ಸುದ್ದಿಸಂತೆ: ಪ್ರಶ್ನೆಪತ್ರಿಕೆ ಸಿಬ್ಬಂದಿಗೆ ಗೃಹಬಂಧನ, ಮಾನ್ಸೂನ್ ಚೆನ್ನಾಗಾಗುತ್ತಂತೆ.. ಶಬರಿಮಲೈ, ಜೆ ಎನ್ ಯು…

ಸೋಮವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದಿದ್ದ ಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆಯಿತು ಹೀಗೊಂದು ಚಿತ್ರ

ಇಂದು ಮರುಪರೀಕ್ಷೆ, ಭಾರೀ ಕಟ್ಟೆಚ್ಚರ

ಎರಡು ಬಾರಿ ಸೋರಿಕೆಯಾದ ಪಿಯುಸಿ ರಸಾಯನಶಾಸ್ತ್ರದ ಮರುಪರೀಕ್ಷೆ ಹಿಂದೆಂದೂ ಕಾಣದ ಬಿಗಿಭದ್ರತೆಯಲ್ಲಿ ಮಂಗಳವಾರ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಸಿಬ್ಬಂದಿ ನಾಳೆ ಪರೀಕ್ಷೆ ಮುಗಿಯುವರೆಗೂ ಗೃಹಬಂಧನದಲ್ಲಿ ಇರಬೇಕಾಗಿದೆ.

ಈ ಬಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೇ ಖುದ್ದು ಪರೀಕ್ಷೆ ಉಸ್ತುವಾರಿ ಹೊತ್ತಿದ್ದು, ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಂದ ಹೊರಗೆ ಅಂದರೆ ಧಾರವಾಡದಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಮುದ್ರಣ ಸ್ಥಳವನ್ನು ಅತ್ಯಂತ ಗೌಪ್ಯವಾಗಿಡಲಾಗಿದ್ದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಸಿಬ್ಬಂದಿಗಳು ನಾಳೆ ಸಂಜೆವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ ಎಂದು ಕಟ್ಟಪ್ಪಣೆ ವಿಧಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸಾಗಾಣಿಕೆ ಮತ್ತು ಪರೀಕ್ಷೆ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಹಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಇರಿಸಿರುವ ಧಾರವಾಡ ಜಿಲ್ಲಾ ಖಜಾನೆಯ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು, ಎಲ್ಲ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.

ಈ ಬಾರಿಯೂ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವ ಕಿಮ್ಮನೆ ರತ್ನಾಕರ ಘೋಷಿಸಿದ್ದಾರೆ. ಹೀಗಾಗಿ ಅತಿ ಎಚ್ಚರಿಕೆ ವಹಿಸಲಾಗಿದೆ.

ಇನ್ನುಳಿದಂತೆ ತಿಳಿದಿರಬೇಕಾದ ಸುದ್ದಿಸಾಲುಗಳು…

-ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಮತದಾನ ಸೋಮವಾರ ಮುಕ್ತಾಯವಾಗಿದ್ದು, 31 ಸ್ಥಾನಗಳಗೆ ಸ್ಪರ್ಧಿಸಿದ್ದ 163 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಸುಮಾರು 70 ಲಕ್ಷ ಮತದಾರರು ಇಂದು ಮತ ಚಲಾಯಿಸಿದ್ದು, ಶೇಕಡ 71 ರಷ್ಟು ಮತದಾನವಾಗಿದೆ.

-ದೇಶ ವಿರೋಧಿ ಚಟುವಟಿಕೆಯ ಆರೋಪ ಹೊತ್ತಿರುವ ಜೆಎನ್ ಯು ವಿದ್ಯಾರ್ಥಿಗಳಾದ ಅನಿರುದ್ಧ ಭಟ್ಟಚಾರ್ಯ, ಉಮರ್ ಖಾಲಿದ್ ಅವರನ್ನು ವಿವಿಯಿಂದ 2 ರಿಂದ 5 ವರ್ಷಗಳವರೆಗೆ ಹೊರಹಾಕುವ ಮತ್ತು ಕನ್ಹಯ್ಯ ಕುಮಾರ್ ಗೆ 10 ಸಾವಿರ ದಂಡ ವಿಧಿಸುವುದಕ್ಕೆ ವಿವಿಯ ಆಡಳಿತ ಮಂಡಳಿ ತೀರ್ಮಾನಿಸಿದೆ. ಅಧಿಕೃತ ಘೋಷಣೆ ಆಗಬೇಕಿದೆ.

– ರೈತರಿಗೆ ಸಂತೋಷದ ವಿಚಾರವೆಂದರೆ ಈ ಬಾರಿಯ ಮಾನ್ಸೂನ್ ಮಳೆ ಸರಾಸರಿಗಿಂತ ಹೆಚ್ಚಾಗಲಿದೆ ಎಂದು ಖಾಸಗಿ ವಾತಾವರಣ ಮುನ್ಸೂಚಕ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಜುಲೈಯಿಂದ ಸೆಪ್ಟಂಬರ್ ವರೆಗೆ ಬಿಳುವ ಮಳೆ ವಾರ್ಷಿಕ ಸರಾಸರಿಯಲ್ಲಿ ಶೇ. 70 ಇರಲಿದೆ. ಇದು ದೇಶದ ಅರ್ಧಕ್ಕೂ ಹೆಚ್ಚು ರೈತರು ಬೆಳೆ ಬೆಳೆಯಲು ಸಹಕಾರಿಯಾಗಲಿದೆ.

-ಶಬರಿಮಲೈನಲ್ಲಿ ಮಹಿಳೆಯರನ್ನು ನಿರ್ಬಂಧಿಸುವುದು ಸಂಪ್ರದಾಯಕ್ಕೆ ವಿರುದ್ಧ ಎಂದಾದರೆ, ಸಂಪ್ರದಾಯವು ಸಂವಿಧಾನಕ್ಕಿಂತ ದೊಡ್ಡದೇ ಎಂದು ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಕಟುವಾಗಿ ಪ್ರಶ್ನಿಸಿದೆ.

Leave a Reply