ಜಗತ್ತಿನ ಭವಿಷ್ಯ ಅರಿಯಬೇಕಾದರೆ ಬುದ್ಧಿವಂತ ಧನಿಕರು ಎಲ್ಲಿ ಹಣ ಹೂಡುತ್ತಿದ್ದಾರೆ ಅಂತ ಗಮನಿಸಬೇಕು!

ಚೈತನ್ಯ ಹೆಗಡೆ

ಜಾನ್ ಡ್ಯಾವಿಸನ್ ರಾಕ್ಫೆಲ್ಲರ್.

ಅಮೆರಿಕದಲ್ಲಿ ಈ ಹೆಸರಿಗೆ ಪರಿಚಯದ ಅಗತ್ಯವಿಲ್ಲ. ಅವೆಷ್ಟೋ ಸಂಸ್ಥೆಗಳಿಗೆ ರಾಕ್ಫೆಲ್ಲರ್ ಹೆಸರಿಟ್ಟು ಅಜರಾಮರವಾಗಿಸಲಾಗಿದೆ.

ಯಾರೀತ?

1870 ರಲ್ಲಿ ಸ್ಟ್ಯಾಂಡರ್ಡ್ ಆಯಿಲ್ ಕಂಪನಿ ಸ್ಥಾಪಿಸಿ ಪೆಟ್ರೋಲಿಯಂ ಉದ್ದಿಮೆಗೆ ಕ್ರಾಂತಿಕಾರಕ ತಿರುವು ಕೊಟ್ಟವನೆಂದು ಜಗತ್ತಿನ ಚರಿತ್ರೆ ಈತನನ್ನು ನೆನೆಯುತ್ತದೆ. ತೈಲ ವಹಿವಾಟಿನಲ್ಲೇ ಅಗರ್ಭ ಶ್ರೀಮಂತನಾದ. ಆತನ ಮರಣಾನಂತರ ತೈಲಗಳಿಕೆ ಸಂಪತ್ತು ಕುಟುಂಬದವರ ತೆಕ್ಕೆಯಲ್ಲೇ ಇದೆ.

ಇಂತಿಪ್ಪ ಸಂದರ್ಭದಲ್ಲಿ… ಈಗ ರಾಕ್ಫೆಲ್ಲರ್ ಕುಟುಂಬ ಪಳೆಯುಳಿಕೆ ಇಂಧನಗಳಾದ ತೈಲ, ಕಲ್ಲಿದ್ದಲು ಇಂಥ ಯಾವ ವಹಿವಾಟಿಗೂ ತಾನು ಹಣ ಹಾಕುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡಿದೆ. ಜಗತ್ತಿನ ಭವಿಷ್ಯ ಇರೋದು ನವೀಕೃತ ಇಂಧನಮೂಲಗಳ ಅಭಿವೃದ್ಧಿಯಲ್ಲಿ ಅಂತಲೂ ಪ್ರತಿಪಾದಿಸುತ್ತಿದೆ.

ಈ ನಿಟ್ಟಿನಲ್ಲಿ ಮಾರ್ಚ್ ನಲ್ಲಿ ನಡೆದ ಬಹುದೊಡ್ಡ ವಿದ್ಯಮಾನ ಎಂದರೆ, ತೈಲ ಕಂಪನಿ ಎಕ್ಸೊನ್ ಮೊಬಿಲ್ ನಲ್ಲಿ ಹೂಡಿದ್ದ ಬಂಡವಾಳವನ್ನು ಹಿಂತೆಗೆಯುತ್ತಿರುವುದು. ಈ ಎಕ್ಸೊನ್ ಮೊಬಿಲ್ ಮತ್ತೇನಲ್ಲ, ರಾಕ್ಫೆಲ್ಲರ್ ಕುಟುಂಬ ತೈಲದ ವಹಿವಾಟಿನಿಂದ ದೂರ ಸರಿದಾಗ, ಅವರ ಸ್ಟ್ಯಾಂಡರ್ಡ್ ಆಯಿಲ್ ಕಂಪನಿಯನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿದ್ದ ಕಂಪನಿ. ಇದೀಗ ಅಲ್ಲಿಂದ ಹೂಡಿಕೆ ಹಿಂಪಡೆಯುತ್ತಿರೋದಕ್ಕೂರಾಕ್ಫೆಲ್ಲರ್ ಕುಟುಂಬ ಕಾರಣ ಕೊಟ್ಟಿದೆ. ಅದೆಂದರೆ- ಎಕ್ಸೊನ್ ಮೊಬಿಲ್, ಹವಾಮಾನ ವೈಪರಿತ್ಯದ ಪರಿಣಾಮದ ಬಗೆಗಿನ ಪ್ರಮುಖ ಅಂಶಗಳನ್ನು ಸಾರ್ವಜನಿಕರಿಂದ ಮುಚ್ಚಿಟ್ಟು, ತಪ್ಪು ದಾರಿಗೆ ಎಳೆದ ಆರೋಪದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಲ್ಲಿ ತನಿಖೆಗೆ ಒಳಪಟ್ಟಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ರಾಕ್ ಫೆಲರ್ ಕುಟುಂಬ ಎಕ್ಸೊನ್ ಮೊಬಿಲ್ ನಿಂದ ಹಿಂದೆ ಸರಿಯುತ್ತಿದೆ.

ಈ ಕುಟುಂಬ ‘ದ ರಾಕ್ ಫೆಲರ್ ಫ್ಯಾಮಿಲಿ ಫಂಡ್’ ಎಂಬ ಟ್ರಸ್ಟ್ ಆರಂಭಿಸಿದ್ದು, 130 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಪರಿಸರವಾದಕ್ಕೆ, ಮಹಿಳಾ ಹಕ್ಕಿಗಾಗಿ ಮತ್ತು ನಾಗರೀಕ ಸೇವೆಗಾಗಿ ವ್ಯಯಿಸುವುದಕ್ಕೆ ಎತ್ತಿಟ್ಟಿದೆ.

ಹಾಗಂತ, ರಾಕ್ಫೆಲ್ಲರ್ ಕುಟುಂಬಕ್ಕೆ ಭಲೇ ಭಲೇ ಎಂದೇನೂ ಹೇಳಬೇಕಿಲ್ಲ. ಹೊಟ್ಟೆ ತುಂಬಿದವರ ನಿರ್ಧಾರ ಬದಲಾವಣೆಗಳು ಇನ್ಯಾವುದೋ ಕಾರ್ಯತಂತ್ರದ ಆರಂಭವಾಗಿರಲಿಕ್ಕೆ ಸಾಕು ಎಂಬ ಅನುಮಾನದಿಂದ ನಾವು ಅವನ್ನು ನೋಡಿದರೆ ತಪ್ಪೇನಾಗದು. ಏಕೆಂದರೆ ಕಚ್ಚಾತೈಲದ ಬೆಲೆ ಕುಸಿಯುತ್ತಲೇ ಸಾಗಿದೆ. ಹೀಗೆ ಉದ್ಯಮ ಮುಳುಗಡೆ ಹಾದಿಯಲ್ಲೇ ಇರುವಾಗ, ಅದರ ಜತೆ ಅಂತರ ಕಾಪಾಡಿಕೊಂಡು, ನವೀಕೃತ ಇಂಧನ- ಪರಿಸರ ಪೂರಕ ನಡೆ ಎಂದೆಲ್ಲ ಹೀರೋಗಿರಿ ತಂದುಕೊಳ್ಳುವ ಉದ್ದೇಶವೂ ಇದ್ದಿರಬಹುದು.

ಇಲ್ಲಿ ನಾವು ಅರಿತುಕೊಳ್ಳಬೇಕಾದ ಅಂಶ ಇಷ್ಟೆ.

ಇಂಥ ಮಹಾ ಶ್ರೀಮಂತರೇ ತೈಲ ಉದ್ಯಮದಿಂದ ದೂರಾಗುತ್ತಿದ್ದಾರೆ ಅಂತಂದ್ರೆ ಸದ್ಯೋಭವಿಷ್ಯದಲ್ಲಿ ತೈಲಯುಗ ಮುಕ್ತಾಯವಾಗೋದು ಹೌದು. ಹಾಗಾದರೆ ಇಲ್ಲಿ ತುಂಡಾಗುತ್ತಿರುವ ರೇಖೆ ಇನ್ನೆಲ್ಲಿ ಬೆಳೆಯುತ್ತಿದೆ?

ಈಗ ನಾವು ಇನ್ನೊಂದು ಹೆಸರನ್ನು ಗಮನಿಸಬೇಕು. ಎಲಾನ್ ಮಸ್ಕ್!

musk

ಈ ತೈಲಾಧಾರಿತ ಸಂಚಾರವೆಲ್ಲ ಕುಗ್ಗಿ, ಭವಿಷ್ಯದಲ್ಲೇನಿದ್ದರೂ ವಿದ್ಯುತ್ ಚಾಲಿತ ವಾಹನಗಳೇ ಹೆಚ್ಚಿರುತ್ತವೆ ಎಂಬ ಸಾಧ್ಯತೆಯನ್ನು ದೃಢವಾಗಿ ನಂಬಿ, ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ದೊಡ್ಡಮಟ್ಟದಲ್ಲಿ ತೊಡಗಿಸಿಕೊಂಡಿರುವಾತ ಈ ಎಲಾನ್ ಮಸ್ಕ್.

ಟೆಸ್ಲಾ ಮೋಟಾರ್ಸ್, ಸೋಲಾರ್ ಸಿಟಿ, ಸ್ಪೇಸ್ ಎಕ್ಸ್ ಹೀಗೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ 44ರ ಹರೆಯದ ಈ ಅಮೆರಿಕನ್ ಉದ್ಯಮಿಯದ್ದು ನಿಜಕ್ಕೂ ಆಸಕ್ತಿದಾಯಕ ಚಟುವಟಿಕೆ. ಈತನ ಬಹುತೇಕ ಪ್ರಯತ್ನಗಳೆಲ್ಲ ನವೀಕೃತ ಇಂಧನ ಮೂಲವನ್ನು ಆಧರಿಸಿಕೊಂಡು ರೂಪುತಳೆಯುತ್ತಿವೆ, ಸಂಶೋಧನೆಗಳಿಗೆ ಒಡ್ಡಿಕೊಳ್ಳುತ್ತಿವೆ.

ಇಂತಿಪ್ಪ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ವಿದ್ಯುತ್ ಕಾರು ತಯಾರಿಕೆಗೆ 1.1 ಬಿಲಿಯನ್ ಡಾಲರ್ ಗಳ ಹಣ ಹೂಡುತ್ತಿರುವುದಾಗಿ ವಾರದ ಹಿಂದಷ್ಟೇ ‘ರಾಕ್ಫೆಲ್ಲರ್ ಬ್ರದರ್ಸ್ ಫಂಡ್’ ಅಧ್ಯಕ್ಷ ಸ್ಟೀಫನ್ ಹೆಂಜ್ ಘೋಷಿಸಿದ್ದಾರೆ. ರಾಕ್ಫೆಲ್ಲರ್ ಬದುಕಿದ್ದರೆ ಖಂಡಿತ ಇದಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು ಎಂದಿದ್ದಾರವರು.

ಇತ್ತೀಚೆಗೆ ಎಲಾನ್ ಮಸ್ಕ್ ರ ಟೆಸ್ಲಾ ಕಂಪನಿಯ ಮಾಡಲ್3 ಎಂಬ ವಿದ್ಯುತ್ ಕಾರಿನ ಪರೀಕ್ಷಾರ್ಥ ಅವತರಣಿಕೆ ಬಿಡುಗಡೆಗೊಳಿಸುತ್ತಲೇ ಕೇವಲ 24 ಗಂಟೆಗಳಲ್ಲಿ 2.32 ಲಕ್ಷ ಕಾರುಗಳಿಗೆ ಬೇಡಿಕೆ ಬಂತು! ಇವಿನ್ನೂ 2017ರ ಅಂತ್ಯದಲ್ಲಿ ರಸ್ತೆಗಿಳಿಯುವ ಅಂದಾಜಿದೆ. ಮಾಮೂಲಿ ಕಾರುಗಳಿಗೆ ಹೋಲಿಸಿದರೆ ಸದ್ಯಕ್ಕೆ ಇವುಗಳ ಬೆಲೆ ಭಾರೀ ಎನಿಸಿದರೂ, ಹೆಚ್ಚು ಉತ್ಪಾದನೆಗೆ ಅವಕಾಶವಾಗುತ್ತ ಹೋದಂತೆ ಬೆಲೆ ಇಳಿಯುತ್ತದೆ. ಅಷ್ಟಾಗಿಯೂ ವಿದ್ಯುತ್ ಕಾರುಗಳಿನ್ನೂ ಪರಿಪಕ್ವ ವಾತಾವರಣ ರೂಪುಗೊಳ್ಳದಿರುವ ಸಂದರ್ಭದಲ್ಲೇ ಟೆಸ್ಲಾ ನಿಗದಿಪಡಿಸಿರುವ ಬೆಲೆ ಬಹಳ ಆಕರ್ಷಕವೇ ಎನ್ನುತ್ತಾರೆ ಉದ್ಯಮ ಪರಿಣತರು.

ಕಂಪನಿ ಪ್ರಕಾರ ಮಾಡಲ್ 3 ವಿದ್ಯುತ್ ಚಾಲಿತ ಕಾರಿನ ಪ್ರಾರಂಭಿಕ ಬೆಲೆ 35 ಸಾವಿರ ಡಾಲರ್ ಗಳಾಗಿದ್ದು, ಅಂತಿಮ ಬೆಲೆ 55 ಸಾವಿರ ದಿಂದ 60 ಸಾವಿರ ಡಾಲರ್ ವರೆಗೆ ಆಗಲಿದೆ. ಕನಿಷ್ಟ ಮಾದರಿಯ ಕಾರಿನಲ್ಲಿನ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 215 ಕೀ.ಮೀ ವರೆಗೂ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಇವೆಲ್ಲಾ ಕತೆ ತಗೊಂಡು ನಾವೇನು ಮಾಡೋಣ? ಮಾಡಲಿಕ್ಕೇನಿಲ್ಲ… ಜಗತ್ತು ಮುಂದಿನ ದಿನಗಳಲ್ಲಿ ಹೆಂಗೆ ಮಗ್ಗಲು ಬದಲಿಸೀತು ಅಂತ ಈ ಹೂಡಿಕೆಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಿ, ಸಣ್ಣ ಪುಳಕವೊಂದನ್ನು ಅನುಭವಿಸಿದರಾಯಿತು.

1 COMMENT

  1. ಡಿಜಿಟಲ್ ಕನ್ನಡ ಅಂತರ್ಜಾಲ ಪತ್ರಿಕೆಯನ್ನು ಓದಲು ತುಂಬಾ ಖುಷಿಯಾಗುತ್ತದೆ. ತ್ಯಾಗರಾಜು ಸಾರ್‌ ಅವರ ರಾಜಕೀಯ ಬರಹ ಓದಲು ತುಂಬಾ ಇಷ್ಟವಾಗುತ್ತದೆ. ಇನ್ನಷ್ಟು ಉನ್ನತವಾದ ಮಟ್ಟಕ್ಕೆ ಪತ್ರಿಕೆ ಬೆಳೆಯಲಿ

Leave a Reply