‘ನನ್ನ ಚಿತ್ರವನ್ನು ರಾಜಕೀಯಕ್ಕೆ ಬಳಸಿಕೊಂಡು ಬದುಕಿನ ನೆಮ್ಮದಿ ಕಸಿಬೇಡಿ’ ಅಂತ ಅನ್ಸಾರಿ ಹೇಳ್ತಿರೋದನ್ನು ಕಾಂಗ್ರೆಸ್ ಕೇಳಿಸಿಕೊಳ್ಳುತ್ತಾ?

ಡಿಜಿಟಲ್ ಕನ್ನಡ ಟೀಮ್

ವ್ಯಕ್ತಿಯೊಬ್ಬ ಅಳುತ್ತಾ ಕೈಮುಗಿದು ಬೇಡಿಕೊಳ್ಳುತ್ತಿರುವ ಚಿತ್ರ ಗುಜರಾತ್ ಗಲಭೆ ಸಂದರ್ಭದ್ದು. ಖಂಡಿತ ಇದು ಮನುಕುಲವನ್ನು ಕಲಕಬೇಕಾದ್ದು ಎಂಬುದರಲ್ಲಿ ಅನುಮಾನವಿಲ್ಲ.

ಆದರೆ ಗುಜರಾತ್ ಗಲಭೆ ವಿಷಯ ಬಂದಾಗಲೆಲ್ಲ ಈ ಚಿತ್ರವನ್ನು ಬಳಸಿಕೊಳ್ಳುವುದು ರಾಜಕೀಯ ಕಾರಣಕ್ಕೆ, ಸೆಕ್ಯುಲರ್ ರಾಜಕಾರಣಕ್ಕೆ. ಏಕೆಂದರೆ, ಹೀಗೆ ಕೈ ಮುಗಿದಿರುವ ವ್ಯಕ್ತಿ ಮುಸ್ಲಿಂ, ಗುಜರಾತಿನಲ್ಲಿ ದರ್ಜಿಯಾಗಿದ್ದ ಅವರ ಹೆಸರು ಕುತುಬುದ್ದೀನ್ ಅನ್ಸಾರಿ.

ಈಗ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲೂ ಮಾಡಿರೋದು ಅದನ್ನೇ. ಅಸ್ಸಾಮಿಗರು ಬಿಜೆಪಿಗೆ ಮತ ಹಾಕಿದರೆ ಇದೇ ಪರಿಸ್ಥಿತಿ ಬರುತ್ತೆ ನೋಡಿ ಎಂಬರ್ಥದ ಜಾಹೀರಾತುಗಳನ್ನು ಕಾಂಗ್ರೆಸ್ ಶನಿವಾರ ಅಲ್ಲಿನ ಸ್ಥಳೀಯ ಪತ್ರಿಕೆಗಳಿಗೆ ನೀಡಿದೆ. ಬಾಂಗ್ಲಾ ಅಕ್ರಮ ವಲಸಿಗರು, ರಾಜ್ಯದಲ್ಲಿ ಹೆಚ್ಚಿರುವ ಮುಸ್ಲಿಂ ಜನಸಂಖ್ಯೆ ಇವುಗಳಿಂದ ಅಲ್ಲಿ ಭಾರೀ ರಾಜಕೀಯ ಧ್ರುವೀಕರಣವಾಗಿರೋದು ತಿಳಿದ ಸಂಗತಿಯೇ. ಹೀಗಾಗಿ ಕಾಂಗ್ರೆಸ್ ಯಾರನ್ನು ಸಂಪ್ರೀತಿಗೊಳಿಸುವುದಕ್ಕೆ ಇಂಥ ಜಾಹೀರಾತು ನೀಡಿದೆ ಎಂಬುದೂ ಗುಟ್ಟೇನಲ್ಲ.

ಆದರೆ…

ಈ ಬಾರಿ ಕುತುಬುದ್ದೀನ್ ಅನ್ಸಾರಿ ರೋಸಿಹೋಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಚಿತ್ರವನ್ನು ಬಳಸಿಕೊಳ್ಳೋದನ್ನು ಬಿಡಿ. ನನ್ನನ್ನು ರಾಜಕೀಯ ಅಸ್ತ್ರವಾಗಿಸುವ ಇಂಥ ನಡೆಗಳು ಬದುಕಿನ ನೆಮ್ಮದಿಯನ್ನೇ ಕದಡಿವೆ’ ಅಂತ ಮುಂಬೈ ಮಿರರ್ ಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.

ಕೇವಲ ಕಾಂಗ್ರೆಸ್ ಅಂತ ಮಾತ್ರವಲ್ಲ, ಯಾವುದೇ ವ್ಯಕ್ತಿಯ ನೋವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವರೆಲ್ಲ ಕುತುಬುದ್ದೀನ್ ಅನ್ಸಾರಿಯ ಸಂವೇದನೆ ಅರ್ಥ ಮಾಡಿಕೊಳ್ಳಬೇಕು. ಅವರು ಹೇಳಿರುವುದು-  ‘ರಾಜಕೀಯ ಬೆಳೆ ತೆಗೆಯಲು ನನ್ನ ಫೋಟೊ ಬಳಸಿದಾಗಲೆಲ್ಲ ತುಂಬಾ ನೋವಾಗುತ್ತದೆ. ರಾಜಕೀಯ ಪಕ್ಷಗಳು ಇದನ್ನು ಬಳಸಲು ನಾನೇ ಉದ್ದೇಶಪೂರ್ವಕವಾಗಿ ಪ್ರೋತ್ಸಾಹ ನೀಡುತ್ತಿದ್ದೇನೆ, ಇದಕ್ಕಾಗಿ ದುಡ್ಡು ತೆಗೆದುಕೊಳ್ತಿದೇನೆ ಎಂಬ ಮಾತುಗಳೂ ಸಹ ಕೇಳಿ ಬಂದಿವೆ. ಕಳೆದ 14 ವರ್ಷಗಳಿಂದ ರಾಜಕೀಯ ಪಕ್ಷಗಳು, ಬಾಲಿವುಡ್ ನನ್ನ ಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಯಾಕಪ್ಪಾ, ನಿನ್ನ ಎಲ್ಲ ಫೋಟೋಗಳಲ್ಲೂ ನೀನು ಅಳುತ್ತಾ, ಬೇಡುತ್ತಾ ಇದ್ದೀಯಾ ಎಂಬ ನನ್ನ ಮಕ್ಕಳ ಪ್ರಶ್ನೆಗಳಿಗೆ ಏನಂತ ಉತ್ತರಿಸಲಿ? ನನ್ನ ಚಿತ್ರ ಬಳಸಿಕೊಳ್ಳುವುದನ್ನು ಸಾಕುಮಾಡಿ.’

ಗುಜರಾತಿನಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳುತ್ತಿರುವ ತಮ್ಮನ್ನು ಸಾಮಾನ್ಯನಂತೆ ಬದುಕಲು ಬಿಡಿ ಎಂಬ ಅನ್ಸಾರಿ ಮಾತುಗಳು ಸೆಕ್ಯುಲರ್ ರಾಜಕಾರಣದ ಎದೆಗೆ ತಟ್ಟೀತೆ? ಗಲಭೆಯ ಮುಖ್ಯಚಿತ್ರವಾಗಿದ್ದಕ್ಕೆ ಅನ್ಸಾರಿಯವರನ್ನು ಅವರ ಉದ್ಯೋಗದಾತರು ತೆಗೆದುಹಾಕಿದರು. ಆಗಿನ ಪಶ್ಚಿಮ ಬಂಗಾಳ ಸರ್ಕಾರ ಸಹಾಯದ ಭರವಸೆ ನೀಡಿದ್ದರಿಂದ ಕೋಲ್ಕತಾಗೆ ಹೋಗಿದ್ದ ಅವರು ಎರಡು ವರ್ಷದ ಹಿಂದೆಯಷ್ಟೇ ಮತ್ತೆ ಗುಜರಾತ್ ಗೆ ಮರಳಿದ್ದಾರೆ. ಇಂಥ ಸಂದರ್ಭದಲ್ಲಿ ತಮ್ಮ ಚಿತ್ರ ಉಪಯೋಗಿಸಿಕೊಳ್ಳುತ್ತಿರುವುದು ಜೀವನದಲ್ಲಿ ಶಾಂತಿಯನ್ನೇ ಕಸಿದಿದೆ ಎನ್ನುತ್ತಿದ್ದಾರೆ ಅನ್ಸಾರಿ.

ಗತವನ್ನು ಹಿಂದೆ ತಳ್ಳಿ ಬದುಕಿನ ಸಹಜ ಮಗ್ಗುಲಿಗೆ ಹೊಂದಿಕೊಳ್ಳುತ್ತಿರುವ ಅನ್ಸಾರಿ ಹೀಗೆ ಹೇಳಿದ್ದಾರೆ- ‘ಫ್ಯಾಸಿಸ್ಟ್ ಮನಸ್ಥಿತಿಯವರು ಹಿಂದು, ಇಸ್ಲಾಂ ಸೇರಿದಂತೆ ಎಲ್ಲ ಕಡೆಯೂ ಇದ್ದಾರೆ. ಆದರೆ ಬಹಳಷ್ಟು ಹಿಂದುಗಳು ನನ್ನ ಬಳಿ ಬಂದು, ಹಿಂದೆ ಆದ ಘಟನೆಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಎಲ್ಲ ಸಮುದಾಯಗಳಲ್ಲೂ ನನಗೆ ಸ್ನೇಹಿತರಿದ್ದಾರೆ ಎಂಬುದಕ್ಕೆ ಹೆಮ್ಮೆ ಇದೆ. ನನಗೆ ಈಗ ಕೆಲಸ ಕೊಟ್ಟಿರುವವರೂ ಹಿಂದುವೇ, ಒಳ್ಳೆ ವ್ಯಕ್ತಿ.’

ಕುತುಬುದ್ದೀನ್ ಅನ್ಸಾರಿ ಸಂವೇದನೆ ಕಾಂಗ್ರೆಸ್ ಎದೆಗೆ ತಟ್ಟೀತೇ? ಅವತ್ತು ಮತಾಂಧರ ಎದುರು ಆರ್ತವಾಗಿ ಕೈಮುಗಿದಂತೆ, ನನ್ನ ಬದುಕು ಹಾಳುಗೆಡವಬೇಡಿ ಅಂತ ಕಾಂಗ್ರೆಸ್ಸಿಗೂ ಕೈ ಮುಗೀಬೇಕಾ ಇವರು?

Leave a Reply