ಜಂಗಲ್ ಬುಕ್ ಕನ್ನಡಕ್ಕೆ ಡಬ್ ಆಗಲಿ ಎಂದಿರುವ ಪವನ್ ಕುಮಾರ್ ಕಾವೇರಿಸಿರೋ ಚರ್ಚೆಯ ಸುತ್ತ

ಡಿಜಿಟಲ್ ಕನ್ನಡ ಟೀಮ್

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿರೋ ವಿಷಯ ಡಬ್ಬಿಂಗ್. ಈ ಬಗ್ಗೆ ಪರ ಹಾಗೂ ವಿರೋಧಿಗಳ ವಾದ ಹಲವು. ಡಬ್ಬಿಂಗ್ ವಿರೋಧಿಸುತ್ತಾ ನಾವು ಇಡುತ್ತಿರುವ ತಪ್ಪು ಹೆಜ್ಜೆ ಬಗ್ಗೆ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಫೇಸ್ ಬುಕ್ ನಲ್ಲಿ ಸಖತ್ ಚರ್ಚೆಯಾಗ್ತಿದೆ.

ಜಂಗಲ್ ಬುಕ್ ಚಿತ್ರವನ್ನು ಕನ್ನಡದ ಧ್ವನಿಯಲ್ಲಿ ನೋಡಲು ಸಾಧ್ಯವಾಗದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ಡಬ್ಬಿಂಗ್ ಬಗ್ಗೆ ಪವನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಡಬ್ಬಿಂಗ್ ಅನ್ನು ನಿಷೇಧಿಸಿ ಸ್ಪರ್ಧೆಯಿಂದ ತಪ್ಪಿಸಿಕೊಳ್ಳೊ ಬದಲಿಗೆ, ಆ ಸ್ಪರ್ಧೆಯಲ್ಲಿ ತಮ್ಮ ಸ್ವಂತಿಕೆಯ ಚಿತ್ರವನ್ನು ಉತ್ತಮವಾಗಿ ನಿರ್ಮಿಸಿ ಜಯ ಸಾಧಿಸಬೇಕು ಎಂದು ಪವನ್ ಕುಮಾರ್ ಹೇಳ್ತಿದ್ದಾರೆ. ಡಬ್ಬಿಂಗ್ ಇಲ್ಲದೆ ಜಂಗಲ್ ಬುಕ್ ನಂತಹ ಸಿನಿಮಾಗಳನ್ನು ಬೇರೆ ಭಾಷೆಯಲ್ಲಿ ನೋಡುವ ನಾವು, ನಮ್ಮ ಕನ್ನಡ ಭಾಷೆಯಲ್ಲಿ ನೋಡಲು ಸಿದ್ಧವಿಲ್ಲವೇಕೆ ಎಂಬ ಪ್ರಶ್ನೆ ಹಾಕಿದ್ದಾರೆ.

ನಿಜ, ಡಬ್ಬಿಂಗ್ ನಿಷೇಧದಿಂದ ನಮ್ಮ ರಾಜ್ಯದಲ್ಲಿ ಬೇರೆ ಭಾಷೆಗಳ ಚಿತ್ರಗಳ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಬೇರೆ ಭಾಷೆಯ ಚಿತ್ರಗಳನ್ನು ನೋಡುವವರ ಸಂಖ್ಯೆ ಇಳಿದಿಲ್ಲ. ಇಲ್ಲಿ ಬೇರೆ ಚಿತ್ರವೊಂದು ಇತರೆ ಭಾಷೆಗಳಲ್ಲಿ ಡಬ್ ಆಗಿ ಮತ್ತೆ ನಮ್ಮ ಮಾರುಕಟ್ಟೆಗೆ ಬರುತ್ತಿವೆ. ಪ್ರೇಕ್ಷಕರು ಅದನ್ನು ನೋಡುತ್ತಿದ್ದಾರೆ. ಅದರ ಬದಲು ಕನ್ನಡದಲ್ಲೇ ಆ ಸಿನಿಮಾ ಬಂದರೆ, ಪ್ರೇಕ್ಷಕರು ಬೇರೆ ಭಾಷೆ ಬದಲಿಗೆ ಕನ್ನಡದಲ್ಲೇ ಆ ಸಿನಿಮಾ ನೋಡುವಂತಾಗುತ್ತದೆ. ಕೇವಲ ಚಿತ್ರರಂಗಕ್ಕೆ ಸ್ಪರ್ಧೆ ತಪ್ಪಿಸುವ ನಿಟ್ಟಿನಲ್ಲಿ ಬೇರೆ ಭಾಷೆಗಳ ಅಬ್ಬರಕ್ಕೆ ನಾವೇ ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ ಅನಿಸುತ್ತಿಲ್ಲವೇ?

ಪವನ್ ಕುಮಾರ್ ಹೇಳೋ ಪ್ರಕಾರ, ಡಬ್ಬಿಂಗ್ ಆದ ಎಲ್ಲ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಎಂಬುದು ಸುಳ್ಳು. ಪ್ರೇಕ್ಷಕರು ಬಹಳ ಜಾಣರು. ಒಂದು ವೇಳೆ ಉತ್ತಮ ಗುಣಮಟ್ಟದ ಚಿತ್ರವನ್ನು ನಿರ್ಮಿಸಿದರೆ, ಅವರು ಖಂಡಿತವಾಗಿಯೂ ಸ್ವೀಕರಿಸುತ್ತಾರೆ.

pawan kumar

‘ನನ್ನ ಮಗಳ ಜತೆ ಜಂಗಲ್ ಬುಕ್ ಚಿತ್ರವನ್ನು ಹಿಂದಿ ಭಾಷೆಯಲ್ಲಿ ನೋಡಿದೆ. ಅದೇ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದರೆ, ಆಕೆ ಈ ಮಾಧ್ಯಮದಿಂದ ಕನ್ನಡ ಭಾಷೆಯನ್ನು ಇನ್ನಷ್ಟು ಆಲಿಸುತ್ತಿದ್ದಳು. ಈ ಪ್ರಕ್ರಿಯೆ ಮೂಲಕವೇ ಮಕ್ಕಳು ಭಾಷೆಯನ್ನು ಉತ್ತಮವಾಗಿ ಹಾಗೂ ವೇಗವಾಗಿ ಕಲಿಯಲು ಸಾಧ್ಯ. ಆಗಲೇ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪದ್ಯ, ಕಥೆ ಹೇಳುವುದನ್ನು ಕಲಿಯುತ್ತಾರೆ. ಇದರಿಂದ ತಮ್ಮ ಮಾತೃಭಾಷೆ ಮತ್ತು ತಾಯ್ನಾಡಿನ ಮೇಲೆ ಆಸಕ್ತಿ ಮೂಡುತ್ತದೆ’ ಎಂಬುದು ಪವನ್ ವಾದ. ಚಿಕ್ಕ ಮಕ್ಕಳು ಡಬ್ಬಿಂಗ್ ಚಿತ್ರ ನೋಡುವುದರಿಂದ ಕನ್ನಡದ ಬೇರು ಅವರಲ್ಲಿ ಬಿಡಲು ಸಾಧ್ಯ. ಇಲ್ಲವಾದರೆ, ನೆರೆ ಭಾಷೆಗಳು ಎಳೆ ಮನಸನ್ನು ಆಕ್ರಮಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಇನ್ನು ಕನ್ನಡದ ಪ್ರೇಕ್ಷಕರು ದುಡ್ಡುಕೊಟ್ಟು ಜಂಗಲ್ ಬುಕ್ ನಂತಹ ಸಿನಿಮಾವನ್ನು ಬೇರೆ ಭಾಷೆಯಲ್ಲಿ ನೋಡುವ ಪರಿಸ್ಥಿತಿಯನ್ನು ನಾವೇ ನಿರ್ಮಿಸಿದ್ದೇವೆ. ಆ ಚಿತ್ರದಲ್ಲಿನ ಪಾತ್ರ ಕನ್ನಡದಲ್ಲಿ ತನ್ನ ಭಾವನೆಯನ್ನು ವ್ಯಕ್ತಪಡಿಸಿದಾಗ ಪ್ರೇಕ್ಷಕರು ಅದನ್ನು ಆಳವಾಗಿ ಅರ್ಥೈಸಿಕೊಳ್ಳಬಹುದು. ಹೆಚ್ಚಾಗಿ ಗೊತ್ತಿಲ್ಲದ ಭಾಷೆಯಲ್ಲಿ ನೋಡಿದಾಗ ಕೇವಲ ದೃಶ್ಯಗಳ ಪ್ರಭಾವವನ್ನಷ್ಟೇ ನೋಡಿ ಆನಂದಿಸಲು ಸಾಧ್ಯ.

ಡಿಸ್ನಿಯಂತಹ ದೊಡ್ಡ ಸಿನಿಮಾ ತಯಾರಕರು ತಮ್ಮ ಚಿತ್ರವನ್ನು ನೆರೆಯ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತವೆ. ಆದರೆ, ಕನ್ನಡದಲ್ಲಿ ಮಾಡುತ್ತಿಲ್ಲ ಏಕೆ? ಹೇಗಿದ್ದರೂ, ಕನ್ನಡಿಗರು ಬೇರೆ ಭಾಷೆ ಸಿನಿಮಾ ನೋಡುತ್ತಾರೆ, ಹಾಗಾಗಿ ಮಾರುಕಟ್ಟೆಗೆ ತೊಂದರೆ ಆಗುವುದಿಲ್ಲ ಎಂಬ ಭಾವನೆಯಿಂದ 6 ಕೋಟಿಗೂ ಹೆಚ್ಚು ಕನ್ನಡಿಗರನ್ನು ‘ಟೇಕ್ ಫಾರ್ ಗ್ರಾಂಟೆಂಡ್’ ಎನ್ನುವಂಥ ಇಂತಹ ಚಿತ್ರ ತಯಾರಕರು ಬಂದಿರುವುದಕ್ಕೆ ಕಾರಣ ನಾವೇ ಅಲ್ಲವೇ? ಎಂಬ ಪ್ರಶ್ನೆ ಹಾಕಿದ್ದಾರೆ ಪವನ್.

ಡಬ್ಬಿಂಗ್ ಚಿತ್ರಗಳಿಗೂ ಪ್ರೇಕ್ಷಕರಿಂದಲೇ ಹಣ ಸಂಗ್ರಹಿಸುವ ಪದ್ಧತಿ ಬರಬೇಕು ಎಂಬುದು ಪವನ್ ಚಿಂತನೆ. ಕಾರಣ, ಇಲ್ಲಿ ಕೇವಲ ವ್ಯಕ್ತಿಯಷ್ಟೇ ಅಲ್ಲ, ಒಂದು ಸಮೂಹ ಈ ಬದಲಾವಣೆಯತ್ತ ಕಾರ್ಯನಿರ್ವಹಿಸುವಂತಾಗುತ್ತದೆ ಎಂಬುದು ಪವನ್ ನಂಬಿಕೆ.

ಪವನ್ ಅವರ ಈ ಎಲ್ಲ ವಾದಗಳನ್ನು ಗಮನಿಸಿದಾಗ, ಸಿನಿಮಾ ಎಂಬ ಮಾಧ್ಯಮದಲ್ಲಿ ಡಬ್ಬಿಂಗ್ ಅನ್ನು ನಿಷೇಧಿಸಿ, ಎಲ್ಲೋ ಒಂದು ಕಡೆ ನಮ್ಮ ಭಾಷೆಯನ್ನು ನಾವೇ ಮೂಲೆಗುಂಪು ಮಾಡಿ, ಬೇರೆ ಭಾಷೆ ಪರಿಣಾಮ ಬೀರಲು ಮುಕ್ತ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಅನಿಸುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ ಪವನ್ ಅವರ ಮಾತುಗಳನ್ನು ಕೇಳಿದಾಗ, ಡಬ್ಬಿಂಗ್ ನಿಂದ ಬರುವ ಸ್ಪರ್ಧೆಗೆ ಹೆದರುತ್ತಾ ನಮ್ಮ ಸ್ವಂತಿಕೆಯನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ಡಬ್ಬಿಂಗ್ ನಿಂದ ಪ್ರೇಕ್ಷಕರನ್ನು ಕಳೆದುಕೊಳ್ಳುವ ಭೀತಿಯಲ್ಲಿ, ಕನ್ನಡಿಗರು ಸಿನಿಮಾವನ್ನು ಬೇರೆ ಭಾಷೆಯಲ್ಲಿ ಹೆಚ್ಚು ನೋಡುವಂತೆ ಮಾಡುತ್ತಿದ್ದೇವೆ ಎಂದನಿಸುತ್ತಿದೆ ಅಲ್ಲವೇ.

ಡಬ್ಬಿಂಗ್ ಪರ ಹೀಗೆಲ್ಲ ವಾದ ಮುಂದಿರಿಸಿರುವ ಪವನ್ ಕುಮಾರ್ ಅವರು, ಜಂಗಲ್ ಬುಕ್ ಕನ್ನಡದಲ್ಲಿ ಡಬ್ ಮಾಡುವುದಕ್ಕೆ ಡಿಸ್ನಿ ಜತೆ ಸಂವಹನ ನಡೆಸಿರುವುದಾಗಿಯೂ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಆದರೆ ತಾವು ತಮ್ಮ ಚಿತ್ರಗಳ ಕಾರ್ಯದಲ್ಲಿ ತೊಡಗಿಸಿಕೊಂಡಿರೋದ್ರಿಂದ, ಅನುಮತಿ ದೊರೆತ ಸಂದರ್ಭದಲ್ಲಿ ಬೇರೆ ಉತ್ಸಾಹಿಗಳು ಜಂಗಲ್ ಬುಕ್ ಕನ್ನಡಕ್ಕೆ ಡಬ್ ಮಾಡಬಹುದು. ತಾಂತ್ರಿಕ ಸಹಕಾರಗಳನ್ನು ಕೊಡಲು ತಾವು ಸಿದ್ಧ ಎಂದಿದ್ದಾರೆ ಪವನ್.

Leave a Reply