ಸಿಂಗ್ ಹಿಲೇರಿ ಹತ್ತಿದ ಸೌತ್ ಕೋಲ್ ಮಾರ್ಗವನ್ನೇ ಅನುಸರಿಸುತ್ತಾನೆ.

ಹಿಮಾಲಯದಲ್ಲಿ ಎವರೆಸ್ಟ್ ಹತ್ತುವಾಗ 8,000 ಮೀಟರ್ ಎತ್ತರದಲ್ಲಿ ಶರೀರದ ಕ್ರಿಯೆಗಳು ತಗ್ಗುತ್ತವೆ. ಕೋಶಮಟ್ಟದಲ್ಲಿ ಮತ್ತೆ ಎಂದಿನ ಸ್ಥಿತಿಗೆ ಮರಳುವ ತಾಕತ್ತನ್ನು ಶರೀರ ಕಳೆದುಕೊಳ್ಳುತ್ತದೆ. ಈ ವಲಯವನ್ನೇ ಪರ್ವತಾರೋಹಿಗಳು ‘ಡೆತ್ ಜೋನ್’ ಎನ್ನುತ್ತಾರೆ. ಉಸಿರಾಟಕ್ಕೆ ಅತ್ಯಗತ್ಯವಾದ ಆಕ್ಸಿಜನ್ ಕೊರತೆ ಹೆಚ್ಚಾಗುತ್ತದೆ. ಅದು ಸಾವು, ಬದುಕಿನ ಹೋರಾಟದ ರಣರಂಗ. ಇದಕ್ಕಾಗಿಯೇ ಬಹುತೇಕ ಪರ್ವತಾರೋಹಿಗಳು 7,300 ಮೀಟರ್ ಎತ್ತರದಿಂದಲೇ ಆಕ್ಸಿಜನ್ ಸಿಲೆಂಡರ್ ಬಳಸುತ್ತಾರೆ. ಶಿಖರ ತಲಪುತ್ತಲೇ ಅವನಿಗೆ ಇನ್ನೊಂದು ಕೆಲಸವನ್ನು ವಹಿಸಿದೆ. ಆಕ್ಸಿಜನ್‍ರಹಿತ ಸ್ಥಿತಿಯಲ್ಲಿ (ಹೈಪಾಕ್ಸಿಯ) ಅವನು ರಕ್ತದ ಸ್ಯಾಂಪಲ್ ಸಂಗ್ರಹಿಸಬೇಕು. ಅನಂತರ ಐದು ನಿಮಿಷ ಆಕ್ಸಿಜನ್ ಉಸಿರಾಡಿ ಆಗಲೂ ದಾಖಲೆ ಮಾಡಿಕೊಳ್ಳಬೇಕು. ಅವನ ಒಟ್ಟಾರೆ ಸ್ಥಿತಿ ಹೇಗಿರುತ್ತದೆಂದರೆ, ಸಾಗರದಾಳಕ್ಕೆ ಉಸಿರುಕಟ್ಟಿ ದೀರ್ಘಕಾಲ ಮುಳುಗಿ, ಎಂದಿಗೆ ಉಸಿರಾಡಲು ಮೇಲೆ ಬಂದೇನೋ ಎನ್ನುವ ಸ್ಥಿತಿ.

737 =

ರಿಚರ್ಡ್ ಹೇಳುತ್ತಾನೆ: ‘ನಾನು ಇದಕ್ಕೆಲ್ಲ ರೆಡಿ. ನನಗೆ ಗೊತ್ತು ನಾನು ಮಾಡಲು ಹೊರಟಿರುವ ಸಾಧನೆ ಸುಲಭದ್ದಲ್ಲ. ಆದರೆ ನಾನು ಆ ಸವಾಲನ್ನು ಸ್ವೀಕರಿಸುತ್ತಿದ್ದೇನೆ’ ಎಂದು ತನ್ನ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾನೆ. ಗೆದ್ದರಂತೂ ಅದು ವರ್ಲ್ಡ್ ರೆಕಾರ್ಡ್, ಸೋತರೆ ಬಿಡಿ – ಬರೀ ಬಾಡಿ. ಹಾಗಾಗುವುದು ಬೇಡ ಬಿಡಿ.

Leave a Reply