ಬೇಸಿಗೆಯಲ್ಲಿ ಬರಲಿರುವ ಹಂತಕ ಉಷ್ಣಗಾಳಿ, ಈ ಬಾರಿ ಇನ್ನೆಷ್ಟು ಜೀವಗಳ ಬಲಿ?

ಡಿಜಿಟಲ್ ಕನ್ನಡ ಟೀಮ್

ಉಷ್ಣಗಾಳಿ.., ಮಾನವನ ಜೀವಕ್ಕೆ ಕುತ್ತು ತರೋ ಪ್ರಾಕೃತಿಕ ವಿಪತ್ತುಗಳಲ್ಲಿ ಒಂದು. ಸದ್ಯ ಬಿರು ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೇ ದೇಶದ ಹಲವಾರು ರಾಜ್ಯಗಳು ತತ್ತರಿಸಿವೆ. ಈ ಬಾರಿ ಬರದ ಸಮಸ್ಯೆ ಜತೆಗೆ ಉಷ್ಣಗಾಳಿ ಭಯಾನಕವಾಗಿ ಕಾಡುವ ಭೀತಿ ಎದುರಾಗಿದೆ. ಈ ಏಪ್ರಿಲ್ ನಿಂದ ಜೂನ್ ತಿಂಗಳವರೆಗೂ ಅತಿಯಾದ ಉಷ್ಣಗಾಳಿ ಬೀಸಲಿದೆ, ಕಳೆದ 140 ವರ್ಷಗಳಲ್ಲಿಇದು ತೀವ್ರತರದ್ದು ಎಂದು ಇಂಡಿಯಾ ಮೆಟೆರೊಲಾಜಿಕಲ್ ಡಿಪಾರ್ಟ್ ಮೆಂಟ್ ಎಚ್ಚರಿಕೆ ನೀರುವುದು ಆತಂಕ ಸೃಷ್ಟಿಸಿದೆ.

2000ನೇ ಇಸವಿಯಿಂದ 2014ರವರೆಗೂ ಪ್ರಾಕೃತಿಕ ವೈಪರಿತ್ಯದಿಂದ ಮಾನವನ ಜೀವ ಬಲಿ ಪಡೆದ ಪೈಕಿ ಉಷ್ಣಗಾಳಿ ಮೂರನೇ ಸ್ಥಾನದಲ್ಲಿದೆ. ಸಿಡಿಲಿಗೆ (32,743), ಭೂಕಂಪಕ್ಕೆ (14,593) ಹೆಚ್ಚು ಜನ ಬಲಿಯಾಗಿದ್ದು, ಉಷ್ಣಗಾಳಿಯ ಪರಿಣಾಮ 13,548 ಮಂದಿ ಸಾವನ್ನಪ್ಪಿದ್ದಾರೆ.

ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಪ್ರತಿ 15 ದಿನಕ್ಕೂ ಮುನ್ನ ಸಾಧ್ಯವಾದಷ್ಟು ನಿಖರವಾದ ಹವಾಮಾನ ಮುನ್ಸೂಚನೆ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಅತಿಯಾದ ಮಳೆ, ಸೈಕ್ಲೋನ್ ಜತೆಗೆ 100ಕ್ಕೂ ಹೆಚ್ಚು ನಗರಗಳಲ್ಲಿ ಉಷ್ಣಾಂಶದ ಮುನ್ಸೂಚನೆಯನ್ನು ನೀಡಲು ನಿರ್ಧರಿಸಲಾಗಿದೆ.

ಹವಾಮಾನ ವೈಪರಿತ್ಯ, ಉಷ್ಣಗಾಳಿಯ ಸಮಸ್ಯೆ ಎದುರಿಸಲು ಹಾಗೂ ಮಾನ್ಸೂನ್ ನಲ್ಲಿನ ಬದಲಾವಣೆಯನ್ನು ಅರಿಯುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಶೋಧಕರಿಂದ ಸಾಕಷ್ಟು ಅಧ್ಯಯನಗಳೂ ನಡೆಯುತ್ತಿದೆ. ಕಳೆದ ವರ್ಷ ಈ ಉಷ್ಣಗಾಳಿಯ ಪರಿಣಾಮ 2,241 ಜನ ಮೃತಪಟ್ಟಿದ್ದಾರೆ. ಈ ನಡುವೆ ಪ್ರಮುಖವಾಗಿ ಕಾಡುವುದು, 2005ರ, ರಾಷ್ಟ್ರೀಯ ವಿಪತ್ತು ಕಾಯ್ದೆ ಮತ್ತು 2009ರ ವಿಪತ್ತು ನಿರ್ವಹಣೆಯ ರಾಷ್ಟ್ರೀಯ ನೀತಿಯಲ್ಲಿ ಉಷ್ಣಗಾಳಿಯ ಪ್ರಭಾವವನ್ನು ಪ್ರಾಕೃತಿಕ ವಿಪತ್ತು ಎಂದು ಪರಿಗಣಿಸಿಲ್ಲ ಎಂಬ ಅಂಶ. ಹಾಗಾಗಿ ಈ ಉಷ್ಣಗಾಳಿಯ ಸಮಸ್ಯೆ ನಿಭಾಯಿಸೋದು ಸ್ವಲ್ಪ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನ್ಯಾಷನಲ್ ಕ್ರೈಂ ಬ್ಯೂರೋ, ಗೃಹ ಮತ್ತು ದತ್ತಾಂಶ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಈ ಉಷ್ಣಗಾಳಿ ಯಾವ ಪ್ರದೇಶದಲ್ಲಿ ಹೆಚ್ಚು ಎಂದು ನೋಡೊದಾದ್ರೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ಅಗ್ರಸ್ಥಾನದಲ್ಲಿವೆ. ಕಳೆದ 14 ವರ್ಷದಲ್ಲಿ 2,277 ಮಂದಿ ಈ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿ ಪಂಜಾಬ್, ಹರ್ಯಾಣ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ. ಈ ಎಲ್ಲಾ ರಾಜ್ಯಗಳಿಂದ 5,607 ಮಂದಿ ಮೃತಪಟ್ಟಿದ್ದಾರೆ. ಇನ್ನು ಮೂರನೇ ಹಂತದಲ್ಲಿ ಬರೋದು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು. ಇಲ್ಲಿ 3,931 ಮಂದಿ ಬಲಿಯಾಗಿದ್ದಾರೆ. ಕರ್ನಾಟಕ ಸೇರಿದಂತೆ ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ಈ ಉಷ್ಣಗಾಳಿ ರುದ್ರ ತಾಂಡವ ಕಡಿಮೆ ಪ್ರಮಾಣದಲ್ಲಿದೇ ಎಂದೇ ಹೇಳಬಹುದು. ಆದರೆ, ಅತಿಯಾದ ಬೇಸಿಗೆಯಿಂದ ಜನರ ಪರದಾಟ ಮಾತ್ರ ನಿಂತಿಲ್ಲ.

Leave a Reply