ಜಾತಿ ಗಣತಿ ವರದಿ ‘ಸೋರಿಕೆ’, ಇದಕ್ಕೂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೂ ಇದೆಯೇ ಹೋಲಿಕೆ?

ಸಂಗ್ರಹ ಚಿತ್ರ

ಡಿಜಿಟಲ್ ಕನ್ನಡ ಟೀಮ್

ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿ ವರದಿ ‘ಸೋರಿಕೆ’ ಆಗಿದ್ದು, ಈ ‘ಸೋರಿಕೆ’ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟರು ಹಾಗೂ ಮುಸ್ಲಿಮರು ಕ್ರಮವಾಗಿ ಮೊದಲೆರಡು ಸ್ಥಾನಕ್ಕೇರಿದ್ದಾರೆ.

ರಾಜ್ಯದ ಒಟ್ಟಾರೆ 6.65 ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಒಟ್ಟು 1.08 ಕೋಟಿಯೊಂದಿಗೆ ನಂಬರ್ 1 ಸ್ಥಾನದಲ್ಲಿದ್ದಾರೆ. ಈ ಪೈಕಿ  73.5 ಲಕ್ಷ ಇರುವ ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು, ಲಿಂಗಾಯತರು 59.5 ಲಕ್ಷ ಹಾಗೂ ಒಕ್ಕಲಿಗರು 49 ಲಕ್ಷದೊಂದಿಗೆ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿನಿಧಿಸುವ ಕುರುಬರದ್ದು. ಈ ಸಮುದಾಯದ ಸಂಖ್ಯೆ 43 ಲಕ್ಷ. ನಂತರದ ಸ್ಥಾನಗಳಲ್ಲಿ ಈಡಿಗರು 14 ಲಕ್ಷ ಹಾಗೂ ಬ್ರಾಹ್ಮಣರು 13 ಲಕ್ಷ ಇದ್ದಾರೆ.

ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳ (ಅಹಿಂದ) ಮಂತ್ರದೊಂದಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯನವರ ಸರಕಾರ ಜಾತಿ ಗಣತಿ ಕೈಗೆತ್ತಿಕೊಂಡಿತ್ತು. ಜಾತಿ ಗಣತಿ ಪ್ರಕ್ರಿಯೆಯಲ್ಲಿ ಅನೇಕ ಲೋಪದೋಷಗಳ ಬಗ್ಗೆ ದೂರು ಕೇಳಿಬಂದಿತ್ತು. ಉಪಜಾತಿಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂಬ ಆಪಾದನೆ ಬಂದಿತ್ತು. ಇದೀಗ ಹಿಂದುಳಿದ ವರ್ಗಗಳ ಆಯೋಗದ ವರದಿ ಮುಂದಿನ ತಿಂಗಳಷ್ಟೇ ಮಂಡನೆ ಆಗಲಿದ್ದು, ಮೊದಲಿಗೆ ಸಂಪುಟದ ಒಪ್ಪಿಗೆ ಸಿಗಬೇಕಿದೆ. ಆದರೆ ಅದಕ್ಕೆ ಮೊದಲು ವರದಿಯ ‘ಆಯ್ದ ಅಂಶಗಳ ಸೋರಿಕೆ’ ಆಗಿದ್ದು, ಇದಕ್ಕೂ ಮತ್ತು ಇತ್ತೀಚೆಗೆ ಲಿಂಗಾಯತ ಸಮುದಾಯದ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದಕ್ಕೂ ಏನೋ ಸಂಬಂಧ ಇದೆ ಎಂದು ರಾಜಕೀಯ ವಲಯದಲ್ಲಿ ತಳಕು ಹಾಕಲಾಗುತ್ತಿದೆ. ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಲಿಂಗಾಯತ ಸಮುದಾಯವು ಹಿಂದಿನ ಜನ ಗಣತಿಯ ಪ್ರಕಾರ ನಂಬರ್ 1 ಸ್ಥಾನದಲ್ಲಿತ್ತು.

ಪುನಃ ಸೋರಿಕೆ ವರದಿಗೆ ಬರುವುದಾದರೆ, ಪರಿಶಿಷ್ಟ ಜಾತಿ ಪೈಕಿ 33 ಲಕ್ಷ ಮಾದಿಗರು, 29 ಲಕ್ಷ ಛಲವಾದಿಗಳು ಇದ್ದಾರೆ. ಪರಿಶಿಷ್ಟ ಪಂಗಡದ ಪೈಕಿ 33 ಲಕ್ಷದೊಂದಿಗೆ ವಾಲ್ಮೀಕಿ ಸಮುದಾಯದವರು ಅಗ್ರಸ್ಥಾನದಲ್ಲಿದ್ದಾರೆ. ಬೇಡ-ಜಂಗಮ 3 ಲಕ್ಷ ಇದ್ದಾರೆ.

ಬಹುಶಃ ಇಂಥದೊಂದು ಸೋರಿಕೆ ಮೂಲಕ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣದಲ್ಲಿ ತಾನಿನ್ನೂ ಲಾಭದ ಸ್ಥಾನದಲ್ಲೇ ಇದ್ದೇನೆ ಎಂದು ಬಿಂಬಿಸಿಕೊಳ್ಳಹೊರಟಿದೆ. ಆದರೆ ಈ ರೀತಿಯ ಬಿಂಬಿಸಿಕೊಳ್ಳುವಿಕೆ ಅದರ ಅಹಿಂದ ಲೆಕ್ಕಾಚಾರ ಬುಡಮೇಲು ಮಾಡಿ ವ್ಯತಿರಿಕ್ತ ಪರಿಣಾಮವನ್ನೇ ತಂದೊಡ್ಡುವ ಸಾಧ್ಯತೆಯನ್ನು ಗಮನಿಸಿದಂತಿಲ್ಲ.

ಕಾಂಗ್ರೆಸ್ ಸರಕಾರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆಯ ಕೂಗು ಕೇಳಿಬಂದಿದೆ. ಸಿದ್ದರಾಮಯ್ಯ ಬದಲಿಗೆ ಪರಿಶಿಷ್ಟ ನಾಯಕರೊಬ್ಬರನ್ನು ಈ ಸ್ಥಾನಕ್ಕೆ ತರಬೇಕು ಎಂಬ ಒತ್ತಾಯಕ್ಕೆ ಇದೀಗ ಸೋರಿಕೆ ವರದಿ ಪ್ರಕಾರ ಪರಿಶಿಷ್ಟ ಸಮುದಾಯದವರು ನಂಬರ್ 1 ಸ್ಥಾನದಲ್ಲಿರುವುದು ಅನೆಬಲ ತಂದಿದೆ. ಜತೆಗೆ ಅಹಿಂದ ಮಂತ್ರ ಪಠಿಸಿಕೊಂಡು ಬಂದ ಸಿದ್ದರಾಮಯ್ಯನವರು ದಲಿತರನ್ನು ಕಡೆಗಣಿಸಿದ್ದಾರೆ, ದಲಿತ ಸಮುದಾಯಕ್ಕೆ ಸೇರಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಇನ್ನಿಲ್ಲದಂತೆ ಸತಾಯಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಲ್ಲಿದ್ದ ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಒಳಸಂಚು ರೂಪಿಸಿದ್ದರು. ಆ ಪೈಕಿ ಪರಮೇಶ್ವರ ಅವರ ಬಲಿ ಪಡೆಯುವಲ್ಲಿ ಯಶಸ್ವಿಯಾದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ ಪರಿಶಿಷ್ಟ ಮುಖ್ಯಮಂತ್ರಿ ಕೂಗು ಮತ್ತಷ್ಟು ಗಡಸಾಗುವ ಸಂಭವವಿದೆ.

ಎಲ್ಲಕ್ಕಿಂತ ಮಿಗಿಲಾಗಿ ಪರಿಶಿಷ್ಟ ಸಮುದಾಯದ ಸಂಖ್ಯೆ ಹೆಚ್ಚಾಗಿರುವುದು ಬಿಜೆಪಿಗೆ ಒಂದು ರೀತಿಯಲ್ಲಿ ಒಳಿತೇ ಆಗಿದೆ. ಏಕೆಂದರೆ 2008 ರ ಚುನಾವಣೆಯಲ್ಲಿ ಇದೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಪರಿಶಿಷ್ಟ ಸಮುದಾಯದ 36 ಶಾಸಕರು ಗೆದ್ದು ಬಂದಿದ್ದರು. ಆ ಸಮುದಾಯದ 10 ಮಂದಿ ಮಂತ್ರಿಗಳಾಗಿದ್ದರು. ಬಿಜೆಪಿಯ 110 ಸ್ಥಾನಗಳ ಪೈಕಿ ಪರಿಶಿಷ್ಟ ಸಮುದಾಯದ್ದೇ ಶೇಕಡಾ 33 ರಷ್ಟಿತ್ತು. ಹೀಗಾಗಿ ಪರಿಶಿಷ್ಟ ಸಮುದಾಯದ ಜನಸಂಖ್ಯೆ ಹೆಚ್ಚಳ ಬಿಜೆಪಿಗೆ ಒಂದು ರೀತಿಯಲ್ಲಿ ವರವೇ ಆಗಬಹುದು!

2 COMMENTS

  1. ಸಂಖ್ಯೆಗಳ ಆಧಾರದಲ್ಲಿ ಟಿಕೆಟ್ ಗಿಟ್ಟಿಸಲು ಸಹಾಯಕವಾಗಬಹುದೇ ಹೊರತು ಮತ ಗಿಟ್ಟಿಸಲು ಸಾಧ್ಯವಿಲ್ಲಾ

Leave a Reply