ಸುದ್ದಿಸಂತೆ: ಕೇಜ್ರಿಗೆ ಶೂ ಎಸೆತ, ಐಪಿಎಲ್ ಕುರಿತು ಅನುರಾಗ್-ಫಡ್ನವೀಸ್ ಭಿನ್ನರಾಗ, ಕೊಹಿನೂರ್ ವಜ್ರ ವಿಚಾರ…

ಬಿ ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದ ಯುಗಾದಿ ವಿದ್ಯಮಾನದ ಗುಂಗಲ್ಲೇ ಮೀಯುತ್ತಿದೆ ಕರ್ನಾಟಕ ರಾಜಕೀಯ ವಲಯ. ಇದು ಶುಕ್ರವಾರ ರಾತ್ರಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಂಡುಬಂದ ಸಡಗರ.

ಸ್ವಪಕ್ಷದ ಕಾರ್ಯಕರ್ತನಿಂದಲೇ ಮುಖ್ಯಮಂತ್ರಿ ಕೇಜ್ರಿವಾಲ್ ಮೇಲೆ ಶೂ ಎಸೆತ!

ಜನಪ್ರತಿನಿಧಿಗಳ ಮೇಲೆ ಶೂ ಎಸೆಯೋದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿರೋದು ಗೊತ್ತೆ ಇದೆ. ಇಷ್ಟು ದಿನ ವಿರುದ್ಧ ಪಕ್ಷದವರು ಅಥವಾ ಇತರ ಸಾರ್ವಜನಿಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಈ ಕೃತ್ಯಕ್ಕೆ ಮನಸ್ಸು ಮಾಡುತ್ತಿದ್ದರು. ಆದರೆ ಇವುಗಳಿಗೆ ಭಿನ್ನವಾಗಿ ಸ್ವಪಕ್ಷದ ನಾಯಕರ ಮೇಲೆ ಶೂ ಎಸೆದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ. ಅದೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು.

ಏಪ್ರಿಲ್ 15 ರಿಂದ ದೆಹಲಿಯಲ್ಲಿ ಎರಡನೇ ಬಾರಿಗೆ ಸಮ-ಬೆಸ ಸಂಖ್ಯೆ ಆಧಾರಿತ ವಾಹನ ಸಂಚಾರ ಯೋಜನೆ ಘೋಷಣೆಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಅವರದೇ ಪಕ್ಷದೊಂದಿಗೆ ಬೆಸೆದುಕೊಂಡಿರುವ ಎಎಪಿ ಸೇನೆಯ ಕಾರ್ಯಕರ್ತ ವೇದ್ ಪ್ರಕಾಶ್ ಎಂಬಾತ ಶೂ ಎಸೆದಿದ್ದಾನೆ. ಆದರೆ ಆದೂ ಟೇಬಲ್ ಮೇಲೆ ಬಿದ್ದ ಕಾರಣ ಯಾರಿಗೂ ತಾಗಲಿಲ್ಲ. ನಂತರ ಪ್ರಕಾಶ್ ನನ್ನು ಎಎಪಿ ಕಾರ್ಯಕರ್ತರು ಹೊರಗೆ ಎಳೆದೊಯ್ದು ಹಿಗ್ಗಾಮುಗ್ಗ ತಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶೂ ಎಸೆಯಲು ಕಾರಣ ನೀಡಿರುವ ಪ್ರಕಾಶ್, ಸಿಎನ್ ಜಿ ಸ್ಟಿಕ್ಕರ್ ಗಳ ವಿತರಣೆ ಮತ್ತು ಹಕ್ಕಿನ ಬಗೆಗಿನ ಆಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದಿದ್ದಾನೆ.

ಐಪಿಎಲ್ ಪಂದ್ಯಗಳು ಸ್ಥಳಾಂತರಗೊಂಡರೆ ಮಹಾರಾಷ್ಟ್ರಕ್ಕೆ 100 ಕೋಟಿ ನಷ್ಟ!

ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಐಪಿಎಲ್ ಟಿ 20 ಕ್ರಿಕೆಟ್ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಂಡರೆ ರಾಜ್ಯಕ್ಕೆ ₹100 ಕೋಟಿಗೂ ಹೆಚ್ಚು ನಷ್ಟವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಮುಖ್ಯಮಂತ್ರಿ ದೇವೆಂದ್ರ ಪಡ್ನವಿಸ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮಹಾರಾಷ್ಟ್ರದಿಂದ ಐಪಿಎಲ್ ಟಿ 20 ಕ್ರಿಕೆಟ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿದರೆ ನಮಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ದೇವೆಂದ್ರ ಪಡ್ನವಿಸ್ ಅವರಿಗೆ ಅವರದೇ ಪಕ್ಷದ ಸಹೋದ್ಯೋಗಿ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ರಾಗ್ ಠಾಕೂರ್ ಇಂಥದೊಂದು ಮನವರಿಕೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಡ್ನವಿಸ್ ಅವರು ಶುಕ್ರವಾರ ಈ ಹೇಳಿಕೆ ನೀಡಿದ್ದರು.

ಕೊಹಿನೂರ್ ವಜ್ರ ವಿಚಾರಕ್ಕೆ ಕೇಂದ್ರಕ್ಕೆ ನೋಟಿಸ್

ಕೊಹಿನೂರ್ ವಜ್ರವನ್ನು ದೇಶಕ್ಕೆ ವಾಪಸ್ಸು ತರುವ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡುವಂತೆ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ನೇತೃತ್ವದ ಏಕ ಸದಸ್ಯ ಪೀಠ, ಸರ್ಕಾರದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಕೊಹಿನೂರ್ ವಜ್ರದ ಮಾಲಿಕತ್ವ ಪಡೆಯಲು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕ ಕೂಡ ಪ್ರಯತ್ನಿಸುತ್ತಿದ್ದು, ಸರ್ಕಾರದ ನಿಲುವಿನ ಬಗ್ಗೆ ಪಿ ಐ ಎಲ್ ನಲ್ಲಿ ಪ್ರಶ್ನಿಸಲಾಗಿದೆ.

Leave a Reply