ಅಮೆರಿಕದ ಮಹಿಳೆ ವೆಡ್ಸ್ ಅಲಹಬಾದ್ ಹುಡುಗ… ಇಲ್ಲಿ ಫೇಸ್ಬುಕ್ಕೇ ಪುರೋಹಿತ!

ಡಿಜಿಟಲ್ ಕನ್ನಡ ಟೀಮ್

ಫೇಸ್ ಬುಕ್ ನಲ್ಲಿ ಲವ್ ಮಾಡಿ ದುರಂತ ಅಂತ್ಯ ಕಂಡ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಂದು ಪ್ರಕರಣ ಇವೆಲ್ಲಕ್ಕೂ ವಿಭಿನ್ನವಾಗಿದೆ. ಹೌದು, ಫೇಸ್ ಬುಕ್ ನಲ್ಲಿ ಹುಟ್ಟೋ ಪ್ರೇಮ ನಿಜವಲ್ಲ ಎಂದು ಮೂಗುಮುರಿಯುವ ಹೊತ್ತಿನಲ್ಲಿ ಈ ಪ್ರಕರಣ ನಿಜಕ್ಕೂ ಅಚ್ಚರಿ ಮೂಡಿಸಿದೆ. ಕಾರಣ, ಅಮೆರಿಕದ ಮೊಂಟಾನದಲ್ಲಿ ಹೆಲ್ತ್ ಕೋಆರ್ಡಿನೇಟರ್ ಆಗಿರೋ 41 ವರ್ಷದ ಎಮಿಲಿ ಮತ್ತು 23 ವರ್ಷದ ಅಲಹಬಾದ್ ಸ್ಲಮ್ ಹುಡುಗ ಹಿತೇಶ್ ಚಾವ್ಡಾ ಫೇಸ್ ಬುಕ್ ನಲ್ಲಿ ಪ್ರೀತಿಸಿ, ತಮ್ಮ ಮೊದಲ ಭೇಟಿಯಲ್ಲೇ ವಿವಾಹವಾಗಿದ್ದಾರೆ.

ಈ ಇಬ್ಬರ ಪರಿಚಯವಾಗಿದ್ದು, ಫೇಸ್ ಬುಕ್ ನಲ್ಲಿ. ಈ ಪರಿಚಯದ ನಂತರ ಇಬ್ಬರು ಸುದೀರ್ಘವಾಗಿ ಆನ್ ಲೈನ್ ಚಾಟಿಂಗ್ ನಡೆಸಿದ್ದಾರೆ. ಈ ಹಂತದಲ್ಲಿ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ. ಅರೆ, ಇವರಿಬ್ಬರ ಸಂಭಾಷಣೆ ಹೇಗಿತ್ತು, ಭಾಷೆಯ ಸಮಸ್ಯೆ ಎದುರಾಗಲಿಲ್ಲವೇ ಎಂಬ ಪ್ರಶ್ನೆ ಮೂಡೋದು ಸಹಜ. ಈ ಸಮಸ್ಯೆಗೆ ಈ ಇಬ್ಬರು ಬಳಸಿದ ಅಸ್ತ್ರ ಗೂಗಲ್ ಟ್ರಾನ್ಸ್ ಲೇಟರ್.

ಎಮಿಲಿ ಕಳುಹಿಸಿದ ಸಂದೇಶವನ್ನು ಹಿತೇಶ್ ನೇರವಾಗಿ ಗೂಗಲ್ ಟ್ರಾನ್ಸ್ ಲೇಟರ್ ಗೆ ಕಾಪಿ ಮಾಡುತಿದ್ದ. ನಂತರ ಹಿಂದಿಯಲ್ಲಿ ಬರೋ ಸಂದೇಶವನ್ನು ಓದಿ ಎಮಿಲಿ ಏನು ಹೇಳಿದಳು ಎಂಬುದನ್ನು ಅರ್ಥೈಸಿಕೊಳ್ಳುತ್ತಿದ್ದ. ಆ ಕಡೆ ಎಮಿಲಿ ಹಿಡಿದಿದ್ದು, ಇದೇ ಮಾರ್ಗ. ಹಿತೇಶ್ ಕಳುಹಿಸಿದ ಹಿಂದಿಯ ವಾಕ್ಯವನ್ನು ಟ್ರಾನ್ಸ್ ಲೇಟರ್ ಗೆ ಹಾಕಿ ಇಂಗ್ಲೀಷ್ ನಲ್ಲಿ ಬಂದ ಸಂದೇಶವನ್ನು ಓದಿ ಅರ್ಥ ಮಾಡಿಕೊಳ್ಳುತ್ತಿದ್ದಳು.

ಹೀಗೆ ಸುದೀರ್ಘ ಕಾಲ ಚಾಟಿಂಗ್ ಮಾಡಿದ ಎಮಿಲಿ, ಹಿತೇಶ್ ನನ್ನು ನೋಡಬೇಕೆಂದು ಭಾರತಕ್ಕೆ ಆಗಮಿಸುತ್ತಾಳೆ. ನಂತರ ತಮ್ಮ ಮೊದಲ ಭೇಟಿಯ ದಿನದಂದೇ ಈ ಇಬ್ಬರು ಹಿಂದೂ ಸಂಸ್ಕೃತಿ ಪ್ರಕಾರ ಮದುವೆಯೂ ಆಗಿದ್ದಾರೆ. ಆರಂಭದಲ್ಲಿ ಹಿತೇಶ್ ಮನೆಯವರಿಂದ ವಿರೋಧ ವ್ಯಕ್ತವಾಯಿತಾದರೂ, ನಂತರ ಪೋಷಕರು ಒಪ್ಪಿಗೆ ಸೂಚಿಸಿ ಆಶೀರ್ವದಿಸಿದ್ದಾರೆ. ‘ತಮ್ಮ ಮೊದಲ ಭೇಟಿಯ ವೇಳೆ ಎಮಿಲಿ ಅವರ ಸೌಮ್ಯತೆ ಮತ್ತು ಅವರ ಸರಳತೆ ನೋಡಿ ಇಷ್ಟವಾಯಿತು. ಹಾಗಾಗಿ ಮದುವೆಯಾಗಲು ನಿರ್ಧರಿಸಿದೆ’ ಎಂದು ಹಿತೇಶ್ ಹೇಳಿದ್ದಾನೆ.

1 COMMENT

Leave a Reply