ಭಟ್ಟಂಗಿಗಳು, ಕುಟುಂಬ ಸದಸ್ಯರನ್ನು ದೂರ ಇಡುವುದೇ ಯಡಿಯೂರಪ್ಪನವರ ಬಹುದೊಡ್ಡ ಸವಾಲು!

ಪಿ. ತ್ಯಾಗರಾಜ್

ಅಧಿಕಾರ ಜವಾಬ್ದಾರಿ ಹೆಚ್ಚಿಸುತ್ತದೆ. ಹೋಗಿ ಬಂದ ಅಧಿಕಾರವಂತೂ ಆ ಜವಾಬ್ದಾರಿಯನ್ನು ಇಮ್ಮಡಿಗೊಳಿಸುತ್ತದೆ. ಏಕೆಂದರೆ ಅಲ್ಲಿ ಅನುಭವ ಮಿಳಿತವಾಗಿರುತ್ತದೆ, ಮಿಗಿಲಾಗಿ ಪಾಠ ಕಲಿಸಿರುತ್ತದೆ.

ನಿಜ, ಪಕ್ಷದ ಬಹುತೇಕರ ಬಯಕೆಯಂತೆ ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅದು ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಇರಬಹುದು, ಗುಜರಾತ್ ನ ಕೇಶುಭಾಯಿ ಪಟೇಲ್ ಇರಬಹುದು. ಒಮ್ಮೆ ಪಕ್ಷ ತೊರೆದು ಹೋಗಿ ಮತ್ತೆ ಮರಳಿ ಬಂದವರಿಗೆ ಈ ರೀತಿ ಉನ್ನತ ಹುದ್ದೆಯನ್ನೇನಾದರೂ ಕೊಡಮಾಡಿದ್ದರೆ ಅದು ಯಡಿಯೂರಪ್ಪನವರಿಗೆ ಮಾತ್ರ. ಬೇರಾರಿಗೂ ಈ ರೀತಿ ಮಣೆ ಹಾಕಿದ ನಿದರ್ಶನವಿಲ್ಲ. ಹೀಗಾಗಿ ಯಡಿಯೂರಪ್ಪನವರ ಜವಾಬ್ದಾರಿ ಮುಮ್ಮಡಿಯಾಗಿದೆ.

ಹಾಗಾದರೆ ಮುಂದೇನು? ಅವರ ಮುಂದಿರುವ ಸವಾಲುಗಳು ಯಾವುವು? ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು, 2018 ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಸಂಕಲ್ಪ ಮಾಡಿದ್ದೇನೋ ಆಗಿದೆ. ಆದರೆ ಗುರಿ ಸಾಧನೆ ಅಷ್ಟು ಸುಲಭವೇ ಎಂಬಿತ್ಯಾದಿ ಪ್ರಶ್ನೆಗಳು ಇಲ್ಲಿ ಸಹಜ.

ಪಕ್ಷ ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪನವರದು ದೈತ್ಯಶಕ್ತಿ. ಕಾಲಿಗೆ ಚಕ್ರ ಕಟ್ಟಿಕೊಂಡು ಗಡಿಯಾರದ ಮುಳ್ಳು ನೋಡದೆ ರಾಜ್ಯದ ಮೂಲೆಮೂಲೆ ಸುತ್ತುವ ಅವರ ಆತ್ಮಶಕ್ತಿ ಮುಂದೆ ವಯಸ್ಸೂ ಪೇಲವ. ಸಿದ್ದರಾಮಯ್ಯ ಸರಕಾರದ ಮೂರು ವರ್ಷದ ಆಳ್ವಿಕೆಯಲ್ಲಿ ರಾರಾಜಿಸಿರುವ ವೈಫಲ್ಯಗಳನ್ನು, ಆ ವೈಫಲ್ಯಗಳು ಹೊರಸೂಸುತ್ತಿರುವ ಆಡಳಿತವಿರೋಧಿ ಅಲೆಯನ್ನು ಬಿಜೆಪಿ ಪರ ಮತಗಳಾಗಿ ಪರಿವರ್ತಿಸುವ ತಾಕತ್ತೂ ಅವರಿಗಿದೆ. ಆದರೆ ಆ ಪ್ರಕ್ರಿಯೆಗೆ ಪಕ್ಷ ಒಂದಷ್ಟು ಗುಣಗಳನ್ನು ಬೇಡುತ್ತದೆ. ಈ ಗುಣಗಳಲ್ಲಿ ಪಕ್ಷ ಸಂಘಟನೆಗೆ ಸಾಮೂಹಿಕ ಪ್ರಯತ್ನ ಎಂಬುದು ಪ್ರಮುಖವಾದುದ್ದಾಗಿದೆ. ಇದಕ್ಕೂ ಹಿಂದಿನ ಅನುಭವಗಳೇ ಆಧಾರ.

ನಿಜ, ಯಡಿಯೂರಪ್ಪನವರಿಗೆ ಅಧಿಕಾರದ ಬಲ ಏನು? ಅಧಿಕಾರ ಇದ್ದಾಗ ಮತ್ತು ಇಲ್ಲದಿದ್ದಾಗ ಜನ ಹೇಗೆ ವರ್ತಿಸುತ್ತಾರೆ? ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಜತೆ ಯಾರ್ಯಾರು ಇದ್ದರು, ಮಂತ್ರಿ ಮತ್ತಿತರ ಪದವಿಗಳನ್ನು ಹೇಗೆ ಪಡೆದುಕೊಂಡರು, ಮುಖ್ಯಮಂತ್ರಿ ಪದವಿ ಹೋದಾಗ ಅವರೆಲ್ಲ ಹೇಗೆ ಮುಖ ತಿರುಗಿಸಿದರು, ಮುಂದೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಯಾರ್ಯಾರು ತಮ್ಮೊಡನೆ ಬಂದರು, ಯಾರ್ಯಾರು ನಂಬಿಸಿ ಕೈಕೊಟ್ಟರು ಎಂಬುದು ಚೆನ್ನಾಗಿ ಗೊತ್ತಿದೆ. ಮೊನ್ನೆ ರಾಜ್ಯ ಕಾರ್ಯಕಾರಿಣಿ ಸಭೆ ಬಹಿಷ್ಕರಿಸಿದಾಗಲೂ ತಮಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದ ಜನ ಈಗ ಅಧ್ಯಕ್ಷ ಪದವಿ ಸಿಕ್ಕ ಯಡಿಯೂರಪ್ಪನವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದೇನೂ, ಪಾದಮುಟ್ಟಿ ನಮಸ್ಕರಿದ್ದೇನೂ, ಹಾರತುರಾಯಿ ಹಾಕಿ ಮೆರವಣಿಗೆಯಲ್ಲಿ ಕರೆತಂದದ್ದೇನೂ, ಹಾಡಿ ಹೊಗಳಿದ್ದೇನೂ…

ಗೆದ್ದಿತ್ತಿನ ಬಾಲ ಹಿಡಿಯೋರು ಯಾವ ಕಾಲಕ್ಕೂ ಇರ್ತಾರೆ. ಆದರೆ ಆ ಬಾಲಕ್ಕೆ ಕೈ ಹಾಕುವ ಮೊದಲು ಅವರೆಲ್ಲ ತಮ್ಮ ಪೂರ್ವ ನಡವಳಿಕೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದರೆ ತಮ್ಮ ಮನಸ್ಸಿಗಾದರೂ ಮರ್ಯಾದೆ ಕೊಟ್ಟಂತಿರುತ್ತಿತ್ತು. ಆದರೆ ನಿನ್ನೆ-ಮೊನ್ನೆವರೆಗೂ ಯಡಿಯೂರಪ್ಪ ಅವರನ್ನು ಕಾಲಕಸಕ್ಕಿಂತ ಕಡೆಯಾಗಿ ಕಂಡವರೆಲ್ಲ ಈಗ ಅದೇ ವ್ಯಕ್ತಿಗೆ ಅಧಿಕಾರ ಸಿಗುತ್ತಿದ್ದಂತೆ ಗೋಸುಂಬೆಗೆ ಮಿಗಿಲಾಗಿ ಬಣ್ಣ ಬದಲಾಯಿಸಿದ್ದಾರೆ. ಎಚ್ಚರ ವಹಿಸಬೇಕಿರುವುದು ಇಂಥವರ ಬಗ್ಗೆ.

ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ತಪ್ಪನ್ನು ಪುನಾರವರ್ತನೆ ಮಾಡದಿರಲು ಮತ್ತೆ ಅವರು ಅಧಿಕಾರದಲ್ಲೇ ಇರಬೇಕಾಗುತ್ತದೆ. ಆದರೆ ಹಿಂದಿನ ಅನುಭವಗಳನ್ನು ಆಧರಿಸಿ ಪ್ರತಿಪಕ್ಷ ಸ್ಥಾನದಿಂದಲೂ ಒಂದಷ್ಟು ತಪ್ಪುಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಕಾಪು ಸಿದ್ದಲಿಂಗಸ್ವಾಮಿ, ರೇಣುಕಾಚಾರ್ಯ, ಹಾಲಪ್ಪ ಅವರಂಥ ಭಟ್ಟಂಗಿಗಳನ್ನು ಅಕ್ಕಪಕ್ಕದಲ್ಲಿ ಇಟ್ಟುಕೊಳ್ಳುವುದು ಒಂದೆಡೆ ವ್ಯಕ್ತಿತ್ವಕ್ಕೆ ಧಕ್ಕೆ, ಮತ್ತೊಂದೆಡೆ ಅಧಿಕಾರಗ್ರಹಣ ಯಾನಕ್ಕೂ ಅಡ್ಡಿ. ಸಾರ್ವಜನಿಕ ವಲಯದಲ್ಲಿ ವರ್ಚಸ್ಸಿಲ್ಲದ ಇಂಥ ಚೇಲಾಗಳನ್ನು ನಿಭಾಯಿಸಿಕೊಳ್ಳುವುದೂ ಒಂದು ಸವಾಲೇ.

ಇಲ್ಲಿ ಇನ್ನೊಂದು ವಿಷಯ. 2013 ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಎರಡೂ ಸೋತ ನಂತರ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತಂದದ್ದು ಬಿಜೆಪಿ ಮೂಲ ನಾಯಕರು ಮತ್ತು ಕಾರ್ಯಕರ್ತರೇ ಹೊರತು, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬೇರೆ-ಬೇರೆ ಪಕ್ಷಗಳಿಂದ ಕರೆತಂದು ಅಧಿಕಾರ ಕೊಟ್ಟಿದ್ದರಲ್ಲ ಆ ನಾಯಕರಲ್ಲ. ಹೀಗಾಗಿ ಪೊಳ್ಳು-ಟೊಳ್ಳುಗಳನ್ನು ಜರಡಿಯಾಡಿ, ಸತ್ವವುಳ್ಳವರನ್ನು ಸಂಘಟನೆಗೆ ಬಿಟ್ಟುಕೊಳ್ಳಬೇಕಿದೆ.

ಇದೇ ರೀತಿ ಕುಟುಂಬ ಸದಸ್ಯರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಯಡಿಯೂರಪ್ಪನವರ ಮತ್ತೊಂದು ದೊಡ್ಡ ಸವಾಲು. ಹಿಂದೆ ಅಧಿಕಾರದಲ್ಲಿದಾಗ ಕುಟುಂಬ ಸದಸ್ಯರು ಮಾಡಿದ ಮಿತಿಮೀರಿದ ಹಸ್ತಕ್ಷೇಪದಿಂದ ಏನೆಲ್ಲ ಅನುಭವಿಸಬೇಕಾಯಿತು ಎಂಬುದು ಕಣ್ಣೆದುರಿಗೇ ಇದೆ. ಅಂದಿನ ಹಗರಣ, ಪ್ರಕರಣಗಳನ್ನು ಸಂಚು-ವಂಚನೆ ಎಂದು ಇವತ್ತು ಕರೆಯುವುದು ಜಾಣತನವಲ್ಲ. ಬದಲಿಗೆ ಅವತ್ತು ಆದಕ್ಕೆ ಆಸ್ಪದ ಕೊಡದಿದ್ದರೆ, ಆ ಆಸ್ಪದಕ್ಕೆ ಕುಟುಂಬ ಸದಸ್ಯರು ಕಾರಣರಾಗದಂತೆ ನೋಡಿಕೊಂಡಿದ್ದರೆ ಅದು ಜಾಣತನವಾಗುತ್ತಿತ್ತು. ಇವತ್ತು ಪುತ್ರ ರಾಘವೇಂದ್ರ ಸೇರಿದಂತೆ ಕುಟುಂಬದ ಕೆಲ ಸದಸ್ಯರು ಪಕ್ಷದ ಅಂಗಳದಲ್ಲಿರಬಹುದು. ಅದೇ ರೀತಿ ಪಕ್ಷದ ಅಂಗಳದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಂತವರು ಕುಟುಂಬದ ಪಡಸಾಲೆಯಲ್ಲಿರಬಹುದು. ಪಕ್ಷಕ್ಕೆ ಸೀಮಿತವಾಗಿ ಅವರವರ ಇತಿಮಿತಿಯಲ್ಲಿ ಅವರವರನ್ನು ಇಟ್ಟರೆ ಮಾತ್ರ ತಪ್ಪುಗಳು ಮರುಕಳಿಸುವುದಿಲ್ಲ. ಏಕೆಂದರೆ ಬರೀ ಕುಟುಂಬ ಬಲದಿಂದ ಮಾತ್ರ ಬಿಜೆಪಿ ಹಡಗು ಮುಂದಕ್ಕೆ ಸಾಗುವುದಿಲ್ಲ. ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರ ಭಾವನೆಗಳು ಏನಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಆ ಭಾವನೆಗಳಿಗೆ ಬೆಲೆ ಕೊಡಬೇಕು. ಆಗ ಮಾತ್ರ ಪ್ರಯಾಣ ಸುಗಮ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ಯಡಿಯೂರಪ್ಪ ನಾಯಕತ್ವದಿಂದಲೇ, ನಂತರ ಕಳೆದುಕೊಂಡದ್ದೂ ಅವರ ಗೈರಿನಿಂದಲೇ ಎಂಬುದೇನೋ ಸರಿ. ಆದರೆ ಮುಂದೆ ಅಧಿಕಾರಕ್ಕೆ ಬರಬೇಕಾದರೆ ಅವರ ಹಾಜರಿಯೊಂದೇ ಸಾಕಾಗುವುದಿಲ್ಲ. ಹಿಂದೆ ಅಧಿಕಾರಕ್ಕೆ ಬಂದಾಗ ಇದ್ದ ಸ್ಥಿತಿಗೂ ಇವತ್ತಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಆಗ ಜೆಡಿಎಸ್ ಅಧಿಕಾರ ಕೊಡಲಿಲ್ಲ ಎಂಬ ಅನುಕಂಪವಿತ್ತು. ಆದರೂ ಸಿಕ್ಕಿದ್ದು 110 ಸ್ಥಾನಗಳು ಮಾತ್ರ. ನಂತರ ನಡೆದದ್ದೆಲ್ಲ ಈಗ ಹಳೇ ಕತೆ. ಈಗ ಹೊಸಯಾನಕ್ಕೆ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಇಂಬುಕೊಟ್ಟಿದೆ. ಆದರೆ ಅದಷ್ಟೇ ಸಾಕಾಗುವುದಿಲ್ಲ. ಯಡಿಯೂರಪ್ಪನವರು ಪ್ರಬಲ ಲಿಂಗಾಯತ ಕೋಮಿಗೆ ಸೇರಿದವರು ಎಂಬುದು ಸರಿ. ಹಿಂದೆ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ, ಯಡಿಯೂರಪ್ಪನವರು ಸಿಎಂ ಆಗುವಲ್ಲಿ ಈ ಸಮುದಾಯದ ಬೆಂಬಲ ಗಣನೀಯ.  ಅದರ ಜತೆಗೆ ಎಲ್ಲ ವರ್ಗದವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಜಾತಿಯಿಂದ ಲಾಭವೂ ಇದೆ, ಅದೇ ಕಾಲಕ್ಕೆ ನಷ್ಟವೂ ಇದೆ ಎಂಬುದಕ್ಕೆ ‘ಆಹಿಂದ’ ಆಧರಿತ ಸಿದ್ದರಾಮಯ್ಯನವರ ಸರಕಾರ ಮತ್ತು ಆ ಸರಕಾರದೊಳಗಣ ಬೆಳವಣಿಗೆಗಳು ನಿದರ್ಶನ. ಹಿಂದೆ ಹಿಂದುಳಿದ ಹರಿಕಾರ ಎಂಬ ಹಣೆಪಟ್ಟಿ ಇದ್ದರೂ ದೇವರಾಜ ಅರಸು ಅವರು ಯಶಸ್ವಿ ನಾಯಕ ಆಗಲು ಕಾರಣ ಆಗಿದ್ದು ಎಲ್ಲರನ್ನೂಒಟ್ಟಿಗೆ ಕೊಂಡೊಯ್ದ ಗುಣದಿಂದ. ಮೇಲ್ನೋಟಕ್ಕೆ ಬಿಜೆಪಿ ಮೇಲ್ವರ್ಗದವರ ಪಕ್ಷ ಎಂದು ಕರೆಯಿಸಿಕೊಂಡಿದ್ದರೂ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಸರಕಾರದ ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ಒಂದಾಗಿ ಕಂಡಿದ್ದರು. ಅದೀಗ ಸರಕಾರದ ಆಚೆ, ಪಕ್ಷದ ಮಟ್ಟದಲ್ಲೂ ಬಹುನಿರೀಕ್ಷಿತವಾಗಿದೆ.

ಏಕೆಂದರೆ ರಾಜ್ಯಾಧ್ಯಕ್ಷರಾದ ನಂತರ ಯಡಿಯೂರಪ್ಪನವರಿಗೆ ಆ ಸ್ಥಾನ ಸುಲಭವಾಗಿ ಕಾಣುತ್ತಿರಬಹುದು. ಆದರೆ ಆಗುವವರೆಗೂ ಅದೆಷ್ಟು ಕಷ್ಟದ್ದಾಗಿತ್ತು ಎಂಬುದನ್ನು ಪಕ್ಷದೊಳಗಣ ತಡೆ ರಾಜಕೀಯ ರುಜುವಾತುಪಡಿಸಿದೆ. ಹೀಗಾಗಿ ಸದಾ ಚಾಲ್ತಿಯಲ್ಲಿ ಇರಬಹುದಾದ ಈ ರಾಜಕೀಯ ಗೆಲ್ಲಲು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮಂತ್ರವನ್ನು ಉಚ್ಛರಿಸಬೇಕಿದೆ. ಅನುಷ್ಠಾನಕ್ಕೆ ತರಬೇಕಿದೆ. ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವ ದಿಲ್ಲಿನಾಯಕರು ಅವರ ಚಲವವಲನಗಳ ಮೇಲೂ ನಿಗಾ ಇಟ್ಟಿರುತ್ತಾರೆ. ಈ ನಿಗಾ ಪಕ್ಕಕ್ಕೆ ಸರಿಯುವಂತೆ ಮಾಡುವುದೂ ಯಡಿಯೂರಪ್ಪನವರ ನಿಜವಾದ ಸವಾಲು.

Leave a Reply