ರಷ್ಯಾ ಜತೆ ಭಾರತದ ಹೈನೋತ್ಪನ್ನ ಒಪ್ಪಂದ ಕುದುರಿತು, ಹೇಗಿತ್ತು ಗೊತ್ತೇ ಜಾಗತಿಕ ಚೌಕಾಶಿಯ ಸರ್ಕಸ್ಸು?

ಡಿಜಿಟಲ್ ಕನ್ನಡ ಟೀಮ್

ರಷ್ಯಾದಲ್ಲಿ ಭಾರತಕ್ಕೊಂದು ಮಾರುಕಟ್ಟೆ ಕುದುರಿದೆ. ಭಾರತದ ಹಾಲಿನ ಉತ್ಪನ್ನಗಳನ್ನು ರಷ್ಯಾ ಆಮದು ಮಾಡಿಕೊಳ್ಳಲಿದೆ. ಆದರೆ ಷರತ್ತುಗಳು ಅನ್ವಯಿಸುತ್ತವೆ! ಈ ನಿಟ್ಟಿನ ಪ್ರಯತ್ನದ ಹಾದಿಯನ್ನು ಗಮನಿಸಿದಾಗ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಹೇಗೆ ಚೌಕಾಶಿ ಮಾಡಬಹುದಾದ ಸ್ಥಾನದಲ್ಲಿ ನಿಂತಿದೆ ಎಂಬುದು ನಿಚ್ಚಳವಾಗುತ್ತದೆ.

ಈ ಮೊದಲು ಭಾರತದ ಹಾಲು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ರಷ್ಯಾ ಒಪ್ಪಿರಲಿಲ್ಲ. ಏಕೆಂದರೆ ಹಾಲು ಉತ್ಪನ್ನ ಕಂಪನಿಗಳು ತಮ್ಮದೇ ಆದ ಫಾರ್ಮ್ ಗಳಲ್ಲಿ ಸಾಕಿದ ಹಸುಗಳ ಹಾಲಿನಿಂದ ಮಾತ್ರ ಡೈರಿ ಪದಾರ್ಥಗಳನ್ನು ತಯಾರಿಸಿರಬೇಕು ಎಂಬ ಷರತ್ತು ಅದರದ್ದು.

ಆದರೆ ಹೈನುಗಾರಿಕೆಯಲ್ಲಿ ಭಾರತ ಪಾಲಿಸುತ್ತಿರುವ ಸಹಕಾರಿ ಮಾದರಿ ಸಂಪೂರ್ಣ ಭಿನ್ನ ಬಗೆಯದ್ದು. ಇಲ್ಲಿನ ಸಹಕಾರಿ ನೆಲೆಯ ಸಂಸ್ಥೆಗಳು ಸ್ವತಃ ಹಸುಗಳನ್ನು ಸಾಕುವುದಿಲ್ಲ. ಹೈನುಗಾರಿಕೆಯಲ್ಲಿ ತೊಡಗಿರುವವರಿಂದ ಹಾಲು ಸಂಗ್ರಹಿಸಿ ಡೈರಿ ಕಂಪನಿಗಳನ್ನು ನಡೆಸುವುದು ಇಲ್ಲಿನ ಪದ್ಧತಿ. ರಷ್ಯಾದ ನಿಯಮಕ್ಕೆ ಭಾರತದಲ್ಲಿ ಒಂದೆರಡು ಕಂಪನಿಗಳು ಮಾತ್ರವೇ ಸಿಂಧುವಾಗುತ್ತಿದ್ದವು.

ಹೀಗಾಗಿ ಸುಮಾರು ವರ್ಷಗಳವರೆಗೆ ರಷ್ಯಾದೊಂದಿಗೆ ಸಂಧಾನ ನಡೆಯಿತು. ಈಗ ರಷ್ಯಾ ತನ್ನ ನಿಲುವನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದ್ದು, ಹಾಲು ಉತ್ಪನ್ನ ಕಂಪನಿಗಳು ಸ್ವಂತವಾಗಿ ಹಸುಗಳನ್ನು ಸಾಕದಿದ್ದರೂ, ಹಾಲನ್ನುತಮ್ಮದೇ ಟ್ರಕ್ ಗಳಲ್ಲಿ ನೇರವಾಗಿ ಫಾರ್ಮ್ ಗಳಿಂದ ಖರೀದಿಸಿದ್ದರೆ ಸಾಕು ಎಂದು ಹೇಳಿದೆ. ಆ ಮೂಲಕ ಭಾರತೀಯ ಹಾಲು ಉತ್ಪನ್ನ ಕಂಪನಿಗಳಿಗೆ ರಷ್ಯಾ ಮಾರುಕಟ್ಟೆ ಪ್ರವೇಶಿಸಲು ಇದ್ದ ದೊಡ್ಡ ತೊಡಕು ನಿವಾರಣೆಯಾಗಿದೆ. ರಷ್ಯಾ ಮಾರುಕಟ್ಟೆಯಲ್ಲಿ ಡೈರಿ ಉತ್ಪನ್ನವಾದ ಚೀಸ್ ಗೆ ಭಾರೀ ಬೇಡಿಕೆ ಇದೆ.

ಆದರೆ ಈಗಲೂ ರಷ್ಯಾ ಮತ್ತೊಂದು ಅಂಶಕ್ಕೆ ಒತ್ತು ನೀಡಿದೆ. ಅದೆಂದರೆ, ಯಾವೆಲ್ಲ ಹಸುಗಳಿಂದ ಹಾಲು ಸಂಗ್ರಹಿಸಲಾಗುತ್ತದೆಯೋ ಅವಕ್ಕೆ ತಕ್ಕ ಸಮಯದಲ್ಲಿ ಲಸಿಕೆಗಳನ್ನು ನೀಡಲಾಗಿದೆ ಹಾಗೂ ಅವು ಎಲ್ಲ ಬಗೆಯಲ್ಲಿ ಆರೋಗ್ಯಪೂರ್ಣವಾಗಿವೆ ಎಂಬ ಪ್ರಮಾಣಪತ್ರವನ್ನು ರಷ್ಯಾ ಬಯಸುತ್ತಿದೆ. ಪಶುಸಂಗೋಪನೆ ಇಲಾಖೆಯ ಮೂಲಕ ಇಂಥದೊಂದು ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿ, ರಷ್ಯಾದೊಂದಿಗಿನ ಒಪ್ಪಂದವನ್ನು ಸಾಕಾರಗೊಳಿಸಿಕೊಳ್ಳುವ ಪ್ರಯತ್ನದಲ್ಲಿದೆ ಭಾರತ.

ಯಾವಾಗ ಉಕ್ರೇನ್ ವಿಷಯದಲ್ಲಿ ಪಶ್ಚಿಮದ ರಾಷ್ಟ್ರಗಳೊಂದಿಗೆ ರಷ್ಯಾ ಮುಖ ಕೆಡೆಸಿಕೊಂಡಿತೋ, ಆಗಿನಿಂದ ಅಲ್ಲಿಂದ ಆಗುತ್ತಿದ್ದ ಆಹಾರೋತ್ಪನ್ನಗಳ ಆಮದು ನಾನಾ ಆರ್ಥಿಕ ದಿಗ್ಭಂದನಗಳ ಸುಳಿಗೆ ಸಿಲುಕಿಕೊಂಡಿದೆ. ಇದರ ಲಾಭ ಪಡೆಯುವಲ್ಲಿ ಕಾರ್ಯಾಸಕ್ತವಾದ ಭಾರತದ ಪ್ರಯತ್ನ ಒಂದುಹಂತದಲ್ಲಿ ಯಶಸ್ಸನ್ನೂ ಕಾಣುತ್ತಿದೆ.

Leave a Reply