ಗುಡ್ ನ್ಯೂಸ್- ಸ್ವಚ್ಛ ಭಾರತದಲ್ಲಿ ಕಾರ್ಮಿಕರ ಬದುಕಿಗೂ ಅಚ್ಛೇ ದಿನ ಬರ್ತಿದೆ…

ಡಿಜಿಟಲ್ ಕನ್ನಡ ಟೀಮ್

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆ ಉದಾತ್ತವೇ ಎಂಬ ಬಗ್ಗೆ ಎರಡು ಮಾತಿಲ್ಲವಾದರೂ, ಅದರ ಅನುಷ್ಠಾನ ರೂಪದ ಬಗ್ಗೆ ಕೆಲವು ಟೀಕೆಗಳಿದ್ದವು.

ಅಂಬಾನಿ, ಅಮಿತಾಭ್ ಮುಂತಾದ ಸೆಲಿಬ್ರಿಟಿಗಳ ಕೈಯಲ್ಲಿ ಪೊರಕೆ ಹಿಡಿಸಿ, ಎಲ್ಲರೂ ಒಂದೇ ಬೀದಿಯನ್ನು ಸಾಲಾಗಿ ಸ್ವಚ್ಛಗೊಳಿಸುವ ಫೋಟೋ ಪ್ರಚಾರ ಮಾಡಿದೊಡನೆ ಯೋಜನೆ ಯಶಸ್ವಿಯಾದಂತೆ ಆಯಿತೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿತ್ತು. ನಿಜಕ್ಕೂ ಇಲ್ಲಿ ಹೀರೋಗಳಾಗಬೇಕಿರುವವರು ಸ್ವಚ್ಛತಾ ಕಾರ್ಮಿಕರೇ ಹೊರತು ಸೆಲಿಬ್ರಿಟಿಗಳಲ್ಲ ಎಂಬ ಅಭಿಪ್ರಾಯವೂ ಇತ್ತು.

ಸ್ವಚ್ಛತೆಯ ಪರಿಕಲ್ಪನೆಯಲ್ಲಿ, ಕೈಗವಸು- ಮಾಸ್ಕ್ ಗಳಿಲ್ಲದೇ ದಿನನಿತ್ಯ ಕಸ ಸಂಗ್ರಹಿಸುವ ಪೌರ ಕಾರ್ಮಿಕರ ಚಿತ್ರ ಒಂದೆಡೆಯಾದರೆ, ಅಧಿಕೃತವಾಗಿ ನಿಷೇಧವಾಗಿದ್ದರೂ ದೇಶದ ಹಲವೆಡೆ ಮಲ ಸ್ವಚ್ಛಗೊಳಿಸುವ ಕೆಲಸದಲ್ಲಿ ಕಾರ್ಮಿಕರೇ ಭಾಗಿಯಾಗುವ ಸ್ಥಿತಿ ಇದೆ.

ಸಮಾಧಾನದ ಸಂಗತಿ ಎಂದರೆ, ಕೇಂದ್ರದ ಸ್ವಚ್ಛ ಭಾರತ ಯೋಜನೆ ಇಂಥ ಕಾರ್ಮಿಕರ ಪರವಾಗಿ ತಾನಿರುವುದಾಗಿ ಮಾದರಿ ಕಾರ್ಯವೊಂದರ ಮೂಲಕ ಇದೀಗ ಸಂದೇಶ ರವಾನಿಸಿದೆ. ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಹೀಗೆ ಹೊಲಸು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ, ಪರಿಶಿಷ್ಟ ಪಂಗಡದ 500 ಮಹಿಳೆಯರನ್ನು ಸ್ವಚ್ಛ ಭಾರತ ಯೋಜನೆಯು ಕ್ಯಾಬ್ ಚಾಲಕರನ್ನಾಗಿ ಪರಿವರ್ತಿಸಿದೆ. ಕ್ಯಾಬ್ ಕಂಪನಿಗಳ ಸಹಯೋಗದಲ್ಲಿ ಕೇಂದ್ರದ ಸಾಮಾಜಿಕ ನ್ಯಾಯ ಸಚಿವಾಲಯವು ಈ ಮಹಿಳೆಯರ ಬದುಕನ್ನು ಬದಲಾಯಿಸಿದೆ. ಇವರಿಗೆ ಸ್ವರಕ್ಷಣೆ ಸೇರಿದಂತೆ ಹಲವು ವಿಷಯಗಳಲ್ಲಿ ತರಬೇತು ನೀಡಿ ಇಂಥದೊಂದು ಪರಿವರ್ತನೆ ತರಲಾಗಿದೆ.

ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ 12 ರಾಜ್ಯಗಳಲ್ಲಿ ಸುಮಾರು 12,226 ಮಲ ಸ್ವಚ್ಛಗೊಳಿಸುವವರನ್ನು ಗುರುತಿಸಲಾಗಿದ್ದು, ಇವರನ್ನು ಬೇರೆ ಕೌಶಲದ ಉದ್ಯೋಗಕ್ಕೆ ಅಣಿಗೊಳಿಸುವುದಕ್ಕೆ 67 ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೊದಲ ಭಾಗವಾಗಿ 2390 ಮಲ ಸ್ವಚ್ಛಗೊಳಿಸುವ ಕಾರ್ಮಿಕರನ್ನು ತರಬೇತಿ- ಮರುವಸತಿಗೆ ಆಯ್ದುಕೊಳ್ಳಲಾಗಿದೆ.

ಮೇರು, ಉಬರ್ ಸಂಸ್ಥೆಗಳು ಇಂಥವರಿಗೆ ಚಾಲಕ ಉದ್ಯೋಗವನ್ನು ಕೊಡುವುದಕ್ಕೆ ಆಸಕ್ತಿ ತೋರಿಸಿವೆ. ಉಳಿದವರನ್ನು ದೆಹಲಿಯ ಇ- ರಿಕ್ಷಾ ಚಾಲನೆಯಲ್ಲಿವ್ಯಾಪಕವಾಗಿ ಬಳಸಿಕೊಳ್ಳುವ ಆಲೋಚನೆ ಇದೆ.

Leave a Reply