ಮಹಿಳೆಯರ ದೇಗುಲ ಪ್ರವೇಶ ಸಂಭ್ರಮಿಸಿದ್ದೀರಿ, ಹೆಮ್ಮೆಪಡಬೇಕಾದ ಈ ಸೇನಾ ಪ್ರವೇಶದ ಬಗ್ಗೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಶನಿ ಸಿಂಗ್ಣಾಪುರ ದೇಗುಲದ ಗರ್ಭಗುಡಿಗೆ ಮಹಿಳೆಯರ ಪ್ರವೇಶ ಸಾಧ್ಯವಾಗಿದ್ದು ಭಾರಿ ಸುದ್ದಿಯಾಗುತ್ತಿರುವುದು ಸರಿಯಷ್ಟೆ. ಆದರೆ ದೇಶದ ಇನ್ನೊಂದು ವಲಯದಲ್ಲೂ ಸಂಪ್ರದಾಯ ಬದಲಾಗಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿರುವ ವಿದ್ಯಮಾನವೊಂದು ಜರುಗಿದೆ.

ಅಸ್ಸಾಂ ರೈಫಲ್ಸ್…

181 ವರ್ಷಗಳ ಇತಿಹಾಸವಿರುವ ಭಾರತದ ಅರೆಸೇನಾ ಪಡೆ. ನಾಲ್ಕು ದಿನಗಳ ಹಿಂದೆ ಇದು ಇತಿಹಾಸವೊಂದಕ್ಕೆ ಸಾಕ್ಷಿಯಾಗಿದೆ. ಇದೀಗ ಅಸ್ಸಾಂ ರೈಫಲ್ಸ್ ಎಂದರೆ ಪುರುಷ ಸೈನಿಕರ ಚಿತ್ರಣವನ್ನಷ್ಟೇ ಕಣ್ಣಿಗೆ ತಂದುಕೊಳ್ಳಬೇಕಿಲ್ಲ. ಗುರುವಾರ 100 ಮಹಿಳಾ ಯೋಧರನ್ನೊಳಗೊಂಡ ತಂಡದ ಸೇರ್ಪಡೆಗೆ ಗೃಹಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ.

ನಾಗಾಲ್ಯಾಂಡ್ ನ ಶೊಖುವಿಯಲ್ಲಿನ ಅಸ್ಸಾಂ ರೈಫಲ್ ತರಬೇತಿ ಕೇಂದ್ರ ಮತ್ತು ಶಾಲೆಯಲ್ಲಿ ತೇರ್ಗಡೆ ಹೊಂದಿದ 212 ಮಹಿಳಾ ಸೈನಿಕರ ತಂಡದ ಒಂದು ಭಾಗ ಈಗ ಸೇನೆಗೆ ಸೇರ್ಪಡೆಯಾಗಿದೆ. ಇವರನ್ನು ಸೇನೆಯ ವಿವಿಧ ತುಕಡಿಗಳಿಗೆ ನೇಮಕ ಮಾಡಲಿದ್ದು, ಪತ್ತೆ ಕಾರ್ಯಾಚರಣೆ, ಮಹಿಳಾ ಆರೋಪಿಗಳ ವಿಚಾರಣೆ, ಮಹಿಳಾ ಜನ ಸಮೂಹ ಅಥವಾ ಗುಂಪುಗಳು ಪ್ರತಿಭಟನೆ ನಡೆಸುವ ಸಂದರ್ಭಗಳಲ್ಲಿ ಚದುರಿಸಲು ಮತ್ತು ನಿಯತ್ರಿಸಲು ನೇಮಕ ಹಾಗೂ ಸಂಚಾರಿ ಚೆಕ್ ಪೊಸ್ಟ್ ಗಳಲ್ಲಿ ನಿಯೋಜಿಸಲ್ಪಡಲಿದ್ದಾರೆ.

ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣೆ ಕಾರ್ಯಾಚರಣೆ ವೇಳೆ ಒತ್ತಡ ಹೆಚ್ಚು ಇರಲಿದೆ. ಆದರೆ ಈ ವೇಳೆ ಮಹಿಳಾ ಸಿಬ್ಬಂದಿ ಕೊರತೆ ಎದುರಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಇದು ಮಾನವ ಹಕ್ಕುಗಳ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಮಹಿಳಾ ಸೈನಿಕರು ಇಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸಿದರೆ ಸೇನೆಯ ಮೇಲಿನ ಪರಿಶುದ್ಧ ರೂಪ (ಕ್ಲೀನ್ ಇಮೇಜ್) ವನ್ನು ಉಳಿಸಿಕೊಳ್ಳಲು ಸಹಕಾರಿಯಾಗಲಿದೆ.

Leave a Reply