ಸುದ್ದಿ ಸಂತೆ: 30ಕ್ಕೆ ಪಿಯು ರಿಸಲ್ಟ್, ಸುಪ್ರೀಂ- ಆರ್ಬಿಐ ಭಿನ್ನಾಭಿಪ್ರಾಯ, ಐಪಿಎಲ್, ಅಗ್ನಿ ಆಕಸ್ಮಿಕ…

ಬೆಂಗಳೂರಿನಲ್ಲಿ ಧರ್ಮಜಾಗರಣ ಸಮನ್ವಯ ವಿಭಾಗ ಏರ್ಪಡಿಸಿದ್ದ ಸಾಧು-ಸಂತರ ಧರ್ಮ ಸಂಸತ್

 

ಏಪ್ರಿಲ್ 30ಕ್ಕೆ ಪಿಯು ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಏಪ್ರಿಲ್ 30 ರಂದು ಪ್ರಕಟವಾಗಲಿದೆ. ಹಂತ-ಹಂತವಾಗಿ ಬೇಡಿಕೆ ಈಡೇರಿಸುವುದಾಗಿ ಸರಕಾರ ಕೊಟ್ಟಿರುವ ಭರವಸೆ ಹಿನ್ನೆಲೆಯಲ್ಲಿ ಪಿಯು ಉಪನ್ಯಾಸಕರು ಬುಧವಾರದಿಂದ ಮೌಲ್ಯಮಾಪನ ಆರಂಭಿಸಲಿದ್ದಾರೆ.

ಹತ್ತು ದಿನಗಳಲ್ಲಿ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. ಉನ್ನತ ಶಿಕ್ಷಣ ಪ್ರವೇಶಕ್ಕೆ ಪೂರಕ ಪರೀಕ್ಷೆಗಳು ಸುಗಮವಾಗಿ ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳನ್ನು

ಆನ್‍ಲೈನ್‍ನಲ್ಲಿ ಕಳುಹಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು. ಇದರಿಂದ ಸೋರಿಕೆ ತಡೆಗಟ್ಟಬಹುದು. ಇಂಜಿನಿಯರಿಂಗ್ ಪರೀಕ್ಷೆ ಮಾದರಿಯಲ್ಲೇ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಗಳನ್ನು

ನಡೆಸಲಾಗುವುದು. ತಾಂತ್ರಿಕ ವಿಶ್ವವಿದ್ಯಾಲಯ ಈಗಾಗಲೇ ಆನ್‍ಲೈನ್ ಮೂಲಕ ಪ್ರಶ್ನೆ ಪತ್ರಿಕೆ ರವಾನೆ ಪದ್ಧತಿ ಅನುಷ್ಟಾನಗೊಳಿಸಿದ್ದು, ಅದು ಯಶಸ್ವಿಯಾಗಿದೆ. ಇದೇ ಪದ್ಧತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಳವಡಿಸಿಕೊಳ್ಳಲಿದೆ. ಇದರಿಂದ ಸಮಯ ಹಾಗೂ ಹಣ ಕೂಡ ಉಳಿತಾಯವಾಗಲಿದೆ. ಜತೆಗೆ ವಿದ್ಯಾರ್ಥಿಗಳ ಆತಂಕ ನಿವಾರಣೆ ಆಗಲಿದೆ ಎಂದರು.

ಧಾರ್ಮಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಪಟಾಕಿ ನಿಷೇಧ: ಕೇರಳ ಹೈಕೋರ್ಟ್

ಕೇರಳದ ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿನ ದುರಂತದ ಬೆನ್ನಲ್ಲಿ, ರಾತ್ರಿ ವೇಳೆ ಧಾರ್ಮಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದನ್ನು ಕೇರಳ ಹೈಕೋರ್ಟ್ ಮಂಗಳವಾರ ನಿಷೇಧಿಸಿದೆ. ಸೂರ್ಯಾಸ್ತದಿಂದ ಸೂರ್ಯೋದಯದ ನಡುವೆ ಪಟಾಕಿಯನ್ನು ಸಿಡಿಸಬಾರದು. ಆದರೆ, ಹಗಲಿನಲ್ಲಿ ಪಟಾಕಿ ಸಿಡಿಸಲು ಅವಕಾಶವಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಇನ್ನು ದೇವಾಲಯದ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು, ದೇವಾಲಯದ 13 ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಸುಸ್ತಿದಾರರ ಹೆಸರು ಬಹಿರಂಗಕ್ಕೆ ಆರ್ ಬಿಐ ನಕಾರ

ವಿವಿಧ ಬ್ಯಾಂಕ್ ಗಳಲ್ಲಿ ಲಕ್ಷ ಹಾಗೂ ಕೋಟ್ಯಾಂತರ ಹಣವನ್ನು ಸಾಲವಾಗಿ ಪಡೆದು ಸುಸ್ಥಿದಾರರಾಗಿರುವ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಸುಪ್ರೀಂ ಕೋರ್ಟ್ ಪ್ರಸ್ತಾವಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿರೋಧ ವ್ಯಕ್ತಪಡಿಸಿದೆ. ಇವರ ಹೆಸರನ್ನು ಬಹಿರಂಗಗೊಳಿಸಿದರೆ, ಗೌಪ್ಯತೆಗೆ ಧಕ್ಕೆಯಾಗಲಿದ್ದು, ವಿವಿಧ ರೀತಿಯಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಸುಸ್ಥಿದಾರರ ಮಾಹಿತಿ ಬಹಿರಂಗ ಬೇಡ ಎಂಬುದು ಆರ್ ಬಿಐ ವಾದ.

ಮಹಾರಾಷ್ಟ್ರದ ಪಿಚ್ ಗಳಿಗೆ ಮರುಸಂಸ್ಕರಿತ ನೀರು ಉಪಯೋಗಿಸುತ್ತೇವೆ: ಬಿಸಿಸಿಐ

ಭೀಕರ ಬರದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ಮಾಡಿರುವುದಕ್ಕೆ ಬಾಂಬೆ ಹೈಕೋರ್ಟ್ ಬಿಸಿಸಿಐ ಹಾಗೂ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಬಿಸಿಸಿಐಗೆ ಸೂಚನೆ ನೀಡಿದೆ. ಇನ್ನು ಕೇವಲ ಆದಾಯದತ್ತ ಗಮನ ಹರಿಸದೇ ಜನರ ಕಾಳಜಿ ಬಗ್ಗೆಯೂ ಯೋಚಿಸಿ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಪ್ಲೇ ಆಫ್ ಪಂದ್ಯಗಳನ್ನು ಸ್ಥಳಾಂತರಕ್ಕೆ ಚಿಂತನೆ ನಡೆಸುತ್ತೇವೆ. ಉಳಿದ ಲೀಗ್ ಪಂದ್ಯಗಳ ವೇಳೆ ಪಿಚ್ ನಿರ್ವಹಣೆಗೆ ಬಳಕೆಯಾದ ನೀರನ್ನು ಸಂಸ್ಕರಿಸಿ ಉಪಯೋಗಿಸಲಾಗುವುದು ಎಂದು ತಿಳಿಸಿದೆ. ಈ ಕುರಿತ ಮುಂದಿನ ವಿಚಾರಣೆಯನ್ನು ಹೈ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ಎನ್ಐ ಅಧಿಕಾರಿ ಕೊಲೆಗೆ  ಆಂತರಿಕ ವಿವಾದ ಕಾರಣ

ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದ ಎನ್ಐಎ ಅಧಿಕಾರಿ ತಂಜಿಲ್ ಅಹ್ಮದ್ ಕೊಲೆ ಪ್ರಕರಣದ ಹಿಂದೆ ಆಂತರಿಕ ವಿವಾದವಿರುವುದು ದೃಢಪಟ್ಟಿದ್ದು, ಚಾಲ್ತಿಯಲ್ಲಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಕೊಲೆಗೆ ಸಂಬಂಧಿಸಿ ಬಂಧಿಸಲಾಗಿದ್ದ ಮೃತ ಸೋದರ ಸಂಬಂಧಿ ಮುನೀರ್ ಎಂಬಾತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಐಜಿಪಿ ವಿಜಯ್ ಕುಮಾರ್ ಮೀನಾ ತಿಳಿಸಿದ್ದಾರೆ.

ಮುಂಬೈನ ಬಹುಮಹಡಿಯಲ್ಲಿ ಬೆಂಕಿ ಅವಡ, 150 ಮಂದಿ ರಕ್ಷಣೆ

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡು 150 ಕ್ಕೂ ಹೆಚ್ಚು ಜನರು ಪ್ರಮಾದದಲ್ಲಿ ಸಿಲುಕಿಕೊಂಡಿದ್ದರು. ಇಲ್ಲಿನ ಉಪನಗರದ ಭಿವಾಂದಿ ಪ್ರದೇಶದ ಕಾಶಿಂಪುರದಲ್ಲಿನ ಕಟ್ಟಡದ ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಇಲ್ಲಿ ಮಗ್ಗ (ಹ್ಯಾಂಡ್ ಲೂಮ್ಸ್)ದ ಘಟಕ ಇದ್ದ ಕಾರಣ ಬಟ್ಟೆ ಹೆಚ್ಚಿತ್ತು. ಇವೆಲ್ಲ ಬೆಂಕಿಗೆ ಆಹುತಿಯಾಗಿದ್ದಲ್ಲದೇ ಜ್ವಾಲೆ ಮೂರನೇ ಮಹಡಿಯನ್ನೂ ಆವರಿಸಿಕೊಂಡಿತು. ಈ ವೇಳೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನೆಯಲ್ಲಿ ಸಿಲುಕಿದ್ದ ಎಲ್ಲರನ್ನು ಸ್ಥಳೀಯರ ಸಹಕಾರ ಪಡೆದು ರಕ್ಷಿಸಿದರು. ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಉಳಿದ ಎಲ್ಲರೂ ಸುರಕ್ಷಿತವಾಗಿದ್ದಾರೆ.

Leave a Reply