ಕೊಲ್ಲಂ ದೇವಾಲಯದ ಪಟಾಕಿ ಪರಾಕ್ರಮಕ್ಕೆ 100ಕ್ಕೂ ಹೆಚ್ಚು ಸಾವು, ಧಾರ್ಮಿಕ ಆಚರಣೆಗಳು ಬಲಾಬಲ ಪ್ರದರ್ಶನವಾದಾಗ ಇದೇ ಆಗೋದು…

ಡಿಜಿಟಲ್ ಕನ್ನಡ ಟೀಮ್

ಕೇರಳದ ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿ ಹೊಸ ವರ್ಷವನ್ನು ಪಟಾಕಿ ಸ್ಪರ್ಧೆ ಮೂಲಕ ಸ್ವಾಗತಿಸುವುದಕ್ಕೆ ಸ್ಪರ್ಧೆ ಏರ್ಪಟ್ಟಿದ್ದರಿಂದ ಭಾರಿ ಅನಾಹುತವಾಗಿದೆ. ಈ ಪಟಾಕಿ ಸ್ಪರ್ಧೆ ಸ್ಫೋಟಕ್ಕೆ ಕಾರಣವಾಗಿ ಅಂದಾಜು 100 ಮಂದಿ ಮೃತರಾಗಿದ್ದಾರೆ ಹಾಗೂ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೊಲ್ಲಂಗೆ ತುರ್ತು ಭೇಟಿ ನೀಡಲಿದ್ದಾರೆ.

ಇಂಥದೊಂದು ಭಾರಿ ಅವಘಡಕ್ಕೆ ಕಾರಣವಾಗಿದ್ದಾದರೂ ಏನು? ಈಗ ನಾನಾ ಮಾಧ್ಯಮಗಳಲ್ಲಿ ತೆರೆದುಕೊಳ್ಳುತ್ತಿರುವ ಚಿತ್ರಣದ ಪ್ರಕಾರ ಪಟಾಕಿ ಹಚ್ಚುವಲ್ಲಿ ಏರ್ಪಟ್ಟ ಸ್ಪರ್ಧೆ. ಪ್ರತಿವರ್ಷ ಸ್ಥಳೀಯರು ತಮ್ಮ ಪಾಡಿಗೆ ಆಚರಿಸಿಕೊಂಡು ಬರುತ್ತಿದ್ದ ಕಾರ್ಯಕ್ರಮದಲ್ಲಿ ಪಟಾಕಿ ಮತ್ತಿತರ ಸಂಭ್ರಮಗಳು ಅಷ್ಟೇ ಜನಸಮೂಹಕ್ಕೆ ಸೀಮಿತವಾಗಿ ಇರುತ್ತಿದ್ದವು. ಈ ಕೊಲ್ಲಂನ ಹೊರಗಿನವರೂ ಇದರಲ್ಲಿ ಪಾಲ್ಗೊಂಡು ಪಟಾಕಿ ಹಚ್ಚುವ ಸಡಗರದಲ್ಲಿ ಪಾಲ್ಗೊಳ್ಳುವುದಕ್ಕೆ ಉತ್ಸುಕರಾದರು. ಇದಕ್ಕೆ ಸ್ಥಳೀಯಾಡಳಿತದಿಂದ ಒಪ್ಪಿಗೆ ಸಿಗಲಿಲ್ಲವಾದರೂ ಉನ್ನತ ಹಂತದಿಂದ ಒಪ್ಪಿಗೆ ಪಡೆದುಕೊಂಡುಬಂದು ಇವರೆಲ್ಲ ದೇವಾಲಯ ಪ್ರಾಂಗಣದಲ್ಲಿ ಪಟಾಕಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದೇ ಅವಘಡಕ್ಕೆ ಕಾರಣ ಅಂತ ಕೇರಳದ ಬಿಜೆಪಿ ಅಧ್ಯಕ್ಷ ರಾಜಗೋಪಾಲನ್ ಆರೋಪಿಸಿದ್ದಾರೆ. ಆದರೆ ಈ ಭಾಗವಹಿಸುವಿಕೆಗೆ ಸರ್ಕಾರದಿಂದ ಯಾವುದೇ ಅನುಮತಿ ನೀಡಿರಲಿಲ್ಲ ಅಂತಿದಾರೆ ಮುಖ್ಯಮಂತ್ರಿ ಒಮನ್ ಚಾಂಡಿ.

ದೇವಾಲಯಕ್ಕೆ ಹೊಂದಿಕೊಂಡಿದ್ದ ಬಯಲಿನಲ್ಲಿ ತಡರಾತ್ರಿ ಪಟಾಕಿ ಹಚ್ಚುವ ತುರುಸು ಪ್ರಾರಂಭವಾಯಿತು. ಸುಮಾರು 15 ಸಾವಿರ ಜನ ಆಚರಣೆಯಲ್ಲಿ ಪಾಲ್ಗೊಂಡಿದ್ದರಿಂದ ಅಲ್ಲಿನ ಸ್ಥಿತಿಯೂ ಬಿರುಸಾಗಿಯೇ ಇತ್ತು. ಸುಮಾರು 3 ಗಂಟೆ ನಸುಕಿಗೆ ಪಟಾಕಿ ಹಚ್ಚುವ ಪೈಪೋಟಿ ತಾರಕಕ್ಕೆ ಹೋಗಿ, ಅಲ್ಲೇ ಸಮೀಪದಲ್ಲಿ ಗುರುವಾರದ ವಿಶು ಉತ್ಸವಕ್ಕೆಂದು ಶೇಖರಿಸಿ ಇಟ್ಟಿದ್ದ ಪಟಾಕಿ ದಾಸ್ತಾನಿಗೆ ಕಿಡಿ ಸೋಕಿತು. ನಂತರ ಕೇಳಬೇಕೆ? ಯಾರು, ಹೇಗೆ ತಡೆದಾರು? ದೇವಾಲಯದಂಗಳದಲ್ಲಿ ನೂರಕ್ಕೂ ಹೆಚ್ಚಿದ ಜೀವನಷ್ಟವಾಗಿದೆ.

ಪ್ರಧಾನಿಯವರು ಈಗಾಗಲೇ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಘೋಷಿಸಿದ್ದಾರೆ. ಕೋಸ್ಟ್ ಗಾರ್ಡ್ ವೈದ್ಯಕೀಯ ತಂಡ, ಸೇನಾತಂಡಗಳೆರಡೂ ಪರಿಸ್ಥಿತಿ ನಿರ್ವಹಣೆಗೆ ತೆರಳಿವೆ.

ಇನ್ನೇನು, ಕೇರಳವು ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಇರುವುದರಿಂದ ರಾಜಕೀಯ ಪಕ್ಷಗಳು ಒಬ್ಬರೊಬ್ಬರ ಮೇಲೆ ತಪ್ಪು ಎತ್ತಿಹಾಕುವುದನ್ನು ಕಾಣಬಹುದೇನೋ. ಅನುಮತಿ ಕೊಟ್ಟವರ್ಯಾರು, ಒಂದು ಉತ್ಸವ ಈ ಪರಿಯ ಅಪಾಯಕಾರಿ ಪೈಪೋಟಿ ಆಗಿದ್ದಕ್ಕೆ ದಾರಿ ಮಾಡಿಕೊಟ್ಟವರಾರು ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಬೇಕು.

ಆದರೆ…

ಕೊನೆಗೂ ಬುದ್ಧಿ ಕಲಿಯಬೇಕಾದವರು ಜನ. ಪ್ರತಿ ಊರೂ ತನ್ನದೇ ಆದ ಧಾರ್ಮಿಕ ಆಚರಣೆಗಳನ್ನು ತನ್ನದೇ ಪರಿಧಿಯಲ್ಲಿ ಮಾಡಿಕೊಂಡು ಬರುತ್ತಿದ್ದ ವಾತಾವರಣವೇ ಚೆಂದವಿತ್ತು. ಅದ್ಯಾವಾಗ ದೇವಾಲಯಗಳು ಬಲಾಬಲ ಪ್ರದರ್ಶನದ ಅಂಗಳವಾಗಿಬಿಟ್ಟವು ಎಂಬುದೇ ಚೋದ್ಯದ ವಿಷಯ. ಪಟಾಕಿ ಹಚ್ಚಬಾರದಿತ್ತು, ಜಾಗಟೆ ಹೊಡೆಯಬಾರದಿತ್ತು ಎಂಬ ಅತಿ ಆದರ್ಶವಾದಿತನ ಯಾರಿಗೂ ಬೇಕಿಲ್ಲ. ಆದರೆ ಇದು ಪೈಪೋಟಿಯ ವಿಷಯವಾಗಿರುವುದು ಇಂಥದೇ ದುರಂತಗಳಿಗೆ ಎಡೆಮಾಡಿಕೊಡಬಲ್ಲದು ಅಷ್ಟೆ ಎಂಬ ಪಾಠವೊಂದನ್ನು ಮಾತ್ರ ಈ ಕ್ಷಣಕ್ಕೆ ಕೊಲ್ಲಂ ದೇವಾಲಯದ ಪಟಾಕಿ ದುರಂತದಿಂದ ಕಲಿತುಕೊಳ್ಳಬಹುದು ಎನಿಸುತ್ತದೆ.

ಇದೀಗ ಟಿವಿ ವಾಹಿನಿಗಳ ಜತೆ ಮಾತನಾಡುತ್ತಿರುವ ದೇವಾಲಯದ ಬಳಿಯ ಕೆಲ ನಿವಾಸಿಗಳು ಹೇಳುತ್ತಿದ್ದಾರೆ- 2012ರಿಂದಲೂ ಈ ಪಟಾಕಿ ಪರಾಕ್ರಮ ತೀರ ಕೆಟ್ಟಹಂತಕ್ಕೆ ಮುಟ್ಟಿತ್ತು. ಮನೆಯಲ್ಲಿ ವೃದ್ಧರಿದ್ದಾರೆ, ಈ ಗಲಾಟೆ ಕಡಿಮೆ ಮಾಡಿ ಎಂದು ವಿನಂತಿಸಿಕೊಂಡರೆ ಅವರಿಗೇ ನಿಂದಿಸುವ ಮಟ್ಟಕ್ಕೆ ಹೋಗಿತ್ತು.

ಹೇಳಿ- ಅದ್ಯಾವ ಧರ್ಮ ವೃದ್ಧರು- ಮಕ್ಕಳಿಗೆಲ್ಲ ಭಯ ಹುಟ್ಟಿಸುವಂತೆ ಭಗವಂತನ ಆರಾಧನೆ ಮಾಡಿ ಅಂತ ಹೇಳುತ್ತದೆ? ಅಕ್ಕಪಕ್ಕದವರಿಗೆ ಕಿರುಕುಳ ನೀಡಿ ಅದ್ಯಾವ ಒಗ್ಗಟ್ಟು ಸಾಧಿಸಲು ಸಾಧ್ಯ, ಇಂಥ ಬಲಾಬಲ ಪ್ರದರ್ಶನಗಳ ಉದ್ದೇಶವಾದರೂ ಏನು? ಇದರಿಂದ ಯಾವ ಧರ್ಮಕ್ಕೆ ಅದೇನು ಲಾಭವಾಗಲು ಸಾಧ್ಯ?

ದೇವಾಲಯ ಅಂಗಳದಲ್ಲಿ ಪಟಾಕಿ ಪರಾಕ್ರಮಕ್ಕೆ ಅನುಮತಿ ನೀಡಿದವರು, ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ದೇವಾಲಯ ಸಮಿತಿಯವರ ಪಾತ್ರ ಇವೆಲ್ಲವೂ ವಿಚಾರಣೆಗೆ ಒಳಗಾಗಲಿ. ಇದರ ಜತೆಗೆ ಶ್ರದ್ಧಾಳುಗಳು, ಆಚರಣೆ ನಿಷ್ಠರು ಎಂದುಕೊಂಡಿರುವ ಸಾಮಾನ್ಯರೆಲ್ಲ, ಧಾರ್ಮಿಕ ಆಚರಣೆಗಳು ಯಾವುದೋ ಒಂದು ಬಗೆಯಲ್ಲಿ ಬಲಾಬಲ ಪ್ರದರ್ಶನದ ವೇದಿಕೆ ಆಗಬೇಕಾದ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಕಂಡುಕೊಳ್ಳಬೇಕಿದೆ.

Leave a Reply