ಕಾಂಗ್ರೆಸ್ ಬಣ್ಣ ಕಳಚಿಡುತ್ತಿದೆ ಬಣ ರಾಜಕೀಯ, ಅಧಃಪತನದತ್ತ ನುಗ್ಗುತ್ತಿದೆ ಸಿದ್ದರಾಮಯ್ಯ ಸರಕಾರ!

author-thyagaraj (1)ಸ್ವಜನಪಕ್ಷಪಾತ, ಜಾತಿ ಸಂಘರ್ಷ, ಗುಂಪು ರಾಜಕೀಯದಿಂದ ದಿನೇ ದಿನೇ ಅಧಃಪತನದತ್ತ ನುಗ್ಗುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು, ಇನ್ನೆರಡು ವರ್ಷ ದೂರದಲ್ಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪ್ರತಿಪಕ್ಷಗಳು ಸಜ್ಜುಗೊಳ್ಳಲು ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ.

ಅದು ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಅಥವಾ ಜೆಡಿಎಸ್ ಆಗಲಿ, ಯಾವುದೇ ಪಕ್ಷದಲ್ಲಿ ಏನೇ ಬೆಳವಣಿಗೆ ಆದರೂ ಅದನ್ನು ಆ ಪಕ್ಷಕ್ಕೆ ಸೀಮಿತವಾಗಿ ನೋಡಬೇಕು ಎಂಬುದೇನೋ ಸರಿ. ಆದರೆ ರಾಜಕೀಯ ಅಷ್ಟಕ್ಕೆ ನಿಲ್ಲುವುದಿಲ್ಲ. ಒಂದು ಪಕ್ಷದ ಶಕ್ತಿಗೆ ಅದರ ಅಂತಃಸತ್ವವಷ್ಟೇ ಅಳತೆಗೋಲಾಗುವುದಿಲ್ಲ. ಅದರಿಂದಷ್ಟೇ ಬಲ ಕ್ರೋಡೀಕೃತ ಆಗುವುದಿಲ್ಲ. ಬದಲಿಗೆ ಎದುರಾಳಿಯ ದೌರ್ಬಲ್ಯವೂ ಅದರ ಆತ್ಮಬಲ ವೃದ್ಧಿಸುತ್ತದೆ. ತಂತ್ರಗಾರಿಕೆಗೆ ವಸ್ತುವಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಸರಕಾರದ ದೌರ್ಬಲ್ಯಗಳು ಪ್ರತಿಪಕ್ಷಗಳು ಮೈ ಮುರಿದೇಳಲು ಅನುವು ಮಾಡಿಕೊಟ್ಟಿದೆ.

ಮೊದಲೇ ಮೂಲನಿವಾಸಿಗಳು, ವಲಸಿಗರು ಎಂಬ ‘ಪಂಕ್ತಿಬೇಧ’ದಿಂದ ನರಳುತ್ತಿದ್ದ ಕಾಂಗ್ರೆಸ್ ನಲ್ಲೀಗ ಬರೀ ಬಣಗಳದೇ ಪಾರುಪತ್ಯೆ. ದಿನಕ್ಕೊಂದರಂತೆ ಅಸ್ತಿತ್ವಕ್ಕೆ ಬರುತ್ತಿರುವ ಬಣಗಳು ಕಾಂಗ್ರೆಸ್ ಬಣ್ಣವನ್ನು ಕಳಚಿಡುತ್ತಿವೆ. ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಪ್ರತೀಕ ಎಸ್.ಟಿ. ಸೋಮಶೇಖರ್ ನೇತೃತ್ವದ ಬಣ. ಸಮಗ್ರ ಸಂಪುಟ ಪುನಾರಚನೆ ಅದರ ಪಟ್ಟು. ಅದರ ಬೆನ್ನಲ್ಲೇ ಅಸ್ತಿತ್ವಕ್ಕೆ ಬಂದಿರೋದು ಸಚಿವ ಎ. ಮಂಜು ನೇತೃತ್ವದ ಒಕ್ಕಲಿಗರ ಬಣ. ಸಮುದಾಯದವರಿಗೆ ಹೆಚ್ಚಿನ ಪ್ರಾತಿನಿಧ್ಯ ಇದರ ಒತ್ತಾಸೆ. ಇದರ ಜತೆಗೆ ಮೂರ್ನಾಲ್ಕು ಬಾರಿ ಗೆದ್ದು ಬಂದಿರುವ ಹಿರಿಯರ ಬಣ ಬೇರೆ. ಸೂಕ್ತ ಸ್ಥಾನಮಾನಕ್ಕಾಗಿ ಅದು ಮಲ್ಲಿಕಾರ್ಜುನ ಖರ್ಗೆ ನಾಯಕತ್ವದತ್ತ ಆಸೆಗಣ್ಣು ಬಿಟ್ಟಿದೆ. ಇದಲ್ಲದೆ ಪ್ರತ್ಯೇಕವಾಗಿ ಅಸಮಾಧಾನ ತೋಡಿಕೊಳ್ಳುವ ನಾಯಕರಿಗೇನೂ ಕಡಿಮೆ ಇಲ್ಲ.

ಇಲ್ಲೊಂದು ಮುಖ್ಯ ಅಂಶವಿದೆ. ಮೇಲೆ ಕಾಣಿಸಿದ ಯಾವುದೇ ‘ರಣಧೀರರ ಬಣ’ವೂ ಜನಸಾಮಾನ್ಯರ ಕಷ್ಟಕಾರ್ಪಣ್ಯಕ್ಕಾಗಲಿ, ಸಮಸ್ಯೆಗಳ ಪರಿಹಾರಕ್ಕಾಗಲಿ ಅಥವಾ ಈ ರಾಜ್ಯದ ಪ್ರಗತಿಗಾಗಲಿ ಹೋರಾಟ ಮಾಡುತ್ತಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜಲ ಬತ್ತಿ ನೆಲ ಬಿರುಕು ಬಿಟ್ಟಿದೆ. ಜನಜಾನುವಾರುಗಳ ಪಸೆ ಆರಿದೆ. ಕರೆಂಟು ಕಣ್ಣಾಮುಚ್ಚಾಲೆ ಆಡಿದೆ. ತಾನು ಕೊಟ್ಟ ಅನುದಾನ ಬಳಕೆ ಮಾಡಿಕೊಂಡಿಲ್ಲ ಅಂತ ಕೇಂದ್ರ ಸರಕಾರ ಮೇಲಿಂದ ಮೇಲೆ ದೂರುತ್ತಿದೆ. ಪಿಯುಸಿ ಪ್ರಶ್ನೆ ಪತ್ರಿಕೆಗಳು ಮತ್ತೆ ಮತ್ತೆ ಸೋರಿವೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಿಲ್ಲ. ಮೌಲ್ಯಮಾಪಕರು ಪ್ರತಿಭಟನೆಗೆ ಇಳಿದಿದ್ದಾರೆ. ವಿದ್ಯಾರ್ಥಿಗಳು. ಪೋಷಕರು ಕಂಗಾಲಾಗಿದ್ದಾರೆ. ಆದರೆ ಈ ಯಾವ ಸಮಸ್ಯೆಗಳು ಬಣಗಳ ಕಣ್ಣಿಗೆ ಬಿದ್ದಿಲ್ಲ. ಬಿದ್ದರೂ ಮನಸಿಗೆ ಇಳಿದಿಲ್ಲ. ಅವುಗಳ ಹೋರಾಟದ ವಸ್ತುವಾಗಿಲ್ಲ. ಅಲ್ಲಿ ನಡೆದಿರುವ ಕಚ್ಚಾಟ, ಕಿತ್ತಾಟ ಎಲ್ಲವೂ ಅಧಿಕಾರಕ್ಕಾಗಿಯೇ. ಜನ ಒದ್ದಾಡಿಕೊಳ್ಳಲಿ, ರಾಜ್ಯ ಹಾಳಾಗಿ ಹೋಗಲಿ, ಇವರಿಗೆ ಅದ್ಯಾವುದೂ ಬೇಕಿಲ್ಲ. ಅವರಿಗೆ ಬೇಕಿರುವುದು ಬರೀ ಅಧಿಕಾರ, ತಾವು ಮತ್ತು ತಮ್ಮ ಗುಂಪಿನ ಉದ್ಧಾರ ಮಾತ್ರ.

ಹೌದು, ನಮ್ಮಲ್ಲಿ ಅಧಿಕಾರದ ಸುತ್ತ ಸುತ್ತುತ್ತಿರುವ ನಾಲ್ಕೈದು ಬಣಗಳಿಗೆ ಅಂತ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಈ ರೀತಿ ಬಣ ರಾಜಕೀಯ ತರವಲ್ಲ, ಇದರಿಂದ ಪಕ್ಷಕ್ಕೇ ಹಾನಿಯಾಗುತ್ತದೆ ಎಂದು ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅಲವತ್ತುಕೊಂಡಿದ್ದಾರೆ.  ಸರಕಾರ ಸರಿದಾರಿಯಲ್ಲಿ ಸಾಗುತ್ತಿಲ್ಲ. ಅಲ್ಲಿ ಎಲ್ಲವೂ ಸರಿ ಇಲ್ಲ, ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡ ಒಂದು ಗುಂಪಿನ ಕೈಯಲ್ಲಿ ಅದು ನರಳುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಪಕ್ಷ ಬಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಸ್.ಎಂ. ಕೃಷ್ಣ, ಬಿ.ಕೆ. ಹರಿಪ್ರಸಾದ್, ಎಚ್. ವಿಶ್ವನಾಥ್, ರಮೇಶ್ ಕುಮಾರ್ ಅವರಂತಹ ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಆಡಳಿತ ಪಕ್ಷದ ಶಾಸಕರ ವರಾತವೇ ಬೇರೆ. ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ. ಹಣ ಬಿಡುಗಡೆ ಆಗದಿದ್ದರೆ ಕೆಲಸ ಮಾಡುವುದಾದರು ಹೇಗೆ? ಕೆಲಸ ಮಾಡದಿದ್ದರೆ ಚುನಾವಣೆಯಲ್ಲಿ ಜನರ ಬಳಿ ಹೋಗುವುದಾದರೂ ಹೇಗೆ? ಮುಖ್ಯಮಂತ್ರಿ ಅವರಾಗಲಿ, ಸಚಿವರಾಗಲಿ ತಮ್ಮ ಅಹವಾಲುಗಳಿಗೆ ಬೆಲೆ ಕೊಡುತ್ತಿಲ್ಲ, ಜನರ ಕೆಲಸಗಳು ಆಗುತ್ತಿಲ್ಲ, ಬೇಜವಾಬ್ದಾರಿ ಸಚಿವರಿಂದ ಅವರು ಹೊತ್ತಿರುವ ಇಲಾಖೆ ಹಾಗೂ ಸರಕಾರ ಎರಡರದೂ ಮರ್ಯಾದೆ ಹೋಗುತ್ತಿದೆ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಸರಕಾರದ ಕಾರ್ಯವೈಖರಿ ಅವರ ಪಕ್ಷದವರಿಗೇ ಸಹ್ಯವಾಗದಿದ್ದ ಮೇಲೆ ಇನ್ನು ಜನರಿಗೆ ಹಿಡಿಸುವುದಾದರೂ ಹೇಗೆ? ಜನ ಯಾಕಾದರೂ ಈ ಸರಕಾರವನ್ನು ಒಪ್ಪಿಕೊಳ್ಳುತ್ತಾರೆ?

ಹಾಗಾದರೆ ಸರಕಾರದಲ್ಲೇನು ನಡೆಯುತ್ತಿದೆ? ಈ ಸರಕಾರ ಯಾರಿಗಾಗಿ ನಡೆಯುತ್ತಿದೆ? ಆಳ್ವಿಕೆ ನಡೆಸುತ್ತಿರುವವರ ಅಜೆಂಡಾ ಏನು..? ಉತ್ತರ ಬಹಳ ಸಿಂಪಲ್. ಅಧಿಕಾರ ಸಿಕ್ಕಾಗಿದೆ, ಅದನ್ನು ಪೂರೈಸಿ ಹೋದರಾಯಿತು ಎಂಬ ಉಡಾಫೆ ಮನೋಭಾವ.

ಹೌದು, ಪ್ರತಿಯೊಬ್ಬರು ರಾಜಕೀಯ ಮಾಡುವುದು ಅಧಿಕಾರಕ್ಕಾಗಿಯೇ. ಸಮಾಜ ಸೇವೆ, ತತ್ವ-ಸಿದ್ಧಾಂತ ಅನ್ನೋದೆಲ್ಲ ಕಾಗದದ ಮೇಲಿನ ಅಕ್ಷರಗಳಿಗಷ್ಟೇ ಸೀಮಿತ. ನಾಲ್ಕು ದಶಕಗಳ ರಾಜಕೀಯ ಜೀವನ ಸವೆಸಿರುವ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಆಗಬೇಕೆನ್ನುವ ಬಹುಕಾಲದ ಆಸೆ ನೆರವೇರಿ ಮೂರು ವರ್ಷಗಳಾಗಿವೆ. ರಾಜ್ಯ ಹಾಗೂ ದಿಲ್ಲಿಮಟ್ಟದಲ್ಲಿ ಪಕ್ಷದ ಸ್ಥಿತಿ ತಮ್ಮ ಉಳಿದ ಅವಧಿ ಪೂರೈಕೆಗೆ ಅಡ್ಡಿಯಾಗದು ಎಂಬ ಅತೀವ ಆತ್ಮವಿಶ್ವಾಸವೂ ಅವರಲ್ಲಿದೆ. ಅಪ್ಪಿತಪ್ಪಿ ಸ್ಥಾನಪಲ್ಲಟವಾದರೆ ಪಕ್ಷಕ್ಕೆ ಅನಾಹುತ ಮಾಡುವಷ್ಟು ತಾಕತ್ತು ತಮಗಿದೆ ಎಂಬುದು ವರಿಷ್ಠರಿಗೆ ಗೊತ್ತಿದೆ ಎನ್ನುವುದೇ ಅವರ ಈ ಆತ್ಮವಿಶ್ವಾಸಕ್ಕೆ ಕಾರಣ. ಒಂದು ಸಾರಿ ಮುಂದಿನ ಬಾರಿ ಚುನಾವಣೆಗೆ ನಿಲ್ಲೋದಿಲ್ಲ ಅಂತಾರೆ. ಮತ್ತೊಂದು ಬಾರಿ ಮುಂದಿನ ಅವಧಿಗೂ ತಾವೇ ಮುಖ್ಯಮಂತ್ರಿ ಅನ್ನುತ್ತಾರೆ. ಆ ಬಗ್ಗೆ ಅವರಿಗೆ ಸ್ಪಷ್ಟತೆ ಇಲ್ಲ. ಅವರು ಏನೇ ಹೇಳಿಕೊಳ್ಳಲಿ, 2013 ರ ಚುನಾವಣೆ ಫಲಿತಾಂಶ 2018 ಕ್ಕೆ ಪುನಾರವರ್ತನೆ ಆಗುವುದಿಲ್ಲ, ತಾವು ಮತ್ತೊಮ್ಮೆ ಸಿಎಂ ಆಗುವುದಿಲ್ಲ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ತಾವು ನಡೆಸಿದ್ದೇ ರಾಜ್ಯಭಾರ ಎನ್ನುವ ಮನೋಸ್ಥಿತಿಯನ್ನು ಅವರು ತಲುಪಿದ್ದಾರೆ. ಅದರ ಪ್ರತಿಫಲವೇ ಸರಕಾರದಲ್ಲಿ ತಾಂಡವವಾಡುತ್ತಿರುವ ಗೊಂದಲ.

ಹಾಗೆ ನೋಡಿದರೆ ಈ ಬಣ ರಾಜಕೀಯ ಸೃಷ್ಟಿ ಮಾಡಿದ್ದೇ ಸಿದ್ದರಾಮಯ್ಯನವರು. ವಾಚ್ ಉಡೂಗೊರೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ವಿವಾದದ ಸ್ವರೂಪ ಪಡೆದುಕೊಂಡಾಗ ತಮ್ಮ ಸ್ಥಾನಕ್ಕೆ ಕುತ್ತು ಬಂದರೆ ಯಾವುದಕ್ಕೂ ಇರಲಿ ಅಂತ ಸಮಾನ ಮನಸ್ಕರ ಬಣ ಸೃಷ್ಟಿಗೆ ಪ್ರೇರಕರಾದರು. ತಮ್ಮ ಬಲಪ್ರದರ್ಶನದ ಪ್ರತೀಕವಾಗಿ. ಈಗಾಗಲೇ ರಾಜ್ಯ ಸರಕಾರದ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ. ಇನ್ನು ಮುಖ್ಯಮಂತ್ರಿ ಪಲ್ಲಟದಿಂದ ಗೊಂದಲ ಸೃಷ್ಟಿಯಾದರೆ ಅವಧಿಗೆ ಮೊದಲೇ ಮತ್ತೊಂದು ಕಾಂಗ್ರೆಸ್ ರಾಜ್ಯ ಕಳೆದುಕೊಳ್ಳುತ್ತೇವೆ ಎಂಬ ಅರಿವು ವರಿಷ್ಠರಿಗೆ ಇರುವುದಿಲ್ಲವೇ? ಆದರೆ ಈ ಬಗ್ಗೆ ಸಿದ್ದರಾಮಯ್ಯನವರ ನಂಬಿಕೆ ಪಲ್ಲಟ ಆಗಿರುವ ಕಾರಣ ಅವರದೊಂದು ಬಣ ಅಸ್ತಿತ್ವಕ್ಕೆ ಬಂದಿದೆ. ಇದು ಒಕ್ಕಲಿಗರ ಬಣ, ಹಿರಿಯರ ಬಣ, ಕಿರಿಯರ ಬಣ, ಆರ್ಹರ ಬಣ ಅಂತ ಬೇರೆ-ಬೇರೆ ಬಣಗಳ ಸೃಷ್ಟಿಗೆ ಪ್ರೇರಣೆ ನೀಡಿದ್ದು, ಅದೀಗ ಸಿದ್ದರಾಮಯ್ಯನವರ ಸರಕಾರಕ್ಕೆ ವ್ರಣವಾಗಿ ಪರಿಣಮಿಸಿದೆ.

ಇರಲಿ, ಅವರವರು ಮಾಡಿಕೊಂಡದ್ದು ಅವರವರಿಗೆ. ಹಾಗೆಂದು ಇದು ಕಾಂಗ್ರೆಸ್ ಪಕ್ಷದ ಹಣೆಬರಹ, ಕಾಂಗ್ರೆಸ್ ಸರಕಾರದ ಹಣೆಬರಹ ಎಂದು ಸುಮ್ಮನಾಗುವಂತಿಲ್ಲ. ಏಕೆಂದರೆ ಸರಕಾರವೇನೂ ಕಾಂಗ್ರೆಸ್ ಅಸ್ತಿಯಲ್ಲ. ಅದು ಜನರ ನೇರ ಸಂಪರ್ಕಧಾತು. ಸರಕಾರದ ಒಳಿತು-ಕೆಡಕುಗಳು ಜನರ ಹಿತಾಸಕ್ತಿ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗೆಯೇ ಅದರ ಆಧಾರದ ಮೇಲೆ ಸರಕಾರದ ಬಗ್ಗೆ ಜನರ ಒಲವು-ನಿಲವುಗಳು ಮೈದಳೆಯುತ್ತವೆ. ಕಳೆದ ಮೂರು ವರ್ಷಗಳ ಆಳ್ವಿಕೆ ನೋಡಿದಾಗ ಜನರಿಗೆ ಈ ಸರಕಾರದ ಬಗ್ಗೆ ಯಾವುದೇ ಭರವಸೆ ಮೂಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಅವರು ದೇವರಾಜ ಅರಸು ಅವರನ್ನು ಮೀರಿಸಿದ ಆಡಳಿತ ಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಅದೀಗ ಹುಸಿಯಾಗಿದೆ. ಕಳೆದು ಹೋದ ನಂಬಿಕೆ ಸರಕಾರದ ಬಗ್ಗೆ ಪ್ರೀತಿ, ವಿಶ್ವಾಸ, ಮಮಕಾರ ಸೃಷ್ಟಿಸಲು ಸಾಧ್ಯವಿಲ್ಲ. ಅಲ್ಲಿ ಒಡಮೂಡುವುದು ಬರೀ ಬೇಸರ, ನೋವು ಮತ್ತು ಹತಾಶೆ ಮಾತ್ರ. ಈ ನಕಾರಾತ್ಮಕ ಭಾವಗಳ ಸಮ್ಮಿಶ್ರವೇ ಆಡಳಿತ ವಿರೋಧಿ ಅಲೆ!

ನಿಜ, ಒಂದು ಸರಕಾರದ ಬಗ್ಗೆ ನಿಖರ ಜನಭಾವ ಗೊತ್ತಾಗುವುದು ಚುನಾವಣೆಗೆ ವರ್ಷ ಬಾಕಿ ಇರುವಾಗ. ಅದು ಪರ ಇರಬಹುದು ಅಥವಾ ವಿರೋಧ ಇರಬಹುದು. ಆದರೆ ರಾಜ್ಯದಲ್ಲಿ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಗೋಚರವಾಗಿದೆ. ಜತೆಗೆ ಅದು ಆಡಳಿತ ವಿರೋಧಿ ಎಂದೂ ಸ್ಪಷ್ಟವಾಗಿದೆ. ಸರಕಾರದ ಒಳಗಿನ ಬೆಳವಣಿಗೆಗಳು ಮತ್ತು ಆ ಬೆಳವಣಿಗೆಗಳು ರೂಪಿಸಿರುವ ಜನಾಭಿಪ್ರಾಯವೇ ಇದಕ್ಕೆ ಮಾನದಂಡ. ಜನಾಭಿಪ್ರಾಯ ಏನು ಎನ್ನುವುದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ, ವಿಧಾನಸಭೆ ಮರುಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶಗಳಿಂದ ರುಜುವಾತಾಗಿದೆ.

ರಾಜ್ಯ ಸರಕಾರದ ಬೆಳವಣಿಗೆಗಳು ಮುಂದಿನ ಚುನಾವಣೆ ದೃಷ್ಟಿಯಿಂದ ಪ್ರತಿಪಕ್ಷಗಳ ಪಾಳೆಯದಲ್ಲಿ ಒಂದಷ್ಟು ಸಂಚಲನಕ್ಕೆ ಕಾರಣವಾಗಿವೆ. ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಆಗಿರುವುದು ಆ ಪಕ್ಷದ ಆಂತರಿಕ ಬೆಳವಣಿಗೆಯೇ ಆದರೂ ಅಲ್ಲಿನ ರಾಜಕೀಯ ತಂತ್ರಗಾರಿಕೆಗೆ ಆಡಳಿತರೂಢ ಸರಕಾರದ ಕೊಡುಗೆಯೂ ಇದೆ. ‘ಅಹಿಂದ’ ಮಂತ್ರ ಪಠಿಸಿದ ಸಿದ್ದರಾಮಯ್ಯನವರು ಮೇಲ್ವರ್ಗದವರನ್ನು ಉಪೇಕ್ಷೆ ಮಾಡಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂಬ ದೂರು ಕಾಂಗ್ರೆಸ್ ಒಳಗೇ ಇದೆ. ಅಲ್ಲದೇ ಮೊದಲು ಪ್ರತಿಪಾದಿಸಿದ ‘ಅಹಿಂದ’ ಪೈಕಿ ದಲಿತರನ್ನೂ ಕೈ ಬಿಟ್ಟಿದ್ದಾರೆಂಬ ಆಪಾದನೆಯೂ ಇದೆ. ಹೀಗೆ ಸಿದ್ದರಾಮಯ್ಯನವರು ಉಪೇಕ್ಷಿಸಿದ್ದಾರೆ ಎನ್ನಲಾದ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡೇ ಪ್ರತಿಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿರುವುದರ ಒಂದಂಶವೇ ಬಿಜೆಪಿಗೆ ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾಗಿರುವುದು. ಇದು ಆರಂಭ ಮಾತ್ರ. ಮತ್ತಷ್ಟು ಬೆಳವಣಿಗೆಗಳಿಗೆ ಭವಿಷ್ಯ ಸಾಕ್ಷಿಯಾಗಲಿದೆ. ಅದಕ್ಕೆ ಇಂಬುಗೊಟ್ಟ ಕೀರ್ತಿ ಮಾತ್ರ ಸಿದ್ದರಾಮಯ್ಯನವರ ಸರಕಾರದ್ದಾಗಲಿದೆ.

ಲಗೋರಿ : ಕಳೆದುಕೊಂಡ ಅವಕಾಶ ಹುಡುಕಿಕೊಂಡು ಬಾರದು.

1 COMMENT

  1. ಸಿದ್ಧರಾಮಯ್ಯನವರು ಉದ್ದೇಶಪೂರ್ವಕವಾಗಿ ಮೇಲ್ವರ್ಗದವರನ್ನು ಕಡೆಗಣಿಸಿ ಕೇವಲ ಅಹಿಂದವನ್ನು ಓಲೈಸಿದ್ದೂ ಅವರ ಹಿನ್ನಡೆಗೆ ಕಾರಣ

Leave a Reply