ಜನಗಣತಿ ವರದಿ ಸೋರಿಕೆ ಪ್ರಭಾವ: ದಲಿತ ಸಿಎಂ ಕಾಲ ಸನ್ನಿಹಿತ ಅಂದ್ರು ಮುನಿಯಪ್ಪ, ಸಿದ್ದರಾಮಯ್ಯ ಬದಲಾವಣೆ ಕಾಲ ಇದಲ್ಲ ಅಂತಂದ್ರು ವಿಶ್ವನಾಥ್

ಡಿಜಿಟಲ್ ಕನ್ನಡ ಟೀಮ್

ಇದನ್ನೇ ಹೇಳೋದು, ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಳ್ಳೋದು ಅಂತಾ. ಪಾಪ, ಸಿದ್ದರಾಮಯ್ಯನವರ ಸರಕಾರಕ್ಕೇ ಬೇಕಿತ್ತೋ, ಬೇಡವಿತ್ತೋ ಅದರ ಕಣ್ಗಾವಲಿನಲ್ಲೇ ಜಾತಿ ಗಣತಿ ವರದಿ ಸೋರಿಕೆ ಆಗೋಯ್ತು. ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬರಬಹುದಾದ ಪ್ರತಿಕ್ರಿಯೆ ಅರಿತು ಅದಕ್ಕನುಗುಣವಾಗಿ ತಂತ್ರ ಹೆಣೆಯೋದು ಅದರ ಯೋಜನೆ ಆಗಿತ್ತು ಅಂತ ಕಾಣುತ್ತದೆ.

ಆದರೆ ಈ ಯೋಚನೆಯೇ ಅದಕ್ಕೆ ತಿರುಮಂತ್ರವಾಗಿ ಪರಿಣಮಿಸಿದಂತಿದೆ. ಏಕೆಂದರೆ ಸೋರಿಕೆ ವರದಿ ಪ್ರಕಾರ ದಲಿತರು ಈ ರಾಜ್ಯದ ಬಹುಸಂಖ್ಯಾತರು ಎಂದು ಗೊತ್ತಾಗುತ್ತಿದ್ದಂತೆ ಅದೇ ಸಮುದಾಯದವರೂ ಆದ ಕಾಂಗ್ರೆಸ್ ಧುರೀಣ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ‘ದಲಿತರೊಬ್ಬರು ಮುಖ್ಯಮಂತ್ರಿ ಅಗೋದು ನಿಶ್ಚಿತ’ ಅಂತ ಬಾಂಬ್ ಸಿಡಿಸಿದ್ದಾರೆ.

ಗ್ರಹಚಾರ ಕೈಕೊಟ್ಟರೆ ಹೂವು ಕೂಡ ಹಾವಾಗಿ ಕಾಡುತ್ತದಂತೆ. ಅದೇ ರೀತಿ ಹಿಂದೆ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪ ಆದಾಗಲೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ಸದಾ ನಿಲ್ಲುತ್ತಿದ್ದ ಮುನಿಯಪ್ಪನವರು ಇದೀಗ ವರಸೆಯನ್ನೇ ಬದಲಾಯಿಸಿದ್ದಾರೆ. ದಲಿತರು ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದು, ನಾಯಕತ್ವ ಬದಲಾವಣೆ ಕುರಿತ ಕೂಗಿಗೆ ಬಣ್ಣದ ರೆಕ್ಕೆಪುಕ್ಕಗಳು ಬಂದಿವೆ.

ಇಲ್ಲಿ ಇನ್ನೊಂದು ವಿಶೇಷವಿದೆ. ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿನ್ನೆ, ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದ ಮಾಜಿ ಸಂಸದ ಎಚ್. ವಿಶ್ವನಾಥ್, ಹಗುರವಾಗಿರುವ ರಾಜ್ಯ ಸಚಿವ ಸಂಪುಟದ ಆಮೂಲಾಗ್ರ ಬದಲಾವಣೆ ಆಗಬೇಕು, ಆದರೆ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಪಕ್ವವಾಗಿಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಆಡಿದ್ದ ಬೆನ್ನಲ್ಲೇ ಮುನಿಯಪ್ಪನವರು ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಕಾಂಗ್ರೆಸ್ ವಿರೋಧಾಭಾಸಗಳಿಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. ಅಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನೂ ಬಿಂಬಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುನಿಯಪ್ಪನವರು, ಈ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗಿಗೆ ಈಗ ಬೆಲೆ ಬಂದಿದೆ. ಕಾಂಗ್ರೆಸ್ ಮೂಲತಃ ಶೋಷಿತರ ಪರ ಪಕ್ಷ. ಅದು ದಲಿತರಿಗೆ ಮುಖ್ಯಮಂತ್ರಿ ಪದವಿ ಕೊಡಲು ಕಾಲ ಕೂಡಿ ಬರಬೇಕಿತ್ತು. ಅದೀಗ ಬಂದಿದೆ ಎಂದು ದಲಿತರ ಜನಸಂಖ್ಯಾಬಲ ಹೆಚ್ಚಳ ವರದಿ ಹಿನ್ನೆಲೆಯಲ್ಲಿ ಮಾರ್ಮಿಕವಾಗಿ ನುಡಿದಾಗ, ಇದಕ್ಕೆ ವೇದಿಕೆಯಲ್ಲಿದ್ದ ಸಿಎಂ ಪದವಿ ಪ್ರಬಲ ಆಕಾಂಕ್ಷಿ, ಗೃಹ ಸಚಿವ ಡಾ. ಜಿ. ಪರಮೇಶ್ವರ ಕೂಡ ಸಹಮತ ವ್ಯಕ್ತಪಡಿಸಿದರು.

ದಲಿತರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಅವಕಾಶಗಳು ಸಿಗಲಿವೆ. ಅದಕ್ಕಾಗಿ ಎಲ್ಲರೂ ಒಗ್ಗೂಡಬೇಕು.

ದಲಿತರಿಗೆ ಇನ್ನೂ ಅಪಮಾನದ ಅನುಭವಗಳು ಮರುಕಳಿಸುತ್ತಿವೆ. ಅದಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ನಾನು ಇಲ್ಲಿಯ ತನಕ (ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ) ಬಂದಿದ್ದರೂ ನನ್ನ ಹೆಸರಿನ ಮುಂದೆ ದಲಿತ ಎಂಬ ಶಬ್ದ ಸೇರಿಸಲಾಗುತ್ತಿದೆ. ದಲಿತ ಎಂಬ ಕಾರಣದಿಂದ ಹೆಸರು ಗುರುತಿಸುವ ಕೆಲಸ ಯಾವಾಗ ನಿಲ್ಲುತ್ತದೆಯೋ ಅಲ್ಲಿಂದಾಚೆಗೆ ದಲಿತರ ಉದ್ದಾರ ಆರಂಭವಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದರಲ್ಲಿ ಮುನಿಯಪ್ಪನವರು ಮಾಡಿದ್ದ ದಲಿತ ಮುಖ್ಯಮಂತ್ರಿ ಪ್ರಸ್ತಾಪ ಪ್ರತಿಫಲಿಸುತ್ತಿತ್ತು.

ಇದಕ್ಕೆ ಮೊದಲು ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದ ಹಿರಿಯ ನಾಯಕ ಎಚ್. ವಿಶ್ವನಾಥ್ ಸಚಿವ ಸುದ್ದಿಗಾರರ ಜತೆ ಮಾತನಾಡುತ್ತಾ, ಸಂಪುಟಕ್ಕೆ ಮೇಜರ್ ಸರ್ಜರಿ ಆಗಬೇಕು ಎಂದರು. ಆದರೆ ಈ ಸರ್ಜರಿಯಿಂದ ಸಿದ್ದರಾಮಯ್ಯ ಅವರಿಗೆ ವಿನಾಯಿತಿ ಕೊಟ್ಟರು. ಸಿದ್ದರಾಮಯ್ಯ ಬದಲಾವಣೆಗೆ ಇದು ಸೂಕ್ತ ಕಾಲ ಅಲ್ಲ ಅಂದರು.

ಈ ಹಿಂದೆ ಸಿದ್ದರಾಮಯ್ಯ ಸಂಪುಟ ಸಮತೋಲಿತವಾಗಿಲ್ಲ ಎಂದಿದ್ದನ್ನೇ ಬೇರೆ ರೀತಿಯಲ್ಲಿ ಮುಂದುವರಿಸಿದ ವಿಶ್ವನಾಥ್, ಈಗಿನ ಸಂಪುಟ ಬಹಳ ಹಗುರವಾಗಿದೆ. ಬಹುತೇಕ ಮಂದಿ ಅಸಮರ್ಥರಿದ್ದಾರೆ. ಅವರಿಗೊಂದು ದೃಷ್ಟಿಕೋನವೇ ಇಲ್ಲ. ಇನ್ನು ಕೆಲಸ ಮಾಡುವುದೆಲ್ಲಿಂದ ಬಂತು. ಅವರೇನಾದರೂ ಮುಂದುವರಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದರು. ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಸಂಪುಟದ ಎಂಜಿನ್ (ಸಿದ್ದರಾಮಯ್ಯ) ಕೂಡ ಬದಲಾಗಬೇಕು ಎಂದಿದ್ದಾರಲ್ಲ ಅಂದಾಗ ಈಗ ಅದರ ಅಗತ್ಯವಿಲ್ಲ ಎಂದು ನುಣುಚಿಕೊಂಡರು.

ಸೋರಿಕೆ ಆಗಿಲ್ಲ; ಆಂಜನೇಯ, ಇದೊಂದು ಸೋರಿಕೆ ಸರಕಾರ; ಬಿಜೆಪಿ

ಮತ್ತೊಂದು ಬೆಳವಣಿಗೆಯಲ್ಲಿ, ಜನಗಣತಿ ವರದಿ ಸೋರಿಕೆ ಆಗಿಲ್ಲ. ವರದಿ ಇನ್ನೂ ಅಪೂರ್ಣವಾಗಿದ್ದು, ಸಿದ್ಧಗೊಂಡ ನಂತರ ಸಂಪುಟದ ಒಪ್ಪಿಗೆ ಪಡೆದು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಈ ವರದಿ ಸೋರಿಕೆ ಆಗಿದೆ ಎಂಬುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದರೆ, ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ತಲ್ಲಣ ಶುರುವಾಗಿದೆ. ಪಕ್ಷದ ನಾಯಕರು ಇತ್ತೀಚೆಗೆ ನೀಡುತ್ತಿರುವ ತರೇಹವಾರಿ ಹೇಳಿಕೆಗಳಲ್ಲಿ ಈ ಭೀತಿ ಪ್ರತಿಫಲಿಸುತ್ತಿದೆ ಎಂದು ಬಿಜೆಪಿ ವಕ್ತಾರ, ಶಾಸಕ ಸುರೇಶ್‍ಕುಮಾರ್ ತಿರುಗೇಟು ನೀಡಿದ್ದಾರೆ.

ಇದೊಂದು ಸೋರಿಕೆಯ ಸರಕಾರ. ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆದವು. ಇದೀಗ ಜನಗಣತಿ ವರದಿಯೇ ಸೋರಿಕೆ ಆಗಿದೆ. ಸರಕಾರವೇ ಉದ್ದೇಶಪೂರ್ವಕವಾಗಿ ಜಾತಿ ಗಣತಿ ವರದಿಯನ್ನು ಪರೋಕ್ಷ ಸೋರಿಕೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್ ಟೀಕಿಸಿದರು.

Leave a Reply