ಸ್ವಾಮಿ ಸ್ವರೂಪಾನಂದರ ‘ರೇಪ್ ಹೇಳಿಕೆ’ ಇಟ್ಟುಕೊಂಡು ‘ಸನಾತನ ಮನಸ್ಥಿತಿ’ಗೆ ಬಯ್ಯುವ ಮುನ್ನ ಗಮನಿಸಬೇಕಾದ ಇತರ ಹೇಳಿಕೆಗಳು!

ಸ್ವಾಮಿ ಸ್ವರೂಪಾನಂದ- ಸೋನಿಯಾ ಗಾಂಧಿ ಇಂಟರ್ನೆಟ್ ಸಂಗ್ರಹ ಚಿತ್ರ

ಡಿಜಿಟಲ್ ಕನ್ನಡ ಟೀಮ್

‘ಮಹಿಳೆಯರು ಶನಿ ದೇವರ ಪೂಜೆ ಮಾಡಿದರೆ, ದೇಶದಲ್ಲಿ ರೇಪ್ ಹೆಚ್ಚುತ್ತೆ’.. ಹೀಗೆ ಹೇಳಿರೋದು ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತಿ ಪಡೆದಿರೋ ಸ್ವರೂಪಾನಂದ ಸರಸ್ವತಿ. ಇದೊಂದೇ ಅಲ್ಲ, ‘ಶಿರಡಿ ಸಾಯಿಬಾಬಾನ ಪೂಜೆ ಮಾಡುತ್ತಿರೋದ್ರಿಂದಲೇ ಮಹಾರಾಷ್ಟ್ರ ಭೀಕರ ಬರಗಾಲಕ್ಕೆ ಸಿಲುಕಿದೆ’ ಅಂತಲೂ ಇವರು ಹೇಳಿರುವುದು ಮತ್ತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಆರಂಭಿಕ ದಿನಗಳಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ 2 ವರ್ಷ ಜೈಲು ವಾಸ ಅನುಭವಿಸಿದ್ದ ಸ್ವರೂಪಾನಂದ 1982ರಲ್ಲಿ ಜ್ಯೋತಿರ್ ಮಠದ ಶಂಕರಾಚಾರ್ಯರಾದರು. ಸ್ವರೂಪಾನಂದ ಸ್ವಾಮೀಜಿ ಇದೇ ಮೊದಲ ಬಾರಿಗೆ ಈ ರೀತಿಯಾದ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಈ ಹಿಂದೆ ಅವರ ಕಾಂಟ್ರೊವರ್ಸಿ ಮಾತುಗಳ ಟ್ರ್ಯಾಕ್ ರೆಕಾರ್ಡ್ ಬಹಳ ದೊಡ್ಡದಾಗಿಯೇ ಇದೆ. ಇದುವರೆಗೂ ಸ್ವರೂಪಾನಂದ ಸರಸ್ವತಿಯವರು ನೀಡಿರುವ ವಿವಾದಾತ್ಮಕ ಹೇಳಿಕೆ ಏನೇನು ಇಲ್ಲಿದೆ ನೋಡಿ.

  • ಈ ಹಿಂದೆಯೂ ಅಂದರೆ, 2014ರ ಜುಲೈನಲ್ಲಿ ಸ್ವರೂಪಾನಂದ ಸರಸ್ವತಿ ಶಿರಡಿ ಸಾಯಿಬಾಬಾ ಅವರ ಆರಾಧನೆಯನ್ನು ವಿರೋಧಿಸಿದ್ದರು. ‘ಸಾಯಿಬಾಬಾ ಮುಸ್ಲಿಂ ಫಕೀರನಾಗಿದ್ದರು. ಹಿಂದೂ ಶಾಸ್ತ್ರ ಮತ್ತು ವೇದಗಳಲ್ಲಿ ಸಾಯಿಬಾಬಾ ಹೆಸರಿಲ್ಲ. ಹಾಗಾಗಿ ಹಿಂದೂ ದೇವತೆಯಾಗಿ ಅವರನ್ನು ಆರಾಧಿಸಬಾರದು. ಅವರು ಮಾಂಸ ತಿನ್ನುತ್ತಾ ಅಲ್ಲಾನ ಆರಾಧನೆ ಮಾಡುತ್ತಿದ್ದರು’ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ಹೇಳಿಕೆಗೆ ಕ್ಷಮೆಯನ್ನೂ ಕೋರಿದ್ದರು.
  • ಕಳೆದ ಫೆಬ್ರವರಿಯಲ್ಲಿ ಇಸ್ಕಾನ್ ಸನಾತನ ಧರ್ಮದ ಭಾಗ ಎಂಬುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ‘ಇದು ಹಣ ದುರುಪಯೋಗ ಮಾಡುವ ಸಂಸ್ಥೆಯಾಗಿದೆ. ಭಾರತದಲ್ಲಿ ಹಣ ಸಂಗ್ರಹಿಸಿ ಅದನ್ನು ಅಮೆರಿಕ ಹಾಗೂ ಇತರೆ ವಿದೇಶಕ್ಕೆ ಕಳುಹಿಸಲು ಬಳಸಿಕೊಳ್ಳಲಾಗುತ್ತಿದೆ. ಇಸ್ಕಾನ್ ದೇವಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಆದಲ್ಲಿ ಅಸ್ಸಾಂ ಮತ್ತು ಚತ್ತೀಸಗಢ ರಾಜ್ಯಗಳಲ್ಲಿ ನಿರ್ಮಿಸಬಹುದು. ಇಸ್ಕಾನ್ ಮುಖ್ಯ ಉದ್ದೇಶ ಧರ್ಮವಲ್ಲ, ಬೇರೆಯ ಉದ್ದೇಶವೇ ಇದೆ’ ಎಂದು ಆರೋಪಿಸಿದ್ದರು.
  • ಇದೇ ವರ್ಷ ಮಾರ್ಚ್ ನಲ್ಲಿ ಸ್ವರೂಪಾನಂದ ಸರಸ್ವತಿ ಆರೆಸ್ಸೆಸ್ ವಿರುದ್ಧ ಕಿಡಿಕಾರಿದ್ದರು. ‘ಆರೆಸ್ಸೆಸ್ ಹಿಂದೂಗಳ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ, ಹಿಂದೂತ್ವದ ಬಗ್ಗೆ ಕಾಳಜಿ ಇಲ್ಲ. ತಾವು ಹಿಂದೂತ್ವ ರಕ್ಷಣೆಗಾಗಿ ಬಂದಿರುವುದಾಗಿ ಜನರನ್ನು ವಂಚಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿತ್ತು, ಈಗ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಎರಡೂ ಸರ್ಕಾರದಲ್ಲೂ ಗೋ ಹತ್ಯೆ ನಡೆಯುತ್ತಲೇ ಇದೆ. ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆರಂಭದಲ್ಲಿ ಬಿಜೆಪಿ ಅಯ್ಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸುವುದಾಗಿ ತಿಳಿಸಿತ್ತು. ಜಮ್ಮು ಕಾಶ್ಮೀರದಲ್ಲಿ 370ರ ವಿಧಿಯನ್ನು ತೆಗೆಯುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಅದರ ಬಗ್ಗೆ ಚಿಂತನೆ ನಡೆಸುವುದಾಗಿ ರಾಗ ಎಳೆದಿದೆ’ ಎಂದು ಆರೆಸ್ಸೆಸ್ ಮತ್ತು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

Leave a Reply