ಬಡ ಪ್ರತಿಭಾವಂತರಿಗೆ 50 ಲಕ್ಷ ರುಪಾಯಿ ವಿದ್ಯಾರ್ಥಿ ವೇತನ ಕೊಟ್ಟು ಮಾದರಿ ಆದ ಜೈನ್ ವಿವಿ

ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಕಷ್ಟ. ಕಾರಣ, ಮನಸೋ ಇಚ್ಛೆ ಡೊನೇಷನ್ ವಸೂಲಿ. ಆ ಪ್ರಮಾಣ ನೋಡಿದರೆ ಕಾಲೇಜುಗಳಿಗೆ ಸೇರಿಸುವುದಿರಲಿ, ಹತ್ತಿರ ಸುಳಿಯಲೂ ಭಯವಾಗುತ್ತದೆ. ಇದೊಂದು ಪಿಡುಗೂ ಹೌದು. ಆದರೆ, ಕೆಲ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರಳಾಗಿ ನಿಲ್ಲುವುದು ತಮ್ಮ ಜವಾಬ್ದಾರಿಯೂ ಹೌದೆಂದು ಭಾವಿಸಿವೆ. ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿವೆ. ಅಂಥ ಕಾಲೇಜುಗಳ ಸಾಲಿನಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪ್ರಮುಖವಾಗಿ ನಿಲ್ಲುತ್ತದೆ.

ಜೈನ್ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 50 ಲಕ್ಷ ವಿದ್ಯಾರ್ಥಿ ವೇತನ ನೀಡಿದೆ. ಕೆಲ ವರ್ಷಗಳಿಂದ ಈ ಪ್ರತೀತಿ ಪರಿಪಾಲಿಸಿಕೊಂಡು ಬಂದಿದ್ದು, ಈವರೆಗೆ ಒಟ್ಟು 4.5 ಕೋಟಿ ರುಪಾಯಿ ವಿತರಿಸಿದೆ. ಜೈನ್ ವಿವಿಯ ಈ ಕಾರ್ಯ ನಿಜಕ್ಕೂ ಇತರೆ ವಿದ್ಯಾ ಸಂಸ್ಥೆಗಳಿಗೂ ಸ್ಫೂರ್ತಿದಾಯಕ. ಇದರಿಂದ ಬಡ ಮಕ್ಕಳಿಗೂ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಎಟಕುತ್ತದೆ. ಮುಖ್ಯವಾಹಿನಿಯಲ್ಲಿ ಎಲ್ಲರೂ ಕಲೆಯಲು ನೆರವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಒತ್ತಡರಹಿತ ವ್ಯಾಸಂಗಕ್ಕೆ ಗಮನ ಹರಿಸಲು ಸಹಾಯವಾಗುತ್ತದೆ.

ಯೋಜನೆ ರೂವಾರಿಗಳಾದ ಜೈನ್ ವಿವಿ ಉಪಕುಲಪತಿ ಡಾ.ಎನ್.ಸುಂದರರಾಜನ್ ಹೇಳುವುದೇನೆಂದರೆ – ‘ನಾನು ಕೂಡ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಯೇ. ಪೋಷಕರಿಂದ ಶಿಕ್ಷಣಕ್ಕಾಗಿ ಒಂದೇ ಒಂದು ಪೈಸೆಯನ್ನು ಖರ್ಚಿ ಮಾಡಿಸಿರಲಿಲ್ಲ. ಹೀಗಾಗಿ ಅದರ ಮೌಲ್ಯ ಏನೆಂಬುದು ಚನ್ನಾಗಿ ಗೊತ್ತು. ಅರ್ಹತೆ ಮತ್ತು ಅಗತ್ಯತೆ ಸಮೀಕರಣದಿಂದ ಈ ವೇತನದ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ’ ಎಂದಿದ್ದಾರೆ.

ಹೌದು, ಆರ್ಥಿಕವಾಗಿ ಹಿಂದುಳಿದ ಅವೆಷ್ಟೋ ಯುವಕರಿಗೆ ಉತ್ತಮ ಶಿಕ್ಷಣ ಗಗನ ಕುಸುಮವಾಗುತ್ತದೆ. ಹೀಗಾಗಿ ಜೈನ್ ವಿವಿ ಕಾರ್ಯ ಶ್ಲಾಘನೀಯ. ಶಿಕ್ಷಣ ಕ್ಷೇತ್ರದಲ್ಲಿ ಹಣ ಮಾಡುವುದೊಂದೇ ಗುರಿಯಾಗಿರದೇ, ಸಾಮಾಜಿಕ ಜವಾಬ್ದಾರಿ ಮೆರೆಯುವುದು ಇಂದಿನ ಅಗತ್ಯ. ಉಳಿದ ಸಂಸ್ಥೆಗಳಿಗೂ ಇದು ಮಾದರಿಯಾಗಲಿ. ಫಲಾನುಭವಿ ಪ್ರತಿಭೆಗಳು ದೇಶಕ್ಕೆ ಉತ್ತಮ ನಾಗರೀಕರಾಗಲಿ.

Leave a Reply