ಟೂರ್ನಾಮೆಂಟು ಎಲ್ಲೂ ನಡೆಯಬಹುದು, ಆದರೆ ಹಾಕಿ ಹಬ್ಬವಾಗುವುದು ಕೊಡವರಲ್ಲಿ ಮಾತ್ರ

santosh tammaiahಸಂತೋಷ್ ತಮ್ಮಯ್ಯ

ಕೋಟಿಗಟ್ಟಲೆ ಖರ್ಚು ಮಾಡಿ ಆಯೋಜನೆಗೊಂಡ ಕ್ರೀಡಾಕೂಟಗಳಲ್ಲಿ ಏನು ವಿಶೇಷತೆಗಳಿರಬಹುದು? ಅಲ್ಲಿ ಒಂದಿಷ್ಟು ರಾಜಕೀಯ ವಕ್ಕರಿಸಿಕೊಂಡಿರಬಹುದು, ಥಳಕು ಬಳಕುಗಳು ಕಾಣಬಹುದು, ಕ್ರೀಡೆಗಿಂತಲೂ ಹರಿದ ಹಣದ ಬಗ್ಗೆ ಚರ್ಚೆಯಾಗಬಹುದು, ಪತ್ರಿಕಾವರದಿಗಳಲ್ಲಿ ಕ್ರೀಡಾಕೂಟಕ್ಕೆ ಕಡ್ಡಾಯ ಜಾಗ ಸಿಗಬಹುದು, ಇನ್ನು ಹೆಚ್ಚೆಂದರೆ ಕುಣಿಯುವ ತುಂಡುಲಂಗದ ಹುಡುಗಿಯರಿರಬಹುದು, ಕಾಲಕ್ರಮೇಣ ವಿವಾದಗಳು, ಭ್ರಷ್ಟಾಚಾರಗಳ ವಾಸನೆ ಹೊಡೆಯಬಹುದು. ಹಾಗಾಗಿಯೋ ಏನೋ ಭಾರತದಲ್ಲಿ ಅತಿ ದುಬಾರಿಯಾದ ಯಾವ ಕ್ರೀಡಾಕೂಟಗಳೂ ಕ್ರೀಡೆಯನ್ನು ಪ್ರೋತ್ಸಾಹಿಸಿದ ಸಾಕ್ಷಿಗಳು ಸಿಗುವುದಿಲ್ಲ. ಇಲ್ಲಿ ಒಂದು ಕಾಮನ್ ವೆಲ್ತ್ ದೊಡ್ಡವರನ್ನು ಜೈಲಿಗೆ ಕಳುಹಿಸುತ್ತದೆ. ಹಳೆಯ ಬಿಸಿಸಿಐ ಕೂಡಾ ರಾಜಕಾರಣದ ಒಂದು ಮೆಟ್ಟಿಲಾಗುತ್ತದೆ. ಹಣ ಹರಿದ ಯಾವ ಕ್ರೀಡಾ ಸಂಸ್ಥೆಗಳೂ ಇಲ್ಲಿ ಒಡೆದು ಚೂರಾಗದ ಉದಾಹರಣೆಗಳೇ ಇಲ್ಲ. ಭಾರತದಲ್ಲಿ ಹಾಕಿ ಹಾಳಾಗಿಹೋಗಿದ್ದು, ಕ್ರೀಡಾ ಮೌಲ್ಯಗಳು ಕುಸಿದಿದ್ದು, ಅಸೋಷಿಯೇಶನ್ನುಗಳಲ್ಲಿ ಮನಸ್ಸುಗಳು ಮುರಿದುಕೊಂಡಿದ್ದೆಲ್ಲದರ ಹಿಂದೆ ಕಾಣುವುದೆಲ್ಲವೂ ಕುರುಡು ಕಾಂಚಾಣ.

ಆದರೆ ಈ ಕ್ರೀಡಾಕೂಟ ಅದಕ್ಕೊಂದು ಅಪವಾದ. ಇದೂ ಕೂಡ ಅತಿ ದುಬಾರಿ ವೆಚ್ಚದ ಕ್ರೀಡಾಕೂಟ. ಅದಕ್ಕೆ ೨೦ ವರ್ಷಗಳ ಇತಿಹಾಸವಿದೆ. ಅದು ಲಿಮ್ಕಾ ಬುಕ್ ಆಫ್ ರೆಕಾರ್ಡಿನವರೆಗೂ ಮುಟ್ಟಿದೆ. ಪ್ರತೀ ವರ್ಷ ಕೋಟಿಗಟ್ಟಲೆ ಹಣ ಅಲ್ಲಿ ಹರಿಯುತ್ತವೆ. ಆದರೆ ಕಳೆದ ಇಪ್ಪತ್ತು ವರ್ಷದಿಂದ ಅಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಅಚ್ಚುಕಟ್ಟುತನ, ಪ್ರಯೋಗಗಳು, ತಂಡಗಳ ಸಂಖ್ಯೆ, ಪ್ರತಿಷ್ಠೆ ಹೆಚ್ಚಾಗುತ್ತಲೇ ಇದೆ. ಇದುವರೆಗೂ ಅಲ್ಲಿ ರಾಜಕೀಯ ತೂರಿಲ್ಲ. ಹಣದ ಅವ್ಯವಹಾರ ಕಂಡಿಲ್ಲ. ಇದೇಕೆ ಹೀಗೆ ಎಂದು ಆಲೋಚಿಸಿದರೆ ಕಾಣುವುದು ಒಂದೇ ಒಂದು ಸಂಗತಿ- ಆ ಕ್ರೀಡಾಕೂಟ ಕ್ರೀಡೆಯನ್ನೂ ಒಂದು ಸಂಸ್ಕೃತಿ ಎಂದು ಭಾವಿಸುತ್ತದೆ. ಹಾಗಾಗಿ ಅದು 2016ರ ಹೊತ್ತಿಗೆ ಗಿನ್ನಿಸ್ ದಾಖಲೆಗೆ ಸೇರುವ ಹಂತಕ್ಕೆ ಮುಟ್ಟಿದೆ.

ಅದು ಕೊಡವ ಹಾಕಿ ಹಬ್ಬ. ಅದು ಕೇವಲ ಒಂದು ಹಾಕಿ ಕ್ರೀಡಾಕೂಟವಷ್ಟೇ ಆಗಿದ್ದರೆ ಎಲ್ಲಾ ಅಧ್ವಾನಗಳು ಕಂಡುಬರುತ್ತಿತ್ತೇನೋ. ಆದರೆ 1997ರ “ಪಾಂಡಂಡ ಕಪ್” ನಿಂದ ಮೊದಲುಗೊಂಡು 2016ರ ರ “ಶಾಂತೇಯಂಡ ಕಪ್” ವರೆಗೂ ಅದು ಉತ್ಸವವಾಗಿಯೇ ಮುಂದುವರಿದಿದೆ. ಕ್ರೀಡೆಯೂ ಒಂದು ಸಂಸ್ಕೃತಿಯಾಗಬಲ್ಲದು, ಕ್ರೀಡಾಕೂಟವೂ ಒಂದು ಉತ್ಸವವಾಗಬಲ್ಲದು ಎಂಬುದಕ್ಕೆ ಕೊಡವ ಕೌಟುಂಬಿಕ ಹಾಕಿ ಹಬ್ಬ ಒಂದು ಉದಾಹರಣೆ.

10MDK1

ಇಲ್ಲಿ ಹಾಕಿ ಹಬ್ಬವಾಗಿದ್ದು ಹೇಗೆ?

ದೇಶಾದ್ಯಂತ ಐಪಿಎಲ್ ಅಬ್ಬರದ ನಡುವೆಯೂ ಕೊಡಗಲ್ಲಿ ಈಗ ಹಾಕಿಯ ಗುಂಗು. ಕೊಡಗಿನ ಎಲ್ಲಾ ಊರುಗಳ ಮೈದಾನಗಳಲ್ಲಿ ಇಂದು ಕಾಣುವುದು ಹಾಕಿ. ಪೇಟೆಯಲ್ಲಿ ನಾಲ್ಕು ಜನ ಸೇರಿದಲ್ಲಿ ಬರುವ ಮಾತು ಹಾಕಿಯದ್ದೇ. ಮಿಲಿಟರಿಯಿಂದ ಹಾಕಿ ಆಡಲೆಂದೇ ಬಂದ ಸರ್ವೀಸಸ್, ಎಂ ಇ ಜಿ, ಎಂ ಆರ್ ಸಿ ತಂಡದ ಆಟಗಾರರು. ಅಟ್ಟದಲ್ಲಿ ಕಟ್ಟಿಟ್ಟ ಹಾಕಿ ಕಿಟ್ ನ ಧೂಳು ಕೊಡವಿ ಇಡುವ ಮನೆಯ ಅಜ್ಜ, ಅಣ್ಣನೊಟ್ಟಿಗೆ ಪ್ರಾಕ್ಟಿಸಿಗೆ ಹೋಗುವ ತಂಗಿ, ಗಂಡನೊಡನೆ ತಂಡದಲ್ಲಿ ಆಡುವ ಹೆಂಡತಿ. ಕುಟುಂಬದ ಜರ್ಸಿ ಧರಿಸುವುದೇ ಪುಣ್ಯವೆಂದು ಭಾವಿಸುವ ಯುವಕ. ಒಟ್ಟಾರೆ ಪ್ರತೀ ಏಪ್ರಿಲ್-ಮೇನಲ್ಲಿ ಎಲ್ಲಾ ಕೊಡವರ ಮನೆಯೂ ಹಾಕಿಮಯವಾಗುತ್ತವೆ. ಹುತ್ತರಿಗೆ ಕಾಯುವಂತೆ ಅವರು ಹಾಕಿ ಹಬ್ಬಕ್ಕೆ ಸಿದ್ಧರಾಗುತ್ತಾರೆ. ಅವರ ಹಾಕಿ ಹಬ್ಬದ ಹುಚ್ಚು ಎಷ್ಟೆಂದರೆ ಅಜ್ಲಾನ್ ಷಾ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆದ್ದ ಸುದ್ದಿಗಿಂತ ಹಾಕಿ ಹಬ್ಬಕ್ಕೆ ತಾವು ತಯಾರಾಗುವುದೇ ಮುಖ್ಯವಾಗುತ್ತದೆ. ಒಟ್ಟಾರೆ ಉಲ್ಲಾಸ, ಉತ್ಸಾಹ, ಹುರುಪು- ಎಲ್ಲವೂ ಒಂದು ಹಾಕಿ ಸ್ಟಿಕ್ಕಿನಿಂದ.

ಈ ಎಲ್ಲಾ ಉತ್ಸಾಹಗಳಿಗೆ ಕಾರಣರಾದವರು ಕೇವಲ ಒಬ್ಬ ವ್ಯಕ್ತಿ ಎಂಬುದು ವಿಶೇಷ. ಪಾಂಡಂಡ ಕುಟ್ಟಪ್ಪ ಎಂಬ ಹಳೆಯ ಹಾಕಿಪಟುವೊಬ್ಬರು ಅದಾಗಲೇ  ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.

pandanda

ಕೊಡಗಿನ ಹಳೆಯ ಹಾಕಿ ವೈಭವವನ್ನು ಅವರು ಕಣ್ಣಾರೆ ಕಂಡಿದ್ದರು. ಒಂದು ಕಾಲದಲ್ಲಿ ಭಾರತೀಯ ಹಾಕಿಯ ನರ್ಸರಿ ಶಾಲೆಯಂತಿದ್ದ ಕೊಡಗಿನಲ್ಲಿ ಹಾಕಿ ನಶಿಸಿಹೋಗುತ್ತಿರುವುದನ್ನು ಅವರು ಗಮನಿಸಿದರು. ಹೋದಲ್ಲಿ ಬಂದಲ್ಲಿ ಅವರಿಗೆ ಅದೇ ಚಿಂತೆಯಾಯಿತು. ಹಲವು ಅಂತಾರಾಷ್ಟ್ರೀಯ ಆಟಗಾರರ ಜೊತೆ ಈ ಬಗ್ಗೆ ಚರ್ಚಿಸಿದರು. ಸಂಸ್ಕೃತಿ ಪಂಡಿತರ ಜೊತೆ ಸಮಾಲೋಚನೆ ನಡೆಸಿದರು. ಚಿಂತನೆಯಲ್ಲೇ ವರ್ಷಗಳು ಕಳೆಯಿತು. ಕೈಯಲ್ಲಿ ನಿವೃತ್ತಿಯ ಹೊತ್ತಲ್ಲಿ ಸಿಕ್ಕ ಹಣವಿತ್ತು. ಅಲ್ಲದೆ ಕೊಡಗಿನಲ್ಲೂ ಅವರಿಗೆ  ಕಾಫಿ ತೋಟವಿತ್ತು. ಹಾಕಿಗಾಗಿ ಮಡಿಕೇರಿಯಲ್ಲಿ ಮ್ಯಾನ್ ಎಂಬ ಬ್ರಿಟಿಷ್ ಅಧಿಕಾರಿ ತನ್ನ ಕಾಫಿ ತೋಟವನ್ನೇ ಮೈದಾನ ಮಾಡಿರುವಾಗ ತನ್ನ ಬಳಿಯಿರುವ ಹಣ ಸಾಕಷ್ಟಾಯಿತು ಎಂದುಕೊಂಡರು ಕುಟ್ಟಪ್ಪನವರು. ಹಾಕಿಗೆ ಸಂಸ್ಕೃತಿಯ ಸ್ಪರ್ಶ ನೀಡಲು ತನ್ನ ತಮ್ಮ ಕಾಶಿಯವರನ್ನು ಜೊತೆಮಾಡಿಕೊಂಡು ಕುಟ್ಟಪ್ಪನವರು ಹೊರಟರು. ಕೊಡವ ಕುಟುಂಬಗಳೇ ಕೊಡವ ಸಂಸ್ಕೃತಿಯ ಬೇರುಗಳು, ಇದರಿಂದ ಹಾಕಿಯ ಜೊತೆ ಜನಾಂಗದ ಒಗ್ಗಟ್ಟೂ ಬೆಳೆಯುತ್ತವೆ ಎಂಬುದನ್ನು ಆರಂಭದಲ್ಲೇ ಕುಟ್ಟಪ್ಪ ಸಹೋದರರು ಕಂಡುಕೊಂಡರು. ಕೊಡವರಲ್ಲಿ ಇಂಥ ಎಂಟುನೂರಕ್ಕೂ ಹೆಚ್ಚು ಸೋದರ ಸಂಬಂಧದ ಕುಟುಂಬಗಳಿವೆ ಎಂದು ಅಧ್ಯಯನ ಮಾಡಿದರು. ಅವರ ಮನೆಮನೆಗಳಿಗೆ ಭೇಟಿ ನೀಡಿ ಹಾಕಿಯ ವೈಭವವನ್ನು, ಕೊಡವರು ಹಾಕಿಗೆ ಕೊಟ್ಟ ಕೊಡುಗೆಗಳನ್ನು ಮನವರಿಕೆ ಮಾಡಿಕೊಟ್ಟರು. ಆ ಹೊತ್ತಿಗೆ ಅವರಿಗೆ ಹಲವು ಅದ್ಭುತಗಳು ಗೋಚರಿಸಿದವು. ಆ ಹೊತ್ತಿಗೂ ಕೂಡಾ ಕೊಡವರ ಮನೆಮನೆಯಲ್ಲಿ ಅತ್ಯುತ್ತಮ ಹಾಕಿಪಟುಗಳಿದ್ದರು. ಆದರೆ ವೇದಿಕೆ ಇರಲಿಲ್ಲ. ಕೆಲವರು ಶಾಲಾ ತಂಡಗಳಿಗೆ ಸೀಮಿತರಾಗಿದ್ದರು. ಹಲವು ಹುಡುಗರು ಯೂನಿವರ್ಸಿಟಿ ತಂಡಗಳಲ್ಲಿ ಮತ್ತು ಸಾಯಿ (sports authority of India)ಯಲ್ಲಿ ಆಡುತ್ತಿದ್ದರು. ನೂರಾರು ಜನ ರಾಜ್ಯ ತಂಡದಲ್ಲಿ ಆಡಿದ ಅನುಭವ ಇದ್ದವರಿದ್ದರು. ಇನ್ನು ಕೆಲವರು ಮಿಲಿಟರಿಯಲ್ಲಿ ಆಡುತ್ತಿದ್ದರು. ಕೆಲವರು ದೇಶದ ಪ್ರತಿಷ್ಠಿತ ಖಾಸಗೀ ಸಂಸ್ಥೆಗಳಲ್ಲಿ ಆಡುತ್ತಿದ್ದರು. ಸ್ವತಂತ್ರ ಭಾರತದಲ್ಲೇ ಐವತ್ತಕ್ಕೂ ಹೆಚ್ಚು ಜನ ಅಂತಾರಾಷ್ಟ್ರೀಯ ಹಾಕಿ ಆಡಿದ ಜನಗಳಿದ್ದದ್ದೂ ಅವರಿಗೆ ತಿಳಿಯಿತು. ಅವರಲ್ಲಿ ಕೆಲವರು ಇನ್ನೂ ಜೀವಂತವಿದ್ದರು. ಎಲ್ಲರೂ ಹಾಕಿಯ ತುಡಿತ ಹೊಂದಿದ್ದರು. ಇಷ್ಟಿದ್ದ ಮೇಲೆ ಅತ್ಯುತ್ತಮ ಪಂದ್ಯಾಟವನ್ನು ನಡೆಸಬಹುದು ಎಂಬುದು ಕುಟ್ಟಪ್ಪ ಸಹೋದರರಿಗೆ ತಿಳಿಯಿತು. ತಮ್ಮದೇ ಹಣದಿಂದ ತಮ್ಮ ಕುಟುಂಬದ ಪ್ರಾಯೋಜಕತ್ವದಲ್ಲಿ ವೀರಾಜಪೇಟೆ ತಾಲೂಕಿನ ಕರಡ ಎಂಬಲ್ಲಿ “ಪಾಂಡಂಡ ಕಪ್-1997” ಅನ್ನು ನಡೆಸಿದರು. ಮೊದಲ ವರ್ಷ 60 ತಂಡಗಳು ಭಾಗವಹಿಸಿ ಭರವಸೆ ಮೂಡಿಸಿತು. ಮೊದಲ ವರ್ಷ ಕುಟ್ಟಪ್ಪ ಮತ್ತು ಕಾಶಿ ಸಹೋದರರು ತಮ್ಮ ಅಣ್ಣತಮ್ಮಂದಿರು, ಅವರ ಹೆಂಡತಿ ಮಕ್ಕಳನ್ನು ಸೇರಿಸಿ ಮೈದಾನ ಗುಡಿಸಿ ಸುಣ್ಣ ಹಾಕಿದರು. ತಾವೇ ತೀರ್ಪುಗಾರರಾದರು. ತಾವೇ ವೀಕ್ಷಕ ವಿವರಣೆ ನೀಡಿದರು.

ಕೊನೆಗೆ ಪಾಂಡಂಡ ಕಪ್ ಮುಗಿಸಿದ ಕುಟ್ಟಪ್ಪ ಸಹೋದರರು ಇದಿನ್ನು ನಮ್ಮ ಕೈಲಾಗುವ ಕೆಲಸವಲ್ಲ ಎಂದುಕೊಂಡು” ಕೊಡವ ಹಾಕಿ ಅಕಾಡೆಮಿ” ಯನ್ನು ಸ್ಥಾಪಿಸಿ ಏನೋ ಒಂದು ನಡೆಯುತ್ತಿರಲಿ ಎಂದುಕೊಂಡರು. ಆದರೆ ಪಾಂಡಂಡ ಕಪ್ ಕೊಡಗಿನಲ್ಲಿ ಜಾದೂ ಮಾಡಿತ್ತು. ಕುಟುಂಬದ ಜರ್ಸಿ ಧರಿಸಬೇಕೆಂಬ ಹುಚ್ಚು ಪ್ರತೀ ಕೊಡವನಿಗೂ ಹತ್ತಿತು. ಮರುವರ್ಷ ಐದಾರು ಕುಟುಂಬಗಳು ಕೌಟುಂಬಿಕ ಟೂರ್ನಾಮೆಂಟು ನಡೆಸಲು ಮುಂದೆ ಬಂದವು! ಮರುವರ್ಷ ಅಂದರೆ 98ರಲ್ಲಿ ತಂಡದ ಸಂಖ್ಯೆ 116ಕ್ಕೇರಿತು. ಮುಂದೆ ಇನ್ನೂರಾಯಿತು, ಇನ್ನೂರೈವತ್ತಾಯಿತು. ಜಗತ್ತಿನಲ್ಲೇ ಅತಿ ಹೆಚ್ಚು ತಂಡಗಳು ಪಾಲ್ಗೊಳ್ಳುವ ಕ್ರೀಡಾಕೂಟ ಎಂದು ಲಿಮ್ಕಾ ದಾಖಲೆ ಬರೆಯಿತು. ಈಗ 2016ಕ್ಕೆ ತಂಡದ ಸಂಖ್ಯೆ 299ಕ್ಕೇರಿದೆ.

ಈ 20 ವರ್ಷದಲ್ಲಿ ಕೊಡವ ಹಾಕಿ ಹಬ್ಬ ಸಾಧಿಸಿದ್ದೇನು ಎಂಬುದನ್ನು ನೋಡಿದರೆ ಒಂದಕ್ಕಿಂತ ಒಂದು ಅದ್ಭುತಗಳೇ ಕಾಣಸಿಗುತ್ತವೆ.

ಹಾಕಿ ಹಬ್ಬ 80ರ ದಶಕದ ನಂತರದ ಪೀಳಿಗೆಯನ್ನು ಕ್ರಿಕೆಟ್ಟಿನ ಹುಚ್ಚಿನಿಂದ ಹಾಕಿಗೆ ವರ್ಗಾಯಿಸಿದೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದ ಕೊಡಗಿನ ಹಾಕಿಯನ್ನು ಮರುಸ್ಥಾಪಿಸಿದೆ. ಹಾಕಿ ಆಡುವುದು ಪ್ರತೀ ಕೊಡವನ ಪ್ರತಿಷ್ಠೆ ಎಂಬ ಭಾವನೆಯನ್ನು ಸಾಮಾನ್ಯನಲ್ಲೂ ಮೂಡಿಸಿದೆ. ಈ ಇಪ್ಪತ್ತು ವರ್ಷಗಳಲ್ಲಿ ದೇಶದ ಹಲವು ಹಾಕಿ ತಂಡಗಳಲ್ಲಿ ಆಡುವ ಕೊಡಗಿನ ಹುಡುಗರ ಸಂಖ್ಯೆ ಹೆಚ್ಚಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಮನೆಗೊಬ್ಬರಂತೆ ಇದ್ದ ಹಾಕಿ ಆಟಗಾರರ ಸಂಖ್ಯೆ ಈಗ ಹಲವು ಪಟ್ಟು ಹೆಚ್ಚಾಗಿದೆ. ಕೊಡಗಿನಲ್ಲಿ ಮಹಿಳಾ ಆಟಗಾರರ ಸಂಖ್ಯೆ ಹೆಚ್ಚಾಗಲು ಹಾಕಿ ಹಬ್ಬವೊಂದು ಕಾರಣವಲ್ಲದೆ ಬೇರೇನೂ ಅಲ್ಲ. ಜೊತೆಗೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ತೀರ್ಪುಗಾರರ ಸಂಖ್ಯೆ ಕೊಡಗಿನಲ್ಲಿ ಈಗ ವಿಪರೀತ ಹೆಚ್ಚಿದೆ. ಅದರಲ್ಲಿ ಮಹಿಳೆಯರೂ ಇದ್ದಾರೆ ಎನ್ನುವುದು ವಿಶೇಷ. ಯಾವ ನ್ಯಾಯಾಲಯ, ಕೋರ್ಟುಗಳೂ ರಾಜಿ ಮಾಡಲು ಸಾಧ್ಯವಾಗದ ವ್ಯಾಜ್ಯಗಳು, ಕುಟುಂಬಿಕರ ನಡುವೆ ಇದ್ದ ಮನಸ್ತಾಪಗಳು ಕೇವಲ ಜೊತೆಯಲ್ಲಿ ಹಾಕಿ ಆಡುವ ಮೂಲಕ ನಿವಾರಣೆಯಾಗಿವೆ. ಶತಮಾನಗಳ ಹಿಂದೆ ಯಾವುದೋ ಅಜ್ಜಂದಿರ ವೈಮನಸ್ಸುಗಳಿಗೆ ಬೇರೆ ಬೇರೆಯಾಗಿದ್ದ ಕುಟುಂಬಗಳು ಜೊತೆಯಾಗಿ ತಂಡ ಕಟ್ಟಿ ಹಾಕಿ ಆಡಿವೆ.  ಕೊಡವರ ಅಂದಾಜು ಐವತ್ತಕ್ಕೂ ಹೆಚ್ಚು ಕುಟುಂಬಗಳು ಇತಿಹಾಸದಲ್ಲಿ ಎಂದೋ ನಡೆದಿದ್ದ ವೈಮನಸ್ಸುಗಳನ್ನು ಮರೆತು ಹಾಕಿಯ ಕಾರಣದಿಂದ ಒಗ್ಗೂಡಿವೆ. ಯಾವುದೋ ಕಾರಣಗಳಿಂದ ಕುಟುಂಬಿಕರೊಡನೆ ಸೇರದೇ ಇದ್ದ, ಸೇರಲು ಸಾಧ್ಯವಾಗದಿದ್ದವರು ಹಾಕಿ ಆಡಲೆಂದು ದೇಶ ವಿದೇಶಗಳಿಂದ ಬರುತ್ತಿದ್ದಾರೆ. ಪರಸ್ಪರ ಪರಿಚಿತರಿಲ್ಲದಿದ್ದವರು ಹಾಕಿಯಿಂದ ಪರಿಚಯವಾಗಿದ್ದಾರೆ. ನೆಂಟಸ್ತನ ವೃದ್ಧಿಸಿದೆ, ಗೆಳತನ ಬೇರುಬಿಟ್ಟಿದೆ. ಹಾಕಿಯಿಂದ ಒಗ್ಗೂಡಿದವರು ತಮ್ಮ ಪಾಳುಬಿದ್ದ ಐನ್ ಮನೆಗಳನ್ನು ರಿಪೇರಿ ಮಾಡಿಸಿದ್ದಾರೆ, ಕುಟುಂಬ ಸಂಘಗಳನ್ನು ಸ್ಥಾಪನೆಮಾಡಿಕೊಂಡಿದ್ದಾರೆ. ಎಲ್ಲೋ ಅಮೆರಿಕದಲ್ಲಿ ಡಾಕ್ಟರಾದವರು ಆಡಲಾಗದಿದ್ದರೇನಂತೆ ನನ್ನ ತಂಡಕ್ಕೆ ಪಿಸಿಯೋ ಆಗುವೆ ಎಂದು ಬರುವವರಿದ್ದಾರೆ. ಕುಟುಂಬ, ಕೊಡವ ಸಂಸ್ಕೃತಿಯನ್ನು ಪರಿಚಯಿಸಲು ಎಷ್ಟೋ ವರ್ಷಗಳಿಂದ ವಿದೇಶಗಳಲ್ಲಿ ನೆಲೆಸಿರುವ ಕೊಡವರು ಮಕ್ಕಳನ್ನು ಹಾಕಿ ಹಬ್ಬಕ್ಕೆ ಕರೆತರುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಮೈದಾನದಲ್ಲೇ ಸೈನ್ಯಕ್ಕೆ ನೇಮಕಾತಿ ನಡೆಯುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದ ಮೈದಾನದಲ್ಲಿ ಠಿಕಾಣಿ ಹೂಡುತ್ತವೆ.

10MDK10

ಆದರೆ ಹಾಕಿ ಹಬ್ಬ ಇವಿಷ್ಟರಿಂದಲೇ ರಂಗೇರುವುದಿಲ್ಲ.

ಎಲ್ಲೂ ಕಾಣದ, ಯಾವ ಒಲಂಪಿಕ್ಸ್ ನಲ್ಲೂ, ವಿಶ್ವಕಪ್ಪಿನಲ್ಲೂ ಕಾಣದ ರೋಚಕ ಹಾಕಿಯನ್ನು ಹಾಕಿ ಹಬ್ಬ ಉಣಬಡಿಸುತ್ತವೆ. ಅಂತಾರಾಷ್ಟ್ರೀಯ ಹಾಕಿಯಲ್ಲಿ ಎಂದೋ ಮೂಲೆ ಸೇರಿದ ಚಾಕಚಕ್ಯತೆಯ “ಇಂಡಿಯನ್ ಡ್ರಿಬಲ್”, ಶಾರ್ಟ್ ಪಾಸ್ ಗಳ ಆಟ ನೋಡಲು ಹಾಕಿ ಹಬ್ಬಕ್ಕೇ ಹೋಗಬೇಕು. ಎ.ಬಿ ಸುಬ್ಬಯ್ಯ, ಪೈಕೇರ ಕಾಳಯ್ಯ, ಚೆಪ್ಪುಡೀರ ಪೂಣಚ್ಚ, ಪಿ.ಯು ಬೋಪಣ್ಣ, ಕೂತಂಡ ಪೂಣಚ್ಚ, ಪಳಂಗಂಡ ಅಮರ್ ಅಯ್ಯಮ್ಮ, ಆಲೇಮಾಡ ಚೀಯಣ್ಣ, ಬಲ್ಲಚಂಡ ಲೆನ್ ಅಯ್ಯಪ್ಪ,  ಅಮ್ಮಂಡ ವಾಸು ಮೊದಲಾದ ಮೂವತ್ತಕ್ಕೂ ಹೆಚ್ಚು ದೇಶಕಂಡ ಮಹಾನ್ ಹಾಕಿ ಆಟಗಾರರ ಆಟವನ್ನು ಪ್ರತ್ಯಕ್ಷ ನೋಡುವ ಅವಕಾಶವನ್ನು ಹಾಕಿ ಹಬ್ಬ ಜನರಿಗೆ ಒದಗಿಸಿದೆ. ಒಲಂಪಿಕ್ ನಲ್ಲಿ ಆಡಿದವರೂ ಸಾಮಾನ್ಯ ರೈತನ ಮಗನೂ ಒಂದೇ ಟೀಮಿನಲ್ಲಿ ಆಡುವ ಕೌತುಕ, ಅಜ್ಜ, ಮಗ, ಮೊಮ್ಮಗ, ಮಗಳು, ಸೊಸೆ ಸೇರಿ ಆಡುವ ವಿಚಿತ್ರ, ಗಂಡ ಹೆಂಡತಿಯ ನಡುವೆ ನಡೆಯುವ ಪಾಸ್ ಗಳು, ತವರು ಮನೆಯ ತಂಡಕ್ಕೆ ಮಗಳು ಹಾಕುವ ಗೋಲುಗಳು,  ಗೋಲು ಹಾಕಿ ಮೈದಾನದಲ್ಲೇ ಅಪ್ಪನ ಕಾಲಿಗೆ ಬೀಳುವ ಇನ್ನೊಂದು ತಂಡದ ಮಗಳು, ಆರು ವರ್ಷದ ಪುಟ್ಟ ಬಾಲಕ, 70 ವರ್ಷದ ತಾತನ ಹಳೆಯ ಖದರು, ಒಂದೊಂದು ತಂಡದಲ್ಲಿ ಅರ್ಧಕ್ಕೂ ಹೆಚ್ಚು ಹುಡುಗಿಯರೇ ಇರುವ ಸೋಜಿಗ, ಬಾರ್ಸಿಲೋನಾ ಕ್ಲಬ್ಬಿನಿಂದ ಹಾಕಿ ಹಬ್ಬಕ್ಕೆಂದೇ ಬಂದಿಳಿದು ಆಡುವ ಆಲೇಮಾಡ ಚೀಯಣ್ಣ, ಭಾರತೀಯ ತಂಡದ ನ್ಯೂಟ್ರೀಶನ್ ಆಗಿದ್ದರೂ ಹಾಕಿ ಹಬ್ಬಕ್ಕೆಂದೇ ಬಿಡುವು ಮಾಡಿಕೊಂಡು ಬರುವ ಚೇಂದಂಡ ಅಶ್ವತ್ಥ್, ಯುಎಇ ರಾಷ್ಟ್ರೀಯ ತಂಡದ ತರಬೇತುದಾರರಾಗಿದ್ದರೂ ಹಮ್ಮುಬಿಮ್ಮುಗಳನ್ನು ಬಿಟ್ಟು ಕುಟುಂಬಕ್ಕಾಗಿ ಆಡಲು ಬರುವ ಕೂತಂಡ ಪೂಣಚ್ಚ, ಭಾರತೀಯ ಹಾಕಿಯ ಯಶಸ್ವೀ ಗೋಲ್ ಕೀಪರ್ ಆಗಿದ್ದರೂ ಪ್ರತೀವರ್ಷ ತಮ್ಮ ತಂಡಕ್ಕೆ ಆಡುವ ಅಂಜಪರವಂಡ ಸುಬ್ಬಯ್ಯನವರು ಎದುರಾಳಿ ಗೋಲ್ ಕೀಪರನ ಪ್ರತಿಭೆಗೆ ಮೆಚ್ಚಿ ತನ್ನ ಭಾರತೀಯ ಜರ್ಸಿಯನ್ನು ಮೈದಾನದಲ್ಲೇ ಬಿಚ್ಚಿ ಕೊಡುವ ರೋಮಾಂಚಕತೆ, ರಭಸದ ಆಟಕ್ಕೆ ಮತ್ತೊಂದು ಹೆಸರು ಎಂದು ದೇಶಕ್ಕೆ ದೇಶವೇ ಹೊಗಳಿದರೂ ಮೈದಾನದಲ್ಲಿ ಎದುರಾಳಿ ತಂಡಕ್ಕೆ ಪ್ರೋತ್ಸಾಹ ನೀಡುತ್ತಾ ಗೋಲುಹೊಡೆಯುವ ಅಮರ್ ಅಯ್ಯಮ್ಮ. ಇಂಥ ಅದೆಷ್ಟೋ ಪುಳಕಗಳನ್ನು ಸೃಷ್ಟಿಸಲು ದೇಶದಲ್ಲಿ ಸಾಧ್ಯವಾಗಿದ್ದು ಕೊಡವ ಹಾಕಿ ಹಬ್ಬಕ್ಕೆ ಮಾತ್ರ.

ಕಳೆದ ಮೂರು ದಿನಗಳಿಂದ ಮಡಿಕೇರಿಯಲ್ಲಿ ನಡೆಯುತ್ತಿರುವ “ಶಾಂತೇಯಂಡ ಕಪ್-16” ಇಂಥ ಮತ್ತಷ್ಟು ರೋಚಕತೆಯನ್ನು ಹೊರಹಾಕುತ್ತಾ ನಡೆಯುತ್ತಿದೆ. ಕೊಡಗು ಹಲವು ವಿಷಯಗಳಿಗೆ ವಿಶೇಷವಾಗಿರಬಹುದು. ಅಲ್ಲಿನ ಮಂಜುಮುಸುಕಿದ ಬೆಟ್ಟಗಳು ಸ್ವಿಜರ್ಲ್ಯಾಂಡಿನಲ್ಲೂ ನೋಡಲು ಸಿಗುತ್ತದೆ. ಮಡಿಕೇರಿಯ ಅಬ್ಬಿ ಜಲಪಾತಕ್ಕಿಂತ ಸುಂದರ ಜಲಪಾತಗಳು ಜಗತ್ತಿನಲ್ಲಿ ಸಾವಿರಾರು ಇವೆ. ಆದರೆ ಈಗ ಮಡಿಕೇರಿಯಲ್ಲಿ ನಡೆಯುತ್ತಿರುವ ಶಾಂತೇಯಂಡ ಕಪ್ ನಲ್ಲಿ ಕಾಣುವ ಹಾಕಿ ಜಗತ್ತಿನ ಎಲ್ಲೂ ಸಿಗಲಾರದು. ಕ್ರೀಡೆಯೊಂದು ಸಂಸ್ಕೃತಿಯಾಗುವುದು, ಜನಜೀವನದ ಭಾಗವಾಗುವುದು, ಪಂದ್ಯಾಟವೊಂದು ಹಬ್ಬವಾಗುವುದು ಕೇವಲ ಕೊಡಗಿನಲ್ಲಿ ಮಾತ್ರ. ಅದಕ್ಕೆ ಅಬ್ದುಲ್ ಕಲಾಂರಂಥವರೇ ಬೆರಗಾಗಿದ್ದಾರೆ. ಹಾಕಿ ಇಂಡಿಯಾದ ಗಿಲ್ ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದಾನೆ. ಈ ವರ್ಷ ಅದನ್ನು ತುಂಬಿಕೊಳ್ಳಲು ಸಾಕ್ಷಾತ್ ಮನೋಹರ ಪಾರಿಕ್ಕರರೇ ಮಡಿಕೇರಿಗೆ ಆಗಮಿಸುತ್ತಿದ್ದಾರೆ. ಮೇ 8 ರಂದು ಫೈನಲ್ ಪಂದ್ಯ ನಡೆಯಲಿದೆ.

ಜಗತ್ತಿನ ಎಲ್ಲೂ ಕಾಣಸಿಗದ ಕೌತುಕ ನಮ್ಮಲ್ಲೇ ನಡೆಯುತ್ತಿದೆ ಎಂಬುದು ನಮ್ಮ ಕರ್ನಾಟದ ಹೆಮ್ಮೆ.

(ಕೊಡಗಿನವರೇ ಆದ ಲೇಖಕರು ಜನಪ್ರಿಯ ಅಂಕಣಕಾರರು, ಅಸೀಮಾ ಮಾಸಿಕದ ಸಂಪಾದಕರು)

Leave a Reply