ಪವನ್ ಕಲ್ಯಾಣ್ ಗೊತ್ತು, ಪಾಲಂ ಕಲ್ಯಾಣಸುಂದರಂ ಎಂಬ ಹೀರೋ ಗೊತ್ತೇ?

ಸೌಮ್ಯ ಸಂದೇಶ್

ಪವನ್ ಕಲ್ಯಾಣ್ ಅಂತಂದ್ರೆ ನೀವೆಲ್ಲ ಗೊತ್ತು ಗೊತ್ತು ಅಂತೀರಿ. ಕಾಲೆತ್ತಿಟ್ಟರೆ ಭೂಕಂಪವಾಗಿಸುವ ತೆಲುಗಿನ ಭಯಂಕರ ಹೀರೋಗಳ ಸಾಲಿಗೆ ಸೇರುವಾತ.

ಇರಲಿ, ಭಾನುವಾರದ ಬಿಡುವಿನಲ್ಲಿ ರಿಯಲ್ ಹೀರೋಗಳನ್ನೂ ಪರಿಚಯಿಸಿಕೊಳ್ಳೋಣ. ಹಾಗಾದರೆ ಪ್ರಶ್ನೆ- ನಿಮಗೆ ಪಾಲಂ ಕಲ್ಯಾಣ ಸುಂದರಂ ಗೊತ್ತೇ?

ಈ ಜಗತ್ತಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹುಚ್ಚು. 76ರ ಹರೆಯದ ಪಾಲಂ ಕಲ್ಯಾಣಸುಂದರಂ ಅವರಿಗೆ ತಮ್ಮಲ್ಲಿದ್ದಿದ್ದನ್ನೆಲ್ಲ ದಾನ ಮಾಡುವ ಹುಚ್ಚು!

ತನಗೆ ಅಂತ ಒಂದಿಷ್ಟು ಎತ್ತಿಟ್ಟುಕೊಂಡು ಉಳಿದಿದ್ದನ್ನು ದಾನ ಮಾಡುವ ಮಾದರಿ ಅನುಸರಿಸುತ್ತಿರುವವರು ಅನೇಕರಿದ್ದಾರೆ. ಅವರೆಲ್ಲರೂ ಸ್ಮರಣೀಯರೇ. ಆದರೆ ಪಾಲಂ ಕಲ್ಯಾಣ ಸುಂದರಂ ಮಾತ್ರ ಬಂದಿದ್ದನ್ನೆಲ್ಲ ಕೊಟ್ಟುಬಿಡು ಎಂಬ ಜಾಯಮಾನದ ಅಸಾಮಿ. ಅವರ ಈ ಧೋರಣೆ ಅವೆಷ್ಟೋ ನಿರ್ಗತಿಕರ ಬಾಳಲ್ಲಿ ಬೆಳಕು ತಂದಿದೆ ಅನ್ನೋದು ಗಮನಿಸಬೇಕಾದ ಅಂಶ.

ತಮಿಳುನಾಡು ಮೂಲದ ಇವರು ವೃತ್ತಿಯಲ್ಲಿ ಗ್ರಂಥಪಾಲಕ (ಲೈಬ್ರೇರಿಯನ್) ರಾಗಿದ್ದರು. ತಾವು ಪಡೆದ ಪೂರ್ಣ ಸಂಬಳವನ್ನು ಬಡವರಿಗಾಗಿ ಖರ್ಚುಮಾಡುವುದೇ ಪರಮ ಧ್ಯೇಯವಾಗಿಸಿಕೊಂಡಿರುವವರು. ಇಷ್ಟೇ ಅಲ್ಲದೇ ಪಾರ್ಟ್ ಟೈಂ ಕೆಲಸ ಮಾಡಿ, ಇದರಲ್ಲಿ ಬರುವ ಹಣವನ್ನೂ ಹಸಿದ ಹೊಟ್ಟೆ ತುಂಬಿಸಲು ಮೀಸಲಿಡುವ ನಿಸ್ವಾರ್ಥಿ.

ಜನಿಸಿದ ಒಂದು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಇವರು ತಾಯಿಯ ಮಾರ್ಗದರ್ಶನದಲ್ಲಿ ಬೆಳೆದರು. ಚಿಕ್ಕವರಿದ್ದಾಗ, ಹೆಂಗಸಿನಂತೆ ಕೇಳಿಸುವ ತಮ್ಮ ಧ್ವನಿಯ ಬಗ್ಗೆ ಚಿಂತಿತರಾಗಿ ಆತ್ಮಹತ್ಯೆಗೂ ಯೋಚಿಸಿದ್ದರಂತೆ! ಆದರೀಗ ಅವಿವಾಹಿತರಾಗೇ ಉಳಿದು ತಮ್ಮ ಜೀವನವನ್ನೇ ಸಮಾಜದ ಕಟ್ಟ ಕಡೆಯ ಜನರ ಉದ್ಧಾರಕ್ಕಾಗಿ ಸವೆಸುತ್ತಿರುವವರು. ತಮ್ಮ ಹೊಟ್ಟೆ ತುಂಬಲು ಎಷ್ಟು ಬೇಕೋ ಅಷ್ಟನ್ನು ಇರಿಸಿಕೊಂಡು, ಉಳಿದ ಎಲ್ಲಾ ಸಂಪಾದನೆಯನ್ನು ಇತರರ ಹಸಿವನ್ನು ನೀಗಿಸಲು ಬಳಸಿಕೊಳ್ಳುವ ಸುಂದರಂ ಅವರು ತಮ್ಮ ಪೂರ್ಣ ಜೀವನವನ್ನು ಸಹಾಯ ಮಾಡುವುದಕ್ಕೆ ಮೀಸಲಿಟ್ಟಿದ್ದಾರೆ.

ಲೈಬ್ರರಿ ಸೈನ್ ನಲ್ಲಿ ಚಿನ್ನದ ಪದಕ ಪಡೆದ ಸುಂದರಂ ಅವರು ಇತಿಹಾಸ ಮತ್ತು ಸಾಹಿತ್ಯದಲ್ಲಿ ಎಂ ಎ ಪದವಿ ಪಡೆದವರು. ಕೆಲಸದಲ್ಲಿದ್ದಾಗ ಸಂಬಳ ಹಂಚಿದ್ದಂತೂ ಆಯ್ತು. 35 ವರ್ಷಗಳ ನಂತರ ನಿವೃತ್ತಿಯಾದಾಗ ತಮ್ಮೆಲ್ಲ ಪಿಂಚಣಿಯನ್ನೂ ದಾನ ಮಾಡಿದರು. ಇವರ ಇಂಥ ಸೇವೆಗಳಿಂದ ಥ್ರಿಲ್ ಆಗಿ ಜಗತ್ತಿನ ನಾನಾ ಸಂಘಟನೆಗಳೆಲ್ಲ ಏನೆಲ್ಲ ಪ್ರಶಸ್ತಿ ನೀಡಿ ಸನ್ಮಾನಿಸಿದವು. ಹಾಗೆ ಸನ್ಮಾನಿಸಿ ಕೈಗಿಟ್ಟ ಹಣವೂ ದಾನಕ್ಕೇ ಹೋಯ್ತು. ಪಾಲಂ ಎಂಬ ಸಂಘಟನೆಯೊಂದರ ಮೂಲಕ ದೇಣಿಗೆ ನೀಡುವವರು ಮತ್ತು ದುರ್ಬಲ ವರ್ಗದವರ ನಡುವೆ ಸೇತುವೆ ಬೆಸೆದಿದ್ದಾರೆ.

ಇರುವುದು, ಇಲ್ಲದಿರುವುದು ಎಲ್ಲವೂ ಮನಸ್ಥಿತಿ, ಅದೊಂದು ಸ್ಟೇಟ್ ಆಫ್ ಮೈಂಡ್ ಅಷ್ಟೆ ಎನ್ನುವ ಪಾಲಂ ಕಲ್ಯಾಣ ಸುಂದರಂ ಸುದ್ದಿಯಾಗಿದ್ದು ಸಹ 2013ರಿಂದೀಚೆ. ಈಗಲೂ ಪ್ರಚಾರದಿಂದ ದೂರ, ಹಳ್ಳಿಯೊಂದರಲ್ಲಿ ವಾಸ. ತಲೆ ಮೇಲೆ ಸೂರಿಲ್ಲದವರ ಅನುಭವ ಏನು ಅಂತ ಕಂಡುಕೊಳ್ಳುವುದಕ್ಕೆ ಫುಟ್ಪಾತ್ ಗಳಲ್ಲಿ ಮಲಗಿ ನೋಡಿದ್ದರಂತೆ ಸುಂದರಂ. ಗ್ರಂಥಪಾಲಕರಾಗಿ ನಿವೃತ್ತರಾಗಿದ್ದರೂ ದೈನಂದಿನ ಬದುಕಿನ ನಿರ್ವಹಣೆಗೆ ಆ ಕ್ಷಣಕ್ಕೆ ಒದಗಬಹುದಾದ ಯಾವುದೇ ಕೆಲಸ ಮಾಡುವ ವಿಚಿತ್ರ ಜಾಯಮಾನ. ಹೋಟೇಲ್ ಗಳಲ್ಲಿ ಸೇವಕನಾಗಿ ದುಡಿದು ಅಂದಿನ ಅಗತ್ಯ ಪೂರೈಸಿಕೊಂಡು ನಿರ್ಲಿಪ್ತರಾಗಿರುತ್ತಾರೆ. ಬಹುಮಾನದ ಹಣ, ದೇಣಿಗೆಗಳನ್ನೆಲ್ಲ ಸರ್ಕಾರಿ ವ್ಯವಸ್ಥೆಯ ಮೂಲಕವೂ ಅಗತ್ಯ ಉಳ್ಳವರಿಗೆ ಮುಟ್ಟಿಸುತ್ತಾರೆ.

ಇವರ ಮಾನವೀಯ ಸೇವೆಗೆ ಹಲವು ಪ್ರಶಸ್ತಿಗಳು ಸಂದಿದ್ದು, ಕೇಂದ್ರ ಸರ್ಕಾರ ನೀಡುವ ಭಾರತದ “ಅತ್ಯುತ್ತಮ ಗ್ರಂಥಪಾಲಕ” ಎಂಬ ಗೌರವ, ಕೇಂಬ್ರಿಡ್ಜ್ ನ ಅಂತಾರಾಷ್ಟ್ರೀಯ ಜೀವನಚರಿತ್ರೆ ಕೇಂದ್ರ ನೀಡುವ “ವಿಶ್ವ ಶ್ರೇಷ್ಠ” ಗೌರವ, ವಿಶ್ವ ಸಂಸ್ಥೆಯ 20 ನೇ ಶತಮಾನದ “ಅತ್ಯುತ್ತಮ ವ್ಯಕ್ತಿ” ಪ್ರಶಸ್ತಿ, 2011ರ ಭಾರತದ ರೋಟರಿ ಕ್ಲಬ್ ನೀಡುವ ಜೀವನ ಶ್ರೇಷ್ಠ “ಮ್ಯಾನ್ ಆಫ್ ದಿ ಮೀಲೆನಿಯಂ” ಪ್ರಶಸ್ತಿ ಪ್ರಮುಖವಾದವುಗಳು.

ಸದ್ಯ ಚೆನೈನ ಸಾಹಿದಾ ಪೇಟ್ ನಲ್ಲಿ ಸಣ್ಣದಾದ ಸ್ವಂತ ಮನೆಯಲ್ಲಿ ವಾಸವಿರುವ ಸುಂದರಂ ಅವರು ಸ್ಥಳೀಯ ಮಕ್ಕಳನ್ನು ಶಾಲೆಗೆ ಹೋಗುವಂತೆ ಮನಪರಿವರ್ತಿಸುವುದು, ಪೋಷಕರಲ್ಲಿ ಜಾಗೃತಿ ಮೂಡಿಸುವುದು, ಮಕ್ಕಳ ತಂದೆ ತಾಯಿಗಳಿಗೆ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗದಿದ್ದರೆ ಇವರೇ ಶುಲ್ಕ ಕಟ್ಟುವುದು, ಶಾಲಾ ಸಮವಸ್ತ್ರ, ಪುಸ್ತಕಗಳು ಮತ್ತು ಚಾಕಲೇಟ್ ಕೊಡಿಸುತ್ತ ಸಂಭ್ರಮಿಸೋದು ಹೀಗೆ ಆನಂದಮಯ ಜೀವನದಲ್ಲಿದ್ದಾರೆ.

ಸಂತರು ಹಿಮಾಲಯದಲ್ಲಿ ಮಾತ್ರ ಇರ್ತಾರೆ ಅಂತ ಯಾಕಂದುಕೊಳ್ಳಬೇಕು?

Leave a Reply