ಐಪಿಎಲ್ ನಡೀತಿರೋ ಹೊತ್ತಲ್ಲಿ ಚರ್ಚೆಯಾಗಬೇಕಿರೋ ಲೋಧಾ ಸಮಿತಿ ಶಿಫಾರಸ್ಸು, ಬೆಟ್ಟಿಂಗ್ ಕಾನೂನುಬದ್ಧಗೊಂಡರೆ ಸಿಕ್ಕೀತೇ ಪಾರದರ್ಶಕತೆಯ ಯಶಸ್ಸು?

ಸೋಮಶೇಖರ ಪಿ. ಭದ್ರಾವತಿ

ಟಿ20 ವಿಶ್ವಕಪ್ ನ ರೋಚಕ ಪಂದ್ಯಗಳಲ್ಲಿ ಮಿಂದೆದ್ದಿದ್ದ ಕ್ರಿಕೆಟ್ ಅಭಿಮಾನಿಗಳು, ಇನ್ನೆರಡು ತಿಂಗಳು ಐಪಿಎಲ್ ಕಡಲಿನಲ್ಲಿ ವಿಹರಿಸಲಿದ್ದಾರೆ. ಮಹಾರಾಷ್ಟ್ರದ ಬರ ಮತ್ತು ಐಪಿಎಲ್ ವೈಭೋಗದ ಪ್ರಸ್ತುತತೆ ಬಗ್ಗೆ ಚರ್ಚೆಗಳಾಗುತ್ತಿವೆ. ಈ ವೇಳೆ ಇನ್ನೊಂದು ಚರ್ಚೆಗೂ ಜಾಗ ಸಿಗಬೇಕಿದೆ.

ಐಪಿಎಲ್ ಬಂದರೆ, ಕ್ರಿಕೆಟ್ ನ ಮನರಂಜನೆ ಒಂದೆಡೆ. ಆದರೆ, ಇದೇ ವೇಳೆ ಗಲ್ಲಿ ಗಲ್ಲಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕದ್ದು ಮುಚ್ಚಿ ನಡೆಯೋ ಬೆಟ್ಟಿಂಗ್ ಸಹ ಒಳಗೊಳಗೆ ವಿಸ್ತಾರ ರೂಪ ಪಡೆಯುತ್ತದೆ.

ಕೆಲ ವರ್ಷಗಳಿಂದಲೂ ಬೆಟ್ಟಿಂಗ್ ಪರ ಮತ್ತು ವಿರೋಧದ ವಾದಗಳೆರಡು ತಮ್ಮದೇ ಆದ ಸಬೂಬುಗಳನ್ನು ಹೊಂದಿದೆ. ಅದರಲ್ಲೂ 2013ರ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದ ನಂತರ ಇದರ ಕೂಗು ಹೆಚ್ಚಿದೆ. ಬಿಸಿಸಿಐ ಸುಧಾರಣೆಗೆ ಸುಪ್ರೀಂ ಕೋರ್ಟ್ ನೇಮಿತ ನಿವೃತ್ತ ನ್ಯಾಯಮೂರ್ತಿ ಆರ್.ಎಂ ಲೋಧಾ ಸಮಿತಿಯು ಬೆಟ್ಟಿಂಗ್ ಕಾನೂನಿನ ಚೌಕಟ್ಟಿನಲ್ಲಿ ಜಾರಿಗೊಳಸಬೇಕು ಎಂಬ ಶಿಫಾರಸ್ಸು ನೀಡಿದೆ. ಹಾಗಾಗಿ ಬೆಟ್ಟಿಂಗ್ ಬೇಕು ಎಂಬ ವಾದಕ್ಕೆ ಪುಷ್ಠಿ ಸಿಕ್ಕಿದೆ.

ನಿಜ.. ಒಂದು ಆಯಾಮದಲ್ಲಿ ಯೋಚಿಸೋದಾದ್ರೆ, ಬೆಟ್ಟಿಂಗ್ ಕಾನೂನು ಭದ್ರಕೋಟೆಯಲ್ಲಿ ಜಾರಿಗೊಳ್ಳುವುದೇ ಉತ್ತಮ ಎನ್ನಬಹುದು. ಅರೆ, ಬೆಟ್ಟಿಂಗ್ ಜಾರಿಗೊಳ್ಳುವುದರಿಂದ ತೊಂದರೆಯೇ ಜಾಸ್ತಿ ಅಲ್ಲವೇ? ಅದರಿಂದ ಆಗೋ ಪ್ರಯೋಜನಗಳೇನು ಎಂಬ ಪ್ರಶ್ನೆ ಕಾಡುವುದು ಸಹಜ. ಬೆಟ್ಟಿಂಗ್ ಜಾರಿಗೊಂಡರೆ, ಆಗೋ ಉಪಯೋಗಗಳು ಹೀಗಿವೆ ನೋಡಿ..

 • ಬೆಟ್ಟಿಂಗ್ ಕಾನೂನಿನ ಪರಿದಿಯೊಳಗೆ ಬಂದರೆ, ಕತ್ತಲಲ್ಲಿರುವ ಈ ಪ್ರಕ್ರಿಯೆ ಮೇಲೆ ಬೆಳಕು ಚೆಲ್ಲಿದಂತಾಗುತ್ತದೆ. ಇದು ಬಾಹ್ಯ ಪ್ರಪಂಚಕ್ಕೆ ತೆರೆದುಕೊಂಡು ಈ ಪ್ರಕ್ರಿಯೆ ಮೇಲೆ ಕಾನೂನಿನ ನಿಗಾ ವಹಿಸಬಹುದು. ಆಗ, ಭೂಗತ ಜಗನ ಶಕ್ತಿಗಳು ಇಲ್ಲಿ ಪ್ರವೇಶಿಸುವುದನ್ನು ತಡೆದು, ಉತ್ತಮ ವಾತಾವರಣ ನಿರ್ಮಿಸಬಹುದು.
 • ಕ್ರೀಡೆಯಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಅನೈತಿಕ ವ್ಯವಹಾರಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ನೆರವಾಗಬಹುದು.
 • ಲೋಧಾ ಸಮಿತಿ ಶಿಫಾರಸ್ಸಿನಲ್ಲಿ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ನಡುವೆ ನಿರ್ದಿಷ್ಟ ವ್ಯತ್ಯಾಸ ಸೂಚಿಸಲಾಗಿದೆ. ಅಲ್ಲದೆ ಕ್ರೀಡೆಯಲ್ಲಿನ ಬೆಟ್ಟಿಂಗ್ ನಿಂದ ಆಟಗಾರರು, ತಂಡದ ಅಧಿಕಾರಿಗಳು, ಸದಸ್ಯರು ಇದರಿಂದ ನಿರ್ಬಂಧಿತರಾಗಿರಬೇಕು. ಆಗ ಬೆಟ್ಟಿಂಗ್ ಗೂ ಆಟದ ಫಲಿತಾಂಶಕ್ಕೂ ಯಾವುದೇ ಸಂಬಂಧವಿರುವುದಿಲ್ಲ.
 • ಭಾರತದಲ್ಲಿ ಇದರ ಅಗತ್ಯಕ್ಕೆ ತಕ್ಕಂತೆ ಒಂದು ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಿ, ಬಾಹ್ಯ ಶಕ್ತಿಗಳು ಇದರಲ್ಲಿ ಪ್ರಭಾವ ಬೀರುವುದನ್ನು ತಡೆಗಟ್ಟಿದರೆ, ಸುಲಲಿತವಾಗಿ ಈ ಪ್ರಕ್ರಿಯೆ ನಡೆದು ಕ್ರೀಡೆ ಮೇಲಿನ ವಿಶ್ವಾಸಾರ್ಹತೆ ಹೆಚ್ಚಲಿದೆ.
 • ಬೆಟ್ಟಿಂಗ್ ಕಾನೂನು ಪ್ರಕಾರ ಜಾರಿಗೆ ತಂದರೆ, ಕಪ್ಪು ಹಣವನ್ನು ಹೊರಗೆ ತೆಗೆಯಲು ಸಾಕಷ್ಟು ಮಂದಿ ಪ್ರಯತ್ನ ನಡೆಸುತ್ತಾರೆ.
 • ಈ ಬೆಳವಣಿಗೆ ಆರ್ಥಿಕ ಪ್ರಗತಿಗೂ ನೆರವಾಗಲಿದ್ದು, ಪ್ರತಿ ವರ್ಷಕ್ಕೆ 10-12 ಸಾವಿರ ಕೋಟಿ ಆದಾಯ ತೆರಿಗೆ ಮೂಲಕ ಸರ್ಕಾರದ ಬೊಕ್ಕಸ ಸೇರುತ್ತದೆ.
 • ಈ ಹಂತದಲ್ಲಿ ಕ್ರೀಡೆ ಹಾಗೂ ರಾಜ್ಯ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಆಡಳಿತದ ಅಗತ್ಯವಿರುತ್ತದೆ. ಇದರ ಹೊರತಾಗಿಯೂ ಆರಂಭದಲ್ಲಿ ಕಾನೂನುಬಾಹಿರ ಕ್ರಮ ನಡೆಯುವ ಪ್ರಯತ್ನವಾಗುತ್ತದೆಯಾದರೂ, ಕಾನೂನು ಗಟ್ಟಿ ಮಾಡಿದಾಗ, ಸುದೀರ್ಘ ಹಂತದ ಫಲಿತಾಂಶವಾಗಿ ಕ್ರೀಡೆಯನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. (ಉದಾ: ಹೆಲ್ಮೆಟ್ ಕಡ್ಡಾಯ ಮಾಡಿದಾಗ ಆರಂಭದಲ್ಲಿ ಕಾನೂನು ನಿರ್ಲಕ್ಷಿಸಿದ್ದ ಜನ, ಕಾನೂನು ಬಿಗಿಯಾದ ನಂತರ ಅದನ್ನು ಪಾಲಿಸಿದ ಹಾಗೆ)
 • ಇನ್ನು ಈ ಪ್ರಕ್ರಿಯೆ ಆರಂಭವಾಗೊದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ. ಹೌದು ಬ್ರಿಟನ್ ನಲ್ಲಿ ಗ್ಯಾಂಬ್ಲಿಂಗ್ ಒಂದು ಕೈಗಾರಿಕೆಯಾಗಿದ್ದು, 2008ರಲ್ಲಿ 3 ಬಿಲಿಯನ್ ಪೌಂಡ್ಸ್ ಆರ್ಥಿಕತೆ ಹೆಚ್ಚಿದ್ದು, ಒಟ್ಟು 40,700 ಉದ್ಯೋಗ ಸೃಷ್ಟಿಯಾಗಿತ್ತು. ಈಗ ಇದು ದ್ವಿಗುಣವಾಗಿದೆ.
 • ಸದ್ಯ ಬೆಟ್ಟಿಂಗ್ ಮಾನ್ಯತೆ ಇಲ್ಲದಿದ್ದರೂ ಇದನ್ನು ತಡೆಯಲು ಸಾಧ್ಯವಾಗಿಲ್ಲ. ಅಲ್ಲದೆ, ಕಳೆದ ವರ್ಷ ಐಪಿಎಲ್ ಅರ್ಧಭಾಗ ಮುಕ್ತಾಯಗೊಳ್ಳುವಷ್ಟರಲ್ಲಿ ಬ್ರಿಟನ್ ನಲ್ಲಿ 13 ಕೋಟಿ ರು,ಗೂ ಹೆಚ್ಚು ಬೆಟ್ಟಿಂಗ್ ನಡೆದಿದ್ದ ವರದಿಗಳು ಬಂದಿದ್ದವು. ಕಾನೂನಿನ ಚೌಕಟ್ಟು ಬೆಟ್ಟಿಂಗ್ ಗೆ ಇರದಿದ್ದರೆ, ಭೂಗತ ಅಪರಾಧಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತದೆ.

ಈ ಎಲ್ಲಾ ಅಂಶಗಳು ಬೆಟ್ಟಿಂಗ್ ಜಾರಿಗೊಳಿಸೋದರಿಂದ ಆಗೋ ಪ್ರಯೋಜನಗಳಾಗಿವೆ. ಆದರೆ ಈ ಬೆಟ್ಟಿಂಗ್ ಜಾರಿಗೊಳಿಸೋದು ಅಷ್ಟು ಸುಲಭದ ಕಾರ್ಯವಲ್ಲ. ಅರೆ, ಬೆಟ್ಟಿಂಗ್ ಜಾರಿಗೊಳಿಸೊದರಲ್ಲಿ ಅಂತಹ ತ್ರಾಸು ಏನಿದೆ ಎಂದು ನಿಮಗನಿಸಬಹುದು. ಹೌದು, ಭಾರತದಲ್ಲಿ ಬೆಟ್ಟಿಂಗ್ ಕುರಿತ ನಿರ್ದಿಷ್ಟ ಕಾನೂನು ಇಲ್ಲ ಅದನ್ನು ರೂಪಿಸಿ ಜಾರಿಗಳಿಸುವುದು ಸ್ವಲ್ಪ ಸವಾಲಿನ ಸಂಗತಿಯೇ ಆಗಿದೆ. ಬೆಟ್ಟಿಂಗ್ ಜಾರಿಗೆ ತೊಡಕಾಗಬಹುದಾದ ಪ್ರಮುಖ ಅಂಶಗಳು ಹೀಗಿವೆ.

 • ಭಾರತದಲ್ಲಿ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಅಧಿಕಾರ. ಬಹುತೇಕ ರಾಜ್ಯಗಳಲ್ಲಿ ಲಾಟರಿ ಸೇರಿದಂತೆ ಬೆಟ್ಟಿಂಗ್ ಗೆ ನಿಷೇಧ ಹೇರಲಾಗಿದೆ.
 • ಈ ಕುರಿತು ಸದ್ಯ ಇರುವ ಕಾನೂನು ತೀರಾ ಹಳೆಯದು. ಅಂದರೆ, 1867ರ ಸಾರ್ವಜನಿಕ ಜೂಜು ಕಾಯ್ದೆಯಾಗಿದೆ.

ಇನ್ನು ಬಡವರು ತಮ್ಮ ಮನೆ ಮಠ ಮಾರಿಕೊಳ್ಳುವ ಭಯವಿರುತ್ತದೆ. ಕ್ರಿಕೆಟ್ ಕ್ರೇಜ್ ಹೆಚ್ಚಿರುವುದರಿಂದ ಯುವಕರು ಇದರ ಬಲೆಗೆ ಸಿಲುಕಬಹುದು. ಮಧ್ಯಮ ವರ್ಗದ ಜನ ಬೆಟ್ಟಿಂಗ್ ನಲ್ಲಿ ತಮ್ಮ ಉಳಿತಾಯದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಸಹಜವಾಗಿ ವಿರೋಧದ ಪ್ರಮುಖ ಅಂಶಗಳು.

ಇಂತಹ ಸಂದರ್ಭದ್ದಲ್ಲಿ ನಿಜಕ್ಕೂ ಅಂತಿಮವಾಗಿ ಆಗಬೇಕಿರುವುದೇನು? ಎಂದು ನೋಡಬೆಕು.

ಬೆಟ್ಟಿಂಗ್ ಬೇಡ ಅದರಿಂದ ಬಡವರು, ಮಧ್ಯಮ ವರ್ಗದವರು ಬಲಿಯಾಗುತ್ತಾರೆ. ಯುವಕರು ಇದರತ್ತ ಗಮನ ಹರಿಸುತ್ತಾರೆ ಎಂಬ ಅಂಶ ನಿಜವಾಗಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಇವು ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಈ ರೀತಿಯಾದ ಪ್ರಕರಣಗಳು ನಮ್ಮ ಮುಂದೆ ಸಾಕಷ್ಟಿವೆ.

ಇಲ್ಲಿ ಬೆಟ್ಟಿಂಗ್ ಅನ್ನು ಕಾನೂನು ಚೌಕಟ್ಟಿನಲ್ಲಿ ಜಾರಿಗೆ ತರುವುದೇ ಆದಲ್ಲಿ, ಅದರಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಎಚ್ಚರವಹಿಸಬೇಕಾಗುತ್ತದೆ. ಕಾನೂನು ಗಟ್ಟಿಯಾಗಿದ್ದಲ್ಲಿ, ಯಾರು ಬೆಟ್ಟಿಂಗ್ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬರುವುದು. ಅದು ಯುವಕರಾಗಿದ್ದರೆ, ಪೋಷಕರು ಅವರನ್ನು ನಿಯಂತ್ರಿಸುವ ಅವಕಾಶ ಇರುತ್ತದೆ. ಕಾನೂನು ಬಿಗಿಯಾಗಿದ್ದಲ್ಲಿ, ಯಾರು, ಎಷ್ಟು ಬೆಟ್ಟಿಂಗ್  ಮಾಡುತ್ತಿದ್ದಾರೆ ಎಂಬುದು ಪಾರದರ್ಶಕವಾಗಿರುತ್ತದೆ.

Leave a Reply