ಕಾಶ್ಮೀರಿಗಳ ವಿಕೃತ ಮಾನಸಿಕತೆ, ಸೇನೆಯ ವಿರುದ್ಧ ಸಂಚಿನ ಮನಸ್ಥಿತಿ ಬಿಚ್ಚಿಟ್ಟಿದೆ ಹಂದ್ವಾರಾ ಹಿಂಸಾಚಾರ!

ಪ್ರವೀಣ ಕುಮಾರ್

ಕಳೆದೆರಡು ದಿನಗಳಿಂದ ಕಾಶ್ಮೀರದ ಹಂದ್ವಾರಾ ಪಟ್ಟಣದಲ್ಲಿ ಹಿಂಸಾಗ್ರಸ್ಥ ಸ್ಥಿತಿ. ಇದನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಇಬ್ಬರು ಯುವಕರು, ಇನ್ನೊಬ್ಬ ಮಹಿಳೆ ಸೇನೆಯ ಗಂಡಿಗೆ ಬಲಿಯಾಗಿದ್ದಾರೆ.

ನೋಡಿ, ನೋಡಿ ಕಾಶ್ಮೀರಿಗರನ್ನು ಹತ್ತಿಕ್ಕಲಾಗುತ್ತಿದೆ ಅಂತ ಕಣಿವೆಯ ಪ್ರತ್ಯೇಕತಾವಾದಿಗಳು ಹಾಗೂ ಅವರನ್ನು ಭಾರತದ ಇತರೆಡೆ ಕುಳಿತುಕೊಂಡು ಬೆಂಬಲಿಸುವ ಬುದ್ಧಿಜೀವಿಗಳ ಪಾಳೆಯದಲ್ಲಿ ರಣಹದ್ದಿನಂಥ ಉದ್ವೇಗ! ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬುಧವಾರ ದೆಹಲಿಗೆ ಬಂದು, ರಕ್ಷಣಾ ಸಚಿವರನ್ನು ಭೇಟಿಯಾಗಿ, ‘ಸೇನೆಯ ಈ ಶೂಟಿಂಗ್ ಬಗ್ಗೆ ಸಮಯಮಿತಿಯೊಳಗೆ ತನಿಖೆ ಆಗಬೇಕು’ ಎಂದಿದ್ದಾರೆ. ಇಂಥ ಸುದ್ದಿಗಳನ್ನು ನೋಡುತ್ತಿದ್ದರೆ ಸೇನೆಯೇ ತಪ್ಪು ಮಾಡಿದೆ ಎಂದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಆದರೆ ಹಂದ್ವಾರಾ ಹಿಂಸಾಚಾರ ಶುರುವಾಗಿದ್ದಾದರೂ ಹೇಗೆ?

ಕೆಲವು ಸೈನಿಕರು ಸ್ಥಳೀಯ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂಬ ವದಂತಿಯನ್ನೇ ಇಟ್ಟುಕೊಂಡು ಕೆಲ ಕಾಶ್ಮೀರಿ ಯುವಕರು ಕಣಿವೆಯಲ್ಲಿ ಉಪಸ್ಥಿತವಿರುವ ಸಶಸ್ತ್ರ ಪಡೆ ವಿರುದ್ಧ ದೊಂಭಿ ಶುರುಮಾಡಿದರು. ಇದಕ್ಕೆಂದೇ ಕಾದುಕೊಂಡಿದ್ದ ಪ್ರತ್ಯೇಕತಾವಾದಿಗಳು- ‘ನಾವು ಹೇಳ್ತಿರಲಿಲ್ವಾ… ಸೇನೆ ಇಲ್ಲಿರೋದೇ ಕಾಶ್ಮೀರಿ ಮುಸ್ಲಿಮರ ಮೇಲೆ ಅತ್ಯಾಚಾರ ಮಾಡೋಕೆ’ ಎಂಬರ್ಥದ ಭಾವನೆ ಉದ್ದೀಪಿಸಿ, ಬಂದ್ ಗೆ ಕರೆಕೊಟ್ಟು ಪರಿಸ್ಥಿತಿ ವಿಷಮಗೊಳಿಸಿದರು. ಆಗ ಬಿಚ್ಚಿಕೊಂಡ ಹಿಂಸಾಚಾರದಲ್ಲಿ ನಾಲ್ಕು ಸಾವುಗಳಾಗಿವೆ.

ಆದರೆ…

ಯಾವ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿತ್ತೋ ಆಕೆಯೇ ಸ್ಪಷ್ಟನೆ ನೀಡಿದ್ದಾಳೆ- ತನ್ನ ಮೇಲೆ ಕಿರುಕುಳವಾಗಿದ್ದು ಸೈನಿಕರಿಂದಲ್ಲ, ಸ್ಥಳೀಯ ಹುಡುಗರಿಂದಲೇ ಅಂತ!

ಅಲ್ಲಿಗೆ… ಕೆಲವು ಕಾಶ್ಮೀರಿ ಹುಡುಗರು ಸೇರಿಕೊಂಡು, ಸೇನೆಯ ಮೇಲೆ ಅಪಪ್ರಚಾರ ನಡೆಸಿ, ಬೇಕೆಂದೇ ಆರಂಭಿಸಿದ ಹಿಂಸಾಚಾರ ಇದು. ಈ ಲೈಂಗಿಕ ಕಿರುಕುಳದ ಘನಂದಾರಿ ಕೃತ್ಯದಲ್ಲಿ ಪಾಲ್ಗೊಂಡವರೇ ಸೇನೆಯ ಮೇಲೆ ಆರೋಪ ಹೊರೆಸಿದ್ದು! ಸೇನೆ ಈಗ ಯುವತಿಯ ಹೇಳಿಕೆಯ ವಿಡಿಯೋ ಬಹಿರಂಗಗೊಳಿಸಿದೆ. ಅದರಲ್ಲಿ ಆಕೆ ಹೇಳಿರುವುದು- ‘ಗೆಳತಿಯರ ಜತೆ ಹತ್ತಿರದಲ್ಲಿದ್ದ ಶೌಚಾಲಯಕ್ಕೆ ತೆರಳುತ್ತಿದ್ದಾಗ ಇಬ್ಬರು ಸ್ಥಳೀಯ ಯುವಕರು ಮೈಮೇಲೆ ಬಿದ್ದರು. ನನ್ನ ಹ್ಯಾಂಡ್ ಬ್ಯಾಗ್ ಕಸಿದುಕೊಂಡು ಓಡಿಹೋದರು. ನಂತರ ಹತ್ತಿರದ ಪೋಲೀಸ್ ಠಾಣೆಗೆ ಹೋಗಲು ಯತ್ನಿಸಿದಾಗ ಅದಕ್ಕೂ ತಡೆ ಒಡ್ಡಿದರು.’

ಹೀಗೆ ಆಕೆಯನ್ನು ಪ್ರತಿಬಂಧಿಸಿದ್ದ ಯುವಕರೇ ಹೊರಗೆ ಬಂದು ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಹಿಂಸೆ ಹಬ್ಬುವಂತೆಯೂ ಮಾಡಿದ್ದಾರೆ. ಅರ್ಥಾತ್ ಇದೊಂದು ಪೂರ್ವ ನಿಯೋಜಿತ ಕೃತ್ಯ.

ಜಮ್ಮು-ಕಾಶ್ಮೀರದಲ್ಲಿ ಸೇನೆ ಎಂಥ ಸ್ಥಿತಿಯಲ್ಲಿದೆ ನೋಡಿ. ಅಲ್ಲಿ ಯಾರೋ ಉಗ್ರ ಬಂದು ಬಾಂಬಿಡದಂತೆ ತಡೆಯುವ ಕೆಲಸವಷ್ಟೇ ಅದರದ್ದಲ್ಲ. ಬದಲಿಗೆ ಪಿಳ್ಳೆನೆವ ಹುಡುಕಿ ಕಲ್ಲುತೂರಲು ಸಿದ್ಧರಾಗಿರುವ ಕಾಶ್ಮೀರಿ ಮುಸ್ಲಿಂ ಯುವಕರೆಂಬ ಅದೇ ನೆಲದ ವೈರಿಗಳನ್ನು ನಿಭಾಯಿಸಬೇಕಾದ ಒತ್ತಡ ಅದಕ್ಕೆ. ಗಡಿಯಾಚೆಗಿನ ವೈರಿಯನ್ನು ಹೊಡೆದುಹಾಕಿಬಿಡಬಹುದು. ಆದರೆ ಇಲ್ಲಿನ ಕಲ್ಲು ತೂರಾಟಗಾರರ ಮಾನವ ಹಕ್ಕುಗಳಿಗೆ ಎಲ್ಲಿಲ್ಲದ ಬೆಲೆಯಿದೆ! ಜೀಲೇ ಜೀಲೇ ಪಾಕಿಸ್ತಾನ್ ಎಂಬ ಘೋಷಣೆಯೊಂದಿಗೆ ಕಲ್ಲುತೂರಾಟಕ್ಕೆ ಸದಾ ಟೊಂಕ ಕಟ್ಟಿರುವ ಈ ಸಮೂಹವನ್ನು ಸಂತ್ರಸ್ತರಂತೆ ಚಿತ್ರಿಸುವುದಕ್ಕೆ ರಾಜಕೀಯ, ಬುದ್ಧಿಜೀವಿ ಗಣಗಳೆಲ್ಲ ಯಾವತ್ತೂ ಸನ್ನದ್ಧ. ಕಾಶ್ಮೀರ ಕಣಿವೆಯಲ್ಲಿ ಸೇನೆ ಎಂಥ ಸ್ಥಿತಿ ನಿರ್ಮಿಸಿದೆ ಎಂದರೆ, ಕಾಶ್ಮೀರಿಯೊಬ್ಬ ಅವನ ಮನೆಯೊಳಗೆ ಹೋಗಬೇಕಾದರೂ ಸಂಪೂರ್ಣ ತಪಾಸಣೆಗೆ ಒಳಗಾಗಬೇಕಿದೆ ಎಂದೆಲ್ಲ ಭಯಾನಕವಾಗಿ ನಂಬಿಸಿಬಿಡುವುದಕ್ಕೆ ‘ಹೈದರ್’ ಖ್ಯಾತಿಯ ವಿಶಾಲ್ ಭಾರದ್ವಾಜರಂಥ ನಿರ್ದೇಶಕರು ಕಾದುಕೊಂಡಿದ್ದಾರೆ!

ಈ ಎಲ್ಲ ಅಪಪ್ರಚಾರಗಳ ಒತ್ತಡಕ್ಕೆ ಬಾಗಿ ಕೇಂದ್ರ ಸರ್ಕಾರ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡುಬಿಟ್ಟರೆ ನಂತರ ತಮ್ಮದೇ ಆಟ ಎಂಬ ಹವಣಿಕೆ ಅವರೆಲ್ಲರದ್ದು. ಜಮ್ಮು-ಕಾಶ್ಮೀರದ ಪೋಲೀಸರು ಮಾತ್ರವೇ ಅಲ್ಲಿರುವಂತಾದರೆ, ಅವರ ಸಹಕಾರವನ್ನೇ ಪಡೆದು, ಮೊನ್ನೆ ಶ್ರೀನಗರದ ನಿಟ್ ಕಾಲೇಜಿನ ಕಾಶ್ಮೀರೇತರ ವಿದ್ಯಾರ್ಥಿಗಳಿಗೆ ತದುಕಿದಂತೆಯೇ ತಮ್ಮ ಮತಸ್ಥರಲ್ಲದವರನ್ನೆಲ್ಲ ಜಮ್ಮು-ಕಾಶ್ಮೀರದಿಂದ ಹೊರಗಟ್ಟುವ ಸನ್ನಾಹ ಅವರದ್ದು. ಹಾಗೆಂದೇ ಸೇನೆಯ ಚಾರಿತ್ರ್ಯದ ಮೇಲೆ ಆಗಾಗ ಆರೋಪಗಳು, ಪ್ರಶ್ನೆಗಳು…

ಈ ಬಾರಿ ಇದ್ದಿದ್ದರಲ್ಲಿ ಆ ಯುವತಿ ಸತ್ಯ ಹೇಳುವ ಧೈರ್ಯ ತೋರಿದ್ದಾಳೆ. ಹಾಗಂತ ಕಾಶ್ಮೀರಿಗಳ ಈ ಸಂಚಿನ ಕಾರ್ಯ ಇಲ್ಲಿಗೆ ನಿಲ್ಲುವುದಿಲ್ಲ.

ಸ್ಥಳೀಯರ ಸಂಚಿನಿಂದ ಎದ್ದ ಹಿಂಸಾಚಾರ ಹತ್ತಿಕ್ಕುವಲ್ಲಿ ಬಲಪ್ರಯೋಗ ಅನಿವಾರ್ಯವಾಗುತ್ತದೆ. ಆಗಲೂ ಸೇನೆಯೇ ಜನರನ್ನು ಕೊಂದಿತೆಂಬ ಅಪಪ್ರಚಾರ. ಕಲ್ಲುತೂರಾಟಗಾರರ ಪರಾಕ್ರಮವನ್ನು ಚಿತ್ರಗಳಲ್ಲಿನೋಡಿದ ಯಾರೇ ಆದರೂ ಹೇಳಬಲ್ಲರು- ಇಂಥವರನ್ನು ಬಲಪ್ರಯೋಗಿಸದೇ ಹತ್ತಿಕ್ಕುವುದು ಕೇವಲ ಆದರ್ಶದ ಮಾತಾಗುತ್ತದೆ ಅಂತ. ಈ ಬಾರಿಯೂ, ‘ಪ್ರತಿಭಾವಂತ ಕ್ರಿಕೆಟಿಗನಾಗಿದ್ದ ನಯೀಮ್ ಭಟ್ ಸೇನೆಯ ಫೈರಿಂಗ್ ನಲ್ಲಿ ಸತ್ತ…’ ಅಂತ ಭಾರತ ವಿರೋಧಿಭಾವ ಬಿತ್ತಲಾಗುತ್ತಿದೆ. ನಿಜ, ಜೀವನಷ್ಟ ಸಮರ್ಥನೀಯವಲ್ಲ. ಆದರೆ ಮೊದಲ ನಡೆ ಶುರುವಾಗಿದ್ದೆಲ್ಲಿಂದ, ವಾತಾವರಣಕ್ಕೆ ಮೊದಲಿಗೆ ಬೆಂಕಿ ಹಚ್ಚಿದವರ್ಯಾರು ಎಂಬುದು ಚರ್ಚೆಯಾಗಬೇಕಲ್ಲದೇ, ಪರಿಸ್ಥಿತಿ ನಿಭಾಯಿಸುವ ಸಂದರ್ಭದಲ್ಲಿ ಅನಿವಾರ್ಯತೆಗೆ ಸಿಲುಕಿದ ಸೇನೆಯನ್ನು ಪ್ರಶ್ನಿಸಿದರಾಯಿತೇ?

kashmir

ಸೈನಿಕರಿಗೆ ಕಾಶ್ಮೀರಿಗಳನ್ನು ಸಾಯಿಸಿಬಿಡುವುದಕ್ಕೆ ಅಷ್ಟೆಲ್ಲ ಹಪಾಹಪಿ ಇದ್ದರೆ ಹೀಗೆಲ್ಲ ಪ್ರಯಾಸಪಡಬೇಕಿರ್ತಿರಲಿಲ್ಲ. ಅವತ್ತು ಪ್ರವಾಹದಲ್ಲಿ ಬದುಕು ಕೊಚ್ಚುತ್ತಿದ್ದಾಗ ತುಸುವೇ ವಿಳಂಬ ಮಾಡಿದ್ದರೂ, ಇವತ್ತು ಕಲ್ಲುತೂರುತ್ತಿರುವ ಸಾಕಷ್ಟು ಕೃತಘ್ನರು ಪರಲೋಕ ಸೇರಿರುತ್ತಿದ್ದರು!

Leave a Reply